ಮನೆಯಲ್ಲಿ ಕಸವಿದ್ದರೆ ಲಕ್ಷ್ಮಿ ಒಲಿಯುವುದಿಲ್ಲವೇ, ಲಕ್ಷ್ಮಿ ನಿಲ್ಲುವುದಿಲ್ಲವೇ?
ಮನೆ ಸ್ವಚ್ಛವಾಗಿರದಿದ್ದರೆ, ಕೊಳಕು, ಕಸಕಡ್ಡಿ, ಬಲೆ ತುಂಬಿಕೊಂಡಿದ್ದರೆ ಮನೆಯಲ್ಲಿ ಲಕ್ಷ್ಮಿ ನೆಲೆಸುವುದಿಲ್ಲ, ಹೊರಟುಹೋಗುತ್ತಾಳೆ, ಮನೆಯಲ್ಲಿ ದಟ್ಟದಾರಿದ್ರ್ಯವಿರುತ್ತದೆ ಎಂಬುದು ಜನರ ನಂಬಿಕೆ.
Published: 14th November 2020 10:24 AM | Last Updated: 14th November 2020 05:55 PM | A+A A-

ಲಕ್ಷ್ಮೀದೇವಿ
ಮನೆ ಸ್ವಚ್ಛವಾಗಿರದಿದ್ದರೆ, ಕೊಳಕು, ಕಸಕಡ್ಡಿ, ಬಲೆ ತುಂಬಿಕೊಂಡಿದ್ದರೆ ಮನೆಯಲ್ಲಿ ಲಕ್ಷ್ಮಿ ನೆಲೆಸುವುದಿಲ್ಲ, ಹೊರಟುಹೋಗುತ್ತಾಳೆ, ಮನೆಯಲ್ಲಿ ದಟ್ಟದಾರಿದ್ರ್ಯವಿರುತ್ತದೆ ಎಂಬುದು ಜನರ ನಂಬಿಕೆ.
ನಮ್ಮ ಮನೆ-ಮನ ಯಾವಾಗಲೂ ಶುದ್ಧವಾಗಿರಬೇಕು. ಮನೆ ಸ್ವಚ್ಛವಾಗಿಲ್ಲದಿದ್ದರೆ ಲಕ್ಷ್ಮಿ ನೆಲೆಸುವುದಿಲ್ಲ ಎಂಬ ಅಕ್ಷರಶಃ ಅರ್ಥವನ್ನು ನಾವಿಲ್ಲಿ ತೆಗೆದುಕೊಳ್ಳಬಾರದು ಎನ್ನುತ್ತಾರೆ ಆಧ್ಯಾತ್ಮಿಕ ಚಿಂತಕಿ ಡಾ ಆರತಿ ಕೌಂಡಿನ್ಯ.
ಇದರ ಹಿಂದೆ ಒಂದು ಆಸಕ್ತಿಕರವಾದ ಜಾನಪದ ಭಾವವಿದೆ ಎನ್ನುತ್ತಾರೆ ಅವರು. ಜಾನಪದದಲ್ಲಿ ಮನೆ ತುಂಬ ಪಾತ್ರೆಗಳು ಚೆಲ್ಲಾಡಿರಲಿ, ವಸ್ತುಗಳು ಚೆಲ್ಲಾಡುತ್ತಿರಲಿ, ಮನೆತುಂಬ ಅಕ್ಕಿ, ಧಾನ್ಯ, ಬೇಳೆ ಚೆಲ್ಲಾಡಿರಲಿ. ಮನೆಯಲ್ಲಿ ಎಲ್ಲೆಂದರಲ್ಲಿ ಬಟ್ಟೆ ಚೆಲ್ಲಾಪಿಲ್ಲಿಯಾಗಿರಲಿ, ಮನೆತುಂಬ ಜನ, ಜನರ ಕಾಲಗುರುತುಗಳು, ಮಕ್ಕಳ ಕೇಕೆ, ಆಟ-ತುಂಟಾಟ, ಕೂಗಾಟ ಕೇಳುತ್ತಿರಲಿ ಎನ್ನುತ್ತಾರೆ.
ಅಂದರೆ ಇದರರ್ಥ ಮನೆತುಂಬ ಪಾತ್ರೆಗಳು ಚೆಲ್ಲಾಡಿರಬೇಕೆಂದರೆ ಮನೆತುಂಬ ಜನರು, ಚಿಕ್ಕಮಕ್ಕಳು, ಅತಿಥಿಗಳು ಬಂದು ಹೋಗುತ್ತಿರಬೇಕು, ಮನೆಯಲ್ಲಿ ಯಾವಾಗಲೂ ಹಬ್ಬದ ವಾತಾವರಣ, ನೆಮ್ಮದಿ, ಖುಷಿ ನೆಲೆಸಿರಬೇಕು ಎಂದರ್ಥ. ಆಗ ಮನೆಯಲ್ಲಿ ಜೀವಂತಿಕೆ, ಲವಲವಿಕೆ, ಸಂಭ್ರಮ ಇರುತ್ತದೆ, ಮನೆಗೆ ಜನರು ಬರುತ್ತಿರಬೇಕು, ಅಡುಗೆ ಮಾಡಿ ಬಳಸಬೇಕು, ಆ ಮೂಲಕ ಮನೆಯಲ್ಲಿರುವ ಪಾತ್ರೆಗಳು ಬಳಕೆಯಾಗಬೇಕು, ಮನೆಯಲ್ಲಿರುವ ಬಟ್ಟೆಗಳು ಬಳಕೆಯಾಗಬೇಕು, ಇಲ್ಲದಿದ್ದರೆ ಮನೆಯಲ್ಲಿ ಮನೆಮಂದಿಗೆ, ಜೀವನದಲ್ಲಿ ಏನು ಸೊಗಸಿದೆ, ಮನೆಗೆ ಅತಿಥಿಗಳು ಬರುತ್ತಿದ್ದರೆ ಮನೆಯೊಡತಿಗೆ ಊಟ, ತಿಂಡಿ ಮಾಡಿ ಬಡಿಸುವುದು ಸ್ವಲ್ಪ ಕಷ್ಟವಾಗಬಹುದು, ಆದರೆ ಆ ಕಷ್ಟದಲ್ಲಿ ಸುಖ-ಸಂತೋಷವಿರುತ್ತದೆ ಎನ್ನುತ್ತಾರೆ ಡಾ ಆರತಿ.
ಮನೆಯಲ್ಲಿರುವ ವಸ್ತುಗಳು ಬಳಕೆಯಾಗಬೇಕು, ಶುಚಿತ್ವ ಇರಬೇಕು ಎಂದೇ ಹೊರತು ಇದರಲ್ಲಿ ಬೇರೆ ಅರ್ಥ ಇಲ್ಲ. ಇದು ಕಸ-ಕೊಳೆ ಎಂದರ್ಥವಲ್ಲ,ಕಾಯಾ ವಾಚಾ ಮನಸಾ ಮಡಿ ಇಟ್ಟುಕೊಂಡು ಮನೆಯಲ್ಲಿ ಸಂಭ್ರಮಪಡಬೇಕು ಎಂದರ್ಥ.