ಆಧ್ಯಾತ್ಮವಷ್ಟೇ ಅಲ್ಲ, ರಾಜತಾಂತ್ರಿಕ ವಿದ್ಯೆಗೂ 'ಸರಸ್ವತಿ': ಅವರ 'ಮಾನಸ ಸರೋವರ' ದೂರದೃಷ್ಟಿ ಧುರೀಣರಿಗೂ ದಾರಿದೀಪ!

ಶ್ರೀರಾಮ ಸೇತುಗೆ ಎದುರಾಗಿದ್ದ ಕಂಟಕವನ್ನು ದೂರ ಮಾಡಲು ಸಹಕರಿಸಿದ್ದ ಸುಬ್ರಹ್ಮಣಿಯನ್ ಸ್ವಾಮಿ ಅವರಿಗೆ ಭಾರತಕ್ಕೆ ಒಳಿತಾಗುವ ಹಲವು ವಿಚಾರಗಳಲ್ಲಿ ಮಾರ್ಗದರ್ಶನ ನೀಡಿದ್ದು ಇವರೇ.
ಕಂಚಿಯ ಚಂದ್ರಶೇಖರೇಂದ್ರ ಸರಸ್ವತಿ ಸ್ವಾಮಿಗಳು-ಸುಬ್ರಹ್ಮಣಿಯನ್ ಸ್ವಾಮಿ (ಸಂಗ್ರಹ ಚಿತ್ರ)
ಕಂಚಿಯ ಚಂದ್ರಶೇಖರೇಂದ್ರ ಸರಸ್ವತಿ ಸ್ವಾಮಿಗಳು-ಸುಬ್ರಹ್ಮಣಿಯನ್ ಸ್ವಾಮಿ (ಸಂಗ್ರಹ ಚಿತ್ರ)

ಸದಾ ತ್ಯಾಗ ಮಾಡುವ ಸಂತರನ್ನು ವರ್ಣಿಸುತ್ತಾ "ನ ಕರ್ಮಣಾ, ನ ಪ್ರಜಯಾ, ನ ಧನೇನ, ತ್ಯಾಗೇನೈಕೇ ಅಮೃತತ್ವ ಮಾನಷು: "ಎನ್ನುತ್ತದೆ ಉಪನಿಷತ್ತು. ಅಂದರೆ ನಾವು  ಹಣದಿಂದಾಗಲೀ, ನಮ್ಮ ಹಿಂದೆ ಬರುವ ಜನರ ಗುಂಪಿನಿಂದಾಗಲಿ ಅಮೃತತ್ವವನ್ನು ಪಡೆಯಲಾಗದು, ಕೇವಲ ತ್ಯಾಗದಿಂದ ಮಾತ್ರ ಅದು ಸಾಧ್ಯ ಎಂಬುದು ಉಪನಿಷತ್ ನ ಅರ್ಥ.

ಸ್ವಾರ್ಥವಿಲ್ಲದೇ, ಪರೋಪಕಾರಕ್ಕಾಗಿ, ರಾಷ್ಟ್ರಹಿತಕ್ಕಾಗಿ ಶ್ರಮಿಸುವ ಯೋಗಿಗಳಿಗೆ, ಸಾಧು, ಸಂತರಿಗೆ ಭಾರತದಲ್ಲಿ ಅತ್ಯುನ್ನತ ಸ್ಥಾನವಿದೆ. ಮಹರ್ಷಿ ಅರವಿಂದರು, ಸ್ವಾಮಿ ವಿವೇಕಾನಂದರು, ರಾಮಕೃಷ್ಣ ಪರಮಹಂಸರು, ವಿದ್ಯಾರಣ್ಯರು ಅಂತಹ ಸಾಲಿಗೆ ಸೇರಿದವರು. ವಿದ್ಯಾರಣ್ಯರು, ಸಮರ್ಥ ರಾಮದಾಸರಂಥವರು ಸುಭದ್ರ ಸಾಮ್ರಾಜ್ಯಗಳನ್ನು ಸ್ಥಾಪಿಸಲು ಮಾರ್ಗದರ್ಶನ ನೀಡಿ ಜನಮಾನಸದಲ್ಲಿ ಅಚ್ಚಳಿಯದೇ ಉಳಿದ ಯೋಗಿಗಳು, ಗುರುಗಳಾದರು. ಹಾಗೆಯೇ ಇತ್ತೀಚಿನ ದಶಕಗಳಲ್ಲಿ ರಾಜಕಾರಣಿಗಳಿಗೆ ಮಾರ್ಗದರ್ಶನ ನೀಡಿ, ಅವರ ಮೂಲಕ ರಾಷ್ಟ್ರಹಿತಕ್ಕಾಗಿ ಶ್ರಮಿಸಿದವರಲ್ಲಿ, ಕಂಚಿ ಕಾಮಕೋಠಿ ಪೀಠದ ಅಧಿಪತಿಗಳಾಗಿದ್ದ ಚಂದ್ರಶೇಖರೇಂದ್ರ ಸರಸ್ವತಿ ಸ್ವಾಮಿಗಳು ಪ್ರಾತಃಸ್ಮರಣೀಯರಾಗಿ ನಿಲ್ಲುತ್ತಾರೆ. ಅಂತಹ ಸಂನ್ಯಾಸಿಗಳು ಪ್ರಾಪಂಚಿಕ ಬೆಳವಣಿಗೆಗಳಿಂದ ಅಂತರ ಕಾಯ್ದುಕೊಂಡಿರುತ್ತಾರಾದರೂ, ಅಗತ್ಯ ಬಂದಲ್ಲಿ, ಮಾತೃಭೂಮಿ, ಧರ್ಮ ರಕ್ಷಣೆಗಾಗಿ ಸಾಮ್ರಾಜ್ಯಗಳನ್ನೇ ನಿರ್ಮಿಸುವ ಅದ್ಭುತಗಳನ್ನು ಸೃಷ್ಟಿಸುತ್ತಾರೆ. ವಿಜಯನಗರ ಸಾಮ್ರಾನ್ಯ ಸ್ಥಾಪನೆಗೆ ಕಾರಣರಾದ ವಿದ್ಯಾರಣ್ಯರು, ಹಿಂದವೀ ಸಾಮ್ರಾಜ್ಯಕ್ಕೆ ಶಿವಾಜಿಯಂತಹ ಶ್ರೇಷ್ಠ ಮಹಾರಾಜರನ್ನು ಕೊಡುಗೆ ನೀಡಿದ ಸಮರ್ಥ ರಾಮದಾಸರು ಇಂತಹ ಸಾಲಿಗೆ ಸೇರಿದವರು. 

ಅಧ್ಯಾತ್ಮಕ್ಕೆ ಅಷ್ಟೇ ಸೀಮಿತವಾಗದೇ, ತಮ್ಮ ಅಂತಾರಾಷ್ಟ್ರೀಯ ವಿದ್ಯಮಾನಗಳ ದೂರದೃಷ್ಟಿಯಿಂದ ಭಾರತಕ್ಕೆ ಒಳಿತು ಮಾಡಿದ ಮಹನೀಯರೊಬ್ಬರು ಜೀವಿಸಿದ್ದ ಕಾಲಮಾನದಲ್ಲೇ ನಮ್ಮಲ್ಲಿ ಅನೇಕರು ಜೀವಿಸಿದ್ದೆವು ಎಂಬುದನ್ನು ತಿಳಿಸುವುದು ಈ ಲೇಖನದ ಮತ್ತೊಂದು ವಿಶೇಷತೆ.

ಆ ಮಹನೀಯರು ಯಾರೆಂದರೆ... 
ಶ್ರೀರಾಮ ಸೇತುಗೆ ಎದುರಾಗಿದ್ದ ಕಂಟಕವನ್ನು ದೂರ ಮಾಡಲು ಸಹಕರಿಸಿದ್ದ ಸುಬ್ರಹ್ಮಣಿಯನ್ ಸ್ವಾಮಿ ಅವರಿಗೆ ಭಾರತಕ್ಕೆ ಒಳಿತಾಗುವ ಹಲವು ವಿಚಾರಗಳಲ್ಲಿ ಮಾರ್ಗದರ್ಶನ ನೀಡಿದ್ದು ಇದೇ ಕಂಚಿ ಕಾಮಕೋಟಿ ಪೀಠದ ಅಧಿಪತಿಗಳಾಗಿದ್ದ ಚಂದ್ರಶೇಖರೇಂದ್ರ ಸರಸ್ವತಿಗಳು! ಅದು ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ದೇಶದಲ್ಲಿ ತುರ್ತುಪರಿಸ್ಥಿತಿ ಜಾರಿಗೊಳಿಸಿದ್ದ ಅವಧಿ. ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಡಲು ತಮ್ಮ ತವರು ರಾಜ್ಯವಾದ ತಮಿಳುನಾಡಿಗೆ ಬಂದಿದ್ದ ವೇಳೆ ಸುಬ್ರಹ್ಮಣಿಯನ್ ಸ್ವಾಮಿ ಚಂದ್ರಶೇಖರೇಂದ್ರ ಸರಸ್ವತಿ ಸ್ವಾಮಿಗಳನ್ನು ಮೊದಲ ಬಾರಿಗೆ ಸಂಧಿಸುತ್ತಾರೆ.  ಇದಕ್ಕೂ ಮುನ್ನ ಹಾರ್ವರ್ಡ್ ವಿವಿಯಲ್ಲಿ ಕಲಿಯುತ್ತಿದ್ದ ಭಾರತೀಯ ವಿದ್ಯಾರ್ಥಿಯ ರೂಂ ನಲ್ಲಿ ಚಂದ್ರಶೇಖರೇಂದ್ರ ಸರಸ್ವತಿ ಸ್ವಾಮಿಗಳ ಫೋಟೋ ನೋಡಿರುತ್ತಾರೆ. ಆದರೆ ಪಾಶ್ಚಿಮಾತ್ಯ ಸಂಸ್ಕೃತಿಗೆ ಹೊಂದಿಕೊಂಡಿದ್ದ ಸುಬ್ರಹ್ಮಣಿಯನ್ ಸ್ವಾಮಿ ಅವರಿಗೆ ಸಾಧು ಸಂತರ ಬಗ್ಗೆ ಅಪಾರ ಗೌರವಾದರಗಳೇನೂ ಇರುವುದಿಲ್ಲ. ಹಾಗಂತ ಅವರು ಮೊದಲ ಬಾರಿ ಚಂದ್ರಶೇಖರೇಂದ್ರ ಸರಸ್ವತಿಗಳನ್ನು ಭೇಟಿ ಮಾಡಿದಾಗಲೇ ಪವಾಡ ಸದೃಶವಾಗಿ ಕಾಮಕೋಟಿ ಪೀಠಾಧಿಪತಿಗಳ ಬಗ್ಗೆ ಗೌರವಾದರಗಳೇನು ಉಕ್ಕಿ ಹರಿಯಲಿಲ್ಲ.

ಸಾಧು-ಸಂತರೆಂದರೆ ತಾತ್ಸಾರ ಭಾವನೆ ಹೊಂದಿದ್ದ ಸುಬ್ರಹ್ಮಣಿಯನ್ ಸ್ವಾಮಿ ಅವರನ್ನು ಮೊದಲನೇ ಬಾರಿಗೆ ಭೇಟಿ ಮಾಡಿದ್ದ ಚಂದ್ರಶೇಖರೇಂದ್ರ ಸರಸ್ವತಿ ಸ್ವಾಮಿಗಳು ಸ್ವಾಮಿ ಅವರನ್ನು ನೋಡುತ್ತಿದ್ದಂತೆಯೇ ಕಾಂಚಿಯ ಗುಡಿಸಿಲೊಂದರಲ್ಲಿ ಕುಳಿತಿದ್ದವರು ಥಟ್ಟನೆ ಎದ್ದು ಒಳಗೆ ಹೊರಟುಬಿಡುತ್ತಾರೆ. ಆ ನಂತರ ಸುಬ್ರಹ್ಮಣಿಯನ್ ಸ್ವಾಮಿಯವರೂ ಹೊರಡಲು ಸಿದ್ಧರಾಗುತ್ತಾರೆ. ಅಷ್ಟರ ವೇಳೆಗೆ ಒಳಗಿನಿಂದ ಬಂದ ವ್ಯಕ್ತಿಯೋರ್ವ, ಪರಮಾಚಾರ್ಯರು ನಿಮ್ಮನ್ನು ಭೇಟಿ ಮಾಡಬೇಕೆಂದಿದ್ದಾರೆ ಎಂದು ಹೇಳುತ್ತಾರೆ. ಕುತೂಹಲದಿಂದಲೇ ಒಳಗೆ ಹೋದ ಸುಬ್ರಹ್ಮಣಿಯನ್ ಸ್ವಾಮಿ ಅವರಿಗೆ ಮತ್ತೊಂದು ಅಚ್ಚರಿ ಕಾದಿರುತ್ತೆ. ತುರ್ತು ಪರಿಸ್ಥಿತಿ ವಿರುದ್ಧ ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸುಬ್ರಹ್ಮಣಿಯನ್ ಸ್ವಾಮಿ ಅವರ ಫೋಟೊ ತೋರಿಸಿ ಇದು ನೀವೇನಾ? ಎಂಬ ಪ್ರಶ್ನೆ ಕೇಳುತ್ತಾರೆ. ಸುಬ್ರಹ್ಮಣಿಯನ್ ಸ್ವಾಮಿ ಅವರಿಂದ ಹೌದು ಎಂಬ ಉತ್ತರ ಬಂದ ಕೂಡಲೇ, ಹ್ಹಾ ಈಗ ನೀವು ಹೊರಡಬಹುದು ಎನ್ನುತ್ತಾರೆ ಚಂದ್ರಶೇಖರೇಂದ್ರ ಸರಸ್ವತಿಗಳು. ಗುರುವೆಂದರೆ ಹಾಗೆಯೇ, ಸಾಮಾನ್ಯನಿಗೆ ಮಾರ್ಗದರ್ಶನ ಮಾಡುವುದಕ್ಕೂ ಮುನ್ನ ಮುಂದೇನಾಗುತ್ತದೆ ಎಂಬ ಸಣ್ಣ ಸುಳಿವನ್ನೂ ನೀಡುವುದಿಲ್ಲ. ಅಲ್ಲಿ ಅನೇಕ ಪರೀಕ್ಷೆಗಳು ಎದುರಾಗುತ್ತವೆ. ಒಮ್ಮೊಮ್ಮೆ ಇದು ಅನೇಕರಿಗೆ ತಲೆಗೆ ಹುಳ ಬಿಟ್ಟಂತಾಗುತ್ತದೆ. ಸುಬ್ರಹ್ಮಣಿಯನ್ ಸ್ವಾಮಿ ಅವರ ವಿಷಯದಲ್ಲಿ ಆಗಿದ್ದೂ ಇದೆ. ಮೊದಲು ನೋಡಿದಾಗ ಪರಮಾಚಾರ್ಯರು ಥಟ್ಟನೆ ಎದ್ದು ಹೋದದ್ದು ಯಾಕೆ? ಆ ನಂತರ ಬರಲು ಹೇಳಿ, ಫೋಟೋ ತೋರಿಸಿ ವಾಪಸ್ ಕಳಿಸಿದ್ದು ಯಾಕೆ? ಸುಬ್ರಹ್ಮಣಿಯನ್ ಸ್ವಾಮಿ ಮನಸಲ್ಲಿ ಹೀಗೆಲ್ಲಾ ಪ್ರಶ್ನೆಗಳು ಉದ್ಭವಿಸ ತೊಡಗಿದವು. ಅಂತೆಯೇ ಸರಳ ವ್ಯಕ್ತಿತ್ವದ ಚಂದ್ರಶೇಖರೇಂದ್ರ ಸರಸ್ವತಿಗಳ ವ್ಯಕ್ತಿತ್ವಕ್ಕೆ ಕಾಲ ಕ್ರಮೇಣ ಆಕರ್ಷಿತರಾಗತೊಡಗಿದರು. ಹಿಂದೆ ಸಾಧು- ಸಂತರ ಬಗ್ಗೆ ಹೆಚ್ಚೆನೂ ಗೌರವ ಹೊಂದಿರದ ಸುಬ್ರಹ್ಮಣಿಯನ್ ಸ್ವಾಮಿ ಮುಂದೊಂದು ದಿನ ನಾನು ಜೀವನದಲ್ಲಿ ಯಾವುದಾದರೂ ಸನ್ಯಾಸಿಗೆ ನಮಸ್ಕರಿಸಿದ್ದಿದ್ದರೆ ಅದು ಚಂದ್ರಶೇಖರ ಸರಸ್ವತಿಗಳಿಗೆ ಮಾತ್ರ ಎನ್ನುವಷ್ಟರ ಮಟ್ಟಿಗೆ ಪ್ರಭಾವಿತರಾಗುತ್ತಾರೆ.

ಚಂದ್ರಶೇಖರೇಂದ್ರ ಸರಸ್ವತಿಗಳು ಸುಬ್ರಹ್ಮಣಿಯನ್ ಸ್ವಾಮಿ ಅವರ ಮೂಲಕ ಭಾರತ ದೇಶಕ್ಕೆ ಒಳಿತಾಗುವ ಕೆಲಸವೊಂದನ್ನು ಮಾಡಿಸಿದ್ದರು. ಅದೇನೆಂದರೆ ತುರ್ತು ಪರಿಸ್ಥಿತಿಯ ಪರಿಣಾಮವಾಗಿ ಇಂದಿರಾ ಗಾಂಧಿ ಅಧಿಕಾರ ಕಳೆದುಕೊಂಡು, ಮೊರಾರ್ಜಿ ದೇಸಾಯಿ ಪ್ರಧಾನಿಯಾದರು. ಮೊರಾರ್ಜಿ ದೇಸಾಯಿ ಹೇಳಿಕೇಳಿ ಕಮ್ಯುನಿಷ್ಟ್ ಸಿದ್ಧಾಂತದ ಕಟು ಟೀಕಾಕಾರರಾಗಿದ್ದರು. ಅಷ್ಟೇ ಅಲ್ಲದೇ ಚೀನಾ ವಿರೋಧಿ ನಿಲುವನ್ನೂ ಹೊಂದಿದ್ದರು. ಪರಿಣಾಮವಾಗಿ ಕಮ್ಯುನಿಷ್ಟ್ ರಾಷ್ಟ್ರ‍ ಚೀನಾದೊಂದಿಗಿನ ಭಾರತದ ದ್ವಿಪಕ್ಷೀಯ ಸಂಬಂಧ ಹದಗೆಡುವ ಸಂಭವ ಹೆಚ್ಚಿತ್ತು. ಇದು ಭಾರತದಲ್ಲಿ ಕೋಟ್ಯಂತರ ಭಕ್ತರ ಶ್ರದ್ಧಾಕೇಂದ್ರವಾಗಿರುವ ಮಾನಸರೋವ ಯಾತ್ರೆ ಮೇಲೂ ಪರಿಣಾಮ ಬೀರುವುದಿತ್ತು. ಈ ಸೂಕ್ಷ್ಮತೆಯನ್ನು ಅರಿತಿದ್ದ ಚಂದ್ರಶೇಖರೇಂದ್ರ ಸರಸ್ವತಿಗಳು, ಸುಬ್ರಹ್ಮಣಿಯನ್ ಸ್ವಾಮಿಗೆ ಪ್ರಧಾನಿ ಮೊರಾರ್ಜಿ ದೇಸಾಯಿ ಅವರೊಂದಿಗೆ ಮಾತನಾಡಿ ಚೀನಾದೊಂದಿಗೆ ದ್ವಿಪಕ್ಷೀಯ ಸಂಬಂಧವನ್ನು ವೃದ್ಧಿಗೊಳಿಸುವಂತೆ ಸಲಹೆ ನೀಡಬೇಕೆಂದು ಸೂಚಿಸುತ್ತಾರೆ. ಚಂದ್ರಶೇಖರೇಂದ್ರ ಸರಸ್ವತಿಗಳ ಸಲಹೆಯನ್ನು ಗಂಭೀರವಾಗಿ ಸ್ವೀಕರಿಸಿದ ಸುಬ್ರಹ್ಮಣಿಯನ್ ಸ್ವಾಮಿ ಚೀನಾದ ದ್ವಿಪಕ್ಷೀಯ ಸಂಬಂಧ ಹಾಗೂ ಮಾನಸಸರೋವರ ಯಾತ್ರೆಗೆ ವ್ಯವಸ್ಥೆ ಕಲ್ಪಿಸುವ ಬಗ್ಗೆ ಮೊರಾರ್ಜಿ ದೇಸಾಯಿ ಅವರೊಂದಿಗೆ ದೀರ್ಘ ಸಮಾಲೋಚನೆ ನಡೆಸುತ್ತಾರೆ. ಆದರೆ ಪ್ರಾರಂಭದಲ್ಲಿ ಚೀನಾದೊಂದಿಗಿನ ದ್ವಿಪಕ್ಷೀಯ ಸಂಬಂಧ ವೃದ್ಧಿಗೊಳಿಸುವುದಕ್ಕಾಗಲೀ ಅಥವಾ ಮಾನಸಸರೋವರ ಯಾತ್ರೆ ಕುರಿತು ಮಾತನಾಡುವುದಕ್ಕಾಗಲೀ ಮೊರಾರ್ಜಿ ಸುಲಭವಾಗಿ ಒಪ್ಪಿಗೆ ನೀಡುವುದಿಲ್ಲ. ಸುಬ್ರಹ್ಮಣಿಯನ್ ಸ್ವಾಮಿ ಅವರ ಒತ್ತಾಯದ ಮೇರೆಗೆ, ಚೀನಾದೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲು ಮೊರಾರ್ಜಿ ದೇಸಾಯಿ ಒಪ್ಪಿಗೆ ಸೂಚಿಸುತ್ತಾರೆ. ಹಾಗೂ ಮಾನಸಸರೋವರ ಯಾತ್ರೆಗೆ ಸಂಬಂಧಿಸಿದ ಚೀನಾ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಸುಬ್ರಹ್ಮಣಿಯನ್ ಸ್ವಾಮಿಗೆ ವಿಶೇಷ ಅಧಿಕಾರವನ್ನೂ ನೀಡುತ್ತಾರೆ. ಕೊನೆಗೆ  ಸುಬ್ರಹ್ಮಣಿಯನ್ ಸ್ವಾಮಿ ಅವರ ನಿರಂತರ ಶ್ರಮದ ಫಲವಾಗಿ 1981 ರಲ್ಲಿ ಚೀನಾ ಹಿಂದೂ ಯಾತ್ರಾರ್ಥಿಗಳಿವೆ ಕೈಲಾಶ್ ಹಾಗೂ ಮಾನಸಸರೋವರ ಯಾತ್ರೆ ಮಾರ್ಗವನ್ನು ತೆರೆಯುತ್ತದೆ. ಸುಬ್ರಹ್ಮಣಿಯನ್ ಸ್ವಾಮಿ ಅವರ ಈ ಯಶಸ್ಸಿನ ಹಿಂದಿದ್ದ ಮಾರ್ಗದರ್ಶನ ಕಂಚಿ ಕಾಮಕೋಟಿಯ ಈ ಹಿಂದಿನ ಪೀಠಾಧಿಪತಿಗಳಾಗಿದ್ದ ಚಂದ್ರಶೇಖರೇಂದ್ರ ಸರಸ್ವತಿ ಸ್ವಾಮಿಗಳದ್ದು ಎಂಬುದು ವಿಶೇಷ.

ಇಷ್ಟೇ ಅಲ್ಲ ಕಂಚಿ ಪರಮಾಚಾರ್ಯರು ರಾಜಕೀಯ ವ್ಯಕ್ತಿಗಳು ಧಾರ್ಮಿಕ ವಿಷಯಗಳ ಬಗ್ಗೆ ನಿಲುವು ತೆಗೆದುಕೊಳ್ಳುವುದನ್ನು ಇಷ್ಟ ಪಡುತ್ತಿರಲಿಲ್ಲ ಎಂಬುದಕ್ಕೂ ಇದೆ ಸುಬ್ರಹ್ಮಣಿಯನ್ ಸ್ವಾಮಿ ಅವರು ಉದಾಹರಣೆಯಾಗಿ ನಿಲ್ಲುತ್ತಾರೆ. 1986 ರಲ್ಲಿ ಪರಮಾಚಾರ್ಯರನ್ನು ಭೇಟಿ ಮಾಡಿದ್ದ ಸುಬ್ರಹ್ಮಣಿಯನ್ ಸ್ವಾಮಿ ಬಾಬ್ರಿ ಮಸೀದಿ ವಿಷಯವನ್ನು ಅಧ್ಯಯನ ಮಾಡಲು ಅಯೋಧ್ಯೆಗೆ ಹೋಗಬೇಕೆಂದು ನಿರ್ಧರಿಸಿರುವ ಬಗ್ಗೆ ಹೇಳುತ್ತಾರೆ. ಆದರೆ ಇದಕ್ಕೆ ಸಹಮತ ಸೂಚಿಸದ ಚಂದ್ರಶೇಖರೆಂದ್ರ ಸರಸ್ವತಿಗಳು ನೀವೊಬ್ಬ ರಾಜಕಾರಣಿ, ಧಾರ್ಮಿಕ ವಿಷಯಗಳ ಬಗ್ಗೆ ಏಕೆ ಗಮನ ಹರಿಸುತ್ತೀರಿ? ಧಾರ್ಮಿಕ ವಿಷಯಗಳನ್ನು ಬಗೆಹರಿಸುವುದನ್ನು ಬಿಟ್ಟು ಚೀನಾ, ಇಸ್ರೇಲ್ ನೊಂದಿಗೆ ದ್ವಿಪಕ್ಷೀಯ ಸಂಬಂಧವನ್ನು ಉತ್ತಮಗೊಳಿಸುವುದರ ಬಗ್ಗೆ ಗಮನ ಕೇಂದ್ರೀಕರಿಸಿ, ದೇಶದ ಆರ್ಥಿಕತೆ ಸದೃಢಗೊಳಿಸುವ ಬಗ್ಗೆ ಗಮನಹರಿಸಿ ಎಂದು ಸಲಹೆಯಿತ್ತು ಕಳಿಸುತ್ತಾರೆ. ಚಂದ್ರಶೇಖರೆಂದ್ರ ಸರಸ್ವತಿಗಳ ಈ ವ್ಯಕ್ತಿತ್ವದಿಂದಲೇ ಇಂದಿಗೂ ಹಲವಾರು ಅವರನ್ನು ಪೂಜನೀಯ ಭಾವನೆಯಿಂದ ನೋಡುತ್ತಾರೆ. ತಮ್ಮ ಅನನ್ಯ ವ್ಯಕ್ತಿತ್ವದಿಂದಲೇ ಪರಮಾಚಾರ್ಯರು ಭಿನ್ನವಾಗಿ ಕಾಣುತ್ತಾರೆ.

-ಶ್ರೀನಿವಾಸ್ ರಾವ್

srinivas.v4274@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com