ಕೊರೋನಾ ಮಧ್ಯೆ ಸಿಂಗಾಪುರ ದೇಶದಲ್ಲಿ ದೀಪಾವಳಿ ಆಚರಣೆ

ಸಿಂಗಾಪುರದಲ್ಲಿ ಕಳೆದ ಹಲವು ತಿಂಗಳುಗಳವರೆಗೆ ಕೊರೋನ ಸೋಂಕಿತರ ಸಂಖ್ಯೆ ಕೇವಲ ಬೆರಣಿಕೆಗಷ್ಟೇ ಸೀಮಿತಗೊಂಡಿತ್ತು. ಇನ್ನೇನು ಎಲ್ಲವೂ ಸಹಜ ಸ್ಥಿತಿಗೆ ತಲುಪಲಿದೆ ಎಂಬ ಆಶಯ ಇಲ್ಲಿನ ಜನತೆಯದ್ದು ಆಗಿತ್ತು. ಸರ್ಕಾರ ಕೂಡ ಈ ಸಂಬಂಧಿತ ನಿಯಮಗಳಲ್ಲಿ ಕೊಂಚ ಸಡಿಲಿಕೆಯನ್ನು ಜಾರಿ ತಂದಿತ್ತು.
ಸಿಂಗಾಪುರದ ಲಿಟಲ್ ಇಂಡಿಯಾ ಮಾರುಕಟ್ಟೆ
ಸಿಂಗಾಪುರದ ಲಿಟಲ್ ಇಂಡಿಯಾ ಮಾರುಕಟ್ಟೆ

ಲೇಖನ: ಶ್ರೀವಿದ್ಯಾ ರಾವ್ 

kshrividya.rao@gmail.com

ಸಿಂಗಾಪುರದಲ್ಲಿ ಕಳೆದ ಹಲವು ತಿಂಗಳುಗಳವರೆಗೆ ಕೊರೋನ ಸೋಂಕಿತರ ಸಂಖ್ಯೆ ಕೇವಲ ಬೆರಣಿಕೆಗಷ್ಟೇ ಸೀಮಿತಗೊಂಡಿತ್ತು. ಇನ್ನೇನು ಎಲ್ಲವೂ ಸಹಜ ಸ್ಥಿತಿಗೆ ತಲುಪಲಿದೆ ಎಂಬ ಆಶಯ ಇಲ್ಲಿನ ಜನತೆಯದ್ದು ಆಗಿತ್ತು. ಸರ್ಕಾರ ಕೂಡ ಈ ಸಂಬಂಧಿತ ನಿಯಮಗಳಲ್ಲಿ ಕೊಂಚ ಸಡಿಲಿಕೆಯನ್ನು ಜಾರಿ ತಂದಿತ್ತು.

ಆದರೆ ಇದೀಗ ಏಕಾಏಕಿ ಕೊರೋನಕ್ಕೆ ತುತ್ತಾಗುತ್ತಿರುವವರ ಸಂಖ್ಯೆ ಏರತೊಡಗಿದೆ. ಪ್ರತಿದಿನ ಸುಮಾರು 3ರಿಂದ 4 ಸಾವಿರಗಳಷ್ಟು ಮಂದಿ ಕೋವಿಡ್ ನಿಂದ ಬಳಲುತ್ತಿದ್ದಾರೆ. ಸರ್ಕಾರ ಶತಾಯಗತಾಯ ಇವುಗಳ ನಿಯಂತ್ರಣಕ್ಕೆ ಪಣತೊಟ್ಟಿದ್ದಲ್ಲದೆ,  ಕಾನೂನುಗಳನ್ನು ಮತ್ತಷ್ಟು ಬಿಗಿಗೊಳಿಸಿದೆ.

ಸಿಂಗಾಪುರ ಭಾರತೀಯರ ದೀಪಾವಳಿ: ಇವುಗಳ ಮಧ್ಯೆ, ಸಿಂಗಾಪುರದಲ್ಲಿರುವ ಭಾರತೀಯರಿಗೆ ದೀಪಾವಳಿ ಹಬ್ಬದ ಸಂಭ್ರಮ. ಇಲ್ಲಿನ ಲಿಟ್ಲ್ಇಂಡಿಯಾದಲ್ಲಿ ಹಬ್ಬದ ಸಡಗರ ಬಹಳ ಅದ್ಧೂರಿಯಾಗಿ ಆರಂಭವಾಗಿದೆ. ಇಲ್ಲಿನ ರಸ್ತೆಯ ಎರಡು ಬದಿಗಳು ಬೆಳಕಿನಿಂದ ಕಂಗೊಳಿಸುತ್ತಿವೆ. ನವಿಲುಗಳು, ಆನೆಗಳು, ದೀಪಗಳ ಆಕೃತಿಗಳು ಬಣ್ಣಬಣ್ಣದ ರೂಪದಲ್ಲಿ ತೋರಣಗಳಾಗಿ ಜಗಮಗಿಸುತ್ತಿವೆ.

ದೀಪಾವಳಿಗೆ ನಡೆಯುವ ವಿಶೇಷ ವಿದ್ಯುತ್ ಅಲಂಕಾರ ಹಬ್ಬದ ಸಂಭ್ರಮವನ್ನು ಮತ್ತಷ್ಟು ರಂಗೇರುವಂತೆ ಮಾಡಿದೆ.ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ ಈ ಲಿಟ್ಲ್ಇಂಡಿಯಾ.

ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿಯ ಉತ್ಸವಕ್ಕೆ ಕೊರೋನಾದ ಕರಾಳ ಛಾಯೆ ಅವರಿಸಿದಂತೂ ಸುಳ್ಳಲ್ಲ. ಹಬ್ಬಕ್ಕೆಂದೇ ಹೆಚ್ಚುವರಿಯಾಗಿ ಹಾಕಲಾಗುತ್ತಿದ್ದ ಪಟಾಕಿಗಳ ಅಂಗಡಿ, ಅಲಂಕಾರ ಸಾಮಗ್ರಿಗಳ ಮಳಿಗೆಗಳು, ವಿಭಿನ್ನ ಆಕೃತಿಗಳಲ್ಲಿ ದೊರೆಯುತ್ತಿದ್ದ ಸಾಲು ಸಾಲು ದೀಪಗಳ ಸ್ಟಾಲ್ ಗಳು ಈ ಬಾರಿ ಕಣ್ಮರೆಯಾಗಿವೆ.

ನವರಾತ್ರಿ ಸಮಯದಲ್ಲೇ ದೀಪಾವಳಿ ಶಾಂಪಿಗ್ ಗಾಗಿ ಜನಜಂಗುಳಿಯಿಂದ ತುಂಬಿರುತ್ತಿದ್ದ ಈ ಲಿಟಲ್ಇಂಡಿಯಾದ ವಾತಾವರಣ ಕೊಂಚ ನೀರಸಗೊಂಡಿದೆ. ಹಬ್ಬದ ಪ್ರಯುಕ್ತ ನಡೆಯಬೇಕಿದ್ದ ಭರ್ಜರಿ ವ್ಯಾಪಾರಗಳು ಕೂಡ ಇಲ್ಲಿನ ವ್ಯಾಪಾರಾಗಳಿಗೆ ಮರೀಚಿಕೆಯಾಗಿವೆ.  

ಸರ್ಕಾರದ ನಿಯಮಗಳ ಪ್ರಕಾರ, ಮಾಲ್, ಉಪಹಾರ ಗೃಹಕ್ಕೆ ತೆರಳುವ ಪ್ರತಿಯೊಬ್ಬರೂ ಕೊರೋನ ಚುಚ್ಚುಮದ್ದು ಪಡೆದವರಾಗಿರಬೇಕು. ಅಂಥವರಿಗೆ ಮಾತ್ರ ಅನುಮತಿ. ಹೊರಗಿನವರ ಜೊತೆ ಗುಂಪು ಸೇರೋದಾದ್ರೂ ಕೇವಲ 2 ಮಂದಿಗೆ ಮಾತ್ರ ಅವಕಾಶ.  ಯಾರೇ ಮನೆಗೆ ಆಗಮಿಸುವುದಾದರೂ ದಿನವೊಂದಕ್ಕೆ 2 ಜನರಿಗೆಮಾತ್ರಪ್ರವೇಶ. ಹೀಗಾಗಿ ಈ ಬಾರಿ ಸಿಂಗಾಪುರದಲ್ಲಿ ದೀಪಾವಳಿ ಹಬ್ಬ ಮನೆ ಮಂದಿ ಜೊತೆಗೆ ಆಚರಿಸುತ್ತಾ ಸಮಾಧಾನಪಡಬೇಕಿದೆ. ಸಂಬಂಧಿಕರು, ಗೆಳೆಯರು ಸೇರೋದಾದ್ರೂ ಸರ್ಕಾರದ ಕಾನೂನು ಪಾಲನೆ ಮೀರುವ ಹಾಗಿಲ್ಲ.

ಇಷ್ಟೆಲ್ಲಾ ಅಡೆತಡೆಗಳ ನಡುವೆಯೂ ಆನ್ ಲೈನ್ ಮುಖಾಂತರ ವಿವಿಧ ಸಮಾರಂಭಗಳನ್ನುಆಯೋಜಿಸಲಾಗುತ್ತಿದೆ. ಇಲ್ಲಿನ ಪ್ರಮುಖ ಸಂಗೀತ ಶಾಲೆಗಳ ಗುರುಗಳಿಂದ ಸಂಗೀತ ಕಾರ‍್ಯಕ್ರಮಗಳು, ಮಹಿಳೆಯರಿಗೆ ರಂಗೋಲಿ, ಅಡುಗೆ ಕಾರ‍್ಯಾಗಾರಗಳನ್ನು ಏರ್ಪಡಿಸಲಾಗಿದೆ. ಜೊತೆಗೆ ಸುಮಾರು ಒಂದು ಲಕ್ಷ ಬಣ್ಣದ ಕಾಗದಗಳಿಂದ ಮಾಡಿದ ಹೂವುಗಳ ಪ್ರದರ್ಶನ, ತೆರೆದ ರಿಕ್ಷಾಗಳಲ್ಲಿ ಸಂಚರಿಸುತ್ತಾ ಲಿಟಲ್ಇಂಡಿಯಾದ ಸೌಂದರ‍್ಯವನ್ನು ಆಸ್ವಾದಿಸುವ ಅವಕಾಶವೂ ಇದೆ.  

ಇನ್ನೂ ಕೆಲವೊಂದು ಕಾರ‍್ಯಕ್ರಮಗಳು ಉದ್ಯಾನ, ರಂಗಮಂದಿರಗಳಲ್ಲೂ ಆಯೋಜಿಸಲಾಗಿದೆ. ಇಂತಿಷ್ಟೇ ಮಂದಿಯನ್ನು ಸೇರಿಸಿಕೊಳ್ಳಬಹುದಾದ ನಿಯಮಗಳ ಅಡಿಯಲ್ಲಿ ವೇದಿಕೆ ಪ್ರದರ್ಶನಗಳು ನೆರವೇರುತ್ತವೆ. ಕಾರ್ಯಕ್ರಮ ನಡೆಸಿಕೊಡುವವರು 24 ಗಂಟೆಗಳ ಅವಧಿಯ ಪ್ರಿ-ಈವೆಂಟ್ ಟೆಸ್ಟ್ ಮಾಡಿಸಿಕೊಳ್ಳುವುದರ ಜೊತೆಗೆ ಪ್ರೇಕ್ಷಕರು ಕೊರೋನ ವ್ಯಾಕ್ಸಿನೇಶನ್ ಪಡೆದವರಾಗಿರಬೇಕು ಎಂಬುದು ಕಡ್ಡಾಯವಾಗಿದೆ.

ಇನ್ನು, ಇಲ್ಲಿನ ಪ್ರಮುಖ ದೇಗುಲಗಳಲ್ಲಿ ಪೂಜೆ - ಹೋಮಹವನಗಳು ನಡೆಯುತ್ತಿವೆ. ಜನರು ಗುಂಪು ಸೇರುವುದನ್ನು ತಪ್ಪಿಸುವ ನಿಟ್ಟಿನಲ್ಲಿ ದೇವಸ್ಥಾನಗಳಲ್ಲೂ ಒಂದು ಸಮಯಕ್ಕೆಇಂತಿಷ್ಟೇಸಂಖ್ಯೆಯಲ್ಲಿ ಭಕ್ತರು ಪ್ರವೇಶಿಸಬೇಕು ಎಂಬ ನಿಯಮವಿದೆ. ಹಬ್ಬದ ಪ್ರಯುಕ್ತ ವಿಶೇಷ ಪೂಜಾ ಸೇವೆ ನೀಡುವವರಿಗೂ ಪ್ರತ್ಯೇಕ ಸಮಯಗಳನ್ನು ನೀಡಲಾಗುತ್ತಿದೆ.  

ಕೊರೋನ ಸಂಕಷ್ಟದಿಂದ ಸಾವು - ನೋವುಗಳು ಹೆಚ್ಚುತ್ತಿರುವಸಿಂಗಾಪುರದಲ್ಲಿ ಸದ್ಯಕ್ಕೆ ಮನೆಯೊಂದೇ ಸುರಕ್ಷಿತ. ಏನೇ ಹಬ್ಬಹರಿದಿನಗಳು ಬರಲಿ, ಆರೋಗ್ಯವಾಗಿದ್ದರಷ್ಟೇ ಉತ್ಸವ. ಸರ್ಕಾರದ ನಿಯಮಗಳ ಪಾಲನೆ ಒಂದೆಡೆಯಾದರೆ, ಸುಖಾಸುಮ್ಮನೆ ಆರೋಗ್ಯದಲ್ಲಿ ಏರುಪೇರು ಮಾಡಿಕೊಳ್ಳದೆ ಇರುವುದೇ ಉತ್ತಮ ಪರಿಹಾರವೂ ಹೌದು.

ಬಹುತೇಕ ಮಂದಿ ಮನೆಗಷ್ಟೇ ಸೀಮಿತಗೊಳಿಸಿ ದೀಪಾವಳಿ ಹಬ್ಬವನ್ನು ಆಚರಿಸುತ್ತಿದ್ದಾರೆ. ತಮ್ಮತಮ್ಮ ಮನೆಯ ಸಿಂಗಾರದಲ್ಲಿ ನಿರತರಾಗಿರುವ ಹೆಂಗಳೆಯರು ತಳಿರುತೋರಣ, ರಂಗೋಲಿ, ಬಣ್ಣಬಣ್ಣದ ದೀಪಗಳಿಂದ ಅಲಂಕರಿಸುತ್ತಿದ್ದಾರೆ. ಮನೆಮಂದಿ ಜೊತೆಗೆ ಹೊಸಬಟ್ಟೆ ಧರಿಸಿ ಸಂಭ್ರಮದಿಂದ ಹಿರಿಯರ, ದೇವರ ಆಶೀರ್ವಾದ ಪಡೆದು ಸಿಹಿಹಂಚಿ, ವಿವಿಧ ಬಗೆಯ ಭಕ್ಷ್ಯಗಳು, ಮೃಷ್ಟಾನ ಭೋಜನಗಳನ್ನು ಸವಿಯುತ್ತಾ ಹಬ್ಬದ ಖುಷಿಯನ್ನು ಎಲ್ಲೆಡೆ ಪಸರಿಸುತ್ತಿದ್ದಾರೆ.

ಆದರೂ ವರ್ಷಕ್ಕೊಮ್ಮೆ ಬರುವ ಸಡಗರದ ಹಬ್ಬವನ್ನು ಕ್ರಮ ಪ್ರಕಾರ ಆಚರಿಸುವ ಮಂದಿ ಕೋವಿಡ್ ನಿಯಮವನ್ನು ಪಾಲಿಸುತ್ತಾ ಎಂದಿನಂತೆ ಹೊರಗಡೆ ಸುತ್ತಾಡೋದು ಸಾಮಾನ್ಯ. ದೇಗುಲ, ಶಾಪಿಂಗ್, ಭೋಜನ ಎಂದು ಹೇಳುತ್ತಾ ಲಿಟಲ್ಇಂಡಿಯಾ ಸುತ್ತಾ ತಕ್ಕಮಟ್ಟಿಗಾದರೂ ಜನ ಸೇರೋದುನಿರೀಕ್ಷಿತ. ಈ ಹಿನ್ನೆಲೆಯಲ್ಲಿ ಇಲ್ಲಿನ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ದೀಪಾವಳಿ ಹಬ್ಬಕ್ಕೆ ಸಿಂಗಾಪುರ ಕೂಡ ಸರ್ಕಾರಿ ರಜೆಯನ್ನುಘೋಷಿಸುತ್ತದೆ. ಭಾರತೀಯಶಾಲೆಗಳು 3-4 ದಿನಗಳು ಹಾಗೂ ಸ್ಥಳೀಯ ಶಾಲೆಗಳು ಒಂದು ದಿನದ ರಜೆಯನ್ನು ನೀಡುತ್ತದೆ. ಹಬ್ಬದ ಪ್ರಯುಕ್ತ ನರ್ಸರಿ ತರಗತಿಯಿಂದ ಹಿಡಿದು ಹೈಸ್ಕೂಲ್ ವರೆಗೆ ಒಂದು ದಿನ ಕಡ್ಡಾಯವಾಗಿ ಈ ಆಚರಣೆಯನ್ನುಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಭಾರತೀಯ ಉಡುಗೆ-ತೊಡುಗೆ, ತಿಂಡಿತಿನಿಸುಗಳ ಹಂಚಿಕೆ, ಮದರಂಗಿ ಹಾಕುವ ಕಾರ್ಯಕ್ರಮಗಳು ಶಾಲೆಗಳಲ್ಲಿ ನಡೆಯುತ್ತವೆ.

ಸಿಂಗಾಪುರವನ್ನು ಕಟ್ಟಿ ಬೆಳೆಸಿದವರಲ್ಲಿ ಭಾರತೀಯರು ಅದರಲ್ಲೂ ತಮಿಳರದ್ದು ಮಹತ್ವದ ಪಾತ್ರ. ಹೀಗಾಗಿ ನಮ್ಮ ದೇಶದ ದೀಪಾವಳಿ ಹಬ್ಬಕ್ಕೆ ಇಲ್ಲಿ ಹೆಚ್ಚಿನ ಪ್ರಾಧಾನ್ಯತೆ. ಬೆಳಕಿನ ಹಬ್ಬ ಬಂತೆಂದರೆ, ಇಲ್ಲಿನ ಟಿವಿ ಚಾನೆಲ್ ಗಳಲ್ಲಿ ಕಾರ‍್ಯಕ್ರಮಗಳು, ನ್ಯೂಸ್ ಪೇಪರ್ ವರದಿಗಳು, ಆಯಾಯ ಕ್ಷೇತ್ರದ ಜನಪ್ರತಿನಿಧಿಗಳು ಶುಭಾಶಯಗಳನ್ನು ಕೋರುವ ಬ್ಯಾನರ್ ಗಳು .ಹೀಗೆ ದೇಶ ತುಂಬಾ ದೀಪಾವಳಿಮಯವಾಗಿರುತ್ತವೆ.

ಇಷ್ಟೆಲ್ಲಾ ಮಾಡಲು ಅನುಮತಿ ನೀಡುವ ಸಿಂಗಾಪುರ, ಪಟಾಕಿ ಹೊಡೆಯುವ ವಿಷಯಕ್ಕೆ ಮಾತ್ರ ತನ್ನ ಕಾನೂನನ್ನು ಕಟ್ಟುನಿಟ್ಟುಗೊಳಿಸಿದೆ. ರಸ್ತೆಬದಿಯಲ್ಲಿ, ಮನೆಯ ಎದುರುಗಡೆ, ಮಹಡಿಗಳಲ್ಲಿ..ಹೀಗೆ ಎಲ್ಲೆಂದರಲ್ಲಿ ಪಟಾಕಿಗಳನ್ನು ಸಿಡಿಸುವ ಹಾಗಿಲ್ಲ. ತುಂಬಾ ವಿಶಾಲವಾದ ಜಾಗಗಳಲ್ಲಿ ಮಾತ್ರ ಇದಕ್ಕೆಅನುಮತಿ.

ಅದು ನಮ್ಮಲ್ಲಿ ನಡೆಯುವ ಹಾಗೆ ತುಂಬಾ ಶಬ್ದಗಳನ್ನು ಮಾಡುವ ಪಟಾಕಿಗಳಿಗೆಲ್ಲ ಇಲ್ಲಿ ಪ್ರವೇಶನೇಇಲ್ಲ. ಪರಿಸರ ಹಾಗೂ ಶಬ್ದಮಾಲಿನ್ಯತಡೆಗಟ್ಟುವಿಕೆ, ದೇಶದಲ್ಲಿರುವ ಇತರೇ ಪಂಗಡದ ನಾಗರಿಕರಿಗೆ ಯಾವುದೇ ರೀತಿಯ ತೊಂದರೆಯಾಗದ ನಿಟ್ಟಿನಲ್ಲಿ ಈ ನಿಯಮ ಜಾರಿಯಲ್ಲಿದೆ.

ಪಟಾಕಿಗಳ ಸದ್ದು ಕೇಳುತ್ತೋ ಇಲ್ವೋ, ಬಣ್ಣಬಣ್ಣದ ಬೆಳಕು ಮಾತ್ರ ಸಿಂಗಾಪುರ ತುಂಬಾ ರಾರಾಜಿಸುತ್ತಿರುತ್ತದೆ. ಮನೆಮನೆಯಲ್ಲಿ ನಡೆಯುವ ಸಂಪ್ರದಾಯ, ದೇವಾಲಯಗಳಲ್ಲಿ ನೆರವೇರುವ ಪೂಜೆ-ಪುನಸ್ಕಾರಗಳು, ಹಬ್ಬಕೆಂದೇ ಸಿಂಗಾರಗೊಳ್ಳುವ ಲಿಟ್ಲ್ಇಂಡಿಯಾ… ಇವಿಷ್ಟು ಅವಕಾಶಗಳ ನಡುವೆ ಇನ್ನೇನು ಬೇಕು ಹೇಳಿ ವಿದೇಶದಲ್ಲಿದ್ದುಕೊಂಡು.. ದೀಪಾವಳಿ ಹಬ್ಬದ ಶುಭಾಶಯಗಳು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com