ಶಿರಸಿಯ ಹಳೇ ಮನೆಯಲ್ಲಿ ಬಾಲ್ಯದ ನವರಾತ್ರಿ ಸಂಭ್ರಮ

ಶಿರಸಿ ನಮ್ಮೂರು. ಕೆಲವೆಡೆ ನವರಾತ್ರಿಯ 9 ದಿನಗಳಲ್ಲಿಯೂ ಸತತವಾಗಿ ದೀಪವನ್ನು ಉರಿಸಿ, ಶ್ರೀ ದೇವಿಯ ಮಹಾತ್ಮೆಯ ಪಠಣ (ಚಂಡೀಪಾಠ), ಸಪ್ತಶತೀ ಪಾರಾಯಣ,ಮಾಡಿಸುತ್ತಿದ್ದರು. ತಂದೆ ಶಾರದಾ ಪೂಜೆಯ ದಿನ ನಮ್ಮೆಲ್ಲ ಪುಸ್ತಕಗಳನ್ನು ದೇವರ ಕೊನೆಯಲ್ಲಿ ಜೋಡಿಸಿಡಲು ಹೇಳುತ್ತಿದ್ದರು.
ಶಿರಸಿಯ ಹಳೇ ಮನೆಯಲ್ಲಿ ಬಾಲ್ಯದ ನವರಾತ್ರಿ ಸಂಭ್ರಮ
- ಸಾವಿತ್ರಿ ಶ್ಯಾನುಭಾಗ, ಕುಂದಾಪುರ
ಇದೋ ನವರಾತ್ರಿ ಹಬ್ಬ ಬಂದಿದೆ. ಆಶ್ವಿಜ ಮಾಸದ ಶುದ್ಧ ಪಾಡ್ಯದ ದಿನದಂದು ಆರಂಭವಾಗಿ ನವಮಿಯವರೆಗೂ ನವರಾತ್ರಿ ಕಳೆದು, ಮಾರನೇ ದಿನ ವಿಜಯದಶಮಿ.ಕರ್ನಾಟಕದಲ್ಲಿ ದಸರಾ ಎಂದೂ, ಪಶ್ಚಿಮ ಬಂಗಾಳದಲ್ಲಿ 'ದುರ್ಗಾ ಪೂಜೆ' ಎಂದೂ ಆಚರಿಸಲ್ಪಡುತ್ತದೆ. ಇನ್ನೂ ದೇಶದಲ್ಲೆಡೆ ನವರಾತ್ರಿ ಹಬ್ಬವನ್ನು ಆಚರಿಸುವರು. ಒಂದೊಂದು ಕಡೆ ಒಂದೊಂದು ಆಚರಣೆ. ದೇವಿಯು ರಾಕ್ಷಸರ ಸಂಹಾರಕ್ಕಾಗಿ ವಿವಿಧ ಅವತಾರವೆತ್ತಿ, ಭುವಿಗೆ ಬಂದಳು ಎಂಬ ನಂಬಿಕೆಯಿಂದ ಈ ನವರಾತ್ರಿಯನ್ನು ಆಚರಿಸಲಾಗುತ್ತದೆ.

ಹುಲಿವೇಷ, ಡೊಳ್ಳು ಕುಣಿತ, ಹೆಜ್ಜೆ ಕುಣಿತ

ಮಂಗಳೂರಿನ ದಸರಾ ಮೈಸೂರು ದಸರದಷ್ಟೇ ಪ್ರಖ್ಯಾತಿ ಪಡೆದಿದೆ. ಇಲ್ಲಿ ಸಪ್ತಮಿಯಂದು (ಮೂಲಾ ನಕ್ಷತ್ರ) ಶಾರದೆ ವಿಗ್ರಹ ತಂದು, ಪೂಜಿಸಿ, ವಿಜಯದಶಮಿಯಂದು ಜಲ್ಲಿ ಹೂವು ಮುಡಿಸುವುದು ವಿಶೇಷ. ಜಲ್ಲಿ ಮೂಡಿಸಿದಾಗ ನಿಜ ದೇವಿಯೇ ಕುಳಿತಂತೆ ಭಾವ. ಪೂಜಿಸಿ ಅವಳ ವಿಸರ್ಜನೆಗೆಂದು ಸಾಗುವಾಗ ತರಹೇವಾರಿ ಹುಲಿವೇಷ, ಡೊಳ್ಳು ಕುಣಿತ, ಹೆಜ್ಜೆ ಕುಣಿತ ಇತ್ಯಾದಿ ನಡೆದು ದೊಡ್ಡ ಜಾತ್ರೆಯ ವಾತಾವರಣ.
 
ಶಿರಸಿ ನಮ್ಮೂರು. ಕೆಲವೆಡೆ ನವರಾತ್ರಿಯ 9 ದಿನಗಳಲ್ಲಿಯೂ ಸತತವಾಗಿ ದೀಪವನ್ನು ಉರಿಸಿ, ಶ್ರೀ ದೇವಿಯ ಮಹಾತ್ಮೆಯ ಪಠಣ (ಚಂಡೀಪಾಠ), ಸಪ್ತಶತೀ ಪಾರಾಯಣ, ಮಾಡಿಸುತ್ತಿದ್ದರು. ತಂದೆ ಶಾರದಾ ಪೂಜೆಯ ದಿನ ನಮ್ಮೆಲ್ಲ ಪುಸ್ತಕಗಳನ್ನು ದೇವರ ಕೊನೆಯಲ್ಲಿ ಜೋಡಿಸಿಡಲು ಹೇಳುತ್ತಿದ್ದರು, ಆ ದಿನ ದೇವರಿಗೆ ಆರತಿ ಬೆಳಗಿ ನಮ್ಮ ಪುಸ್ತಕಕ್ಕೂ ಆರತಿ ಮಾಡುವರು. ಮತ್ತೆ ನಮಗೆ ಪುಸ್ತಕ ಸಿಗುವುದು ಮಾರನೇ ದಿನ. ರಾತ್ರಿಯೆಲ್ಲಾ ದೇವರು ಪುಸ್ತಕ ಮುಟ್ಟಿ ನಮಗೆ ಆಶೀರ್ವದಿಸಿ, ಪರೀಕ್ಷೆಯಲ್ಲಿ ಉತ್ತಮ ಅಂಕ ಬರಲು ಸಹಾಯ ಮಾಡುವನು ಎಂದು ತಂದೆ ಕಥೆ ಹೇಳುತ್ತಿದ್ದರು. ಆಯುಧ ಪೂಜೆಯ ದಿನ ಅಮ್ಮ ತನ್ನ ಹೊಲಿಗೆ ಯಂತ್ರ, ಅಡುಗೆ ಮನೆ ಇತ್ಯಾದಿಗಳನ್ನು ಶುಚಿಗೊಳಿಸಿ ಪೂಜೆಗೆ ಅಣಿಯಾಗಿಸಿದರೆ, ಅಪ್ಪ ದೂರದರ್ಶನ, ತಂಪು ಪೆಟ್ಟಿಗೆ, ಕಪಾಟು ಇತ್ಯಾದಿ ಮನೆಯ ಸಾಮಗ್ರಿಗಳನ್ನು ಸ್ವಚ್ಛವಾಗಿ ಒರೆಸಿ, ನಂತರ ಆರತಿ ಮಾಡುತ್ತಿದ್ದರು.ಮನೆಯಲ್ಲಿ ಸಿಹಿಯೂಟ ಮಾಡಿ ಉಣ್ಣುತ್ತಿದ್ದೆವು.
ಮಾರಿಕಾಂಬಾ ದೇವಾಲಯದಲ್ಲಿ ನವರಾತ್ರಿ
ಚಿಕ್ಕಂದಿನಲ್ಲಿ ನವರಾತ್ರಿಯ ದಿನಗಳಲ್ಲಿ ಮಾರಿಕಾಂಬಾ ದೇವಾಲಯದಲ್ಲಿ ಪ್ರತಿ ದಿನವೂ ಸಂಗೀತ, ನೃತ್ಯ ಕಾರ್ಯಕ್ರಮಗಳು ನಡೆಯುತ್ತಿದ್ದವು. ಬಾಲವಾಡಿಗೆ ಹೋಗುವಾಗ ಗೆಳೆಯ, ಗೆಳತಿಯರೊಂದಿಗೆ ಛದ್ಮವೇಷ,ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸುವುದೇ ಒಂದು ದೊಡ್ಡ ಉತ್ಸಾಹ. ಅದಕ್ಕಾಗಿ ವೇಷಭೂಷಣಗಳನ್ನು ಸಿದ್ಧಗೊಳಿಸಿ, ಭಾಗವಹಿಸುವ ಸಂಭ್ರಮವೇ ಸಂಭ್ರಮ. ಶಾಲೆಗೆ ಹೋಗುವ ದಿನಗಳಲ್ಲಿ ಪ್ರಬಂಧ, ಸಾಮಾನ್ಯ ಜ್ಞಾನ ಇತ್ಯಾದಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಬಂದಾಗ ಬಹಳ ಖುಷಿ ಪಡುತ್ತಿದ್ದೆವು.ಅಂದು ಬಹುಮಾನವಾಗಿ ಸಿಕ್ಕ ೨-೩ ದೊಡ್ಡ ಹರಿವಾಣಗಳನ್ನು ಅಮ್ಮ ಪೂಜೆಗೆಂದು ಈಗಲೂ ಬಳಸುವಳು, ಆಗೆಲ್ಲ ಆ ದಿನಗಳನ್ನು ನೆನೆಸಿಕೊಂಡು ಹೆಮ್ಮೆ ಪಡುತ್ತೇನೆ.
ಅಪ್ಪನ ಮಡಿಲಿನಲ್ಲಿ ನಾಟಕ
ಹೈಸ್ಕೂಲು ದಿನಗಳಲ್ಲಿ ಇತರೆ ಮಿತ್ರ ಬಳಗದವರೊಂದಿಗೆ ದೇಶಭಕ್ತಿಗೀತೆ,ಭಕ್ತಿಗೀತೆ ಹಾಡಿದ ನೆನಪು.ಸ್ಪರ್ಧೆ ಮುಗಿಸಿ ಉಳಿದ ಹತ್ತಾರು ದಿನಗಳ ರಜೆ ಕಳೆಯಲು ಅಜ್ಜಿಯ ಊರು ಉಡುಪಿಗೆ ಬರುತ್ತಿದ್ದೆವು.ಉಡುಪಿಯ ದೇವಸ್ಥಾನದಲ್ಲಿ ನಾಟಕ,ಯಕ್ಷಗಾನ ಇತ್ಯಾದಿ ಕಾರ್ಯಕ್ರಮಗಳಿದ್ದು,ಅದನ್ನು ನೋಡಲು ಉತ್ಸಾಹದಿಂದ ಕುಳಿತುಕೊಂಡು ರಾತ್ರಿ ೧೨ರ ನಂತರ ಅಪ್ಪನ ಮಡಿಲಿನಲ್ಲಿ ಮಲಗಿಕೊಳ್ಳುತ್ತ, ನಾಟಕ ತುಂಬಾ ಚೆನ್ನಾಗಿತ್ತು ನಾಳೆಯೂ ಕರೆದುಕೊಂಡು ಬಾ ಎನ್ನುತ್ತಿದ್ದೆವು.

ಉಡುಪಿ ಕುಂದಾಪುರ ಪ್ರದೇಶದಲ್ಲಿ ನವರಾತ್ರಿಯ ಹೊತ್ತಿನಲ್ಲಿ ವಿವಿಧ ವೇಷ ಧರಿಸಿ ಮನೆಮನೆಗೆ ತಿರುಗುವ ಕಲಾವಿದರ ಬಳಗವೇ ಆ ದಿನಗಳಲ್ಲಿ ಇರುತ್ತಿತ್ತು.ನಾವು ಮಕ್ಕಳು ನಿಜವಾಗಿಯೂ ರಾವಣ ಬಂದಿದ್ದಾನೆ,ಕಂಸ ಬಂದಿದ್ದಾನೆ ನಮ್ಮನ್ನು ಕರೆದುಕೊಂಡು ಹೋಗುತ್ತಾನೆ, ಬಕಾಸುರ ತಿಂದು ಬಿಡುತ್ತಾನೆ ಎಂದೆಣಿಸಿ ಅಳುತ್ತ ಕುಳಿತು ವೇಷ ನೋಡಲು ಹೆದರುತ್ತಿದ್ದೆವು. ವೇಷಗಳು ನರ್ತಿಸುವಾಗ ಅಮ್ಮ, ಅತ್ತೆಯಂದಿರು ಬಾ ಎಂದು ಎಳೆದುಕೊಂಡು ಹೋಗಿ ತೋರಿಸುತ್ತಿದ್ದರು. ಯಕ್ಷಗಾನ, ಹೂವಿನಕೋಲು,ಗೊಂಬೆಯಾಟಗಳ ಕಾಣಲು ಕಣ್ಣು ಸಾಲದು.
ಕೆಟ್ಟವರನ್ನು ಹೊಡೆಯಲು ದೇವರು ಬರುವನು

ಚಿಕ್ಕಂದಿನಲ್ಲಿ ಅಪ್ಪನ ಸಂಬಂಧಿಯೊಬ್ಬರು ದಾಂಡೇಲಿಯಲ್ಲಿದ್ದರು. ಅವರ ಆಮಂತ್ರಣದ ಮೇರೆಗೆ ಅಲ್ಲಿಗೆ ನವರಾತ್ರಿಯ ರಜಾ ದಿನಗಳಲ್ಲಿ ಹೋಗಿದ್ದೆವು. ಅಲ್ಲಿ ದೊಡ್ಡ ರಾವಣನನ್ನು(ಹುಲ್ಲು, ಕಾಗದ ಇತ್ಯಾದಿಗಳಿಂದ) ತಯಾರಿಸಿ, ನಂತರ ಬಿಲ್ಲಿಗೆ ಬೆಂಕಿ ಹಚ್ಚಿ, ಬಿಲ್ಲಿನಿಂದ ಹೊಡೆಯುವ ವಾಡಿಕೆಯನ್ನು ನೋಡಿದ್ದೆವು. ಈ ಪದ್ಧತಿ ಉತ್ತರ ಭಾರತದ ಹಲವೆಡೆ ಆಚರಣೆ ಆಗುತ್ತದೆ ಎಂದೂ ಕೇಳಿದ್ದೇನೆ. ದೊಡ್ಡ ರಾವಣನ್ನು ನೋಡಿ ಹೆದರಿದ ನಾವು ರಾಮ ಬಂದು ಅವನನ್ನು ಹೊಡೆದ ಎಂದು ನೋಡಿ ಖುಷಿ ಪಟ್ಟಿದ್ದೆವು. ಕೆಟ್ಟವರನ್ನು ಹೊಡೆಯಲು ದೇವರು ಬರುವನು, ಒಳ್ಳೆಯವರಿಗೆ ಯಾವಾಗಲೂ ಜಯ ಎಂದೆಲ್ಲ ಅಮ್ಮ ಕಥೆ ಹೇಳಿದ್ದಳು.
ಗದ್ದೆಯಲ್ಲಿ ಭತ್ತದ ಕೊಯ್ಲು

ನವರಾತ್ರಿಯ ದಿನಗಳಲ್ಲಿ ಗದ್ದೆಯಲ್ಲಿ ಭತ್ತದ ಕೊಯ್ಲು ನಡೆಯುತ್ತಿರುತ್ತದೆ. ಬೆಳೆದ ಭತ್ತದ ತೆನೆಗಳನ್ನು ಕೊಯ್ದು ತಂದು ಅವುಗಳನ್ನು ಮನೆಯ ಪ್ರವೇಶದ್ವಾರಕ್ಕೆ ತೋರಣದಂತೆ ಕಟ್ಟುತ್ತಾರೆ. 'ಹೊಸತು' ಎಂಬ ಶೀರ್ಷಿಕೆಯಲ್ಲಿ ಈ ತೆನೆಗಳನ್ನು ತಂದು ಮನೆಯಲ್ಲಿ ಸುಖ,ಸಮೃದ್ಧಿ ನೆಲೆಸಲಿ ಎಂಬ ಭಾವದಿಂದ ಪೂಜಿಸಿ, ಮನೆಯಲ್ಲಿ ಅಕ್ಕಿ ಹಾಕಿಡುವ ಮಡಕೆ,ಬೆಳ್ಳಿ, ಬಂಗಾರ, ಇತ್ಯಾದಿಗಳಿಗೆ ಅವುಗಳನ್ನು ಕಟ್ಟಿ, ಹೊಸ ಭತ್ತದ ಅಕ್ಕಿಯಿಂದ ಅನ್ನ, ಪಾಯಸ ಮಾಡಿ ಆ ದಿನ ಹಬ್ಬದೂಟ ಮಾಡುವ ಕಾರ್ಯಕ್ರಮವಿರುತ್ತದೆ.

ವೇಷ ಹಾಕುವ ಕಲಾವಿದರು

ಈಗ ಕಾಲ ಬದಲಾಗಿದೆ.ಎಲ್ಲ ತರಾತುರಿಯಲ್ಲಿ ಸಾಗಬೇಕು.ವೇಷ ಹಾಕಿಕೊಂಡು ಮನೆಮನೆಗೆ ಬಂದರೆ ಅವರಿಗೆ ನೀಡುವ ಸಣ್ಣ ಸಂಭಾವನೆ, ಅವರ ಜೀವನ ಸಾಗುವುದೇ? ಅದಕ್ಕಾಗಿ ಹೊಟ್ಟೆಹೊರೆಯಲು ವೇಷ ಹಾಕುವ ಕಲಾವಿದರು, ಬೇರೆ ಕೆಲಸಗಳನ್ನು ಹುಡುಕಿಕೊಂಡು ಹೋಗಿದ್ದಾರೆ. ತಮ್ಮ ಕಲೆಯನ್ನು ಮುಂದುವರಿಸಬೇಕೆಂದು ಅಪೇಕ್ಷಿಸಿ ತಮ್ಮ ಉದ್ಯೋಗ ತೊರೆದು ಯಕ್ಷಗಾನ ಗೊಂಬೆಯಾಟ ನಡೆಸುವ ಉಪ್ಪಿನಕುದ್ರು ಭಾಸ್ಕರ್ ಕೊಗ್ಗ ಕಾಮತರವರು ನವರಾತ್ರಿಯ ಸಮಯದಲ್ಲಿ ಕುಂದಾಪುರದ ವೆಂಕಟರಮಣ ದೇವಸ್ಥಾನದಲ್ಲಿ ಯಕ್ಷಗಾನ ಗೊಂಬೆಯಾಟ ಪ್ರದರ್ಶನವನ್ನು ನೀಡುತ್ತಾರೆ. ಅದನ್ನು ನೋಡಲು ೧೦೦-೨೦೦ ಜನ ಸೇರಿ ಮಕ್ಕಳು, ಹಿರಿಯರು ಎಲ್ಲರೂ ಬಹಳ ಖುಷಿ ಪಡುತ್ತಾರೆ.

ಕಾಲ ಬದಲಾದರೂ ಹಬ್ಬ ನಮ್ಮೆಲ್ಲರ ಮನದಲ್ಲಿ ಐಕ್ಯತೆಯ ಭಾವ ಮೂಡಿಸಲಿ.ಮನೆಯವರೆಲ್ಲರೂ ಸೇರಿ ಒಟ್ಟಾಗಿ ಕುಳಿತು ಊಟ ಮಾಡಿ ಸಂಭ್ರಮಿಸಿ, ಒಟ್ಟಾಗಿ ಹದಿ ಕುಣಿದರೂ ಒಂದು ಹಬ್ಬದಂತೆ.ದೇವರ ಪ್ರಾರ್ಥಿಸಿ ಮನೆಯವರೆಲ್ಲರೂ ಖುಷಿಯಿಂದ ಇದ್ದರೆ ಅದೇ ಒಂದು ಸಂಭ್ರಮ. ಆ ಸಂಭ್ರಮ ಎಂದೆಂದೂ ನಮ್ಮೆಲ್ಲರಲಿ ನೆಲೆಸಿರಲಿ. ಪ್ರತಿ ನವರಾತ್ರಿಯೂ ಶಕ್ತಿಯನ್ನು ನಮ್ಮಲ್ಲಿ ಪ್ರವಹಿಸಿ, ಉತ್ತೇಜಿಸಲಿ ಎಂದು ಆಶಿಸೋಣ. ನವಯುಗದಲ್ಲಿ ನವರಾತ್ರಿಯ ವೈಭವವೂ ನವವಾಗೇ ಇರಲಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com