ಕರಾವಳಿ ಭಾಗದಲ್ಲಿ ದೀಪಾವಳಿ ಆಚರಣೆಯತ್ತ ಒಂದು ನೋಟ..

ಕರಾವಳಿಯಲ್ಲಿ ದೀಪಾವಳಿಯ ಆಚರಣೆ. ಬದುಕನ್ನು ಪ್ರತಿಯೊಂದು ವಿಷಯದಲ್ಲೂ ಪ್ರಕೃತಿಯನ್ನೇ ಕಾಣುವುದು ನಮ್ಮ ಕರಾವಳಿಗರ ಜೀವನ ಧರ್ಮವೂ ಹೌದು, ಮರ್ಮವೂ ಹೌದು.
ದೀಪಾವಳಿಗೆ ಅಡಿಕೆ ಮರದ ಸಿಂಗಾರ ಮತ್ತು ದೀಪಗಳಿಂದ ಅಲಂಕಾರ
ದೀಪಾವಳಿಗೆ ಅಡಿಕೆ ಮರದ ಸಿಂಗಾರ ಮತ್ತು ದೀಪಗಳಿಂದ ಅಲಂಕಾರ

ಅಶ್ವಿನಿಮೂರ್ತಿ ಅಯ್ಯನಕಟ್ಟೆ
knashwini@gmail.com

ಕರಾವಳಿಯಲ್ಲಿ ದೀಪಾವಳಿಯ ಆಚರಣೆ. ಬದುಕನ್ನು ಪ್ರತಿಯೊಂದು ವಿಷಯದಲ್ಲೂ ಪ್ರಕೃತಿಯನ್ನೇ ಕಾಣುವುದು ನಮ್ಮ ಕರಾವಳಿಗರ ಜೀವನ ಧರ್ಮವೂ ಹೌದು, ಮರ್ಮವೂ ಹೌದು.

ಇಲ್ಲಿನ ಆಚರಣೆಗಳಲ್ಲಿ ಬಹುಪಾಲು ನೇರವಾಗಿ ನಮ್ಮ ಬೇಸಾಯ ಹಾಗೂ ಜೀವನ ಪದ್ಧತಿಗೆ ಸಂಬಂಧಿಸಿದ್ದು. ಹಿರಿಯರು ತಮ್ಮ ಕೃಷಿ ಕಾರ್ಯಗಳನ್ನು ಗಮನದಲ್ಲಿಟ್ಟುಕೊಂಡೇ ಹಬ್ಬಗಳಿಗೆ ದಿನ ಗೊತ್ತು ಮಾಡಿರುವರೇನೋ ಎಂಬಂತೆ ನಮ್ಮಲ್ಲಿನ ಹಬ್ಬಗಳಿವೆ.

ಕೃಷಿ ಕೆಲಸ ಕಾರ್ಯಗಳ ನಡುವಿನ ವಿರಾಮದ ಸಮಯಕ್ಕೆ ಹೊಂದಿಕೊಂಡಂತೆ ಹಬ್ಬಗಳು ಬರುವುದು ನಿಜವೇ. ಇಲ್ಲಿ ಹಬ್ಬಗಳ ಆಚರಣೆಗಳಾದರೂ ಎಷ್ಟು ಸರಳ. ಪ್ರಕೃತಿಯಲ್ಲಿ ದೊರೆಯುವ ಅಂದರೆ ಅವರವರ ತೋಟ ಕೈತೋಟಗಳಲ್ಲಿರುವ ಅರಶಿನ, ತೆಂಗಿನಕಾಯಿ, ಹಣ್ಣು ಹಂಪಲು, ಬೊಂಡ, ಸಿಂಗಾರ, ಕೇಪುಳೆ ಹೂ, ತುಳಸಿ, ಚೆಂಡು ಹೂ ಮೊದಲಾದವುಗಳೇ ಆರಾಧನೆಯ ದ್ರವ್ಯಗಳು. ಧೂಪ ಆರತಿ, ಕರ್ಪೂರಗಳನ್ನೆಲ್ಲಾ ಅಂಗಡಿಯಿಂದ ಖರೀದಿಸಿದರೂ ದೊಡ್ಡ ಸಂಗತಿಯೆನಿಸದು.‌

ದೀಪಾವಳಿ ಹಬ್ಬ ಮನೆಮಂದಿಗೆಲ್ಲ ಮುದ ಕೊಡುವಂತದ್ದು. ಪುಟ್ಟ ಮಕ್ಕಳೊಂದಿಗೆ ಅಜ್ಜಂದಿರೂ ಇಷ್ಟಪಟ್ಟು ಖುಷಿಪಡುವ ಹಬ್ಬಗಳಲ್ಲಿ ಪ್ರಮುಖವಾದುದು ದೀಪಾವಳಿ. ಹಿರಿಯರ ಮಾರ್ಗದರ್ಶನದೊಂದಿಗೆ ಕಿರಿಯರು ‌ನಕ್ಕು ನಲಿದು, ಆಡಿ ಸಂತಸಪಡುವ ಹಬ್ಬವೆಂದರೆ ಅತಿಶಯೋಕ್ತಿಯಲ್ಲ.

ದೀಪಾವಳಿ ನಾಲ್ಕು‌ ದಿನಗಳ ಹಬ್ಬ.‌ ಕೆಲವೆಡೆ ಹದಿನೈದು ದಿನಗಳವರೆಗೂ ಆಚರಣೆಯಿದೆ. ಈ ಹಬ್ಬದೊಳಗೆ ಒಂದು ನೋಟ ಹರಿಸಿದರೆ ಅಚ್ಚರಿಯೆನಿಸುತ್ತದೆ. ಇಲ್ಲಿ ಏನಿಲ್ಲ ಏನುಂಟು, ಅಷ್ಟೊಂದು ಸಂಭ್ರಮವಿದೆ. ದೀಪಾವಳಿಯ ಪ್ರಮುಖ ಆಕರ್ಷಣೆಯೇ ತುಳಸಿಪೂಜೆ, ಲಕ್ಷ್ಮೀ ಪೂಜೆ, ಗೋ ಪೂಜೆ , ಗತಿಸಿಹೋದ ಹಿರಿಯರಿಗೆ ಕೃತಜ್ಞತೆ ಅರ್ಪಿಸುವ ಬಜಿಲು ಪಾಡುನೆ( ಅವಲಕ್ಕಿ ಹಾಕುವುದು) ಇಲ್ಲಿನ ಗೌಡ ಜನಾಂಗದವರಲ್ಲಿ ಹೆಚ್ಚಾಗಿ ಕಂಡು ಬರುವ ಆಚರಣೆ. ದೀಪಾವಳಿ ಹಬ್ಬದಲ್ಲಿ ಈ ಆಚರಣೆಯನ್ನು ಕುಲೆ ಪರ್ಬವೆಂದು ಕರೆಯುತ್ತಾರೆ. ಬಲೀಂದ್ರ ಪೂಜೆಯಲ್ಲಿ ಅವಲಕ್ಕಿ ಅಗೆಲು ಹಾಕುವ ಕ್ರಮವಿದೆ. ಆಮೇಲೆ ಬಲೀಂದ್ರನ ಕಥೆ ಹೇಳಿ ಕೂಗು ಹಾಕುವ ಕ್ರಮವೂ ಇದೆ.

ಹಬ್ಬದ ಆರಂಭ‌ವಾಗುವುದು ಅಭ್ಯಂಗದೊಂದಿಗೆ. ಮುಂಜಾನೆಯೇ ದೇವರ ಕೋಣೆಯಲ್ಲಿ ರಂಗೋಲಿ ಬರೆದು ಮಣೆ ಇಡಬೇಕು. ಆಮೇಲೆ ದೇವರಿಗೆ ನಮಸ್ಕರಿಸಿ ಎಣ್ಣೆಯನ್ನು ತಲೆಯಿಂದ ಕಾಲಿನವರೆಗೆ ಹಚ್ಚಿ ಬಿಸಿಬಿಸಿ ನೀರಿನಲ್ಲಿ ಮೈ ತಿಕ್ಕಿ‌ ಸ್ನಾನ ಮಾಡುವುದು ಖುಷಿಯ ಅನುಭವ. ಆಮೇಲೆ ಮನೆಯ ಹಿರಿಯರಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುವುದು ಪದ್ಧತಿ. ಆ ದಿನ ಬೆಳಗಿನ ತಿಂಡಿಗೆ ಕುಂಬಳಕಾಯಿ ದೋಸೆ ಬಹಳ ವಿಶೇಷ.

ಇನ್ನು ದೀಪಾವಳಿ ಬೆಳಕಿನ ಹಬ್ಬ ತಾನೇ. ದೀಪಗಳದ್ದೇ ಕಾರುಬಾರು. ಮುಸ್ಸಂಜೆ ‌ ಹೊತ್ತಾಯಿತೆಂದರೆ ಮನೆಯ ಸುತ್ತಮುತ್ತಲೆಲ್ಲಾ ಹಚ್ಚಿಡುವ ದೀಪಗಳು. ಬಲಿ ಚಕ್ರವರ್ತಿ ಹಬ್ಬದ ಮೂರು ದಿನಗಳು ತನ್ನ ರಾಜ್ಯದಲ್ಲಿ ಸಂಚರಿಸಿ ಜನರ ಸಂಭ್ರಮದಲ್ಲಿ ಪಾಲ್ಗೊಳ್ಳುವ ನಂಬಿಕೆ. ಹಾಗಾಗಿ ಪ್ರತಿ ಮನೆಮನೆಗಳಲ್ಲೂ ದೀಪ ರಂಗೋಲಿಗಳನ್ನಿಟ್ಟು ಬಲಿಚಕ್ರವರ್ತಿಯನ್ನು ಸ್ವಾಗತಿಸುವ ಸಂತೋಷ ಭಕ್ತರಿಗೆ.. ಮಣ್ಣಿನ ಹಣತೆಗಳು ಹೊಮ್ಮಿಸುವ ಪ್ರಶಾಂತವಾದ ಬೆಳಕುಗಳು ಮನಸ್ಸಿಗೆ ನೆಮ್ಮದಿಯನ್ನು ಕೊಡುತ್ತವೆ.

ದೀಪದಿಂದ ದೀಪ ಹಚ್ಚುತ್ತಾ ಸಂತಸವು ಎಲ್ಲೆಡೆ ಬೆಳಕಿನಂತೆ ಪಸರಿಸಲಿ ಎಂಬ ಘನ ಧ್ಯೇಯವನ್ನು ದೀಪಾವಳಿ ಹಬ್ಬ ಸೂಚಿಸುತ್ತದೆ. ಈ ನಿರ್ಮಲ ಬೆಳಕಿನ ಮುಂದೆ ಗಿಜಿಗಿಜಿ ಎಂದು ಜಗಮಗಿಸುವ ವಿದ್ಯುತ್ ದೀಪಗಳು ತೀರಾ ಕೃತಕವೆನಿಸುತ್ತವೆ.

ಮನೆ ತೋಟಗಳಲ್ಲಿ ಬೆಳೆಯುವ ಚೆಂಡು ಹೂಗಳನ್ನು ಅಲಂಕಾರಕ್ಕಾಗಿ ಬಳಸುವುದು ಹಿಂದಿನಿಂದ ಬಂದ ಪದ್ಧತಿ. ಹಬ್ಬಕ್ಕೆಂದು ಸಿಟಿಯಿಂದ ಹೂವುಗಳನ್ನು ಖರೀದಿಸಿ ತರುವ ಪದ್ಧತಿಯಿಲ್ಲ. ಸೆಗಣಿಯ ಉಂಡೆ ಮಾಡಿ ಅದರ ಮಧ್ಯದಲ್ಲಿ ಚೆಂಡು ಹೂಗಳನ್ನು ಇಟ್ಟು ತುಳಸಿ ಕಟ್ಟೆಯ ಸುತ್ತಲೂ ಇಡುತ್ತಿದ್ದುದು ಬಾಲ್ಯದ ನೆನಪುಗಳು. ಬಣ್ಣ ಬಣ್ಣದ ಎಲೆಗಳು, ಇನ್ನಿತರ ಹೂಗಳನ್ನು ಬಳಸಿ ಮಾಡುವ ರಂಗೋಲಿ ಮನಸಿಗಷ್ಟೇ ಅಲ್ಲ ಕಣ್ಣಿಗೂ ಅಂದ. ಅವುಗಳ ಮಧ್ಯೆ ಇಡುವ ದೀಪಗಳು. ಹಬ್ಬ ಹರಿದಿನಗಳಲ್ಲಿ ಮನೆ‌ಮನೆಗಳಲ್ಲಿ ಸಂಭ್ರಮದ ವಾತಾವರಣ. ಅಲ್ಲಲ್ಲಿ ದೀಪ ಹಚ್ಚಿ ನಕ್ಷತ್ರ ಕಡ್ಡಿ ಉರಿಸಿ ಪಡುತ್ತಿದ್ದ ಸಂತೋಷ ಇಂದು ಊರಿಡೀ ಪಸರಿಸಿದೆ.

ಅಂಗಡಿ ಮುಂಗಟ್ಟುಗಳೂ ಹಬ್ಬದ ಹೆಸರಿನಲ್ಲಿ ವಿಶೇಷ ವಾತಾವರಣವನ್ನು ಸೃಷ್ಟಿಸುತ್ತವೆ. ಹಿಂದೆ ಇಲ್ಲದ ಪಟಾಕಿಗಳು ಇಂದು ವಿವಿಧ ರೂಪಗಳಲ್ಲಿ ಸಮಾಜವನ್ನು ಆಕ್ರಮಿಸಿಕೊಂಡಿವೆ. ಅಲ್ಲಲ್ಲಿ ತಲೆ ಎತ್ತುತ್ತಿರುವ ಈ ಅಂಗಡಿಗಳು ಜನರ ಮನಸ್ಸನ್ನು ‌ತನ್ನೆಡೆಗೆ ಸೆಳೆಯುತ್ತಾ ದುಡ್ಡು ಹಾಳು ಮಾಡುವ ಪ್ರವೃತ್ತಿಯನ್ನು ಹುಟ್ಟು ಹಾಕುವತ್ತ ಸಾಗುತ್ತಿವೆ. ದುಡ್ಡು ಕೊಟ್ಟು ವಿಷಯುಕ್ತ ಹೊಗೆ, ಬೂದಿಯನ್ನು ಖರೀದಿಸುವ ಪರಿಗೆ ಏನನ್ನೋಣ? ಸರಳ ಸುಂದರ ಪರಿಸರ ಸ್ನೇಹಿ ದೀಪಾವಳಿ ಈ ಬಾರಿ ನಮ್ಮದಾಗಲಿ. ಹಬ್ಬದ ಸಂಭ್ರಮ ಇಮ್ಮಡಿಯಾಗಲಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com