ಗೌರಿ ಹಬ್ಬದಂದು ಅಮ್ಮನ ದಿಟ್ಟ ನಿರ್ಧಾರ 

ನಮ್ಮ ಸನಾತನ ಧರ್ಮದಲ್ಲಿ ಹಬ್ಬಗಳನ್ನು ರೂಢಿಗೆ ತಂದಿರುವುದು ದೇವರುಗಳನ್ನು ಭಕ್ತಿಯಿಂದ ಆರಾಧಿಸುವುದರ ಜೊತೆಗೆ, ಇಡೀ ಕುಟುಂಬ, ಬಂಧು-ಮಿತ್ರರು ಮತ್ತು ಇಡೀ ಸಮಾಜವನ್ನು ಒಗ್ಗೂಡಿಸುವುದರ ಜೊತೆಗೆ  ಆರ್ಥಿಕ ಸಧೃಢತೆಯನ್ನು ಕಾಪಾಡುವುದೇ ಆಗಿದೆ.
ಗೌರಿ ಹಬ್ಬದಂದು ಅಮ್ಮನ ದಿಟ್ಟ ನಿರ್ಧಾರ 

ಬರಹ-ಶ್ರೀಕಂಠ ಬಾಳಗಂಚಿ

ನಮ್ಮ ಸನಾತನ ಧರ್ಮದಲ್ಲಿ ಹಬ್ಬಗಳನ್ನು ರೂಢಿಗೆ ತಂದಿರುವುದು ದೇವರುಗಳನ್ನು ಭಕ್ತಿಯಿಂದ ಆರಾಧಿಸುವುದರ ಜೊತೆಗೆ, ಇಡೀ ಕುಟುಂಬ, ಬಂಧು-ಮಿತ್ರರು ಮತ್ತು ಇಡೀ ಸಮಾಜವನ್ನು ಒಗ್ಗೂಡಿಸುವುದರ ಜೊತೆಗೆ  ಆರ್ಥಿಕ ಸಧೃಢತೆಯನ್ನು ಕಾಪಾಡುವುದೇ ಆಗಿದೆ.

ಒಂದು ಹಬ್ಬದ ಮೂಲಕ,  ಹೂವು, ಹಣ್ಣು, ಆಹಾರಗಳನ್ನು ಬೆಳೆಯುವ ರೈತರಿಗೆ, ಅದನ್ನು ಕೊಂಡು ಮಾರುವ ವ್ಯಾಪಾರಿಗಳಿಗೆ ಆರ್ಥಿಕ ಲಾಭವನ್ನು ತಂದು ಕೊಟ್ಟರೆ, ಇನ್ನು ಹಬ್ಬದ ಸಮಯದಲ್ಲಿ ಊರಿಂದ ಊರಿಗೆ ಹೋಗುವ ಸಲುವಾಗಿ ಸಾರಿಗೆ ವ್ಯವಸ್ಥೆಯವರಿಗೆ, ಬಟ್ಟೆಗಳು, ಉಡುಗೆ ತೊಡುಗೆ, ಚಿನ್ನಾಭರಣದಿಂದ ಹೆಣ್ಣುಮಕ್ಕಳು ಬಳಸುವ ಅಲಂಕಾರಿಕ ವಸ್ತುಗಳಿಗೂ ಬೇಡಿಕೆ ಇರುತ್ತದೆ. ಅದೇ ಸಮಯದಲ್ಲಿ ಪೂಜೆಯನ್ನು ಮಾಡಿಸುವ ಪುರೋಹಿತರಿಗೂ ಎಲ್ಲಿಲ್ಲದ ಬೇಡಿಕೆ ಹೀಗೆ ನಮ್ಮ ಹಬ್ಬಗಳು ಜಾತಿಯ ತಾರತಮ್ಯವಿಲ್ಲದೇ ಇಡೀ ಸಮಾಜ ವಿವಿಧ ಸ್ಥರಗಳ ಜನರಿಗೆ ನೆಮ್ಮದಿಯನ್ನು ತಂದು ಕೊಡುತದೆ.

ಇನ್ನು ಗೌರಿ  ಮತ್ತು ಗಣೇಶನ ಹಬ್ಬ ಎಂದರಂತೂ ಉಳಿದೆಲ್ಲಾ ಹಬ್ಬಗಳಿಗಿಂತಲೂ ಬಹುತೇಕ ಎಲ್ಲರ ಮನೆಗಳಲ್ಲಿಯೂ ಇಲ್ಲವೇ  ಅಯಾಯಾ ರಸ್ತೆ, ಸ್ಥಳೀಯ ಬಡಾವಣೆಗಳಲ್ಲಿ ಇಲ್ಲವೇ ದೇವಸ್ಥಾನಗಳಲ್ಲಿ ಸಾರ್ವಜನಿಕವಾಗಿ ಶ್ರದ್ಧಾ ಭಕ್ತಿಯೊಂದಿಗೆ ಬಹಳ ಅದ್ದೂರಿಯಾಗಿಯೂ ಆಚರಿಸಲ್ಪಡುತ್ತದೆ. 

ನಮ್ಮ ಮನೆಯಲ್ಲಿಯೂ  ಈ ರೀತಿಯ ಸಂಭ್ರಮಕ್ಕೇನೂ ಕೊರತೆ ಇರಲಿಲ್ಲ. ಗೌರಿ ಹಬ್ಬಕ್ಕೆ ಎರಡು ವಾರಗಳ ಮುಂಚೆಯೇ ಅಟ್ಟದಲ್ಲಿ ಎತ್ತಿಟ್ಟಿದ್ದ ಬಾಗಿಣದ ಮೊರಗಳನ್ನು ತೆಗೆದು ಚೆನ್ನಾಗಿರುವ ಮೊರಗಳ ಜೊತೆ  ಅಗತ್ಯವಿದ್ದ ಹೊಸಾ ಮೊರಗಳನ್ನು ಖರೀದಿ ಮಾಡಿ  ಅದನ್ನು ಶುದ್ಧೀಕರಿಸಿ,  ಚೆನ್ನಾಗಿ ಕಾಣುವ ಸಲುವಾಗಿ ಬಣ್ಣ ಬಣ್ಣದ ಅಲಂಕಾರಿಕ ಕಾಗದಗಳನ್ನು ಅಂಟಿಸುವ ಮೂಲಕ ಆರಂಭವಾಗುತ್ತಿತ್ತು.  ನಂತರ ಬಾಗಿಣದಲ್ಲಿ ಇಡುವ ಬೇಳೆ ಕಾಳುಗಳು, ಬೆಲ್ಲ, ತೆಂಗಿನಕಾಯಿಗಳನ್ನು ಶುದ್ಧೀಕರಿಸಿ ಮಂಚೆಲ್ಲಾ ಕಾಗದ ಪಟ್ಟಣಗಳಲ್ಲಿ ಇಡುತ್ತಿದ್ದರು. ಕಾಲ ಬದಲಾದಂತೆ ಪ್ಲಾಸ್ಟಿಕ್ ಕವರುಗಳನ್ನು ಬಳಸುವ ರೂಢಿಯಲ್ಲಿದೆ.  ಇದರ ಜೊತೆ ಜೊತೆಯಲ್ಲಿಯೇ ಹತ್ತಿಯಿಂದ ಚೆಂದನೆಯ 16, 24, 32, 48  ಗೌರೀ ಎಳೆಗಳ ಗೆಜ್ಜೆ ವಸ್ತ್ರ ಗಣೇಶನಿಗೆ ವಿಶೇಷವಾದ ಗೆಜ್ಜೆವಸ್ತಗಳನ್ನು  ಸಿದ್ಧ ಪಡಿಸಿಕೊಳ್ಳುವಷ್ಟರಲ್ಲಿ ಹಬ್ಬಕ್ಕೆ ಕೇವಲ ಎರಡೇ ದಿನ ಬಾಯಿ ಇರುತ್ತಿತ್ತು.

ಹಬ್ಬದ ಹಿಂದಿನ ದಿನ ಬೆಳೆಗ್ಗೆಯೇ ಮಾರುಕಟ್ಟೆಯಿಂದ ಕನಕಾಂಬರ, ಮಲ್ಲಿಗೆ, ಕಾಕಡ, ಸುಗಂಧರಾಜ, ವಿವಿಧ ಬಣ್ಣದ ಸೇವಂತಿ ಹೂವುಗಳು, ಡೇರೇ ಹೂವು,  ಕಣಗಲೆ ಹೀಗೆ ವಿವಿಧ ಬಿಡಿ ಹೂವುಗಳ ಜೊತೆ ಮಂಚಿಪತ್ರೆ, ಬಿಲ್ವಪತ್ರೆ, ಮರುಗ, ಧವನ ಮುಂತಾದ ಬಗೆ ಬಗೆಯ ಪತ್ರೆಗಳನ್ನು ಕೊಂಡು  ತಂದು  ಅವುಗಳು ಬಾಡದೇ ಇರುವಂತೆ (ಅಗೆಲ್ಲಾ ಫ್ರಿಡ್ಜ್ ಇರಲಿಲ್ಲ) ಒದ್ದೆ ಬಟ್ಟೆಗಳಲ್ಲಿ ಎತ್ತಿಟ್ಟು  ಮಧ್ಯಾಹ್ನದ ಹೊತ್ತಿಗೆ  ಮನೆಯವರೆನೆಲ್ಲಾ ಒಟ್ಟುಗೂಡಿಸಿ ಹೂವು ಕಟ್ಟುವಾಗ ಇಡೀ ಮನೆಯೇ ಹೂವುಗಳ ಸುವಾಸನೆಯಿಂದ ಘಂ ಎನ್ನುತಿದ್ದ ಘಮಲನ್ನು ವರ್ಣಿಸುವುದಕ್ಕಿಂತಲೂ ಅನುಭವಿದರೇ ಚೆಂದ. ವಿವಿಧ ಹೂವುಗಳ ಜೊತೆ ಪತ್ರೆಗಳನ್ನು ಜೋಡಿಸಿ  ನಮ್ಮಮ್ಮ ಚಕಚಕನೆ ಹೂವಿನ ಹಾರವನ್ನು ಕಟ್ಟುವುದನ್ನು ನೋಡುವುದಕ್ಕೇ ಪರಮಾನಂದವಾಗುತ್ತಿತ್ತು.

ಅಂದಿನ ಕಾಲಕ್ಕೆ ನಮ್ಮೂರು ಬಹುಶಃ ಬಹಳ ಕುಗ್ರಾಮವಾಗಿದ್ದ ಕಾರಣವೋ ಇಲ್ಲವೇ,  ಇಡೀ ಊರಿನವರೆಲ್ಲಾ ಒಂದೇ ಮನೆಯಲ್ಲಿ ಸೇರಿಕೊಂಡು ಸಡಗರ ಸಂಭ್ರಮಗಳಿಂದ ಗೌರೀ ಹಬ್ಬವನ್ನು ಅಚರಿಸಲಿ ಎಂದೋ ನಮ್ಮ ಮನೆಯಲ್ಲಿ ಗೌರಿಯನ್ನು ಕೂಡಿಸುವ ಸಂಪ್ರದಾರವಿರಲಿಲ್ಲ. ನಮ್ಮದೇನಿದ್ದರೂ ಇಟ್ಟ ಮನೆಯಲ್ಲಿ ಗೌರೀ ಪೂಜೆಯನ್ನು ಮಾಡಬೇಕಿತ್ತು. ಹಾಗಾಗಿ ನಮ್ಮ ಮನೆಯ ಹತ್ತಿರದಲ್ಲಿ ಯಾರ ಮನೆಯಲ್ಲಿ ಗೌರೀ ಪೂಜೆ ಮಾಡುತ್ತಾರೋ ಅವರ ಮನೆಗೆ ಹಿಂದಿನ ದಿನ ಸೂರ್ಯ ಮುಳುಗುವ ಮುಂಚೆಯೇ ಪೂಜಾಸಾಮಗ್ರಿಗಳ ಜೊತೆಗೆ ಮೊರದ ಜೊತೆಯನ್ನು ಇಟ್ಟು ಮಾರನೇ ದಿನ ಎಷ್ತು ಹೊತ್ತಿಗೆ ಪೂಜೆ ಆರಂಭಿಸುತ್ತಾರೆ ಎಂದು ತಿಳಿದುಕೊಂಡು ಅದಕ್ಕೆ ತಕ್ಕಂತೆ ಗೌರೀ ಹಬ್ಬದ ದಿನ  ಅವರ ಮನೆಗೆ ಹೋಗಿ ಪೂಜೆ ಮಾಡಿಕೊಂಡು ಬರುವುದು ನಮ್ಮ ಮನೆಯಲ್ಲಿ ಅನೂಚಾನವಾಗಿ ನಡೆದುಕೊಂಡು ಬಂದಿದ್ದ ಸಂಪ್ರದಾಯ.

ಅದು 80ರ ದಶಕ. ಆ ವರ್ಷದ ಗೌರೀ ಹಬ್ಬದ ಹಿಂದಿನ ದಿನ ಮೇಲೆ ವಿವರಿಸಿದ ಸಡಗರಗಳಿಂದಲೇ ಎಲ್ಲವನ್ನೂ ಅಣಿಮಾಡಿಕೊಂಡು ಹಿಂದಿನ ದಿನವೇ ನಮ್ಮ ತಂದೆಯವರ ಸ್ನೇಹಿತರಾಗಿದ್ದ  ಶಾಸ್ತ್ರಿಗಳ ಮನೆಗೆ ಹೋಗಿ  ಮೊರ ಇಟ್ಟು ಬರುಲು ಹೋಗಿದ್ದಾಗ ಅದೇಕೋ ಏನೋ? ಶಾಸ್ತ್ರಿಗಳ ಮನೆಯವರ ವರ್ತನೆ ಎಂದಿನಂತೆ ಇರಲಿಲ್ಲ. ಮಾರನೆಯ ದಿನ ಬೆಳಿಗ್ಗೆ 7:30ಕ್ಕೆ ಪೂಜೆಯನ್ನು ಆರಂಭಿಸೋಣ  ಎಂದಿದ್ದನ್ನು ಕೇಳಿಸಿಕೊಂಡು ಅದರಂತೆ ತಮ್ಮ ತಾಯಿ ಮತ್ತು ತಂಗಿಯಂದಿರು ಅವರ ಮನೆಗೆ ಗೌರೀದಾರ, ಅರಿಶಿನ ಕುಂಕುಮ ಹೂವುಗಳೊಂದಿಗೆ ಸುಮಾರು 7 ಗಂಟೆಗೆ ಅವರ ಮನೆಗೆ ಹೋಗುವಷ್ಟರಲ್ಲಿಯೇ ಘಂಟಾನದವನ್ನು ಕೇಳಿ ನಮ್ಮ ತಾಯಿಯವವರ ಎದೆ ಧಸಕ್ ಎಂದಿತ್ತು. ಅರೇ 7:30ಕ್ಕೆ ಎಂದು ಇಷ್ಟು ಬೇಗಲೇ ಪೂಜೆ ಆರಂಭಿಸಿದ್ದಾರಲ್ಲಾ? ಎಂದು ಹೋಗಿ ನೋಡಿದರೆ,  ಅದಾವುದೋ ಕೆಲಸದ ಮೇಲೆ ಶಾಸ್ತ್ರಿಗಳು ತುರ್ತಾಗಿ ಹೊಗಬೇಕಾದ ಕಾರಣ ಬೆಳಿಗ್ಗೆ 6:30ಕ್ಕೆಲ್ಲಾ ಪೂಜೆ ಆರಂಭಿಸಿ ಬಿಟ್ಟಿದ್ದರು.

ಇಂದಿನ ಕಾಲದಂಗೆ ಫೋನ್ ಮೂಬೈಲ್ ಸಂಪರ್ಕವಿಲ್ಲದಿದ್ದದ್ದರೂ ಅವರ ಬೆಳಿಗ್ಗೆ ಅವರ ಮಕ್ಕಳ ಕೈಯಲ್ಲಿ ಹೇಳಿಕಳುಹಿಸಿದ್ದರು ಆಗುತ್ತಿತ್ತು. ಅದೇಕೋ ಏನೋ ಹಾಗಾಗಿಲ್ಲ. ಸರಿ ಹೇಗೂ ಪೂಜೆಗೆ ಹೋಗಿಯಾಗಿದೆ. ತಾಯೀ ಎಲ್ಲವನ್ನೂ ನೀನೇ ನೋಡಿಕೋ ಎಂದು ಗೌರಿಗೆ ಕೈ ಮುಗಿದು  ಕಸಿವಿಸಿಯಿಂದಲೇ ಮಧ್ಯದಿಂದಲೇ ಪೂಜೆಯನ್ನು  ಆರಂಭಿಸಿ ಮುಗಿಸಿಕೊಂಡು ಬಂದು, ಮಾರನೇಯ ದಿನ ನಿರ್ವಿಘ್ನವಾಗಿ ಗಣೇಶನ ಪೂಜೆ ನಡೆಸಿ  ಮೂರು ದಿನಗಳ ನಂತರ ಗಣೇಶನನ್ನು ಭಾವಿಯಲ್ಲಿ ವಿಸರ್ಜಿಸುವ ಸಮಯದಲ್ಲಿ,  ಒಂದು ಧೃಡ ನಿರ್ಧಾರವನ್ನು ತೆಗೆದುಕೊಂಡು, ಅಪ್ಪಾ ಗಣೇಶ ಈ ಬಾರೀ ನೀನು ಒಬ್ಬನೇ ಹೋಗಿ ಬಾ. ಮುಂದಿನ ಬಾರಿ  ನಿಮ್ಮಮ್ಮನ್ನನೊಂದಿಗೆಯೇ ನಿನ್ನನ್ನು ಕಳುಹಿರುವ ಸಂಕಲ್ಪ ಮಾಡುತ್ತಿದ್ದೇನೆ ಎಂದು ಹೇಳಿದಾಗ ನಮಗೆಲ್ಲರಿಗೂ  ಆಶ್ಚರ್ಯ.

ಆದಾದ ಕೆಲವು ದಿನಗಳ ನಂತರ ನಮ್ಮ ಅಜ್ಜಿ ತಾತ ಊರಿನಿಂದ ನಮ್ಮ ಮನೆಗೆ  ಬಂದಾಗ ನಡೆದದ್ದೆಲ್ಲವನ್ನೂ ನಮ್ಮ ಅಜ್ಜಿಗೆ ವಿವರಿಸಿ, ನೀವು ಒಪ್ಪಿಗೆ ಕೊಟ್ಟರೇ ಮುಂದಿನ ಸಲದಿಂದ ನಮ್ಮ ಮನೆಯಲ್ಲಿ ಅರಿಶಿನದ ಗೌರಮ್ಮನನ್ನು ಕೂಡಿಸಿ ಪೂಜೆ ಮಾಡಬೇಕೆಂದು ನಿರ್ಧರಿಸಿದ್ದೇನೆ ಎಂದಾಗ ಅದಕ್ಕೆ ಸಂತೋಷ ಪಟ್ಟ ನಮ್ಮ ಅಜ್ಜಿ, ನಮ್ಮ ಕಾಲದಲ್ಲಿ ಬಡತನದಿಂದಾಗಿ  ಹಬ್ಬ ಹರಿದಿನಗಳನ್ನು ನಮ್ಮಗಳ ಮನೆಯಲ್ಲಿ ಆಚರಿಸಲು ಸಾಧ್ಯವಾಗುತ್ತಿರಲಿಲ್ಲವಾದ್ದರಿಂದ  ಇಟ್ಟ ಮನೆಯಲ್ಲಿ ಪೂಜೆ ಮಾಡಿಕೊಂಡು ಬರುತ್ತಿದ್ದೆವು. ಈಗೆ ಹೇಗೂ ಭಗಂತನ ಶಕ್ತಿಯನ್ನು ಕೊಟ್ಟಿದ್ದಾನೆ.

ಎಲ್ಲವೂ ಅವನ ಸಂಕಲ್ಪದಂತೆಯೇ ಆಗಲೀ ಎಂದು  ಅಪ್ಪಣೆ ಕೊಟ್ತಿದ್ದಲ್ಲದೇ, ಮುಂದಿನ ಸಲದ ಗೌರೀ ಹಬ್ಬಕ್ಕೆ  ಒಂದು ವಾರಕ್ಕೆ ಮುಂಚೆಯೇ ನಮ್ಮ ಮನೆಗೆ ಬಂದಿದ್ದಲ್ಲದೇ ತಾವೇ ಸ್ವತಃ ಚೆಂದನೆಯ ಹೂಬತ್ತಿ ಗೌರೀ ಗಣೇಶನ ಎಳೆಗಳನ್ನು ಮಾಡಿ  ಶ್ರಾವಣ ಮಾಸ ಕಳೆದು ಭಾಧ್ರಪದ ಬರುತ್ತಿದ್ದಂತೆಯೇ ಅತ್ತೇ ಸೊಸೇ ಸೇರಿಕೊಂಡು ದೇವರನ್ನೆಲ್ಲಾ ತೊಳೆದು ದೇವರ ಮನೆಯಲ್ಲಿ ಅಂದವಾಗಿ ಜೋಡಿಸಿ ಗೌರಿ ಹಬ್ಬದ ಹಿಂದಿನ ದಿನ ಎಂದಿಗಿಂತಲೂ ತುಸು ಹೆಚ್ಚಿನ ಹೂವು ಮತ್ತು ಪತ್ರೆಗಳನ್ನು ತರಿಸಿಕೊಂಡು ಭರ್ಜರಿಯಾದ ಹೂಮಾಲೆಗಳನ್ನು ಕಟ್ಟಿದ್ದಲ್ಲದೇ ಯಾವುದೇ ಜಾತಿಯ ಹಂಗಿಲ್ಲದೇ, ಇಡೀ ವಠಾರದ ಮನೆಯವರನ್ನೆಲ್ಲಾ ಸೇರಿಸಿಕೊಂಡು ಅತ್ಯಂತ ಸಂಭ್ರಮ ಸಡಗರಗಳಿಂದ ಗೌರೀ ಹಬ್ಬವನ್ನು ಮಾಡಿದ್ದಲ್ಲದೇ ಮಾರನೆಯ ದಿನ ಗಣೇಶನ ಹಬ್ಬವನ್ನೂ ನಿರ್ವೀಘ್ನವಾಗಿ ಮಾಡಿ ಮುಗಿಸಿ, ಮೂರು ದಿನಗಳ ನಂತರ ಮತ್ತದೇ ಭಾವಿಯ ಬಳಿ ನಾನಾ ವಿಧದ ಸಿಹಿ ತಿಂಡಿಗಳು.

ಹುಳಿಯವವಲಕ್ಕಿ, ಮೊಸರನ್ನ ನೌವೇದ್ಯದೊಂದಿಗೆ ವಠಾರದವರನ್ನೆಲ್ಲಾ ಕರೆದುಕೊಂಡು, ಭಗವಂತ ನಿನ್ನ ಸಂಕಲ್ಪದಂತೆ ಎಲ್ಲವೂ ನಿರ್ವಿಘ್ನವಾಗಿ ನಡೆದಿದೆ. ಇನ್ನು ಮುಂದೆ ಇದೇ ರೀತಿಯಾಗಿ ನಡೆಸಿಕೊಂಡು ಹೋಗುವಂತೆ ಆಶೀರ್ವಾದ ಮಾಡು ಎಂದು ಬೇಡಿಕೊಂಡು  ಗೌರೀ ಮತ್ತು ಗಣೇಶನಿಗೆ ಪೂಜೆ ಮತ್ತು ಮಂಗಳಾರತಿಯನ್ನು ಮಾಡಿ ಭೀಮನ ಅಮವಾಸ್ಯೆ ಮತ್ತು ಗೌರೀ ಹಬ್ಬದಂದು ಕೈಗಳಿಗೆ ಕಟ್ಟಿಕೊಂಡಿದ ದೋರಬಂಧನವನ್ನು ಸಹಾ  ಗೌರೀ ಮತ್ತು ಗಣೇಶನೊಂದಿಗೆ ವಿಸರ್ಜನೆ ಮಾಡಿ ಗಣೇಶನಿಗೆ ಕತ್ತಲಲ್ಲಿ ಮನೆಯ ದಾರಿ ಸರಿಯಾಗಿ ಕಾಣಲೆಂದು ವಿಳ್ಳೇದೆಲೆಯ ಮೇಲೆ ಕರ್ಪೂರದ ದೀಪವನ್ನು ಹಚ್ಚಿ ನೀರಿಗೆ ತೇಲಿ ಬಿಟ್ಟು ನಂತರ ಎಲ್ಲರೂ ಕುಳಿತುಕೊಂಡು ಒಟ್ಟಿಗೆ ತಂದಿದ್ದ ನೈವೇದ್ಯವನ್ನೆಲ್ಲಾ ತಿಂದುಂಡು ಅದೇ ಭಾವಿಯ ನೀರು ಕುಡಿದು  ಬಂದಿದ್ದೆವು.

ನಲವತ್ತು ವರ್ಷಗಳ ಹಿಂದೆ  ನಮ್ಮಮ್ಮ ತೆಗೆದುಕೊಂಡ ದಿಟ್ಟ ನಿರ್ಧಾರದಂತೆ ಆರಂಭಿಸಿದ ಅರಿಶಿನದ ಗೌರೀ ಪೂಜೆ   ಅಜ್ಜಿ ಮತ್ತು ಅಮ್ಮ ಅಗಲಿ ಹೋದ ನಂತರವೂ ಇಂದಿಗೂ, ಇವತ್ತಿನ ಬೆಳಿಗ್ಗೆಯೂ ಅಮ್ಮಾ ಮತ್ತು ಮಗಳೊಂದಿಗೆ ನಿರ್ವಿಘ್ನವಾಗಿ ನಡೆದು ಕೊಂಡು  ಬಂದಿದೆ.  ಚಿಕ್ಕವಯಸ್ಸಿನಲ್ಲಿ ಮಗಳು ಬೇರೆಯವರ ಮನೆಗಳಲ್ಲಿ ಗೌರೀ ವಿಗ್ರಹವನ್ನು ನೋಡಿ ನಮ್ಮ ಮನೆಗೂ ಗೌರೀ ವಿಗ್ರಹವನ್ನು ತರಬೇಕೆಂದು ಒತ್ತಾಯಿಸಿದ ಕಾರಣ,  ಕೆಲವು ವರ್ಷಗಳಿಂದ ನಮ್ಮ ಮನೆಯಲ್ಲಿ ಅರಿಶಿನದ ಗೌರಿಗೆ ಪೂಜೆಯ ಜೊತೆಗೆ ಅಲಂಕಾರಿಕವಾಗಿ ಗೌರಿ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜಿಸುವ  ಪದ್ದತಿ ರೂಢಿಯಲ್ಲಿದೆ.

ವಠಾರದ ಮನೆಯಿಂದ ಸ್ವಂತ ಮನೆಗೆ ಬಂದಾಗ ಹಿಂದಿನಂತೆ ಎಲ್ಲಾ  ನೆರೆಹೊರೆವರು ಪೂಜೆಗೆ ಬರುವುದಿಲ್ಲವಾದರೂ ಸಂಜೆ  ಮೊರದ ಬಾಗಿಣ ಬೀರಲು ಮತ್ತು ಅರಿಶಿನ ಕುಂಕುಮ ಹಚ್ಚಿಕೊಳ್ಳಲು ಬರುವ ಮೂಲಕ ನಮ್ಮ ಸಂಸ್ಕಾರ ಮತ್ತು ಸಂಪ್ರದಾಯಗಳನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ನಿಜಕ್ಕೂ ಅನನ್ಯ ಮತ್ತು ಅನುಕರಣೀಯವಾಗಿದೆ.

ಯಾವುದೇ ಒಳ್ಳೆಯ ಕಾರ್ಯಗಳನ್ನು ಮಾಡುವಾಗ ಅದಕ್ಕೆ ನೂರಾರು ವಿಘ್ನಗಳು ಬಂದೇ ಬರುತ್ತದೆ ಅದನ್ನು ದಾಟಿಕೊಂಡು ಹೊಗುವ ಮನಸ್ಥಿತಿಯನ್ನು ಬೆಳಸಿಕೊಂಡಾಗ ಎಲ್ಲವೂ ಸುಗಮವಾಗಿ ನಡೆಯುತ್ತದೆ ಮತ್ತು ಅದರಿಂದ ಸುತ್ತಮುತ್ತಲಿನ ಹತ್ತು ಹಲವಾರು ಕುಟುಂಬಗಳೂ ಭಕ್ತಿಯಿಂದ ಪೂಜೆಯಲ್ಲಿ ಭಾಗವಹಿಸುವಂತೆ ಇಲ್ಲವೇ ತಮ್ಮ ತಮ್ಮ ಮನೆಗಳಲ್ಲಿ ಆಚರಿಸುವಂತೆ ಪ್ರೇರಪಿಸುತ್ತದೆ ಎನ್ನುವುದಕ್ಕೆ ನಲವತ್ತು ವರ್ಷಗಳ ಹಿಂದೆ ನಮ್ಮಮ್ಮ ತೆಗೆದುಕೊಂಡ ದಿಟ್ಟ ನಿರ್ಧಾರ ಎಲ್ಲರಿಗೂ ಜ್ವಲಂತ ಉದಾಹರಣೆಯಾಗಬಲ್ಲದು ಅಲ್ವೇ?. ಪೂಜೆ ಎನ್ನುವುದು ಆವರವರ  ಅನುಕೂಲ ಮತ್ತು ಶ್ರದ್ಧೆ ಮತ್ತು ಭಕ್ತಿಗಳ ಅನುಗುಣವಾಗಿದ್ದು ಅದರ ಅನುಸಾರವಾಗಿ ಪೂಜಿಸಿದಲ್ಲಿ ಭಗವಂತ ಒಲಿಯುತ್ತಾನೆ ಎನ್ನುವುದಕ್ಕೆ ಬೇಡರ ಕಣ್ಣಪ್ಪ, ಭಕ್ತ ಕನಕದಾಸ ಮುಂತಾದವರ ಅನುಭವಗಳು ಮಾರ್ಗದರ್ಶಿಯಾಗುತ್ತದೆ ಅಲ್ವೇ?

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com