ಇಂದು ಅನಂತ ಚತುರ್ದಶಿ: ಮಹಾವಿಷ್ಣುವಿನ ಪೂಜೆ ಹೇಗೆ?

ನಮ್ಮ ಧಾರ್ಮಿಕ ಹಬ್ಬಗಳಲ್ಲಿ ಅನಂತ ಚತುರ್ದಶಿ ಆಚರಣೆ ಕೂಡ ಪ್ರಮುಖವಾಗಿದೆ. ಇಂದು ಸೆಪ್ಟೆಂಬರ್ 9 ಶುಕ್ರವಾರ ಅನಂತ ಚತುರ್ದಶಿ ಬಂದಿದೆ. ಈ ಹಬ್ಬವು ಹಿಂದೂ ಹಬ್ಬದ 16 ಪರ್ವ ದಿನಗಳಲ್ಲಿ ಒಂದು. ಅನಂತನ ಚತುರ್ದಶಿ ವ್ರತದ ಆಚರಣೆ ರೀತಿ ವಿಶಿಷ್ಟ.
ಕೇರಳದ ಕಾಸರಗೋಡು ಜಿಲ್ಲೆಯ ಕುಂಬ್ಳೆ ಸಮೀಪ ಅನಂತಪುರದಲ್ಲಿರುವ ಅನಂತ ಪದ್ಮನಾಭ ದೇವಾಲಯ
ಕೇರಳದ ಕಾಸರಗೋಡು ಜಿಲ್ಲೆಯ ಕುಂಬ್ಳೆ ಸಮೀಪ ಅನಂತಪುರದಲ್ಲಿರುವ ಅನಂತ ಪದ್ಮನಾಭ ದೇವಾಲಯ
Updated on

ನಮ್ಮ ಧಾರ್ಮಿಕ ಹಬ್ಬಗಳಲ್ಲಿ ಅನಂತ ಚತುರ್ದಶಿ ಆಚರಣೆ ಕೂಡ ಪ್ರಮುಖವಾಗಿದೆ. ಇಂದು ಸೆಪ್ಟೆಂಬರ್ 9 ಶುಕ್ರವಾರ ಅನಂತ ಚತುರ್ದಶಿ ಬಂದಿದೆ. ಈ ಹಬ್ಬವು ಹಿಂದೂ ಹಬ್ಬದ 16 ಪರ್ವ ದಿನಗಳಲ್ಲಿ ಒಂದು. ಅನಂತನ ಚತುರ್ದಶಿ ವ್ರತದ ಆಚರಣೆ ರೀತಿ ವಿಶಿಷ್ಟ.

ಗಣೇಶ ಚತುರ್ಥಿಯ ಆಚರಣೆ ಸಂಪೂರ್ಣ ಮುಕ್ತಾಯವಾಗುವುದು ಅನಂತ ಚತುರ್ದಶಿಯಂದು. ಭಾದ್ರಪದ ಮಾಸದ ಶುಕ್ಲ ಪಕ್ಷದ ೧4ನೇ ದಿನ ಬರುವ ಹಬ್ಬವೇ ಅನಂತ ಚತುರ್ದಶಿ ಅಥವಾ ಅನಂತ ಪದ್ಮನಾಭ ವ್ರತ. ಭಗವಾನ್ ವಿಷ್ಣು ದೇವರನ್ನು ಸ್ಮರಿಸುವ ದಿನ.

ಕಥೆ: ಈ ಆಚರಣೆ ಆರಂಭವಾದ ಬಗ್ಗೆ ಒಂದು ಕಥೆಯಿದೆ. ಹಿಂದೆ ಕೃತಾಯುಗದಲ್ಲಿ ಸುಮಂತ ಎಂಬ ಬ್ರಾಹ್ಮಣನಿದ್ದನಂತೆ. ಆತನಿಗೆ ದೀಕ್ಷಾ ಎಂಬ ಹೆಸರಿನ ಪತ್ನಿ ಹಾಗೂ ಸುಶೀಲಾ ಎಂಬ ಮಗಳಿದ್ದಳು. ಕೆಲವು ವರ್ಷಗಳ ಬಳಿಕ ದೀಕ್ಷ ತೀರಿಹೋಗುತ್ತಾಳೆ. ಆಗ ಸುಮಂತ ಕರ್ಕಶ ಎಂಬ ಇನ್ನೊಬ್ಬ ಕನ್ಯೆಯನ್ನು ಮದುವೆಯಾಗುತ್ತಾನೆ. ಅವಳು ಸುಶೀಲೆಯನ್ನು ಸಾಕಷ್ಟು ಪೀಡಿಸುತ್ತಿರುತ್ತಾಳೆ. ಮಗಳಂತೆ ಪ್ರೀತಿಯಿಂದ ಕಾಣುವುದಿಲ್ಲ. ಅಷ್ಟು ಹೊತ್ತಿಗೆ ಸುಶೀಲೆ ಕೌಂಡಿನ್ಯ ಎಂಬುವವನನ್ನು ಮದುವೆಯಾಗುತ್ತಾಳೆ. ಚಿಕ್ಕಮ್ಮ ಕೊಡುವ ಕಷ್ಟವನ್ನು ಸಹಿಸಲಾರದೆ ಗಂಡನೊಂದಿಗೆ ಮನೆಬಿಟ್ಟು ಹೋಗುತ್ತಾಳೆ. 

ಸತಿ-ಪತಿಯರು ಯಮುನಾ ನದಿ ತೀರದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ನದಿ ತಟದಲ್ಲಿ ಮಹಿಳೆಯರು ಗುಂಪು ಕಟ್ಟಿಕೊಂಡು ಪೂಜೆ ಮಾಡುತ್ತಿರುತ್ತಾರೆ. ಸುಶೀಲೆ ಅವರಲ್ಲಿ ಅದೇನು ಎಂದು ಕೇಳಿದಾಗ ಅನಂತನ ಕುರಿತ ವ್ರತ ಮಾಡುತ್ತಿರುವುದು ಎನ್ನುತ್ತಾರೆ. ಆಗ ಸುಶೀಲೆಗೆ ತನಗೆ ಮಕ್ಕಳಾಗಲು ಹಾಗೂ ತನ್ನ ಗಂಡ ಮಾಡುತ್ತಿರುವ ವ್ಯಾಪಾರ ವೃತ್ತಿಯಲ್ಲಿ ಯಶಸ್ಸು ಸಿಗಲು ಅನಂತ ವ್ರತವನ್ನು ಮಾಡಬೇಕೆಂದು ಆಸೆಯಾಗಿ ವ್ರತಾಚರಣೆಯಲ್ಲಿ ತೊಡಗುತ್ತಾಳೆ.

ಆದರೆ ಸುಶೀಲೆಯ ಗಂಡ ಕೌಂಡಿನ್ಯನಿಗೆ ವ್ರತದ ಮೇಲೆ ನಂಬಿಕೆ ಬರುವುದಿಲ್ಲ. ಸುಶೀಲೆ ವ್ರತದ ಅಂಗವಾಗಿ ತನ್ನ ಎಡಗೈ ತೋಳಿಗೆ ಕಟ್ಟಿದ್ದ ದಾರವನ್ನು ಕಿತ್ತು ಬೆಂಕಿಗೆ ಎಸೆಯುತ್ತಾನೆ. ಈ ಘಟನೆಯ ನಂತರ ಅವರ ಸಂಪತ್ತು ನಿಧಾನವಾಗಿ ನಶಿಸುತ್ತಾ ಹೋಗಿ ದಟ್ಟ ದಾರಿದ್ರ್ಯ ಅವರನ್ನು ಆವರಿಸುತ್ತದೆ.

ಕೌಂಡಿನ್ಯನಿಗೆ ನಂತರ ಇದು ಅನಂತ ಪದ್ಮನಾಭ ದೇವರ ಶಾಪವೆಂದು ತಿಳಿಯುತ್ತದೆ. ಪಶ್ಚಾತ್ತಾಪವಾಗುತ್ತದೆ. ದೇವರ ದರ್ಶನಕ್ಕೆಂದು ಕಾಡಿಗೆ ಹೋಗುತ್ತಾನೆ. ಅಲ್ಲಿ ಮಾವಿನಮರದಲ್ಲಿ ಹಣ್ಣು ಬಿಟ್ಟಿರುತ್ತದೆ. ಆದರೆ ಹಣ್ಣನ್ನು ತಿನ್ನಲು ಸಾಧ್ಯವಾಗುವುದಿಲ್ಲ. ಹಸು ತನ್ನ ಕರುವಿನೊಂದಿಗೆ, ದಟ್ಟ ಹುಲ್ಲುಗಾವಲಿನಲ್ಲಿ ಎಮ್ಮೆ, ಕತ್ತೆ ಇವೆಲ್ಲಾ ಸಿಗುತ್ತವೆ. ಎಲ್ಲದರ ಬಳಿಯೂ ಅನಂತ ಪದ್ಮನಾಭನ ಬಗ್ಗೆ ತಿಳಿದಿದೆಯೇ ಎಂದು ಕೇಳುತ್ತಾನೆ. ಇಲ್ಲ ಎಂಬ ಉತ್ತರ ಬರುತ್ತದೆ. ಕೌಂಡಿನ್ಯನಿಗೆ ಜೀವನದಲ್ಲಿ ಹತಾಶೆ, ನಿರಾಶೆ ಉಂಟಾಗಿ ಸಾಯಲು ಹೊರಡುತ್ತಾನೆ. ಆಗ ಅನಂತ ಪದ್ಮನಾಭ ದೇವರು ಬ್ರಾಹ್ಮಣನ ರೂಪದಲ್ಲಿ ಪ್ರತ್ಯಕ್ಷರಾಗಿ ಈ ಹಿಂದೆ ಸಿಕ್ಕಿದ ಎಲ್ಲಾ ಗಿಡ, ಮರ, ಪ್ರಾಣಿಗಳು ತಾನೇ ಆಗಿದ್ದು, ತನ್ನನ್ನು ಪೂಜಿಸಿದರೆ ಕಳೆದು ಹೋದ ಸಂಪತ್ತೆಲ್ಲವು ಮರಳುತ್ತದೆ ಎನ್ನುತ್ತಾನೆ. ಅದರಂತೆ ಕೌಂಡಿನ್ಯ ಪತ್ನಿಯೊಡಗೂಡಿ 14 ವರ್ಷಗಳ ಕಾಲ ಪ್ರತಿವರ್ಷ ಅನಂತ ಪದ್ಮನಾಭ ವ್ರತ ಕೈಗೊಳ್ಳುತ್ತಾರೆ. ಮೊದಲಿನಂತೆ ಸುಖ-ಸಂಪತ್ತು ಮರಳುತ್ತದೆ.

ಹೀಗೆ ಭಕ್ತರು, ವಿಷ್ಣು ದೇವರನ್ನು ತಮ್ಮ ಇಷ್ಟಾರ್ಥ ಸಿದ್ದಿಗೆ ಅದರಲ್ಲೂ ವಿಶೇಷವಾಗಿ ಸಂಪತ್ತು ಮತ್ತು ಸಂತಾನ ಪ್ರಾಪ್ತಿಗೆ ಈ ವ್ರತವನ್ನು ಕೈಗೊಳ್ಳುತ್ತಾರೆ. ಹಾಗಾಗಿ ಇದನ್ನು ಅನಂತ ಪದ್ಮನಾಭ ವ್ರತವೆಂದೂ ಕರೆಯುತ್ತಾರೆ. ಈ ವ್ರತ ಮಾಡಲು ಆರಂಭಿಸಿದವರು 14 ವರ್ಷಗಳವರೆಗೆ ಕಡ್ಡಾಯವಾಗಿ ಆಚರಿಸಬೇಕೆಂಬ ನಿಯಮವಿದೆ. ಅನುಕೂಲವಾದರೆ ಅದನ್ನು ಮುಂದುವರಿಸಿಕೊಂಡು ಹೋಗಬಹುದು. 

ಆಚರಣೆ ಹೇಗೆ?: ಮನೆಯ ಯಜಮಾನ ಹಾಗೂ ಅವನ ಪತ್ನಿ ಕೈಗೊಳ್ಳುವ ವ್ರತ, ಪೂಜೆಯಾಗಿರುತ್ತದೆ. ಮುಂಜಾನೆಯೇ ಎದ್ದು ಶುಚಿರ್ಭೂತರಾಗಿ ಮನೆಯ ಪಕ್ಕದಲ್ಲಿರುವ ಬಾವಿ ಅಥವಾ ಕೆರೆಯಿಂದ ನೀರನ್ನು ತರುತ್ತಾರೆ. (ಇದಕ್ಕೆ ಯಮುನೆ ನೀರು ಎಂದು ಕರೆಯುತ್ತಾರೆ.) ಕಲಶದಲ್ಲಿ ನೀರನ್ನು ಹಾಕಿ ಅದರ ಮೇಲೆ ದರ್ಬೆ ಹುಲ್ಲಿನಿಂದ ರಚಿಸಿದ ಹಾವಿನ ಹೆಡೆಯನ್ನಿಡುತ್ತಾರೆ. ಅದರಲ್ಲಿ ಸಾಲಿಗ್ರಾಮವನ್ನಿಡುತ್ತಾರೆ.

ವ್ರತ ಕೈಗೊಳ್ಳುವ ಯಜಮಾನನ ಬಲಗೈ ತೋಳಿಗೆ ಕುಂಕುಮ ಲೇಪಿತ ಗಂಟು ಕಟ್ಟಿದ ಹಳದಿ ಬಣ್ಣದ ದಾರ ಮತ್ತು ಅವನ ಪತ್ನಿ ಎಡಗೈ ತೋಳಿಗೆ ದಾರ ಕಟ್ಟಿಕೊಳ್ಳುವ ಶಾಸ್ತ್ರವಿದೆ. ಇದಕ್ಕೆ ಅನಂತನ ದಾರ ಎಂದು ಕರೆಯುತ್ತಾರೆ. ವ್ರತ ಕೈಗೊಂಡವರು ಬೆಳಗ್ಗೆ ಹಾಗೂ ಮಧ್ಯಾಹ್ನ ಉಪವಾಸವಿದ್ದು, ರಾತ್ರಿ ಪೂಜೆ ಮುಗಿದ ಮೇಲೆ ಭೋಜನ ಮಾಡುತ್ತಾರೆ.

ಅನಂತ ಪದ್ಮನಾಭ ವ್ರತಕ್ಕೆ 14 ಬಗೆಯ ಭಕ್ಷ್ಯಗಳನ್ನು ತಯಾರಿಸುವ ಪದ್ಧತಿಯಿದೆ. ನೈವೇದ್ಯಕ್ಕೆ ಅನ್ನ, ಕಡುಬು, ಮೋದಕ, ಚಕ್ಕುಲಿ, ಹಾಲು, ಬೆಲ್ಲ ಇತ್ಯಾದಿಗಳನ್ನು ದೇವರ ಮುಂದಿಟ್ಟು ಪೂಜಿಸುತ್ತಾರೆ. ಪೂಜೆ, ಬಳಿಕ ಅನಂತ ಪದ್ಮನಾಭ ದೇವರ ಕಥೆ ಹೇಳಿ ಮಂಗಳಾರತಿ ನಡೆಯುತ್ತದೆ. ಇದಕ್ಕೆ ಮನೆಯವರೆಲ್ಲಾ ಸೇರಿ ಪ್ರಾರ್ಥನೆ ಮಾಡುತ್ತಾರೆ. ತಮ್ಮ ಇಷ್ಟಾರ್ಥ ಸಿದ್ದಿ ನೆರವೇರಿಕೆಗೆ ಸಂಕಲ್ಪ ಮಾಡಿಕೊಳ್ಳುತ್ತಾರೆ.  ಮನೆಯವರೆಲ್ಲರೂ ಆ ದಿನ ರಾತ್ರಿ ಜಾಗರಣೆ ಕುಳಿತು ದೇವರ ಸ್ಮರಣೆ, ಸ್ತುತಿ, ಭಜನೆಯಲ್ಲಿ ನಿರತರಾಗಿರಬೇಕೆಂಬ ನಿಯಮವಿದೆ. ಮಾರನೇ ದಿನ ಪೂಜೆಯ ನೀರನ್ನು ಮತ್ತೆ ಬಾವಿ ಅಥವಾ ಕೆರೆಗೆ ತೆಗೆದುಕೊಂಡು ಹೋಗಿ ವಿಸರ್ಜಿಸಿ ಬರುತ್ತಾರೆ. ಅಲ್ಲಿಗೆ ವ್ರತ ಕೊನೆಗೊಳ್ಳುತ್ತದೆ.

<strong>ಕೇರಳದ ಕಾಸರಗೋಡು ಜಿಲ್ಲೆಯ ಅನಂತಪುರ ಪದ್ಮನಾಭ ದೇವಾಲಯ -ಫೋಟೋ ಕೃಪೆ ಸುಬ್ರಹ್ಮಣ್ಯ ಭಟ್ ಪರಕ್ಕಜೆ </strong>
ಕೇರಳದ ಕಾಸರಗೋಡು ಜಿಲ್ಲೆಯ ಅನಂತಪುರ ಪದ್ಮನಾಭ ದೇವಾಲಯ -ಫೋಟೋ ಕೃಪೆ ಸುಬ್ರಹ್ಮಣ್ಯ ಭಟ್ ಪರಕ್ಕಜೆ 

ಬರಹ- ಸುಮನಾ ಉಪಾಧ್ಯಾಯ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com