ವಾಸವಿ ಬ್ರಹ್ಮರಥೋತ್ಸವದ ಅಂಗವಾಗಿ ನಾಗಕನ್ಯೆ ವಾಸವಿ ಕಲಾಕೌಶಲ್ಯ ಪ್ರದರ್ಶನ
ಮಲ್ಲೇಶ್ವರದಲ್ಲಿರುವ ಕನ್ಯಕಾಪರಮೇಶ್ವರಿ ದೇವಾಲಯ, ಕೇವಲ ಧಾರ್ಮಿಕ ಆಚರಣೆಗಳಿಗೆ ಸೀಮಿತವಾಗದೆ, ಆರೋಗ್ಯ, ಶಿಕ್ಷಣ, ಕಲೆ, ಸಾಹಿತ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ದೇವಾಲಯವೂ ಆಗಿದೆ.
Published: 15th December 2022 02:48 PM | Last Updated: 15th December 2022 02:48 PM | A+A A-

ಕಲಾಕೌಶಲ್ಯ ಚಿತ್ರಗಳು
ಬೆಂಗಳೂರು: ಮಲ್ಲೇಶ್ವರದಲ್ಲಿರುವ ಕನ್ಯಕಾಪರಮೇಶ್ವರಿ ದೇವಾಲಯ, ಕೇವಲ ಧಾರ್ಮಿಕ ಆಚರಣೆಗಳಿಗೆ ಸೀಮಿತವಾಗದೆ, ಆರೋಗ್ಯ, ಶಿಕ್ಷಣ, ಕಲೆ, ಸಾಹಿತ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ದೇವಾಲಯವೂ ಆಗಿದೆ.
ಕನ್ಯಕಾಪರಮೇಶ್ವರಿ ಮಾತೆಗೆ ಬ್ರಹ್ಮರಥೋತ್ಸವ ನಡೆಯುವ ವಿಶ್ವದ ಏಕೈಕ ಸ್ಥಳ ಬೆಂಗಳೂರು ನಗರದ ಮಲ್ಲೇಶ್ವರದ ಕನ್ಯಕಾಪರಮೇಶ್ವರಿ ದೇವಾಲಯ. ಪ್ರತೀ ಎರಡು ವರ್ಷಗಳಿಗೊಮ್ಮೆ ನಡೆಯುವ ಈ ಮಹೋನ್ನತ ಉತ್ಸವದ ಪ್ರಯುಕ್ತ ವೈಶಿಷ್ಟ್ಯಪೂರ್ಣ ಕಲಾಕೃತಿಗಳನ್ನು ಲೋಕಾರ್ಪಣೆ ಮಾಡುವ ಮೂಲಕ ಅಬಾಲವೃದ್ಧರಾದಿಯಾಗಿ ಲಕ್ಷಾಂತರ ಭಕ್ತಾದಿಗಳನ್ನು ಆಕರ್ಷಿಸುವ ಈ ದೇವಾಲಯದಲ್ಲಿ ಈ ವರ್ಷ ಇದೇ ಡಿಸೆಂಬರ್ 16ರಿಂದ ಜನವರಿ 2ರವರೆಗೆ 10ನೇ ಶ್ರೀ ವಾಸವಿ ಬ್ರಹ್ಮರಥೋತ್ಸವದ ಅಂಗವಾಗಿ ನಾಗಕನ್ಯೆ ಶ್ರೀ ವಾಸವಿ ಎಂಬ ಅತ್ಯುದ್ಬುತವಾದ ಕಲಾಕೌಶಲ್ಯವನ್ನು ಸಮಾಜಕ್ಕೆ ಪರಿಚಯಿಸುತ್ತಿದೆ.
ನಾಗಕನ್ಯೆ ಶ್ರೀ ವಾಸವಿ
ನಿರಂತರ 18 ದಿನಗಳ ಕಾಲ ನಡೆಯುವ ಈ ಮಹಾಮೇಳದಲ್ಲಿ 15,000 ಚದರ ಅಡಿಗಳ ವಿಸ್ತೀರ್ಣದಲ್ಲಿ ಮನಮೋಹಕವಾದ, ವಿವಿಧ ಮಾದರಿಯ ವರ್ಣರಂಜಿತ ಸರ್ಪಗಳ ವೈವಿದ್ಯಮಯವಾದ, ರಮ್ಯ ರಮಣೀಯವಾದ ನಾಗಲೋಕವನ್ನು ಸೃಷ್ಟಿಸಲಾಗಿದೆ. ದೇವಾಲಯದ ಮುಖ್ಯದ್ವಾರದಲ್ಲಿ ಸುಮಾರು 80 ಅಡಿಗಳ ವಿಸ್ತೀರ್ಣದಲ್ಲಿ ಬೃಹತ್ ಹುತ್ತದಿಂದ ಎದ್ದು ಬಂದು ನಾಗಲೋಕಕ್ಕೆ ಸ್ವಾಗತ ನೀಡುತ್ತಿರುವ ಐದು ಘಟ ಸರ್ಪಗಳ ವೈಭವಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ. ಕಳೆದ 80 ದಿನಗಳಿಂದ 50ಕ್ಕೂ ಮೀರಿದ ದಕ್ಷಿಣ ಭಾರತ ಕುಶಲಕರ್ಮಿಗಳ ನಿರಂತರ ಪರಿಶ್ರಮದಿಂದ ಪ್ರಖ್ಯಾತ ಕಲಾನಿರ್ದೇಶಕ ವಸಂತರಾವ್ ಎಂ ಕುಲಕರ್ಣಿಯವರ ಮಾರ್ಗದರ್ಶನದಲ್ಲಿ ಅದ್ಬುತವಾಗಿ ಮೂಡಿಬಂದಿರುವ ನಾಗಲೋಕದ ಕಲಾಕೃತಿಯಲ್ಲಿ ಪ್ರತಿಯೊಬ್ಬರು ನೂರಾರು ಹಾವುಗಳ ನಡುವೆಸಂಚರಿಸಿ, ವಿಶೇಷ ಅನುಭವ ಪಡೆಯುವುದರಲ್ಲಿ ಸಂದೇಹವಿಲ್ಲ.
ದಟ್ಟ ಕಾನನದಲ್ಲಿ ನಡೆಯುವ ನಾಗಕನ್ಯೆ ವಾಸವಿಯ ಕಥಾರೂಪವು ಚಿತ್ರ ಮಾಲಿಕೆ, ಭಕ್ತಾದಿಗಳನ್ನು ಆಶೀರ್ವದಿಸಲು ಭುವಿಯಿಂದ ಆಗಸಕ್ಕೆದ್ದು ದರ್ಶನ ನೀಡಿ, ಆಶೀರ್ವದಿಸುವ ಬೃಹತ್ ಸರ್ಪದ ವೈಭವ ನೀಡುವ ಅನುಭವ ಮೈನವಿರೇಳಿಸುತ್ತದೆ. ದೇವಾಲಯದ ಒಳಗೆ ನಿರ್ಮಾಣವಾಗಿರುವ ಸುಮಾರು 1,500 ಅಡಿಗಳ ಬೃಹತ್ ಹುತ್ತದ ಒಳಗೆ ಭಕ್ತಾದಿಗಳು ನಿಂತು ಜಗನ್ಮಾತೆ ವಾಸವಿ ದೇವಿಯದರ್ಶನ ಪಡೆಯುವುದೇ ಭಕ್ತಾದಿಗಳ ಸಾರ್ಥಕ ಕ್ಷಣ. ದೇವಾಲಯದ ಮುಖ್ಯ ದ್ವಾರದಿಂದಲೇ ಹುತ್ತದೊಳಗೆ ಆಗಮಿಸಿ ಸುಮಾರು 150 ಅಡಿಗಳ ಉದ್ದದ ಸುರಂಗದೊಳಗೆ ವಿವಿಧ ರೀತಿಯ ಸರ್ಪಗಳ ದರ್ಶನ, ನಂತರ ಸರ್ಪ ಕಾನನದಲ್ಲಿ ಕಥಾಚಿತ್ರ ಮಾಲಿಕೆ ನೋಡಿ, ನಂತರ ದೇವಾಲಯದ ಒಳಗೆ ದರ್ಶನ ಪಡೆದು ಹೊರಬಂದರೆ ಸುಶ್ರಾವ್ಯವಾದ ಭಕ್ತಿ ಗೀತೆಗಳ ನೀನಾದದ ಜೊತೆಗೆ ನಾಗಕನ್ಯೆ ಶ್ರೀ ವಾಸವಿ ನಾಗಲೋಕದ ನೆನಪು ಅವಿಸ್ಮರಣೀಯವಾಗಿರಲು ಪೋಟೋ ಕ್ಲಿಕಿಸಲು ವಿಶೇಷವಾದ ಮಿನಿ ನಾಗಲೋಕಗಳ ಅನಾವರಣ. ಪ್ರತಿದಿನ ಬೆಳಗ್ಗೆ 9.30 ರಿಂದ ಮಧ್ಯಾಹ್ನ 1.30 ರ ವರೆವಿಗೂ ನಂತರ ಮಧ್ಯಾಹ್ನ 3.30 ರಿಂದ ರಾತ್ರಿ 10.00 ಘಂಟೆವರೆವಿಗೂ ಭಕ್ತಾದಿಗಳಿಗೆ ನಿರಂತರವಾಗಿ ಉಚಿತ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.