ಶೃಂಗೇರಿ ಶಾರದಾಂಬೆ ಸನ್ನಿಧಿಯಲ್ಲಿ ದಸರಾ ಆಚರಣೆ ಹೇಗೆ ಬಂತು, ಸಂಪ್ರದಾಯ ಹೇಗೆ?

ನವರಾತ್ರಿ ಭಾರತದಾದ್ಯಂತ ಹಿಂದೂಗಳು ಆಚರಿಸುವ ಬಹಳ ದೊಡ್ಡ ಹಬ್ಬ. ನಮ್ಮ ರಾಜ್ಯವಾದ ಕರ್ನಾಟಕದಲ್ಲಂತೂ ದಸರಾವನ್ನು ನಾಡಹಬ್ಬವನ್ನಾಗಿ ಆಚರಿಸಲಾಗುತ್ತದೆ. ಮೈಸೂರಿನಲ್ಲಿ ನಡೆಯುವ ದಸರಾ ವಿಶ್ವವಿಖ್ಯಾತವಾಗಿದ್ದು ಅದರ ವೀಕ್ಷಣೆಗೆ ದೇಶವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಮೈಸೂರಿಗೆ ಬರುತ್ತಾರೆ.
ಶೃಂಗೇರಿ ಶಾರದಾ ಪೀಠ
ಶೃಂಗೇರಿ ಶಾರದಾ ಪೀಠ

ಬರಹ-ಶ್ರೀಕಂಠ ಬಾಳಗಂಚಿ 

ನವರಾತ್ರಿ ಭಾರತದಾದ್ಯಂತ ಹಿಂದೂಗಳು ಆಚರಿಸುವ ಬಹಳ ದೊಡ್ಡ ಹಬ್ಬ. ನಮ್ಮ ರಾಜ್ಯವಾದ ಕರ್ನಾಟಕದಲ್ಲಂತೂ ದಸರಾವನ್ನು ನಾಡಹಬ್ಬವನ್ನಾಗಿ ಆಚರಿಸಲಾಗುತ್ತದೆ. ಮೈಸೂರಿನಲ್ಲಿ ನಡೆಯುವ ದಸರಾ ವಿಶ್ವವಿಖ್ಯಾತವಾಗಿದ್ದು ಅದರ ವೀಕ್ಷಣೆಗೆ ದೇಶವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಮೈಸೂರಿಗೆ ಬರುತ್ತಾರೆ.

ಈ ರೀತಿಯ ದಸರಾ ಆಚರಣೆಗೆ ಮೂಲ ಪ್ರೇರಣೆ ಶೃಂಗೇರಿಯ ಶಾರದಾ ಪೀಠ ಎನ್ನುವ ಕುತೂಹಲಕಾರಿ ಸಂಗತಿ ಬಹುತೇಕರಿಗೆ ತಿಳಿದಿರಲಿಕ್ಕಿಲ್ಲ. ನವರಾತ್ರಿಯ ಸಂದರ್ಭದಲ್ಲಿ ಶೃಂಗೇರಿಯಲ್ಲಿ ನಡೆಯುವ ವೈಭವೋಪೇತ ದಸರಾ ದರ್ಬಾರ್ ಆಚರಣೆಯ ಕುರಿತಾಗಿ ತಿಳಿಯೋಣ ಬನ್ನಿ.

ಇತಿಹಾಸ, ಹಿನ್ನೆಲೆ:

1336 ರಲ್ಲಿ ಉತ್ತರಭಾರತವನ್ನು ಆಳುತ್ತಿದ್ದ ಮುಸಲ್ಮಾನರು ನಿಧಾನವಾಗಿ ತಮ್ಮ ಪ್ರಾಬಲ್ಯವನ್ನು ದಕ್ಷಿಣ ಭಾರತದ ಕಡೆಗೆ ವಿಸ್ತರಿಸಿಕೊಳ್ಳುತ್ತಾ ಬಲವಂತವಾಗಿ ಹಿಂದೂಗಳನ್ನು ಮತಾಂತರ ಮಾಡುತ್ತಿದ್ದ ಕಾಲದಲ್ಲಿ ತುಘಲಕ್ ಆಡಳಿತದ ವಿರುದ್ಧದ ಬಂಡಾಯದ ರಣಕಹಳೆಯನ್ನು ಊದಿ ಹಕ್ಕ ಬುಕ್ಕರೆಂಬ ಇಬ್ಬರು ಯುವಕರ ಸಾರಥ್ಯದಲ್ಲಿ ಶೃಂಗೇರಿ ಶಾರದಾ ಪೀಠಾಧ್ಯಕ್ಷರಾಗಿದ್ದ ಗುರು ವಿದ್ಯಾರಣ್ಯರ ನೇತೃತ್ವದಲ್ಲಿ ವಿಜಯನಗರ ಸಾಮ್ರಾಜ್ಯವು ದಕ್ಷಿಣ ಭಾರತದಲ್ಲಿ ಪ್ರಬಲ ಶಕ್ತಿಯಾಗಿ ರೂಪುಗೊಂಡು ಸುಮಾರು ಮೂರು ಶತಮಾನಗಳಿಗೂ ಹೆಚ್ಚು ಕಾಲ ವಿಜೃಂಭಿಸಿದ್ದು ಈಗ ಇತಿಹಾಸ.

ವಿಜಯನಗರ ಸಾಮ್ರಾಜ್ಯದ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗುರುಗಳಾದ ವಿದ್ಯಾರಣ್ಯ ಮಹಾಸ್ವಾಮಿಗಳಿಗೆ ಗುರು ಕಾಣಿಕೆಯಾಗಿ ಹರಿಹರ ರಾಯ ಮತ್ತು ಬುಕ್ಕ ರಾಯರು ಕೃತಜ್ಞತಾ ಪೂರ್ವಕವಾಗಿ ಮತ್ತು ಭಕ್ತಿಯ ಸಂಕೇತವಾಗಿ, ತಮ್ಮ ಇಡೀ ರಾಜ್ಯ, ಚಿನ್ನದ ಸಿಂಹಾಸನ, ಬಗೆ ಬಗೆಯ ಮುತ್ತು ಮಾಣಿಕ್ಯಗಳಿಂದ ಮಾಡಿದ ಕಿರೀಟ, ಚಿನ್ನದ ಪಲಕ್ಕಿ, ಛತ್ರಿ ಚಾಮರಗಳು ಮತ್ತು ರಾಜ್ಯದ ರಾಜಮುದ್ರೆಗಳನ್ನು ಆಚಾರ್ಯರ-ಪಾದಕಮಲಗಳಲ್ಲಿ ಅರ್ಪಿಸಿದ್ದಲ್ಲದೇ, ತಮ್ಮ ಪರಮ ಪೂಜ್ಯ ಗುರುಗಳಾದ ಶ್ರೀ ವಿದ್ಯಾರಣ್ಯರನ್ನು ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ, ಶ್ರೀಮದ್ರಜಾಧಿರಾಜಗುರು, ಭೂಮಂಡಲಾಚಾರ್ಯ ಇನ್ನು ಮುಂತಾದ ಶ್ರೇಷ್ಠ ಬಿರುದುಗಳಿಂದ ಗೌರವಿಸಿದರು.

ತಮ್ಮ ಶಿಷ್ಯರ ವಿನಮ್ರ ವಿನಂತಿ ಮತ್ತು ಭಕ್ತಿಯನ್ನು ಬಲವಂತದಿಂದ ಒಪ್ಪಿಕೊಂಡ ಗುರುಗಳು ಪ್ರತೀ ನವರಾತ್ರಿಯಂದು ಶೃಂಗೇರಿಯಲ್ಲಿ ವಿಶಿಷ್ಟವಾದ ರೀತಿಯಲ್ಲಿ ಶಾರದಾ ದೇವಿಗೆ ವಿವಿಧ ರೀತಿಯ ಅಲಂಕಾರಗಳ ನವರಾತ್ರಿಯ ಆಚರಣೆಯನ್ನು ಆರಂಭಿಸಿದ್ದಲ್ಲದೇ, ಆದೇ ಕಾಲದಲ್ಲಿ ಈ ರತ್ನ ಖಚಿತ ಸಿಂಸಾಸದನದ ಮೇಲೆ ಕುಳಿತು ವಿಶೇಷ ದರ್ಬಾರ್ ನಡೆಸುವ ಸತ್ ಸಂಪ್ರದಾಯವನ್ನು ರೂಡಿಗೆ ತಂದರು. 

ಶೃಂಗೇರಿಯಲ್ಲಿ ಆರಂಭವಾದ ಈ ರೀತಿಯ ಆಚರಣೆ ಹಂಪೆಯಲ್ಲಿ ಮುಂದುವರೆದು ನಂತರ ವಿಜಯ ನಗರದ ಸಾಮಂತರಾಗಿದ್ದ ಮೈಸೂರು ಅರಸರು ವಿಜಯನಗರದ ಆರಸರಿಂದ ಹೊರಬಂದ ತಮ್ಮದೇ ಸ್ವತಂತ್ರವಾದ ರಾಜ್ಯವನ್ನು ಸ್ಥಾಪನೆ ಮಾಡಿಕೊಂಡಾಗ ಅದೇ ರತ್ನ ಖಚಿತ ಸಿಂಹಾಸವನ್ನು ಬಳುವಳಿ ಪಡೆದು ದಸರಾ ದರ್ಬಾರ್ ಪದ್ದತಿಯನ್ನು ಮೈಸೂರಿನಲ್ಲಿ ಆರಂಭಿಸುವ ಮೂಲಕ ಜಗದ್ವಿಖ್ಯಾತಿಯನ್ನಾಗಿಸಿದ್ದಲ್ಲದೇ ನವರಾತ್ರಿಯನ್ನು ನಮ್ಮ ನಾಡಹಬ್ಬವನ್ನಾಗಿಸಿದರು.

ಶೃಂಗೇರಿಯಲ್ಲಿ ನವರಾತ್ರಿ ಆಚರಣೆ:

ಗುರು ವಿದ್ಯಾರಣ್ಯರಿಂದ ಆರಂಭವಾದ ನವರಾತ್ರಿಯ ಸತ್ ಸಂಪ್ರದಾಯವನ್ನು ಶ್ರೀಮಠದಲ್ಲಿ ನವರಾತ್ರಿ ಉತ್ಸವ ಮತ್ತು ದರ್ಬಾರ್ ಗಳನ್ನು ಇಂದಿಗೂ ಬಹಳ ಅದ್ದೂರಿಯಿಂದ ಮುಂದುವರೆಸಿಕೊಂಡು ಹೊಗುತ್ತಿರುವುದು ಗಮನಾರ್ಹವಾಗಿದೆ. ನವರಾತ್ರಿಯ ಸಮಯದಲ್ಲಿ ಶೃಂಗೇರಿಯ ಜಗದ್ಗುರುಗಳು ಅಹ್ನಿಕ ಮತ್ತು ಅನುಷ್ಠಾನದ ನಂತರ, ಪರಮ ಪೂಜ್ಯ ಆಚಾರ್ಯರು ಗುರು ಪಾದುಕೆಗಳಿಗೆ ಮತ್ತು ಶ್ರೀ ಚಕ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಬೆಳಿಗ್ಗೆ 9.30 ಕ್ಕೆ ಆಚಾರ್ಯರು ಶ್ರೀ ಮಠದ ಆವರಣದಲ್ಲಿರುವ ಎಲ್ಲಾ ದೇವಸ್ಥಾನಗಳಿಗೆ ಭೇಟಿ ನೀಡಿ ಎಲ್ಲಾ ದೇವತೆಗಳ ದರ್ಶನ ಪಡೆಯುತ್ತಾರೆ. ನಿಯಮಿತ ಬೆಳಿಗ್ಗೆ ಮತ್ತು ಮಧ್ಯಾಹ್ನದ ಪೂಜೆಯ ನಂತರ, ಶ್ರೀ ಜಗದ್ಗುರು ಮಹಾಸ್ವಾಮಿಗಳು ಮಧ್ಯಾಹ್ನ 12 ರಿಂದ 2.30 ರ ನಡುವೆ ಶ್ರೀ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಆಚಾರ್ಯರು ಸಂಜೆ 5.30 ರಿಂದ 6.30 ರವರೆಗೆ ಭಕ್ತರಿಗೆ ದರ್ಶನ ನೀಡಿ, ಸಂಜೆ 6.30 ಕ್ಕೆ ಶ್ರೀ ಶಾರದಾಂಬಾ ರಥೋತ್ಸವದಲ್ಲಿ ಪಾಲ್ಗೊಂಡ ನಂತರ ಪುನಃ ಶುಚಿರ್ಭೂತರಾಗಿ ಸಂಜೆ 7.30 ಕ್ಕೆ ಅಹನಿಕ ಮುಗಿಸಿದ ನಂತರ ರಾತ್ರಿ 8 - 9.30 ರವರೆಗೂ ಪ್ರತಿನಿತ್ಯವೂ ನಡೆಯುವ ಶ್ರೀ ಚಂದ್ರಮೌಳೀಶ್ವರ ಪೂಜೆಯಲ್ಲಿ ಪಾಲ್ಗೊಂಡ ನಂತರ ಆಚಾರ್ಯ ದರ್ಬಾರ್ ಅಧ್ಯಕ್ಷತೆ ವಹಿಸುವರು.

ಈ ದರ್ಬಾರ್ ವಿಶೇಷ ಕಾರ್ಯಕ್ರಮದಲ್ಲಿ ಶ್ರೀ ಮಠದ ಸಂಪ್ರದಾಯದಂತೆ ಕಿರೀಟ ಮತ್ತು ಆಭರಣಗಳನ್ನು ಧರಿಸಿದ ಶ್ರೀ ಜಗದ್ಗುರುಗಳು ಚಂದ್ರಮೌಳೀಶ್ವರ ಸಭಾಂಗಣದ ಮೂಲಕ ಮೆರವಣಿಗೆಯಲ್ಲಿ ಶಾರದ ದೇವಸ್ಥಾನದ ದರ್ಬಾರ್ ಪ್ರವೇಶಿಸಿ ರತ್ನ ಖಚಿತ ಸಿಂಹಾಸನದಲ್ಲಿ ಇರಿಸಲಾಗಿರುವ ಶಾರದಾಂಬೆಯ ಮೂರ್ತಿಯನ್ನು ಚಿನ್ನದ ರಥದಲ್ಲಿ ಕುಳ್ಳರಿಸಿ ಅದನ್ನು ದೇವಾಲಯದ ಪ್ರಾಂಗಣದ ಒಳಗೆ ಮೂರು ಬಾರಿ ವೇದಘೋಷ, ವಾದ್ಯ ಘೋಷ ಮತ್ತು ಚತ್ರ-ಚಾಮರಗಳೊಂದಿಗೆ ರಥೋತ್ಸವ ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಗುರುಗಳು, ತಾಯಿಯ ಕಡೆಗೆ ಮುಖ ಮಾಡುತ್ತಾ ಹಿಮ್ಮುಖವಾಗಿ ನಡೆಯುವುದು ವಿಶೇಷವಾಗಿದೆ. ರಥೋತ್ಸವದ ನಂತರ, ಆಚಾರ್ಯರು ಶಾರದಾಂಬೆಯ ಕಡೆಗೆ ಮುಖಮಾಡಿರುವ ಚಿನ್ನದ ಸಿಂಹಾಸನದ ಮೇಲೆ ಕುಳಿತ ನಂತರ ಸಪ್ತಶತಿಯ ಒಂದು ಅಥವಾ ಎರಡು ಅಧ್ಯಾಯಗಳ ಪಠಣ ಮಾಡಲಾಗುತ್ತದೆ.ದುರ್ಗಾ ಸಪ್ತಶತಿಯನ್ನು ಹತ್ತೂ ದಿನವೂ .ದಿನಕ್ಕೆ ಎರಡು ಅಧ್ಯಾಯಗಳ ಹಾಗೆ ಪಾರಾಯಣ ಮಾಡಲಾಗುತ್ತದೆ. ಈ ಪಾರಾಯಣದ ನಂತರ ಗುರುಗಳು ಆಶೀರ್ವಚನ ನೀಡುವ ಸಂಪ್ರದಾಯ ರೂಢಿಯಲ್ಲಿದೆ.

ನವರಾತ್ರಿಯ 7ನೆ ದಿನದ ಗುರುಗಳ ಧರ್ಭಾರ್ ಮುಗಿದು, ದುರ್ಗಾ ಸಪ್ತಶತಿ ಪಾರಾಯಣ, ಮಂಗಳಾರತಿ ನಂತರ, ಅಷ್ಟಾವದಾನ ಸೇವೆ ಮುಗಿದಾದ ಮೇಲೆ ಗುರುಗಳು ಅಲ್ಲಿಂದ ವಿರಮಿಸಿದ ನಂತರ ಗುರುಗಳು ಆಸೀನರಾಗಿದ್ದ ಸಿಂಹಾಸನಕ್ಕೆ ಪೂಜೆ ಮಾಡಲಾಗುತ್ತದೆ.‌ಈ ರೀತಿಯ ಸಿಂಹಾಸನದ ಪೂಜೆ 7 ನೇ ದಿನದಿಂದ 10ನೆ ದಿನದವರೆಗೆ ಮುಂದುವರೆಯುತ್ತದೆ.

ಇನ್ನು ಶರನ್ನವರಾತ್ರಿಯ ಸಂದರ್ಭದಲ್ಲಿ ಶೃಂಗೇರಿಯಲ್ಲಿ ಅನೇಕ ವೈವಿಧ್ಯಮಯ ಕಾರ್ಯಕ್ರಮಗಳನ್ನು ಬಹಳ ಅದ್ಧೂರಿಯಾಗಿ ಇಂದಿಗೂ ಆಚರಿಸಲಾಗುತ್ತದೆ. ತಾಯಿ ಶಾರದಾಂಬೆಯನ್ನು ಅಮೂಲ್ಯವಾದ ಮತ್ತು ಆಕರ್ಷಕವಾದ ಮುತ್ತು, ರತ್ರ್ನ ವಜ್ರ ವೈಢೂರ್ಯಗಳ ಖಚಿತವಾದ ಸುಂದರ ಆಭರಣಗಳಿಂದ ಅಲಂಕರಿಸಲಾಗುತ್ತದೆ.

ನವರಾತ್ರಿಯ ಸಂದರ್ಭದಲ್ಲೇ ಕ್ರೂರ ರಾಕ್ಷಸರಾದ ಮಧು-ಕೈಟಭ, ಶುಂಭ-ನಿಶುಂಭ, ಮಹಿಷಾಸುರ ಇತ್ಯಾದಿಗಳನ್ನು ಸಂಹರಿಸಿದ ನೆನಪಿಗಾಗಿಯೇ ಒಂಬತ್ತು ರಾತ್ರಿಗಳಲ್ಲಿ ಜಗನ್ಮಾತೆಗೆ ವಿವಿಧ ರೀತಿಯಲ್ಲಿ ಅಲಂಕರಿಸಿ ಪೂಜಿಸಲಾಗುತ್ತದೆ. ಈ ರೀತಿಯಾಗಿ ಜಗನ್ಮಾತೆಯ ವಿಶೇಷ ಪೂಜೆಯ ಮೂಲಕ ಮತ್ತು ಶರತ್ಕಾಲದಲ್ಲಿ (ಶರಧೃತು) ದೇವಿ ಮಹಾತ್ಮ್ಯವನ್ನು ಪಠಿಸುವುದರಿಂದ ದೇವಿ ಸಂತೃಷ್ಟಳಾಗಿ ತನ್ನ ಭಕ್ತರಿಗೆ ಎಲ್ಲಾ ರೀತಿಯ ಸಮೃದ್ಧಿಯನ್ನು ನೀಡುತ್ತಾಳೆ ಎನ್ನುವುದು ಎಲ್ಲರ ನಂಬಿಕೆಯಾಗಿದೆ.

ನವರಾತ್ರಿಯ ಹಿಂದಿನ ದಿನ ಮಹಾಲಯ ಅಮಾವಾಸ್ಯೆಯಂದು ಶಾರದಾಂಬೆಗೆ ಮಹಾಭಿಷೇಕ ಮಾಡಿ ನಾನಾ ರೀತಿಯ ಫಲ-ಪಂಚಾಮೃತ ಅಭಿಷೇಕದ ನಂತರ ಶತಾಯ ರುದ್ರಾಭಿಷೇಕ ಮತ್ತು ಮಹಾನ್ಯಾಸ ಮತ್ತು 108 ಅಭಿಷೇಕದೊಂದಿಗೆ ಶ್ರೀ ಸೂಕ್ತವನ್ನು ಪಠಿಸುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com