ಮಂಗಳೂರು ದಸರಾದ ವೈಭವ, ಹುಲಿ ವೇಷ ಕುಣಿತದ ಬಗ್ಗೆ ತಿಳಿಯೋಣ ಬನ್ನಿ..

ಆಶ್ವಯುಜ ಮಾಸದ ಶುಕ್ಲ ಪಕ್ಷದ ಪಾಡ್ಯದಿಂದ ಆರಂಭವಾಗಿ ದಶಮಿಯವರೆಗೂ ನಡೆಯುವ ವೈಭವದ ಹಬ್ಬ ದಸರಾ. 1610ರಲ್ಲಿ ವಿಜಯನಗರದ ತಿರುಮಲರಾಯರನ್ನು ಸೋಲಿಸಿದ ಮೈಸೂರಿನ ಶ್ರೀರಾಜ ಒಡೆಯರ್ ಅವರು ಸ್ವತಂತ್ರ್ಯ ಮೈಸೂರು ಸಂಸ್ಥಾನವನ್ನು ಕಟ್ಟಿದ್ದಲ್ಲದೇ, ವಿಜಯನಗರದಿಂದ ರತ್ನ ಖಚಿತ ಸಿಂಹಾಸವನ್ನೂ ಉಡುಗೊರೆಯ ರೂಪದಲ್ಲಿ ಪಡೆದರು.

Published: 20th September 2022 08:54 PM  |   Last Updated: 28th September 2022 02:43 PM   |  A+A-


Huli vesha

ಹುಲಿ ವೇಷ

Online Desk

ಬರಹ-ಶ್ರೀಕಂಠ ಬಾಳಗಂಚಿ

ಆಶ್ವಯುಜ ಮಾಸದ ಶುಕ್ಲ ಪಕ್ಷದ ಪಾಡ್ಯದಿಂದ ಆರಂಭವಾಗಿ ದಶಮಿಯವರೆಗೂ ನಡೆಯುವ ವೈಭವದ ಹಬ್ಬ ದಸರಾ. 1610ರಲ್ಲಿ ವಿಜಯನಗರದ ತಿರುಮಲರಾಯರನ್ನು ಸೋಲಿಸಿದ ಮೈಸೂರಿನ ಶ್ರೀರಾಜ ಒಡೆಯರ್ ಅವರು ಸ್ವತಂತ್ರ್ಯ ಮೈಸೂರು ಸಂಸ್ಥಾನವನ್ನು ಕಟ್ಟಿದ್ದಲ್ಲದೇ, ವಿಜಯನಗರದಿಂದ ರತ್ನ ಖಚಿತ ಸಿಂಹಾಸವನ್ನೂ ಉಡುಗೊರೆಯ ರೂಪದಲ್ಲಿ ಪಡೆದರು. ಅಂದು ವಿಜಯನಗರದ ಸಾಮ್ರಾಜ್ಯದಲ್ಲಿ ಕೇವಲ ದಶಮಿಯಂದು ಸೀಮೋಲ್ಲಂಘನ ಮಾಡಿ ಬನ್ನಿ ಮಂಟಪಕ್ಕೆ ಮಾತ್ರವೇ ಸೀಮಿತವಾಗಿದ್ದ ದಸರಾ ಹಬ್ಬವನ್ನು 1612ರಲ್ಲಿ ಹತ್ತು ದಿನಗಳ ಕಾಲದ ವೈಭವೋಪೇತ ಆಚರಣೆಗೆ ಜಾರಿಗೆ ತಂದರು. ತದನಂತರ ದಸರಾ ಹಬ್ಬ ಕೇವಲ ಮೈಸೂರಿಗಷ್ಟೇ ಸೀಮಿತವಾಗದೇ ರಾಜ್ಯದ ನಾನಾ ಕಡೆಗಳಲ್ಲಿಯೂ ಸಡಗರ ಸಂಭ್ರಮಗಳಿಂದ ವೈಭವೋಪೇತವಾಗಿ ಆಚರಿಸಲಾರಂಭಿಸಿದರು.

19ನೇ ಶತಮಾನದಲ್ಲಿ ಎಲ್ಲೆಲ್ಲೂ ತಾಂಡವಾಡುತ್ತಿದ್ದ ಜಾತೀಯತೆಯ ಅಸಮಾನತೆಯನ್ನು ತೊಡೆದು ಹಾಕಲು ಮತ್ತು ಎಲ್ಲರೊಂದಿಗೆ ಸಮಾನತೆಯನ್ನು ಹರಡಲು ಶ್ರೀ ನಾರಾಯಣ ಗುರುಗಳು ಬಹು ದೊಡ್ಡ ಆಂದೋಲವನ್ನು ಕರಾವಳಿಯ ಪ್ರಾಂತ್ಯದಲ್ಲಿ ಹುಟ್ಟು ಹಾಕಿದರು. ದಲಿತರಿಗೆ ಸವರ್ಣೀಯರು ದೇವಸ್ಥಾನಗಳಲ್ಲಿ ಪ್ರವೇಶವನ್ನು ನಿರಾಕರಿಸುತ್ತಿದ್ದರಿಂದ ಎಲ್ಲರಿಗೂ ದೇವಸ್ಥಾನಕ್ಕೆ ಹೋಗಿ ದೇವರನ್ನು ಪೂಜಿಸುವ ಹಕ್ಕನ್ನು ಕೊಡಿಸುವ ಸಲುವಾಗಿ 1912 ರಲ್ಲಿ ಮಂಗಳೂರಿನ ಕುದ್ರೋಳಿ ಪ್ರದೇಶದಲ್ಲಿ ಶ್ರೀ ಗೋಕರ್ಣಾಥೇಶ್ವರ ದೇವಾಲಯವನ್ನು ಸ್ಶಾಪಿಸಿದರು.

ಇದನ್ನೂ ಓದಿ: ಶೃಂಗೇರಿ ಶಾರದಾಂಬೆ ಸನ್ನಿಧಿಯಲ್ಲಿ ದಸರಾ ಆಚರಣೆ ಹೇಗೆ ಬಂತು, ಸಂಪ್ರದಾಯ ಹೇಗೆ?

ಬ್ರಹ್ಮಶ್ರೀ ನಾರಾಯಣ ಗುರುಗಳಿಂದ ಕಟ್ಟಿಸಲ್ಪಟ್ಟಿದ್ದ ದೇವಸ್ಥಾನ ಶಿಥಿಲಾವಸ್ಥೆ ತಲುಪಿದ್ದಾಗ 90ರ ದಶಕದಲ್ಲಿ ಕೇಂದ್ರ ಸರ್ಕಾರದಲ್ಲಿ ಮಂತ್ರಿಗಳಾಗಿದ್ದ ಶ್ರೀ ಜನಾರ್ಧನ ಪೂಜಾರಿಯವರು ಆಸ್ಥೆವಹಿಸಿ ಅತ್ಯಂತ ವೈಭವೋಪೇತವಾಗಿ ಶ್ರೀ ಗೋಕರ್ಣಾಥೇಶ್ವರ ದೇವಸ್ಥಾನವನ್ನು ಜೀರ್ಣೋಧ್ಧಾರ ಮಾಡಿಸಿ, 1990ರ, ಫೆಬ್ರವರಿ 8 ರಂದು ಅಂದಿನ ಪ್ರಧಾನಿಗಳಾಗಿದ್ದ ಶ್ರೀ ರಾಜೀವಗಾಂಧಿ ಅವರ ಅಮೃತ ಹಸ್ತದಿಂದ ಉದ್ಘಾಟಿಸಿದರು. ವಿಶಾಲವಾದ ಜಾಗ, ಪ್ರಶಾಂತವಾದ ವಾತಾವರಣ, ದೊಡ್ಡದಾದ ರಾಜಗೋಪುರ ಹೊಂದಿರುವ ಈ ದೇವಸ್ಥಾನದಲ್ಲಿ ಪುಣ್ಯಕೋಟಿ ವನ, ಗಂಗಾವತರಣ, ಕಾರಂಜಿ, ಹನುಮಾನ್‌ ಮಂದಿರಗಳಿಂದ ಕೂಡಿದ್ದು ಇಂದು ಈ ದೇವಾಲಯ ಎಲ್ಲಾ ವಯೋಮಾನದ ಜನರನ್ನು ಸೆಳೆಯುವ ಭಕ್ತಿಧಾಮವಾಗಿ ಕೇವಲ ಸ್ಥಳೀಯರಲ್ಲದೇ ದೇಶ ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

2012 ರಲ್ಲಿ ಗೋಕರ್ಣಾಥೇಶ್ವರ ದೇವಸ್ಥಾನದ ನೂರನೇ ವರ್ಷದ ವಾರ್ಷಿಕೋತ್ಸವದ ಆಚರಣೆಯ ಸಂದರ್ಭದಲ್ಲಿ ಬಿ. ಆರ್. ಕರ್ಕೆರಾ ಅವರು ದೇವಾಲಯದಲ್ಲಿ ನವರಾತ್ರಿಯ ಆಚರಣೆಯನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಿ, ಶಾರದಾ ಮಹೋತ್ಸವವನ್ನು ಪ್ರಾರಂಭಿಸಿದರು. ಅಂದು ಶಾರದಾ ಮಹೋತ್ಸವವಾಗಿ ಆರಂಭವಾದ ಸಂಭ್ರಮದ ಆಚರಣೆ ಇಂದು ಮಂಗಳೂರು ದಸರ ಎಂದೇ ಪ್ರಸಿದ್ಧಿಯಾಗಿದೆ.

ಇದನ್ನೂ ಓದಿ: ಹುಲಿವೇಷ... ಕರಾವಳಿ ದಸರಾ ವಿಶೇಷ

ಹಳೇ ಮೈಸೂರಿನ ಪ್ರಾಂತ್ಯಗಳಲ್ಲಿ ದಸರಾ ಪಟ್ಟದ ಗೊಂಬೆಗಳು ಪ್ರಸಿದ್ಧವಾಗಿರುವಂತೆ, ಮಂಗಳೂರಿನ ದಸರ ಹಬ್ಬದಲ್ಲಿ ಶಾರದಾ ದೇವಿಯ ವಿಗ್ರಹ ಪ್ರಮುಖವಾದರೆ ಅವುಗಳ ಜೊತೆ ಮಹಾ ಗಣಪತಿ ಮತ್ತು ನವದುರ್ಗೆಯರಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ,ಕೂಷ್ಮಾಂಡ, ಸ್ಕಂದಮಾತಾ, , ಕಾತ್ಯಾಯಿನಿ, ಕಾಲ್ರಾತ್ರಿ, ಮಹಾಗೌರಿ, ಸಿದ್ಧಿದಾತ್ರಿ ವಿಗ್ರಹಗಳು ಪ್ರಮುಖವಾಗಿದೆ. ಈ ವಿಗ್ರಹಗಳನ್ನು ನವರಾತ್ರಿಯ ಸಂದರ್ಭದಲ್ಲಿ ದೇವಾಲಯದ ಸ್ವರ್ಣ ಕಲಾಮಂಟಪದಲ್ಲಿ ಸ್ಥಾಪಿಸಿ. ಈ 9 ದಿನಗಳೂ ನಾನಾ ರೀತಿಯಾಗಿ ಶಾರಾದಾದೇವಿಯನ್ನು ಅಲಂಕರಿಸಿ ವಿದ್ಯುಕ್ತವಾಗಿ, ಶಾಸ್ತ್ರೋಕ್ತವಾಗಿ ಪೂಜಿಸುತ್ತಾರೆ.

ಮಂಗಳೂರು ದಸರಾದ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ಕುದ್ರೋಳಿ ದೇವಸ್ಥಾನದ ಗಂಗಾವತರಣ. ಸುಮಾರು 13 ಅಡಿಗಳಷ್ಟು ಎತ್ತರದ ಶಿವನ ನಾಲ್ಕು ವರ್ಣರಂಜಿತ ವಿಗ್ರಹಗಳ ನೆತ್ತಿಯ ಕಿರೀಟದಿಂದ ಆಕಾಶದತ್ತ ಸರಿಸುಮಾರು 100 ಅಡಿಗಳಿಗಿಂತಲು ಹೆಚ್ಚಿನ ದೂರ ಚಿಮ್ಮುವ ನೀರು ಎಲ್ಲರ ಗಮನವನ್ನು ಸೆಳೆಯುತ್ತದೆ. ನಾಲ್ಕೂ ಕಡೆಯಿಂದ ನೀರು ಚಿಮ್ಮುತ್ತಿದ್ದಂತೆಯೇ ಅದು ಶಿವಲಿಂಗದ ರೂಪವನ್ನು ಪಡೆದುಕೊಳ್ಳುವ ಪರಿಯನ್ನು ಓದಿ ತಿಳಿಯುವುದಕ್ಕಿಂತ ಆ ಭವ್ಯ ದೃಶ್ಯವನ್ನು ಅನುಭವಿಸಿದರನೇ ಚೆಂದ.

ವಿಜಯದಶಮಿಯಂದು ಸಂಜೆ ಸುಮಾರು 4 ಗಂಟೆಯ ಸಮಯದ ಹೊತ್ತಿಗೆ ಗೋಕರ್ಣನಾಥೇಶ್ವರ ದೇವಸ್ಥಾನದಿಂದ ನಾನಾ ರೀತಿಯ ಪುಷ್ಪಾಲಂಕೃತವಾಗಿ ಚಾಮರ ಛತ್ರಿಗಳ ಸಮೇತವಾಗಿ ನವದುರ್ಗೆಯರು ಹಾಗೂ ಶಾರತಾ ಮಾತೆಯ ವಿಗ್ರಹಗಳ ವೈಭವಯುತ ಬೃಹತ್‌ ಮೆರವಣಿಗೆ ಆರಂಭವಾಗುತ್ತದೆ. ಮೆರವಣಿಗೆ ಸಾಗುವ ಸುಮಾರು 7 ಕಿ. ಮೀ. ಉದ್ದದ ರಸ್ತೆ ಇಡೀ ವಿದ್ಯುತ್‌ ದೀಪಗಳಿಂದ ಝಗ ಮಗ ಗೊಳಿಸಲಾಗಿರುತ್ತದೆ. ಮೆರವಣಿಗೆಯಲ್ಲಿ ಡೋಲು, ಚೆಂಡೆ, ವಿವಿಧ ಬಗೆಯ ಜಾನಪದ ನೃತ್ಯಗಳು, ನಾನಾ ರೀತಿಯ ಸ್ತಬ್ದಚಿತ್ರಗಳು, ಯಕ್ಷಗಾನ ಪಾತ್ರಗಳು, ಹುಲಿವೇಷ, ಡೊಳ್ಳು ಕುಣಿತದ ಜೊತೆಗೆ ವಿವಿಧ ಸಾಂಪ್ರದಾಯಿಕ ನೃತ್ಯಗಳು ಕುದ್ರೋಳಿ, ಮಣ್ಣಗುಡ್ಡ, ಲೇಡಿಹಿಲ್, ಲಾಲ್ ಭಾಗ್, ಕೆ ಎಸ್ ರಾವ್ ರಸ್ತೆ, ಹಂಪನಕಟ್ಟೆ, ಕಾರ್ ಸ್ಟ್ರೀಟ್ ಮತ್ತು ನಗರದ ಪ್ರಮುಖ ರಸ್ತೆಗಳ ಮೂಲಕ ಹಾದುಹೋಗಿ ಮಾರನೆಯ ದಿನ ಬೆಳಿಗ್ಗೆ ಗೋಕರ್ಣಾಥೇಶ್ವರ ದೇವಸ್ಥಾನಕ್ಕೇ ಹಿಂದಿರುಗಿ ದೇವಸ್ಥಾನದ ಪುಷ್ಕರಿಣಿಯಲ್ಲಿ ವಿಗ್ರಹಗಳ ವಿಸರ್ಜನೆಯ ಮೂಲಕ ಅಂತ್ಯಗೊಳ್ಳುತ್ತದೆ. ಇಡೀ ರಾತ್ರಿ ನಡೆಯುವ ಈ ಮೆರವಣಿಗೆಯಲ್ಲಿ, ವಿಗ್ರಹಗಳು ಸಾಗುವ ರಸ್ತೆಯಲ್ಲಿನ ಜನರುಗಳು ತಮ್ಮ ತಮ್ಮ ಮನೆಗಳನ್ನು ಮತ್ತು ಅಂಗಡಿಗಳನ್ನು ವಿಶೇಷವಾಗಿ ವಿದ್ಯುತ್ ದೀಪಗಳಿಂದ ಅಲಂಕರಿಸುವ ಮೂಲಕ ಮಂಗಳೂರು ದಸರಾ ಹಬ್ಬಕ್ಕೆ ಮತ್ತಷ್ಟು ಮೆರಗನ್ನು ಕೊಡುತ್ತಾರೆ.

ಇದನ್ನೂ ಓದಿ: ಮಡಿಕೇರಿ ದಸರಾ ರೂಢಿಗೆ ಬಂದದ್ದು ಹೇಗೆ, ಹೇಗಿರುತ್ತದೆ ಆಚರಣೆ?

ದಸರಾ ಮೆರವಣಿಗೆಯಲ್ಲಿ ಸಾಗುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಒಂದೆಡೆಯಾದರೇ, ಹುಲಿವೇಷವೇ ಅತ್ಯಂತ ಮಹತ್ವ ಪಾತ್ರವನ್ನು ವಹಿಸುತ್ತದೆ. ಹುಲಿ ಶಾರದ ದೇವಿಯ ಒಲವಿನ ಪ್ರಾಣಿಯಾದ್ದರಿಂದ, ಶಾರದ ದೇವಿಯನ್ನು ಸುಪ್ರೀತಗೊಳಿಸುವುದಕ್ಕಾಗಿ ಮತ್ತು ಗೌರವಿಸುವುದಕ್ಕಾಗಿ ಹುಲಿವೇಷದ ಕುಣಿತವನ್ನು ಏರ್ಪಡಿಸಲಾಗುತ್ತದೆ.

ಹುಲಿವೇಷ ಎಂಬುದು ಜನಪದದ ಒಂದು ಪ್ರಕಾರದ ಕುಣಿತವಾಗಿದ್ದು ಯುವಕರು ಮತ್ತು ಸಣ್ಣ ಮಕ್ಕಳು ಹುಲಿಯ ರೀತಿಯ ವೇಷಧಾರಿಗಳಾಗಿ ಚಂಡೆ ಮತ್ತು ಡೋಲಿನ ತಾಳಕ್ಕೆ ಲಯಕ್ಕೆ ತಕ್ಕಂತೆ ವಿಶೇಷ ಗತ್ತಿನಲ್ಲಿ ಕುಣಿಯತ್ತಾರೆ. ಮಂಗಳೂರಿನ ಸುತ್ತಮುತ್ತ ಹುಲಿವೇಷದ ಸುಮಾರು 40ಕ್ಕೂ ಅಧಿಕ ತಂಡಗಳಿದ್ದು, ಒಂದೊಂದು ತಂಡದಲ್ಲಿ ಸುಮಾರು 25ಕ್ಕೂ ಹೆಚ್ಚಿನ ವೇಷಧಾರಿಗಳು ಇರುತ್ತಾರೆ. ಮಾರ್ಗವಿಡೀ ವೇಷಧಾರಿ ತಾಯಿ ಹುಲಿ ತನ್ನ ಮಕ್ಕಳಿಗೆ ಹಾಲುಣಿಸುವುದು, ಅವುಗಳೊಂದಿಗೆ ಆಟವಾಡುವುದು, ಅವುಗಳಿಗೆ ಬೇಟೆ ಕಲಿಸುವುದು, ಇತರೇ ಹುಲಿಗಳೊಂದಿಗೆ ಕಾದಾಟವಾಡುವಂತಹ ಪ್ರಕ್ರಿಯೆಗಳನ್ನು ಕುಣಿತದ ರೂಪದಲ್ಲಿ ಪ್ರದರ್ಶಿಸುತ್ತಾರೆ. ಅವುಗಳ ಮದ್ಯೆ ಮದ್ಯೆ ನಾನಾ ರೀತಿಯಾಗಿ ಪಲ್ಟಿ ಹೊಡೆಯುವುದು, ನೆಲದಲ್ಲಿ ಬಿದ್ದಿದ್ದ ನಾಣ್ಯಗಳನ್ನು ಹಿಮ್ಮುಖವಾಗಿ ತೆಗೆಯುವುದು, ತಮ್ಮ ಬಾಯಿಂದ ಜೀವಂತ ಕುರಿ ಕಚ್ಚಿ ಎಸೆಯುವುದು, ಅಕ್ಕಿ ಮೂಟೆಗಳನ್ನು ಎತ್ತಿ ಬಿಸಾಡುವಂತಹ ವಿವಿಧ ರೀತಿಯ ಕಸರತ್ತುಗಳನ್ನೂ ಪ್ರದರ್ಶಿಸುತ್ತಾರೆ.

ಪ್ರೇಕ್ಷರಿಗೆ ಹುಲಿವೇಷ ನೋಡಲು ಬಹಳ ಸುಲಭ ಸಾಧಾರಣ ಎನಿಸುವುದಾದರೂ ಅದೊಂದು ಕಷ್ಟದ ಸಾಧನೆಯೇ ಸರಿ. ನವರಾತ್ರಿಗೆ ಹುಲಿ ವೇಷ ಧರಿಸಲು ನಿರ್ಧರಿಸುವ ಯುವಕರು ವಿನಾಯಕನ ಚೌತಿ ಅಥವಾ ನವರಾತ್ರಿಯ ಮೊದಲ ದಿನ ತೆಂಗಿನ ಕಾಯಿ, ಅಕ್ಕಿ, ಬಾಳೆಹಣ್ಣು ಇಟ್ಟು, ಗಣಪತಿಯನ್ನು ನೆನೆದು ಸಂಕಲ್ಪ ಮಾಡಿ ಬಹಳ ನೇಮ ನಿಷ್ಠೆಗಳಿಂದ ವ್ರತಾಚರಣೆಯ ರೂಪದಲ್ಲಿ ಅಭ್ಯಾಸ ಆರಂಭಿಸುತ್ತಾರೆ. ಈ ಸಮಯದಲ್ಲಿ ಸಂಪೂರ್ಣ ಸಸ್ಯಾಹಾರಿಗಳಾಗಿದ್ದು ಮದ್ಯ ಮತ್ತು ಮಾಂಸಾಹಾರಗಳಿಂದ ದೂರವಿರುತ್ತಾರೆ ಕರಾವಳಿ ಭಾಗದಲ್ಲಿ ಈ ಸಂಪ್ರದಾಯಕ್ಕೆ ಊದು ಹಾಕುವುದು ಎನ್ನುತ್ತಾರೆ.

ಇದನ್ನೂ ಓದಿ: ಮಾರುವೇಷದಲ್ಲಿ ಕಥೆ ಹೇಳುವ 'ಹಗಲು ವೇಷ'ಧಾರಿಗಳು: ಉತ್ತರ ಕರ್ನಾಟಕಕ್ಕೆ ದಸರಾಕ್ಕೆ ಕಲಾವಿದರ ಆಗಮನ

ಶಾರದಾ ಮೆರವಣಿಗೆ ಮುಗಿದ ಬಳಿಕ ಭಾಗವಹಿಸಿದ ತಂಡಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ತಂಡಕ್ಕೆ ಮರ್ಯಾದೆ ಹೆಸರಿನ ಗೌರವ ನೀಡಲಾಗುತ್ತದೆ. ಈ ರೀತಿಯ ಬಿರುದನ್ನು ಪಡೆಯುವುದು ಭಾಗವಹಿಸಿದ ತಂಡಗಳಿಗೆ ಪ್ರತಿಷ್ಠೆಯ ಫಣವಾಗಿರುವ ಕಾರಣ ಎಲ್ಲಾ ತಂಡಗಳೂ ಹೆಚ್ಚಿನ ತಾಲೀಮು ಮಾಡಿ ತಮ್ಮ ತಂಡದ ಪ್ರದರ್ಶನ ಅತ್ಯಂತ ಆಕರ್ಷಣಿಯವಾಗಿರುವಂತೆ ಆರೋಗ್ಯಕರ ಪೈಪೋಟಿ ಏರ್ಪಟ್ಟಿರುತ್ತದೆ. ಇಂತಹ ಪೈಪೋಟಿಯನ್ನೇ ನೋಡಲು ದೇಶ ವಿದೇಶಗಳಲ್ಲಿ ಹಂಚಿ ಹೋಗಿರುವ ಕರಾವಳಿಗರು ವಿಶೇಷವಾಗಿ ರಜೆ ಹಾಕಿ ಈ ಹಬ್ಬದ ಸಂಭ್ರಮದಲ್ಲಿ ಭಾಗವಹಿಸಿ ತಮ್ಮ ತಮ್ಮ ತಂಡಗಳನ್ನು ವಿವಿಧ ರೀತಿಯಲ್ಲಿ ಪ್ರೋತಾಹಿಸುವ ಕೆಲವನ್ನು ಮಾಡುತ್ತಿರುತ್ತಾರೆ. ಕಾಲ ಬದಲಾದಂತೆ ನಿಧಾನವಾಗಿ ಡೋಲು ಮತ್ತು ಚೆಂಡೆಯ ಜಾಗದಲ್ಲಿ ಆಧುನಿಕ ರೀತಿಯ ಬಾರೀ ಸದ್ದು ಮಾದುವ ನಾನಾ ರೀತಿಯ ಡ್ರಮ್ ಗಳು ಮತ್ತು ಬ್ಯಾಂಡ್ ಗಳ ಮುಖಾಂತರ ಆಯಾಯಾ ಕಾಲಘಟ್ಟದ ಜನಪಪ್ರಿಯ ಚಿತ್ರಗೀತೆಗಳಿಗೆ ಹೆಜ್ಜೆಹಾಕುವ ಸಂಪ್ರದಾಯ ಆರಂಭವಾಗಿದೆ.

ನವರಾತ್ರಿಯ ಅಷ್ಟೂ ದಿನ ಮಾರ್ನೆಮಿ ವೇಷಗಳದ್ದೇ ಸಂಭ್ರಮ. ತುಳುವಿನಲ್ಲಿ ಮಾರ್ನೆಮಿ ಅಂದರೆ ಮಹಾನವಮಿ ಎಂದರ್ಥ. ನವರಾತ್ರಿಯ ಅಷ್ಟೂ ದಿನಗಳಲ್ಲಿ ಎಲ್ಲಿಯಾದರೂ ಚೆಂಡೆ, ಡೊಳ್ಳು ಇಲ್ಲವೇ ಬ್ಯಾಂಡಿನ ಶಬ್ಧ ಕೇಳಿ ಬಂದಿತೆಂದರೆ ಓ, ಮಾರ್ನೆಮಿ ವೇಷ ಬಂತು ಎಂದೇ ಜನರೆಲ್ಲ ತಲೆಯೆತ್ತಿ ನೋಡತೊಡಗುತ್ತಾರೆ. ಹುಲಿ ವೇಷಧಾರಿಗಳು ಈ ರೀತಿಯಾಗಿ ಪ್ರತೀ ಮನೆ ಮನೆಗಳಿಗೂ ಹೋಗಿ ದಸರಾ ಹಬ್ಬದ ಸಡಗರವನ್ನು ಎಲ್ಲರ ಮನಗಳಿಗೂ ತುಂಬಿಸಿ ದಸರಾ ಹಬ್ಬವನ್ನು ಮತ್ತಷ್ಟು ಆಕರ್ಷಣೀಯವನ್ನಾಗಿ ಮಾಡುತ್ತಾರೆ ಎಂದರೆ ಅತಿಶಯೋಕ್ತಿಯೇನಲ್ಲ.


Stay up to date on all the latest ಭಕ್ತಿ-ಭವಿಷ್ಯ news
Poll
mallikarjuna kharge

ರಾಜಸ್ತಾನದಲ್ಲಿ ಪೈಲಟ್-ಗೆಹ್ಲೋಟ್ ನಡುವೆ ಬಿಕ್ಕಟ್ಟು; ಕೇರಳದಲ್ಲಿ ಸ್ವಪಕ್ಷದವರ ವಿರುದ್ಧ ತರೂರ್ ಫೈಟು: ಕಾಂಗ್ರೆಸ ಒಳಜಗಳ ಬಿಡಿಸಲು ಮಲ್ಲಿಕಾರ್ಜುನ ಖರ್ಗೆ ಗೆ ಸಾಧ್ಯವಾಗುವುದೇ?


Result
ಹೌದು
ಆಗದು

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp