ವರ್ಷದ ಕಟ್ಟಕಡೆಯ ಹಬ್ಬ ಹೋಳಿ: ಕಾಮನ ಹುಣ್ಣಿಮೆಯ ಪೌರಾಣಿಕ ಹಿನ್ನೆಲೆ

ಶಿಶಿರ ಋತುವಿನ ಫಾಲ್ಗುಣ ಮಾಸದ ಪೌರ್ಣಿಮೆ ದಿನವನ್ನು ಕಾಮನ ಹುಣ್ಣಿಮೆ, ವಸಂತ ಹುಣ್ಣಿಮೆ ಹೋಳಿ/ಹೋಲಿ ಹಬ್ಬ ಎಂದು ಅಚರಿಸುತ್ತಾರೆ. ನಮ್ಶ ಹಿಂದೂ ದಿನಚರಿಯಂತೆ ವರ್ಷದ ಕಟ್ಟ ಕಡೆಯ ಹಬ್ಬವೂ ಹೌದು. ಇದಾದ ಹದಿನೈದೇ ದಿನಕ್ಕೆ ಯುಗಾದಿ ಹಬ್ಬ ಬಂದು ಬಿಡುತ್ತದೆ.
ಹೋಳಿ ಬಣ್ಣ
ಹೋಳಿ ಬಣ್ಣ

ಶಿಶಿರ ಋತುವಿನ ಫಾಲ್ಗುಣ ಮಾಸದ ಪೌರ್ಣಿಮೆ ದಿನವನ್ನು ಕಾಮನ ಹುಣ್ಣಿಮೆ, ವಸಂತ ಹುಣ್ಣಿಮೆ ಹೋಳಿ/ಹೋಲಿ ಹಬ್ಬ ಎಂದು ಅಚರಿಸುತ್ತಾರೆ. ನಮ್ಶ ಹಿಂದೂ ದಿನಚರಿಯಂತೆ ವರ್ಷದ ಕಟ್ಟ ಕಡೆಯ ಹಬ್ಬವೂ ಹೌದು. ಇದಾದ ಹದಿನೈದೇ ದಿನಕ್ಕೆ ಯುಗಾದಿ ಹಬ್ಬ ಬಂದು ಬಿಡುತ್ತದೆ.

ಪುರಾಣ ಕಥೆ: ತಾರಕಾಸುರನೆಂಬ ರಾಕ್ಷಸ ರಾಜ ಶಿವನಿಗೆ ಜನಿಸಿದ ಏಳು ದಿನದ ಮಗುವಿನಿಂದ ಮಾತ್ರವೇ ತನಗೆ ಸಾವು ಬರಲಿ ಎಂದು ಬ್ರಹ್ಮನಿಂದ ಪಡೆದ ವರದ ಬಲದ ಸೊಕ್ಕಿನಿಂದ ಲೋಕದಲ್ಲಿ ಮೆರೆಯತೊಡಗುತ್ತಾನೆ. ಆತನ ಉಪಟಳ ತಾಳಲಾರದೆ, ಅವನ ಸಂಹಾರಕ್ಕೆ ದೇವತೆಗಳು ಚಿಂತಾಕ್ರಾಂತರಾಗುತ್ತಾರೆ. ದಕ್ಷ ಯಜ್ಞದಲ್ಲಿ ತನ್ನ ಮಡದಿ ದಾಕ್ಷಾಯಿಣಿಯನ್ನು ಕಳೆದುಕೊಂಡು ಪರಶಿವನೂ ಭೋಗ ಸಮಾಧಿಯಲ್ಲಿರುತ್ತಾನೆ. ಅದೇ ರೀತೀ ಪಾರ್ವತಿಯೂ ಶಿವನಿಗಾಗಿ ತಪಸ್ಸು ಮಾಡುತ್ತಿದ್ದ ಕಾರಣ, ಶಿವ ಪಾರ್ವರ್ತಿಯರಿಬ್ಬರೂ ಒಂದುಗೂಡದೇ ಮಕ್ಕಳಾಗುವಂತಿರಲಿಲ್ಲ. ಹೇಗಾದರೂ ಮಾಡಿ ಶಿವನ ತಪಸ್ಸನ್ನು ಭಂಗ ಮಾಡಬೇಕೆಂದು ನಿರ್ಧರಿಸಿದ ದೇವತೆಗಳು ಮನ್ಮಥನ (ಕಾಮ ದೇವರು ) ಮೊರೆ ಹೋದರು.

ಲೋಕಕಲ್ಯಾಣಕ್ಕಾಗಿ ಮಾಡುತ್ತಿರುವ ಈ ಕಾರ್ಯದಲ್ಲಿ ತನ್ನ ಸಾವು ನಿಶ್ಚಿತ ಎಂಬುದರ ಅರಿವಿದ್ದರೂ ಸಹಾ ಪರೋಪಕಾರಾರ್ಥವಾಗಿ ಕಾಮನು ತನ್ನ ಹೂಬಾಣಗಳಿಂದ ಶಿವನ ತಪಸ್ಸನ್ನು ಭಂಗ ಮಾಡುತ್ತಾನೆ. ತನ್ನ ತಪೋಭಂಗಕ್ಕೆ ಕಾರಣನಾದ ಕಾಮನನ್ನು ಶಿವ ತನ್ನ ಹಣೆಯ ಮಧ್ಯದಲ್ಲಿದ್ದ ಮೂರನೇ ಕಣ್ಣುಗಳಿಂದ ಸುಟ್ಟು ಭಸ್ಮ ಮಾಡುತ್ತಾನೆ. ಆಗ ಕಾಮನರಸಿ ರತಿದೇವಿಯು ತನ್ನ ಪತಿಯು ಉದ್ದೇಶಪೂರ್ವಕವಾಗಿ ಈ ಕಾರ್ಯ ಮಾಡಿಲ್ಲವೆಂದೂ ದೇವಾನು ದೇವತೆಗಳ ಇಚ್ಚೆಯಂತೆ ಈ ರೀತಿಯ ಕಾರ್ಯದಲ್ಲಿ ಭಾಗಿಯಾಗ ಬೇಕಾದ ಸಂಗತಿಯನ್ನು ಶಿವನಲ್ಲಿ ಆರ್ಜಿಸಿ ತನಗೆ ಪತಿಭಿಕ್ಷೆ ಯಾಚಿಸಲು, ಕಾಮನು ಅನಂಗನಾಗಿಯೇ ಇರುತ್ತಾನೆ. ಆದರೆ ಪತ್ನಿಗೆ ಮಾತ್ರ ಶರೀರಿಯಾಗಿ ಕಾಣಿಸುತ್ತಾನೆ ಎಂದು ಶಿವನು ಅಭಯ ನೀಡಿದನೆಂದು ನಮ್ಮ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.

ಲೋಕಕಲ್ಯಾಣಕ್ಕಾಗಿ ಮನ್ಮಥನು ಅನಂಗನಾದ, (ಕಾಮದೇವ) ಈ ಘಟನೆ ನಡೆದದ್ದು ಫಾಲ್ಗುಣ ಶುದ್ಧ ಪೂರ್ಣಿಮೆಯಂದು. ಆದ್ದರಿಂದ ಈ ದಿನವನ್ನು ಕಾಮನ ಹುಣ್ಣಿಮೆಯಾಗಿ ಆಚರಿಸಲ್ಪಡುತ್ತದೆ. ನಾರದ ಪುರಾಣದಲ್ಲಿ ಬರುವ ಮತ್ತೊಂದು ಕಥೆಯ ಪ್ರಕಾರ, ರಾಕ್ಷಸರ ರಾಜ ಹಿರಣ್ಯಕಷಿಪು ತಾನೇ ದೇವರು ತನ್ನನ್ನೇ ಎಲ್ಲರೂ ಪೂಜಿಸಬೇಕೆಂದು ತಾಕೀತು ಮಾಡಿದ್ದನ್ನು ಆತನ ಸ್ವಂತ ಮಗನಾದ ಪ್ರಹ್ಲಾದನೇ ಒಪ್ಪದೇ, ಹರಿಯೇ ಜಗದೊದ್ಧಾರಕ ಎನ್ನುವುದನ್ನು ಹೇಳುವುದನ್ನು ಕೇಳಲಾಗದೇ, ತನ್ನದೇ ಕರುಳ ಕುಡಿ ಪ್ರಹ್ಲಾದನನ್ನು ಕೊಲ್ಲಲು, ನಾನಾ ರೀತಿಯಾದ ಪ್ರಯತ್ನ ಪಟ್ಟು ವಿಫಲನಾಗಿ, ಕೊನೆಗೆ, ಬೆಂಕಿಯಿಂದ ರಕ್ಷಣೆ ನೀಡುವ ವಸ್ತ್ರ ಹೊಂದಿದ್ದ ತನ್ನ ತಂಗಿ ಹೋಳಿಕಾ (ಹೋಲಿಕಾ)ಳ ಮೊರೆ ಹೋಗುತ್ತಾನೆ. ಅಣ್ಣನ ಅನುಜ್ಞೆಯಂತೆ ತನ್ನ ಸೋದರ ಅಳಿಯನ ಬಾಲ ಪ್ರಹ್ಲಾದನನ್ನು ಎತ್ತಿಕೊಂಡ ಹೋಳಿಕಾ, ಅಗ್ನಿಕುಂಡ ಪ್ರವೇಶಿಸುತ್ತಾಳೆ. ಹಾಗೆ ಪ್ರವೇಶಿಸುವ ಭರದಲ್ಲಿ ಆಕೆಯ ಬೆಂಕಿಯಿಂದ ರಕ್ಷಣೆ ನೀಡುವ ವಸ್ತ್ರವು ಗಾಳಿಯಲ್ಲಿ ಹಾರಿಹೋಗಿ, ಹೋಳಿಕಾಳ ದಹನವಾಗುತ್ತಾಳೆ ಮತ್ತು ಪರಮ ವಿಷ್ಣು ಭಕ್ತ ಪ್ರಹ್ಲಾದ ಒಂದು ಚೂರು ಬೆಂಕಿ ತಾಗದೆ ಪಾರಾಗುತ್ತಾನೆ.

ಹಾಗಾಗಿ ಹೋಳಿಕಾ ದಹನವಾದ ದಿನವನ್ನು ಹೋಳಿ ಹಬ್ಬ ಎಂದು ಅಚರಿಸುವ ಸಂಪ್ರದಾಯ ಅಂದಿನಿಂದ ರೂಢಿಗೆ ಬಂದಿತು ಎಂಬ ಪ್ರತೀತಿ ಇದೆ. ಈ ಎರಡೂ ಪುರಾಣ ಕಥನಗಳ ಹಿಂದೆ ಇರುವ ಸಂದೇಶವು ಒಂದೇ. ಕೆಟ್ಟದ್ದನ್ನು ಸುಟ್ಟು ಬಿಡುವುದು; ಕಾಮಕ್ರೋಧಾದಿ ಅರಿಷಡ್ವರ್ಗಗಳನ್ನು ಅಗ್ನಿಕುಂಡದಲ್ಲಿ ಸುಟ್ಟು, ಸದಾಚಾರವನ್ನು ರೂಢಿಸಿಕೊಳ್ಳುವುದು. ಆಸುರೀ ಶಕ್ತಿಗಳ ನಿರ್ನಾಮದ ದ್ಯೋತಕವಾಗಿ ಹೋಳಿ ಹಬ್ಬದ ಆಚರಣೆ ರೂಢಿಯಲ್ಲಿದೆ. ಕೆಟ್ಟ ಕೆಲಸ ಮಾಡುವ ಪ್ರತಿಯೊಬ್ಬರೂ ಅಂತಿಮವಾಗಿ ಸುಟ್ಟು ಭಸ್ಮವಾಗುತ್ತಾರೆ ಎನ್ನುವ ಸುಂದರ ಸಂದೇಶ ಸಾರುವ ಹೋಳಿ ಹಬ್ಬ ಅಥವಾ ಕಾಮನ ಹಬ್ಬದ ಆಚರಣೆಯ ಹಿಂದಿನ ಸದುದ್ದೇಶವಾಗಿದೆ.

ಬರಹ-ಶ್ರೀಕಂಠ ಬಾಳಗಂಚಿ

ಏನಂತೀರಿ.ಕಾಂ 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com