ಬೆಳಕಿನ ಹಬ್ಬ ದೀಪಾವಳಿ: ಐದು ದಿನಗಳ ಆಚರಣೆ ಏನು?ಹೇಗೆ?

ಭಾರತೀಯರಿಗೆ ಹಬ್ಬಗಳೆಂದರೆ ನಮ್ಮ ಸನಾತನ ಸಂಸ್ಕೃತಿಯ ಸಂಸ್ಕಾರ ಮತ್ತು ಸಂಪ್ರದಾಯಗಳ ಪ್ರತೀಕವಾಗಿದೆ. ಹಾಗೆ ನೋಡಿದರೆ, ಹಿಂದೂಗಳಿಗೆ ವರ್ಷದ 365 ದಿನವೂ ಒಂದಲ್ಲಾ ಒಂದು ಹಬ್ಬವೇ. ನಮ್ಮಲ್ಲಿ ಆಚರಿಸುವ ಪ್ರತಿಯೊಂದು ಹಬ್ಬಕ್ಕೂ ಅದರದೇ ಆದ ಪ್ರಾಕೃತಿಕ, ನೈಸರ್ಗಿಕ ಸಂಬಂಧಗಳಿದ್ದರೂ ಎಲ್ಲಾ ಹಬ್ಬಗಳೂ ಮನರಂಜನೆ ಜೊತೆಗೆ ಸಂಬಂಧಗಳನ್ನು ಬೆಸೆಸುವ ಕೊಂಡಿಗಳೇ ಆಗಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬರಹ-ಶ್ರೀಕಂಠ ಬಾಳಗಂಚಿ

ಏನಂತೀರಿ.ಕಾಂ

ಭಾರತೀಯರಿಗೆ ಹಬ್ಬಗಳೆಂದರೆ ನಮ್ಮ ಸನಾತನ ಸಂಸ್ಕೃತಿಯ ಸಂಸ್ಕಾರ ಮತ್ತು ಸಂಪ್ರದಾಯಗಳ ಪ್ರತೀಕವಾಗಿದೆ. ಹಾಗೆ ನೋಡಿದರೆ, ಹಿಂದೂಗಳಿಗೆ ವರ್ಷದ 365 ದಿನವೂ ಒಂದಲ್ಲಾ ಒಂದು ಹಬ್ಬವೇ. ನಮ್ಮಲ್ಲಿ ಆಚರಿಸುವ ಪ್ರತಿಯೊಂದು ಹಬ್ಬಕ್ಕೂ ಅದರದೇ ಆದ ಪ್ರಾಕೃತಿಕ, ನೈಸರ್ಗಿಕ ಸಂಬಂಧಗಳಿದ್ದರೂ ಎಲ್ಲಾ ಹಬ್ಬಗಳೂ ಮನರಂಜನೆ ಜೊತೆಗೆ ಸಂಬಂಧಗಳನ್ನು ಬೆಸೆಸುವ ಕೊಂಡಿಗಳೇ ಆಗಿವೆ. ಎಲ್ಲದಕ್ಕಿಂತಲೂ ಸಮಾಜದಲ್ಲಿ ಎಲ್ಲರ ಆರ್ಥಿಕ ಸುಭಧ್ರತೆಯನ್ನು ತರುವುದೇ ಈ ಹಬ್ಬಗಳ ಮುಖ್ಯ ಧ್ಯೇಯವಾಗಿದೆ ಎಂದರೂ ತಪ್ಪಾಗಲಾರದು.

ಈ ಹಬ್ಬಗಳ ಮುಖಾಂತರ ಎಲ್ಲರೂ ತಮ್ಮತಮ್ಮ ಮನೆಗಳನ್ನು ಶುಚಿರ್ಭೂತಗೊಳಿಸಿ, ತಳಿರು ತೋರಣಗಳಿಂದ ಮನೆಗಳನ್ನು ಸಿಂಗರಿಸಿ ಮನೆಯ ಮುಂದೆ ದೊಡ್ಡ ದೊಡ್ಡ ಬಣ್ಣ ಬಣ್ಣದ ರಂಗೋಲಿಗಳನ್ನು ಬಿಡಿಸಿ, ಮನೆಯ ಪ್ರತಿಯೊಬ್ಬ ಸದಸ್ಯರೂ ಅಭ್ಯಂಜನ ಮಾಡಿ ಹೊಸ ಹೊಸ ಬಟ್ಟೆಗಳನ್ನು ಧರಿಸಿ, ಯಥಾಶಕ್ತಿ ಭಕ್ತಿಯಿಂದ ದೇವರನ್ನು ಪೂಜಿಸಿ ಆಯಾಯ ಕಾಲಕ್ಕೆ ಮತ್ತು ಹಬ್ಬಗಳ ಅನುಗುಣವಾಗಿ ಸಿಹಿ ಪದಾರ್ಥಗಳನ್ನು ಮತ್ತು ಭೋಜನಗಳನ್ನು ಸಿದ್ಧಪಡಿಸಿ ದೇವರಿಗೆ ಸಮರ್ಪಿಸಿ, ಪ್ರಸಾದ ರೂಪದಲ್ಲಿ ಬಂಧುಗಳು ಮತ್ತು ನೆರೆ ಹೊರೆಯವರೊಂದಿಗೆ ಪರಸ್ಪರ ಹಂಚಿಕೊಂಡು ಯಥೇಚ್ಚವಾಗಿ ತಿಂದುಂಡು ಸಂಭ್ರಮಿಸುವುದೇ ಹಬ್ಬಗಳ ಆವರಣೆಯ ಹಿಂದಿರುವ ಮುಖ್ಯ ಧ್ಯೇಯೋದ್ದೇಶವಾಗಿದೆ.

ಇನ್ನು ದೀಪಾವಳಿ ಎಂದರೆ ಹೆಸರೇ ಹೇಳುವಂತೆ ಬೆಳಕಿನ ಹಬ್ಬ, ದೀಪಗಳ ಹಬ್ಬ. ಉಳಿದೆಲ್ಲಾ ಹಬ್ಬಗಳ ಆಚರಣೆಗಳು ಒಂದೆರಡು ದಿನಗಳ ಮಟ್ಟಿಗೆ ಅತ್ಯಂತ ಶ್ರದ್ಧಾ ಭಕ್ತಿಯಿಂದ ಮಡಿಹುಡಿಗೆ ಸೀಮಿತವಾಗಿದ್ದರೆ, ದೀಪಾವಳಿ ಹಬ್ಬ ಐದು ದಿನಗಳು ಸಂಭ್ರಮದ ಸಡಗರದ ಹಬ್ಬ. ಮಿಕ್ಕೆಲ್ಲಾ ಹಬ್ಬಗಳಲ್ಲಿ ಧಾರ್ಮಿಕ ಆಚರಣೆಗಳಿಗೆ ಹೆಚ್ಚಿನ ಒತ್ತು ಕೊಟ್ಟರೆ ಇಲ್ಲಿ ಮಡಿ ಹುಡಿ, ಆಚಾರ ವಿಚಾರಗಳಿಗಿಂತಲೂ ಸಂಭ್ರಮಕ್ಕೇ ಪ್ರಥಮ ಆದ್ಯತೆ.

ದೀಪಾವಳಿ ಹಬ್ಬದಂದು ಮನೆಯ ತುಂಬ ಮತ್ತು ಸುತ್ತ ಮುತ್ತಾ ಹಣತೆಗಳನ್ನು ಹಚ್ಚಿ ಅದರ ನಗುವಿನಲ್ಲಿ ಎಲ್ಲರೂ ನಗುತ್ತಾ ಸಂಭ್ರಮಿಸುವುದಾಗಿದೆ. ದೀಪಯತಿ ಸ್ವಂ ಪರಚ ಇತಿ ದೀಪ: ಅಂದರೆ ತಾನು ಬೆಳಗಿ ಇತರರನ್ನು ಬೆಳಗಿಸುವ ಶಕ್ತಿ ಕೇವಲ ದೀಪಕ್ಕೆ ಮಾತ್ರವಿದೆ. ತಮಸೋಮಾ ಜ್ಯೋತಿರ್ಗಮಯ ಎಂಬ ಅರ್ಥದಂತೆ ಅಜ್ಞಾನದ ಕತ್ತಲೆಯಿಂದ ಜ್ಞಾನದ ದಿಕ್ಕಿಗೆ ನಮ್ಮನ್ನು ಕೊಂಡೊಯ್ಯುವುದೇ ದೀಪವಾಗಿದೆ. ಹಾಗಾಗಿ ದೀಪಾವಳಿ ಹಬ್ಬದ ಸಮಯದಲ್ಲಿ ಮೋಜು ಮಸ್ತಿಗಳೇ ಹೆಚ್ಚಿನ ಪ್ರಾಧನ್ಯತೆ ಪಡೆಯುತ್ತದೆ.

ಆಶ್ವಯುಜದ ಮಾಸದ ಕಡೇ ಮೂರು ದಿನಗಳು ಮತ್ತು ಕಾರ್ತಿಕ ಮಾಸದ ಆರಂಭದ ಎರಡು ದಿನಗಳ ಅದ್ಧೂರಿಯ ಆಚರಣೆಯೇ ದೀಪಾವಳಿ

ಮೊದಲನೆಯ ದಿನ: ಆಶ್ವಯುಜ ಬಹುಳ ತ್ರಯೋದಶಿ, ನೀರು ತುಂಬುವ ಹಬ್ಬ

ದೀಪಾವಳಿ ಹಬ್ಬದ ಆರಂಭವಾಗುವುದೇ ಆಶ್ವಯುಜ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ದಿನದಂದು. ಹಳೆ ಮೈಸೂರು ಭಾಗದಲ್ಲಿ ಇದನ್ನು ನೀರು ತುಂಬುವ ಹಬ್ಬ ಎನ್ನುತ್ತಾರೆ. ಈ ದಿನದಂದು ಮನೆಯ ಹೆಂಗಳೆಯರು ತಮ್ಮ ಸ್ನಾನಗೃಹಗಳಲ್ಲಿ ಇರುವ ಹಂಡೆ, ಕೊಳಗಗಳನ್ನು ಚೆನ್ನಾಗಿ ಶುಭ್ರಗೊಳಿಸಿ ಅದಕ್ಕೆ ಸುದ್ದೇ ಮತ್ತು ಕೆಮ್ಮಣ್ಣುಗಳಿಂದ ಅಲಂಕರಿಸಿದರೆ, ಗಂಡು ಮಕ್ಕಳು ಸ್ನಾನಗೃಹದಲ್ಲಿ ಇರುವ ಎಲ್ಲಾ ಪಾತ್ರೆಗಳಿಗೂ ನೀರು ತುಂಬಿಸಿಡುತ್ತಾರೆ. ಇಂದೆಲ್ಲಾ ಬಚ್ಚಲು ಮನೆಗಳಲ್ಲಿ ನೀರಿನ ಹಂಡೆಗಳೇ ಕಾಣೆಯಾಗಿರುವಾಗ, ಸಾಂಕೇತಿಕವಾಗಿ ಮನೆಯಲ್ಲಿ ಇರಬಹುದಾದ ಬಾಯ್ಲರ್ ಅಥವಾ ಗೀಜರ್ ಗಳಿಗೆ ಅಲಂಕಾರ ಮಾಡುತ್ತಾರೆ. ಈ ಮೂಲಕ ನಮ್ಮ ಎಲ್ಲಾ ಬಳಕೆಯ ವಸ್ತುಗಳನ್ನೂ ವರ್ಷಕ್ಕೊಮ್ಮೆಯಾದರೂ ಚೆನ್ನಾಗಿ ನೋಡಿಕೊಳ್ಳುವ ಭಾವನೆ/ಕಲ್ಪನೆಯನ್ನು ನಮ್ಮ ಹಿರಿಯರು ರೂಢಿಯಲ್ಲಿ ತಂದಿದ್ದಾರೆ.

ಇನ್ನು ಉತ್ತರದ ಭಾರತಾದ್ಯಂತ ಈ ದಿನವನ್ನು ಧನ್ವಂತರಿ ತ್ರಯೋದಶಿ ಅಥವಾ ಧನ್ ತೆರಸ್ ಎಂದು ಕರೆಯಲಾಗುತ್ತದೆ. ಈ ದಿನ ಗುರು ಧನ್ವಂತರಿಯವರ ಹುಟ್ಟಿದ ದಿನವಾಗಿರುವುದರಿಂದ ವಿಶೇಷವಾಗಿ ಸಮೃದ್ಧಿ ಮತ್ತು ಬುದ್ಧಿಯ ಪ್ರತೀಕವಾದ ಲಕ್ಷ್ಮೀ ಮತ್ತು ಗಣೇಶನನ್ನು ಪೂಜಿಸಿ ಹೊಸ ಬಟ್ಟೆ, ಪಾತ್ರೆ, ಬಂಗಾರ, ಬೆಳ್ಳಿಯನ್ನು ಖರೀದಿಸಿದರೆ , ಜೀವನ ಸುಖಮಯವಾಗಿರುತ್ತದೆ ಎಂಬ ನಂಬಿಕೆಯಿದೆ. ಇದೇ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡು ಅಂತರ್ಜಾಲದಲ್ಲಿ Flipkart ಮತ್ತು Amazon ಕಂಪನಿಗಳು ಒಂದೆರಡು ವಾರಗಳ ಮುಂಚೆಯೇ ವೀಶೇಷ ಭಾರೀ ರಿಯಾಯಿತಿ ಮತ್ತು ಕೊಡುಗೆಗಳನ್ನು ನೀಡುವುದರ ಮೂಲಕ ತಮ್ಮ ವ್ಯಾಪಾರವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ.

ಎರಡನೇ ದಿನ: ನರಕ ಚತುರ್ದಶಿ

ದೀಪಾವಳಿಯ ಎರಡನೇ ದಿನವಾದ ನರಕ ಚತುರ್ದಶಿಯಂದು, ಶ್ರೀಕೃಷ್ಣ ಪರಮಾತ್ಮ ನರಕಾಸುರನನ್ನು ವಧಿಸಿ, ಜಗತ್ತನ್ನು ಕಾಪಾಡಿದ ದಿನವೆಂದು ಆಚರಿಸಲಾಗುತ್ತದೆ. ಹಿಂದಿನ ದಿನ ಸಿಂಗಾರಗೊಂಡ ಹಂಡೆಗಳಿಗೆ ಬೆಳಗಿನ ಜಾವವೇ ಉರಿ ಹಾಕಿ ನೀರನ್ನು ಕೊತ ಕೊತನೆ ಕುದಿಸಿ ಮನೆಯಲ್ಲಿ ಆಬಾಲ ವೃಧ್ಧರಾದಿಯಾಗಿ ಎಲ್ಲರಿಗೂ ಚೆನ್ನಾಗಿ ಮೈತುಂಬಾ ಹರಳೆಣ್ಣೆ ಹಚ್ಚಿ ಕೆಲಕಾಲ ತಣಿಯಲು ಬಿಟ್ಟು ಸರದಿಯಂತೆ ಹದವಾಗಿ ಬೆರೆಸಿದ ಸೀಗೆಕಾಯಿ ಮತ್ತು ಚಿಗರೇ ಪುಡಿಯಿಂದ ಅಭ್ಯಂಜನ ಮಾಡಿ ಬೆಳಗಿನ ಜಾವವೇ ಭಾರೀ ಶಬ್ಧಮಾಡುವ ಪಟಾಕಿಗಳನ್ನು ಮನೆಯ ಮುಂದೆ ಹೊಡೆಯುವುದರ ಮೂಲಕ ನೆರೆಹೊರೆಯವರೊಂದಿಗೆ ನರಕಾಸುರನನ್ನು ವಧಿಸಿ ಲೋಕವನ್ನು ಕಾಪಾಡಿದ ಶ್ರೀಕೃಷ್ಣನ ಸಾಹಸವನ್ನು ಕೊಂಡಾಡುತ್ತಾರೆ. ಇಂದಿನಿಂದ ಮನೆಯ ಮುಂದೆ ಮತ್ತು ಸುತ್ತ ಮುತ್ತ ಹಣತೆಗಳೊಂದಿಗೆ ದೀಪವನ್ನು ಬೆಳಗಿ ಬಂಧು ಮಿತ್ರರಿಗೆ ಉಡುಗೊರೆಗಳೊಂದಿಗೆ ಸಿಹಿಯನ್ನು ಹಂಚುತ್ತಾ ಸಂಭ್ರಮಿಸುತ್ತಾರೆ.

ಮೂರನೇ ದಿನ: ಅಮಾವಾಸ್ಯೆ

ಮೂರನೇಯ ದಿನವಾದ ಅಮಾವಾಸ್ಯೆಯಂದ ನಮ್ಮಲ್ಲಿ ಹೆಚ್ಚಿನ ಆಚರಣೆ ಇಲ್ಲ. ಪಿತೃ ಪಕ್ಷದಲ್ಲಿ ಪಿತೃತರ್ಪಣ ಕೊಡಲು ಸಾಧ್ಯವಾಗದಿದ್ದವರು ಈ ದಿನ ತಮ್ಮ ಪಿತೃಗಳಿಗೆ ತರ್ಪಣ ಕೊಟ್ಟು ತಮ್ಮ ಪಿತೃ ಋಣವನ್ನು ತೀರಿಸಿಕೊಳ್ಳುತ್ತಾರೆ. ಈ ದಿನ ಬಹುತೇಕರ ಮನೆಗಳಲ್ಲಿ ಕಜ್ಜಾಯವನ್ನು ಮಾಡಿ ದೇವರ ನೈವೇದ್ಯ ಮಾಡಿದರೆ, ಯಥಾ ಪ್ರಕಾರ ಮಕ್ಕಳು ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸುತ್ತಾರೆ.

ಈ ಅಮವಾಸ್ಯೆ ಉತ್ತರ ಭಾರತೀಯರು ಅದರಲ್ಲೂ ವ್ಯಾಪಾರಿಗಳಿಗೆ ಬಹಳ ವೀಶೇಷ. ಅಂದಿನ ರಾತ್ರಿ ಮನೆಯಲ್ಲಿನ ದರಿದ್ರ ಲಕ್ಷ್ಮಿಯನ್ನು ಹೊರಹಾಕುವ ಉದ್ದೇಶದಿಂದ ಲಕ್ಷ್ಮೀ ಪೂಜೆಯನ್ನು ಮಾಡಿ, ತಮ್ಮ ಮನೆಯಲ್ಲಿ ಹಾಗೂ ತಮ್ಮ ಅಂಗಡಿಗಳಲ್ಲಿ ಲಕ್ಷ್ಮಿಯ ವಿಗ್ರಹವನ್ನಿಟ್ಟು ಅದಕ್ಕೆ ತಮ್ಮಲ್ಲಿದ್ದ ಎಲ್ಲಾ ರೀತಿಯ ಆಭರಣಗಳು ಮತ್ತು ಧನಕನಕಾದಿಗಳಿಂದ ಸಿಂಗರಿಸಿ ಪೂಜಿಸಿ ಬಗೆ ಬಗೆಯ ಸಿಹಿ ತಿಂಡಿಗಳನ್ನು ಎಲ್ಲರಿಗೂ ಹಂಚಿ ಸಂಭ್ರಮಿಸುತ್ತಾರೆ. ಅನೇಕ ವ್ಯಾಪಾರಿಗಳು ತಮ್ಮ ವ್ಯವಹಾರದ ಲೆಕ್ಕ ಪತ್ರಗಳನ್ನು ಅಂದಿನಿಂದ ಪುನರಾರಂಭಿಸುವುದು ನಡೆದುಕೊಂಡು ಬಂದಿರುವುದು ವಾಡಿಕೆಯಾಗಿದೆ .

ಇದೇ ದಿನ ಶ್ರೀ ಕೃಷ್ಣನು ದೇಹತ್ಯಾಗ ಮಾಡಿದ ದಿನವೆಂದೂ ಮತ್ತು ತನ್ನ ಪರಮ ಶಿಷ್ಯ ನಚೀಕೇತನಿಗೆ ಆತ್ಮ ಸಾಕ್ಷಾತ್ಕಾರವಾದ ದಿನವೆಂದೂ ಪ್ರತೀತೆಯಲ್ಲಿದೆ.

ನಾಲ್ಕನೇ ದಿನ: ಬಲಿಪಾಡ್ಯಮಿ

ದೀಪಾವಳಿಯ ನಾಲ್ಕನೇ ದಿನವೇ ಬಲಿಪಾಡ್ಯಮಿ. ಪುರಾಣದ ಪ್ರಕಾರ ರಾಕ್ಷಸರ ರಾಜ ಬಲಿಯ ಉಪಟಳವನ್ನು ತಾಳಾಲಾರದೆ, ಭಗವಾನ್ ವಿಷ್ಣು ಪುಟ್ಟ ವಾಮನಾವತಾರದಲ್ಲಿ ಬಂದು ಮೂರು ಹೆಜ್ಜೆಗಳಷ್ಟು ಜಾಗವನ್ನು ಬೇಡಿ, ವಾಮನ ಮೂರ್ತಿ ಬೃಹದಾಕಾರವಾಗಿ ಒಂದು ಹೆಜ್ಜೆಯನ್ನು ಇಡೀ ಭೂಮಂಡಲದ ಮೇಲೂ ಮತ್ತೊಂದನ್ನು ಆಕಾಶದ ಮೇಲೆ ಇಟ್ಟು ಮೂರನೇಯದನ್ನು ಎಲ್ಲಿ ಇಡಲಿ? ಎಂದು ಬಲಿ ಚಕ್ರವರ್ತಿಯನ್ನೇ ಕೇಳಿದಾಗ, ಈತ ಸಾಮಾನ್ಯ ಬಾಲಕನಲ್ಲ. ಸಾಕ್ಷಾತ್ ಭಗವಂತನೇ ಈ ರೂಪದಲ್ಲಿ ಬಂದಿರುವುದನ್ನು ಅರಿತು, ಭಗವಂತನ ಲೀಲೆಯ ಪ್ರಕಾರವೇ ಎಲ್ಲವೂ ನಡೆಯಲಿ ಎಂಬ ಇಚ್ಛೆಯಿಂದ, ಮೂರನೇ ಹೆಜ್ಜೆಯನ್ನು ತನ್ನ ತಲೆಯ ಮೇಲೆ ಇಡಲು ಕೋರಿಕೊಳ್ಳುತ್ತಾನೆ. ಆಗ ಬೃಹದಾಕಾರದ ವಾಮನ ಬಲಿ ತಲೆಯಮೇಲೆ ಪಾದವನ್ನಿಟ್ಟು ಬಲಿಯನ್ನು ಪಾತಾಳ ಲೋಕ್ಕೆಕ್ಕೆ ತಳ್ಳಿದ ದಿನವಿದು. ರಾಕ್ಷಸ ರಾಜನಾದರೂ ವಿಷ್ಣುವಿನ ಪರಮ ಭಕ್ತನಾಗಿದ್ದ ಕಾರಣ, ಕಾರ್ತಿಕ ಮಾಸದ ಮೊದಲ ದಿನದಂದು ಮಾತ್ರವೇ ಪಾತಾಳ ಲೋಕದಿಂದ ಬಲಿ ಭೂಲೋಕಕ್ಕೆ ಬಂದು ತನ್ನ ಪ್ರಜೆಗಳ ಸುಖಃ ದುಃಖಗಳನ್ನು ವಿಚಾರಿಸಿ ರಾಜ್ಯವನ್ನಾಳುವ ವರವನ್ನು ಭಗವಾನ್ ವಿಷ್ಣು ಬಲಿ ಚಕ್ರವರ್ತಿಗೆ ದಯಪಾಲಿಸುತ್ತಾರೆ. ಅದರ ಪ್ರಯುಕ್ತವೇ ಜನರು ದೀಪಾವಳಿಯ ನಾಲ್ಕನೇಯ ದಿನದಂದು ಬಲಿಚಕ್ರವರ್ತಿಯನ್ನು ಪೂಜಿಸಿ ಮನೆ ಮನೆಗಳಲ್ಲಿ ದೀಪದಿಂದ ಅಲಂಕರಿಸಿ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸುತ್ತಾರೆ.

ಹಳೆಯ ಮೈಸೂರಿನ ಬಹುತೇಕ ಮನೆಗಳಲ್ಲಿ ಅಂದು ಗೋವಿನ ಸಗಣಿಯಿಂದ ದೇವರ ಮನೆಯಲ್ಲಿ ಬಲೀಂದ್ರನ ಕೋಟೆ ಕಟ್ಟಿ, ಅದರ ಮೇಲೆ ಕುಂಬಳ ಹೂವು, ಇಲ್ಲವೇ ಚೆಂಡು ಹೂವು, ಅಥವಾ ಹುಚ್ಚೆಳ್ಳು ಹೂವು ಅದೂ ಇಲ್ಲದಿದ್ದಲ್ಲಿ ಕಾಸ್ಮಾಲ್ಸು ಹೂವು. ಒಟ್ಟಿನಲ್ಲಿ ಕೇಸರೀ ಬಣ್ಣದ ಯಾವುದಾದರೂ ಹೂವಿನ ಅಲಂಕಾರದ ಜೊತೆ ರಾಗಿ ತೆನೆಯನ್ನು ಸಗಣಿ ಕೋಟೆಯ ಸುತ್ತಲೂ ಇರಿಸಿ ಪೂಜೆಮಾಡುವುದು ಸಂಪ್ರದಾಯವಾಗಿದೆ. ಪುರಾಣದ ಪ್ರಕಾರ ಇದೇ ದಿನ ಶ್ರೀ ಕೃಷ್ಣನು ತನ್ನ ಕಿರು ಬೆರಳಿನಲ್ಲಿ ಗೋವರ್ಧನಗಿರಿಯನ್ನು ಎತ್ತಿದ್ದಾಗಿ ನಂಬಿರುವುದರಿಂದ, ಈ ದಿನ ಗೋವಿನ ಪೂಜೆ ಹಾಗೂ ಗೋವರ್ಧನನ ಪೂಜೆಗೆ ಹೆಚ್ಚಿನ ಮಹತ್ವವಿದ್ದು ಮನೆಗಳ್ಳಲ್ಲಿರುವ ದನಕರುಗಳಿಗೆ ಸ್ನಾನ ಮಾಡಿಸಿ, ಕೊಂಬಿಗೆ ಸೇವಂತಿಗೆ, ಚಂಡು ಹೂಗಳಿಂದ ಅಲಂಕರಿಸಿ ಪೂಜಿಸುವುದು ವಾಡಿಕೆ. ಹಲವಾರು ಕಡೆ ಎತ್ತುಗಳ ಮೆರವಣಿಗೆಯನ್ನೂ ಮಾಡುವ ಸಂಪ್ರದಾಯವಿದೆ.

ಐದನೇ ದಿನ: ಸೋದರ ಬಿದಿಗೆ ಅಥವಾ ಬಾಯಿ ದೂಜ್

ದೀಪಾವಳಿಯ ಐದನೇ ದಿನ ಕಾರ್ತೀಕ ದ್ವಿತೀಯ ಅಥವಾ ಸೋದರ ಬಿದಿಗೆ / ಭ್ರಾತೃದ್ವಿತೀಯಾ ಎಂದು ಆಚರಿಸಲಾಗುತ್ತದೆ. ಈ ದಿನ ಯಮ ತನ್ನ ತಂಗಿ ಯಮಿಯ ಮನೆಗೆ ಭೇಟಿ ಕೊಡುತ್ತಾನೆಂಬ ನಂಬಿಕೆ ಇರುವುದರಿಂದ, ಬಹುತೇಕ ಸಹೋದರರು ಎಲ್ಲೇ ಇದ್ದರೂ ಈ ದಿನ ತಮ್ಮ ಸಹೋದರಿಯರ ಮನೆಗೆ ಭೇಟಿ ನೀಡುತ್ತಾರೆ. ಹಾಗೆ ಮನೆಗೆ ಬಂದ ಸಹೋದರನಿಗೆ, ಸಹೋದರ ತಿಲಕವಿಟ್ಟು, ಸಿಹಿ ತಿನ್ನಿಸಿ, ಆರತಿ ಎತ್ತುವ ಸಂಪ್ರದಾಯವಿದೆ.

ಇನ್ನು ಮಹಾರಾಷ್ಟ ಮತ್ತು ಅನೇಕ ಉತ್ತರ ಭಾರತದಲ್ಲಿ ಇದೇ ಹಬ್ಬವನ್ನು ಭಾಯಿ ದೂಜ್ ಎಂದು ಕರೆದು ಮೇಲೆ ತಿಳಿಸಿದಂತೆಯೇ ಸಹೋದರನನ್ನು ಸತ್ಕರಿಸುವ ಸಂಪ್ರದಾಯವಿದೆ.

ದೀಪಾವಳಿ ಹಬ್ಬದ ಎರಡನೇ ದಿನದಿಂದ ಆರಂಭಿಸಿ, ಕಾರ್ತಿಕ ಮಾಸವಿಡೀ ತಮ್ಮ ಮನೆಗಳ ಮುಂದೆ ದೀಪದ ಹಣತೆಗಳನ್ನು ಹಚ್ಚಿ ಇಡುತ್ತಾರೆ. ಈಗೆಲ್ಲಾ ಬಗೆ ಬಗೆಯ ವಿದ್ಯುತ್ ದೀಪಾಲಂಕಾರಗಳು, ದೀಪದ ಬುಟ್ಟಿಗಳನ್ನು ಹಚ್ಚಿ ಸಂಭ್ರಮಿಸುತ್ತಾರೆ .

ಈ ರೀತಿ ನಮ್ಮ ಪ್ರತಿಯೊಂದು ಹಬ್ಬ ಹರಿದಿನಗಳೂ ಜನರಿಗೆ ಹರ್ಷೋಲ್ಲಾಸದ ಜೊತೆ ತಮ್ಮೆಲ್ಲಾ ದುಃಖಗಳನ್ನು ಮರೆತು, ಕುಟುಂಬ ಹಾಗೂ ಬಂಧು ಬಾಂಧವರೊಂದಿಗೆ ಸಂಬಂಧ ಬೆಸೆಯುವುದಕ್ಕಾಗಿಯೇ ಆಚರಿಸಲಾಗುತ್ತದೆ. ಹಾಗಾಗಿ ನಾವುಗಳು ಈ ಸಂಸ್ಕೃತಿಯ ಸೊಬಗನ್ನು ಅರಿತು ಶ್ರದ್ಧಾಭಕ್ತಿಯಿಂದ ಆಚರಿಸಿದರೆ ಈ ಸಂಭ್ರಮ ಸಡಗರದ ಹಬ್ಬಗಳು ಅರ್ಥಪೂರ್ಣವೆನಿಸುತ್ತವೆ ಮತ್ತು ಸಂಭ್ರಮದ, ಸಡಗರದ ವಾತಾವರಣ ಮನಗಳಲ್ಲಿ ಮತ್ತು ಮನೆಗಳಲ್ಲಿ ಧನಾತ್ಮಕ ತರಂಗಗಳನ್ನು ಹೆಚ್ಚಿಸುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com