ಕೃಷ್ಣ ಜನ್ಮಾಷ್ಟಮಿ ಯಾವಾಗ? ಪಂಚಾಂಗದ ಪ್ರಕಾರ ಯಾವ ದಿನ ಆಚರಣೆ

ಅಷ್ಟಮಿ ತಿಥಿ ಹಾಗೂ ರೋಹಿಣಿ ನಕ್ಷತ್ರ ಎರಡೂ ಒಟ್ಟಿಗೆ ಬರುವುದರಿಂದ ಜನ್ಮಾಷ್ಟಮಿಯ ದಿನಾಂಕದ ಬಗ್ಗೆ ಗೊಂದಲಗಳು ಮೂಡುವುದು ಸಹಜ. ಅದೇ ರೀತಿ ಈ ವರ್ಷ, ಅಂದರೆ 2026ರಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಸೆಪ್ಟೆಂಬರ್ 4ರಂದು ಆಚರಿಸಬೇಕೇ ಅಥವಾ 5ರಂದು ಆಚರಿಸಬೇಕೇ ಎಂಬ ಪ್ರಶ್ನೆ ಹಲವರಲ್ಲಿದೆ
File image
ಸಾಂದರ್ಭಿಕ ಚಿತ್ರ
Updated on

ಕೃಷ್ಣ ಜನ್ಮಾಷ್ಟಮಿ ಭಾರತದಲ್ಲಿ ಆಚರಿಸಲ್ಪಡುವ ಒಂದು ಪ್ರಮುಖವಾದ ಹಬ್ಬ. ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ವೈಭವದಿಂದ ಆಚರಿಸಲಾಗುತ್ತದೆ. ಶ್ರೀಕೃಷ್ಣನ ಜನ್ಮದಿನವನ್ನು ಚಾಂದ್ರಮಾನ ರೀತಿಯಲ್ಲಿ ಶ್ರಾವಣ ಕೃಷ್ಣ ಅಷ್ಟಮಿಯಂದು, ಸೌರಮಾನ ರೀತಿಯಲ್ಲಿ ಸಿಂಹಮಾಸದ ರೋಹಿಣಿ ನಕ್ಷತ್ರದ ದಿನ ಆಚರಿಸುತ್ತಾರೆ. ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಮಧ್ಯರಾತ್ರಿ ರೋಹಿಣಿ ನಕ್ಷತ್ರದಲ್ಲಿ ಶ್ರೀಕೃಷ್ಣನ ಜನನವಾಯಿತು ಎಂಬುದು ಪೌರಾಣಿಕ ನಂಬಿಕೆ.

ಅಷ್ಟಮಿ ತಿಥಿ ಹಾಗೂ ರೋಹಿಣಿ ನಕ್ಷತ್ರ ಎರಡೂ ಒಟ್ಟಿಗೆ ಬರುವುದರಿಂದ ಜನ್ಮಾಷ್ಟಮಿಯ ದಿನಾಂಕದ ಬಗ್ಗೆ ಗೊಂದಲಗಳು ಮೂಡುವುದು ಸಹಜ. ಅದೇ ರೀತಿ ಈ ವರ್ಷ, ಅಂದರೆ 2026ರಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಸೆಪ್ಟೆಂಬರ್ 4ರಂದು ಆಚರಿಸಬೇಕೇ ಅಥವಾ 5ರಂದು ಆಚರಿಸಬೇಕೇ ಎಂಬ ಪ್ರಶ್ನೆ ಹಲವರಲ್ಲಿದೆ. ಈ ಗೊಂದಲಕ್ಕೆ ಇಲ್ಲಿದೆ ಮಾಹಿತಿ. 2026ರ ಸೆಪ್ಟೆಂಬರ್ 4ರಂದು ಈ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಎಲ್ಲಡೆ ವಿಜೃಂಭಣೆಯಿಂದ ಆಚರಿಸಲಾಗುವುದು.

ಈ ವರ್ಷ ಭಾದ್ರಪದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯು ಸೆಪ್ಟೆಂಬರ್ 4ರಂದು ಮುಂಜಾನೆ 2:25ಕ್ಕೆ ಆರಂಭವಾಗಿ, ಸೆಪ್ಟೆಂಬರ್ 5ರಂದು ಮಧ್ಯರಾತ್ರಿ 12:13ಕ್ಕೆ ಮುಕ್ತಾಯಗೊಳ್ಳಲಿದೆ. ಸೂರ್ಯೋದಯದ ಸಮಯದಲ್ಲಿ ಅಷ್ಟಮಿ ತಿಥಿ ಇರುವುದರಿಂದ ಹಾಗೂ ಕೃಷ್ಣನ ಜನನದ ಸಮಯವಾದ ಮಧ್ಯರಾತ್ರಿಯು ಸೆಪ್ಟೆಂಬರ್ 4ರಂದೇ ಬರುವುದರಿಂದ, ಈ ವರ್ಷ ಕೃಷ್ಣ ಜನ್ಮಾಷ್ಟಮಿಯನ್ನು ಸೆಪ್ಟೆಂಬರ್ 4, 2026 ಶುಕ್ರವಾರದಂದೇ ಆಚರಿಸಲಾಗುತ್ತದೆ. ಇನ್ನು ರೋಹಿಣಿ ನಕ್ಷತ್ರವು ಸೆಪ್ಟೆಂಬರ್ 4ರ ರಾತ್ರಿ 11:04ರವರೆಗೆ ಇರಲಿದ್ದು, ತದನಂತರ ಮೃಗಶಿರ ನಕ್ಷತ್ರ ಆರಂಭವಾಗಲಿದೆ. ಈ ದಿನ ಚಂದ್ರ, ಗುರು, ಸೂರ್ಯ, ಇತ್ಯಾದಿ ಗ್ರಹಗಳ ಸಂಯೋಗದಿಂದಾಗಿ ಶುಭ ಯೋಗದ ನಿರ್ಮಾಣವಾಗಲಿದೆ.

ಕೃಷ್ಣಜನ್ಮಾಷ್ಟಮಿಯ ದಿನದಂದು, ಮನೆ ಮತ್ತು ದೇವಾಲಯಗಳನ್ನು ಸುಂದರವಾಗಿ ಅಲಂಕರಿಸಲಾಗುತ್ತದೆ. ಕೃಷ್ಣನ ಪುಟ್ಟ ಹೆಜ್ಜೆಗಳನ್ನು ರಂಗೋಲಿಯಲ್ಲಿ ಬರೆದು ಸಂಭ್ರಮಿಸಲಾಗುತ್ತದೆ. ಕೃಷ್ಣನ ವಿಗ್ರಹಗಳನ್ನು ವಿಧವಿಧವಾಗಿ ಅಲಂಕರಿಸಿ, ಬಗೆಬಗೆಯ ತಿಂಡಿಗಳನ್ನು ಮಾಡಿ ಬಾಲ ಕೃಷ್ಣನನ್ನುಪೂಜಿಸಲಾಗುತ್ತದೆ. ಕೆಲವು ಕಡೆ, ಮಧ್ಯರಾತ್ರಿಯವರೆಗೆ ಉಪವಾಸವಿದ್ದು, ನಂತರ ಆಹಾರ ಸ್ವೀಕರಿಸುವ ಸಂಪ್ರದಾಯವಿದೆ.

ಈ ಬಾರಿ ಸೆಪ್ಟೆಂಬರ್ 4ರಂದು ಕೃಷ್ಣ ಜನ್ಮಾಷ್ಟಮಿ ಬಂದಿದೆ. ಕೃಷ್ಣ ಜನ್ಮಾಷ್ಟಮಿಯ ದಿನದಂದು ಕೃಷ್ಣನಿಗೆ ಬಲು ಪ್ರಿಯವಾದ ಸಿಹಿ ಅವಲಕ್ಕಿ ಖಾದ್ಯವನ್ನು ಮಾಡಬಹುದು. ಇದು ಅತ್ಯಂತ ಸುಲಭ ಹಾಗೂ ಪೋಷಕವಾದ ತಿಂಡಿಯಾಗಿದೆ. ಬೆಲ್ಲ ಹಾಗೂ ತೆಂಗಿನಕಾಯಿಯ ಸವಿಯೊಂದಿಗೆ ಸಿಹಿ ಅವಲಕ್ಕಿ ಖಾದ್ಯವನ್ನು ಕೇವಲ 10 ನಿಮಿಷದಲ್ಲಿ ಮಾಡಬಹುದು. ಜನ್ಮಾಷ್ಟಮಿಯ ಮರುದಿನ 'ಮೊಸರು ಮಡಿಕೆ' (ದಹಿ ಹಂಡಿ) ಒಡೆಯುವ ಸಂಪ್ರದಾಯವೂ ಹಲವೆಡೆ ನಡೆಯುತ್ತದೆ. ಯುವಕರು ಮಾನವ ಪಿರಮಿಡ್ ರಚಿಸಿ ಎತ್ತರದಲ್ಲಿ ಕಟ್ಟಿದ ಮಡಿಕೆಯನ್ನು ಒಡೆಯುವ ಮೂಲಕ ಕೃಷ್ಣನ ಬಾಲ್ಯದ ಲೀಲೆಗಳನ್ನು ಸ್ಮರಿಸುತ್ತಾರೆ.

ಭಕ್ತರು ಬ್ರಹ್ಮ ಮುಹೂರ್ತದಲ್ಲಿ ಸ್ನಾನ ಮಾಡಿ ವ್ರತದ ಸಂಕಲ್ಪ ಮಾಡಬಹುದು. ಉಪವಾಸ ಮಾಡುವ ಭಕ್ತರು ಮಧ್ಯರಾತ್ರಿಯ ಪೂಜೆಯ ನಂತರ, ಅಂದರೆ 12:43ರ ಬಳಿಕ ಪಾರಣ (ಉಪವಾಸ ಅಂತ್ಯ) ಮಾಡಬಹುದು. ಅಥವಾ ತಮ್ಮ ಕುಟುಂಬದ ಸಂಪ್ರದಾಯದಂತೆ ಸೂರ್ಯೋದಯದ ನಂತರ ಸೆಪ್ಟೆಂಬರ್ 5ರಂದು ಉಪವಾಸವನ್ನು ಮುರಿಯಬಹುದು.

File image
ನಿರಂತರ ಆರ್ಥಿಕ ನಷ್ಟ, ಪದೇ ಪದೇ ಮನೆಯಲ್ಲಿ ಕಳ್ಳತನಕ್ಕೆ ಕಾರಣವೇನು? ಕುಬೇರ ಮೂಲೆಯಲ್ಲಿ 'ತಿಜೋರಿ' ಇಡುವ ಮುನ್ನ...

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com