ಗೊಂಬೆ ಊರಿನ ನೀಲಕಂಠ

ಗೊಂಬೆ ಊರಿನ ನೀಲಕಂಠ
Updated on: 

ಚನ್ನಪಟ್ಟಣ ಎಂದರೆ ಚೆಂದದ ಗೊಂಬೆಗಳು. ಬಾಲ್ಯದಿಂದಲೂ ನಮಗೆ ಗೊತ್ತಿರುವುದು ಅಷ್ಟೇ. ಬೆಂಗಳೂರು-ಮೈಸೂರು ಹೆದ್ದಾರಿಯ ಈ ಪಟ್ಟಣದಲ್ಲಿರುವ ನೀಲಕಂಠೇಶ್ವರ ಸ್ವಾಮಿ ದೇವಸ್ಥಾನ ನಾಡಿನ ಪ್ರಾಚೀನ ದೇವಾಲಯಗಳಲ್ಲಿ ಒಂದು.
ಈ ದೇವಾಲಯದ ಬಗ್ಗೆ ಅಷ್ಟಮಂಗಲ ಪ್ರಶ್ನೆಯಲ್ಲಿ ವಿಚಾರಿಸಿದಾಗ ಇದನ್ನು ಕಟ್ಟಿಸಿದವನು ಕ್ಷತ್ರಿಯ ವಂಶದವನು ಎನ್ನುವ ಮಾಹಿತಿ ತಿಳಿದು ಬಂದಿದೆ. ಹೀಗಾಗಿ ಇದು ಯಾವುದೋ ರಾಜ ನಿರ್ಮಿಸಿದ್ದು ಎನ್ನುವುದು ನಿರ್ವಿವಾದ. ಈ ದೇವಾಲಯದ ಪ್ರಾಕಾರವು ಶ್ರೀರಂಗದ ರಂಗನಾಥ ದೇವಾಲಯದ ಪ್ರಾಕಾರದಂತೆ ಇದೆ. ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಈ ದೇವಾಲಯ ಚೋಳರ ಆಡಳಿತ ಕಾಲದಲ್ಲಿ ನಿರ್ಮಾಣವಾದದ್ದಿರಬಹುದು.ದೇವಾಲಯದ ಪ್ರಾಂಗಣದಲ್ಲಿ ಗೊರಬು ವೇಷಧಾರಿಯಾಗಿ ಕೋಲು ಹಿಡಿದಿರುವ ಮನುಷ್ಯನ ಸೂಚಕವಿದೆ.
ಇಲ್ಲಿಗೆ ಸಮೀಪದ ಹೆಬ್ಬೂರು ಗ್ರಾಮದಲ್ಲಿ ಕಣ್ವ ಮಹರ್ಷಿಗಳು ತಪಃಸಿದ್ಧಿ ಗಳಿಸಿದ ಗುಹೆಯಿದೆ. ಕಣ್ವರು ಅಲ್ಲಿಂದ ಪ್ರತಿ ದಿನ ಬಂದು ನೀಲಕಂಠನ ಪೂಜೆ ಮಾಡಿ ಹೋಗುತ್ತಿದ್ದರು ಎಂಬುದು ಪುರಾಣ ಕಥೆಗಳಲ್ಲಿ ಬಿಂಬಿತವಾಗಿದೆ. ಈ ದೇವಸ್ಥಾನದಿಂದ 5 ಕಿ.ಮೀ ದೂರದಲ್ಲಿ ಮಳೂರು ಅಪ್ರಮೇಣ ಸ್ವಾಮಿ ದೇವಾಲಯವಿದ್ದು ಅಲ್ಲಿ ಬರುವ ಭಕ್ತರು ದರ್ಶನ ಪಡೆದು ಈ ದೇವಾಲಯದ ದರ್ಶನ ಪಡೆದುಕೊಂಡೇ ಹೋಗುವುದು ವಾಡಿಕೆ.
ನೀಲಕಂಠೇಶ್ವರ ದೇವಸ್ಥಾನದಲ್ಲಿ ದೊಡ್ಡದಾದ ದಕ್ಷಿಣ ಪಥವಿದೆ. ಪ್ರಾಂಗಣ ಎತ್ತರವಾಗಿದೆ. ಪೂರ್ವ ದ್ವಾರದ ಮೂಲಕ ಪ್ರವೇಶ. ದಕ್ಷಿಣ ದ್ವಾರ ಹೆದ್ದಾರಿಯಾದ್ದರಿಂದ ಅದನ್ನು ಬಳಸುತ್ತಿಲ್ಲ. ಶುಕನಾಸಿ ನಂತರ ಗರ್ಭಗುಡಿ, ಅಲ್ಲಿ ಶಿವಲಿಂಗವು ಪೀಠದಿಂದ ಸುಮಾರು 6 ಅಡಿ ಎತ್ತರದಲ್ಲಿದೆ. ಈ ದೇವಾಲಯಕ್ಕೆ ಸೋಂದಾ ಸ್ವರ್ಣವಲ್ಲಿ ಮಠದ ಯತಿಗಳು ಭಗವದ್ಗೀತಾ ಅಭಿಯಾನ ಸಂದರ್ಭದಲ್ಲಿ ಭೇಟಿ ಕೊಟ್ಟಾಗ, 'ಇದು ಬನವಾಸಿಯ ಮಧುಕೇಶ್ವರನ ಹಾಗೆಯೇ ಇದೆ' ಎಂದು ಉದ್ಗರಿಸಿದ್ದರು. ಮನೋ ಕಾಮನೆಗಳನ್ನು ಈಡೇರಿಸುವ ಶಿವಲಿಂಗ ಇದಾಗಿದ್ದು ಭಕ್ತಾದಿಗಳು ಭಕ್ತಿಯಿಂದ ಬೇಡಿಕೊಂಡರೆ ಸಕಲ ಇಷ್ಟಾರ್ಥಗಳು ಈಡೇರುತ್ತವೆ ಎನ್ನುವ ನಂಬಿಕೆ ಇದೆ.
ಸರ್ವ ಸಂಗಮ
ಮಹಾಶಿವರಾತ್ರಿ ಎಲ್ಲಾ ಜನಾಂಗದವರೂ ಇಲ್ಲಿ ಸೇರುತ್ತಾರೆ. ಅಂದು 4 ಆಯಾಮದ (4 ಸಲ) ಪೂಜೆ ಇರುತ್ತದೆ. ಶಿವನು ಅಭಿಷೇಕ ಪ್ರಿಯನಾಗಿದ್ದರಿಂದ ರುದ್ರಾಭಿಷೇಕ ನಿರಂತರವಾಗಿ ಆ ಶುಭ ದಿನದಲ್ಲಿ ನಡೆಯುತ್ತದೆ.  ಶಿವರಾತ್ರಿ ಮರುದಿನ ಜಾತ್ರೋತ್ಸವ ನಡೆಯುತ್ತದೆ. ಶಿವನ ಮೂರ್ತಿ ಪ್ರತಿಷ್ಠಾಪಿಸಿದ ಬಳಿಕ ರಥವು ಚನ್ನಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗುತ್ತದೆ. ಆ ದಿನ ಶಿವನಿಗೆ ಕ್ಷೀರಾನ್ನ, ಶಾಲ್ಯನ್ನ, ವಿಭೂತಿ, ಬೆಣ್ಣೆ, ಅಲಂಕಾರವನ್ನು ಮಾಡಿ ನಂತರ ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ವಿತರಿಸಲಾಗುತ್ತದೆ.


- ಚಿತ್ರ-ಲೇಖನ: ಬಳಕೂರು ವಿ.ಎಸ್. ನಾಯಕ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com