ಮಾದೂರು ಮಹಾಸತಿ

ಮಾದೂರು ಮಹಾಸತಿ
Updated on: 

ಮಾದೂರು ಬಳ್ಳಾರಿ  ಜಿಲ್ಲೆಯ ಪ್ರತಿಯೊಬ್ಬರಿಗೂ ಗೊತ್ತು. ತಾಲೂಕು ಕೇಂದ್ರ ಹಗರಿಬೊಮ್ಮನಹಳ್ಳಿಯಿಂದ ಎಂಟು ಕಿ.ಮಿ. ದೂರದಲ್ಲಿರುವ ಪುಟ್ಟ ಗ್ರಾಮ ಪ್ರತಿವರ್ಷ ನಡೆಯುವ ಜಾತ್ರೆಯಿಂದ ಫೇಮಸ್. ಪತಿ ಜತೆಗೆ ಚಿತೆ ಏರಿದ ಸತಿ ಹೆಸರಿನಲ್ಲಿ ವೈಶಿಷ್ಟಪೂರ್ಣವಾಗಿ ಆಚರಿಸುವ ಶ್ರೀದೇವಿ ಮಾಸ್ತೆಮ್ಮ ಜಾತ್ರೆ 'ಮಹಾಸತಿ ಜಾತ್ರೆ' ಎಂದೇ ಖ್ಯಾತ.
ಜನವರಿ ಮೂರನೇ ಅಥವಾ ಕೊನೆಯ ವಾರ ಜರುಗುವ ಮಾದೂರು ಜಾತ್ರೆಗೆ 500 ವರ್ಷದ ಇತಿಹಾಸ.
ಮಾಸ್ತಿಕಲ್ಲು, ವೀರಗಲ್ಲುಗಳನ್ನು ಬಚ್ಚಲು ಮನೆಗಳಿಗೆ ಹಾಸುಬಂಡೆಗಳನ್ನಾಗಿಯೋ, ಅಂಗಳಕ್ಕೆ ಜೋಡಿಸುವ ಕಲ್ಲುಗಳನ್ನಾಗಿಯೋ, ಇಲ್ಲವೆ ದನ ಕಟ್ಟುವ ಮನೆಗೆ ಬಳಸುತ್ತಿರುವುದನ್ನು ತಿಳಿದ್ದೇವೆ. ಆದರೆ ಇಂತಹ ಮಾಸ್ತಿಕಲ್ಲಿಗೆ ಮಹಾಸತಿ ಸ್ವರೂಪ ಕೊಟ್ಟು, ಆಕೆಯ ಹೆಸರಿನಲ್ಲಿಯೇ ದೇವಸ್ಥಾನ ಕಟ್ಟಿ, ನಿತ್ಯವೂ ಪೂಜಿಸಿ, ಪ್ರತಿವರ್ಷ ಶ್ರದ್ಧಾ, ಭಕ್ತಿಯಿಂದ ಜಾತ್ರೆ ಆಚರಿಸುವುದು, ಸತಿ ಸಹಗಮನ ಪದ್ಧತಿಯಲ್ಲಿ ಚಿತೆ ಏರಿದ ಸತಿ ಹೆಸರಿನಲ್ಲಿ ಜಾತ್ರೆ ನಡೆಯುವುದು ಬಹುಶಃ ಮಾದೂರಿನಲ್ಲಿ ಮಾತ್ರ ಇರಬೇಕು.
ಕಟ್ಟುನಿಟ್ಟಿನ ಜಾತ್ರೆ
ಮಹಾಸತಿ ಜಾತ್ರೆ ಅತ್ಯಂತ ಕಟ್ಟುನಿಟ್ಟಿನ ಆಚರಣೆಯ ಜಾತ್ರೆ. ಪ್ರತಿವರ್ಷದ ಬನದಹುಣ್ಣಿಮೆಯ ನಂತರ ಬರುವ ಮೊದಲ ಸೋಮವಾರ ಜಾತ್ರೆ ಆರಂಭಕ್ಕೆ ಗ್ರಾಮದಲ್ಲಿ ಸಾರು ಹಾಕಲಾಗುತ್ತದೆ (ಡಂಗೂರ ಸಾರುವುದು). ಈ ಎಂಟು ದಿನಗಳ ಕಾಲವೂ ಊರಿನ ಸುತ್ತಲೂ ಕಾರೆ, ಬಳ್ಳಾರಿ ಜಾಲಿ, ಜಾಲಿಮುಳ್ಳಿನಿಂದ ಹೆಣೆದ ಭದ್ರವಾದ ಪಾರಿಬೇಲಿಯನ್ನು ಕಟ್ಟಲಾಗುತ್ತದೆ. ಪಾರಿಬೇಲಿ ತೆರವುಗೊಳಿಸುವವರೆಗೂ ಗ್ರಾಮದ ಒಳಗಿನಿಂದ ಒಂದು ಗುಂಡುಸೂಜಿ ಸಹಿತ ಯಾವುದೇ ವಸ್ತುವನ್ನು ಹೊರಗಡೆ ತೆಗೆದುಕೊಂಡು ಹೋಗುವಂತಿಲ್ಲ. ಒಂದು ವೇಳೆ ಜನ-ಜಾನುವಾರುಗಳು ಸತ್ತರೆ ಊರಿನ ಒಳಗಡೆಯೇ ಅಂತ್ಯಕ್ರಿಯೆ. ಸ್ಥಳಿಯರು ಸೇರಿದಂತೆ ಯಾರೇ  ಗ್ರಾಮದೊಳಕ್ಕೆ ಪ್ರವೇಶಿಸಬೇಕೆಂದರೂ ಅಗಸಿಬಾಗಿಲ ಮೂಲಕವೇ ಪುರ ಪ್ರವೇಶ ಹಾಗೂ ಅಲ್ಲಿಂದಲೇ ನಿರ್ಗಮನ. ಪರಊರಿನವರು ತಮ್ಮ ಜೊತೆಗೆ ತಂದಿರುವ ಹಣಸಹಿತ ಎಲ್ಲವನ್ನೂ ಅಗಸಿಬಾಗಿಲಲ್ಲೆ ಇಟ್ಟು ಹೋಗಬೇಕು. ಈ ಸಮಯದಲ್ಲಿ  ಚಪ್ಪಲಿ ಹಾಕಿಕೊಂಡು ಊರಿನ ಒಳಕ್ಕೆ ಹೋಗುವಂತಿಲ್ಲ.
ಹೀಗೆ ಬನ್ನಿ
ಜ.27ರಿಂದ ಮೂರು ದಿನ ಮಾದೂರಿನಲ್ಲಿ ಮಹಾಸತಿ ಜಾತ್ರೆ. ನೀಮಗೆ ಜಾತ್ರೆ ನೋಡುವ ಮನಸ್ಸಿದ್ದರೆ ಹಗರಿಬೊಮ್ಮನಹಳ್ಳಿ ತಲುಪಿ. ಅಲ್ಲಿಂದ ಮಾದೂರಿಗೆ ಸಾಕಷ್ಟು ಖಾಸಗಿ ವಾಹನಗಳ ಸೌಕಾರ್ಯವಿದೆ.


ವೀರ ಯೋಧನ ಪತ್ನಿ
ಗ್ರಾಮದ ಮಲ್ಲೋಜಿ ಎಂಬ ಯುವಕ ವಿಜಯನಗರ ಆರಸರ ಕಾಲದಲ್ಲಿ ವೀರಸೈನಿಕನಾಗಿ ನಾಡ ಸೇವೆ ಸಲ್ಲಿಸುತ್ತಿರುತ್ತಾನೆ. ಯುದ್ಧವೊಂದರಲ್ಲಿ ವೀರಮರಣ ಅಪ್ಪುತ್ತಾನೆ. ಸುದ್ದಿ ತಿಳಿದು ಯೋಧನ ಪತ್ನಿ ಸ್ವಯಂಚಿತೆ ಏರ್ಪಡಿಸಿಕೊಂಡು ಸತಿ ಹೋಗುತ್ತಾಳೆ. ಆಕೆ ಸತಿಯಾದ ಸ್ಥಳದಲ್ಲಿ ನೆಟ್ಟಿರುವ ಮಾಸ್ತಿಕಲ್ಲೇ ಇವತ್ತಿನ ಶ್ರೀದೇವಿ ಮಾಸ್ತೆಮ್ಮ ಎಂದು ಸ್ಥಳಿಯ ಐತಿಹ್ಯಗಳಿವೆ.
ಸಮಾಗಮ ಸಲ್ಲ
ಜಾತ್ರೆ ಕೈಂಕರ್ಯ ಶುರುವಾದ ದಿನದಿಂದ ಮುಗಿಯುವವರೆಗೂ ಪತಿ-ಪತ್ನಿಯರು ಕೂಡುವಂತಿಲ್ಲ. ಮಹಿಳೆಯರು ತಲೆಗೆ ಹೂ ಮುಡಿಯುವುದು, ಹಣೆಗೆ ಕುಂಕುಮ ಹಚ್ಚುವುದು, ಗಂಡಂದಿರಿಗೆ ಊಟ ನೀಡುವುದು, ಚಹಾ ಕೊಡುವುದು ಎಲ್ಲವೂ ನಿಷಿದ್ಧ. ಈ ಸಮಯದಲ್ಲಿ ಪತಿರಾಯರಿಗೆ ಊರೊಳಗಿನ ಚಾವಡಿ, ಶಾಲೆಗಳೇ ರಾತ್ರಿ ಮಲಗುವ ತಾತ್ಕಾಲಿಕ ತಾಣಗಳು. ಸತಿ ಹೋದವಳ ಹೆಸರಿನಲ್ಲಿ ನಡೆಯುವ ಜಾತ್ರೆಯಾದ್ದರಿಂದ ಈ ಸಂಪ್ರದಾಯ ಬೆಳೆದುಬಂದಿರಬಹುದು ಎನ್ನುವುದು ಗ್ರಾಮದ ಹಿರಿಯರ ನಂಬಿಕೆ. ಗ್ರಾಮಸ್ಥರು ನೇಮಕ ಮಾಡಿದ ಆಯಾಗಾರರು ಹಗಲು-ರಾತ್ರಿ ಸರದಿಪ್ರಕಾರ ಊರಿನ ಸುತ್ತಲೂ ಪಹರೆ ಕಾಯುತ್ತಾರೆ.
ಮಾಸ್ತೆಮ್ಮ ಎನ್ನಬೇಡಿ!
ಮಾದೂರಿನಲ್ಲಿ ಮಾಸ್ತೆಮ್ಮ, ಮಾಸ್ತೆಪ್ಪ ಎಂದು ಸಣ್ಣ ಕೂಗು ಹಾಕಿದರೆ ಇಡೀ ಊರು ನಿಮ್ಮೆದುರು ನೆರೆಯುತ್ತದೆ! ಕಾರಣ ಏನು ಗೊತ್ತಾ? ಇಲ್ಲಿರುವ ಶೇ.90ರಷ್ಟು ಜನರ ಹೆಸರು ಮಾಸ್ತೆಮ್ಮ, ಮಾಸ್ತೆಪ್ಪ, ಕರೇಮಾಸ್ತೆಮ್ಮ, ಕರೆಮಾಸ್ತೆಪ್ಪ, ಮಾಸ್ತೆವ್ವ, ಸಣ್ಣಮಾಸ್ತೆಪ್ಪ, ದೊಡ್ಡಮಾಸ್ತೆಪ್ಪ!

ಮಾದೂರಿನ ಸುತ್ತಲೂ ಸಾಕಷ್ಟು ವೀರಗಲ್ಲು, ಮಾಸ್ತಿಕಲ್ಲುಗಳು ಇವೆ. ಈ ಹಿಂದೆ ಈ ಊರು ಸೈನಿಕರ ತಾಣವಾಗಿರಬಹುದು. ಹೆಚ್ಚಿನ ಸಂಶೋಧನೆ ಮಾಡಿದರೆ ನಮ್ಮೂರಿನ ಇತಿಹಾಸದ ಮೇಲೆ ಬೆಳಕು ಹರಿಯಬಹುದು.
=  ಮಹೇಶ, ಗ್ರಾ.ಪಂ. ಮಾಜಿ ಅಧ್ಯಕ್ಷ

= ಹುಳ್ಳಿ ಪ್ರಕಾಶ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com