ಸಿನಿಮೋತ್ಸವದಲ್ಲಿ ಶೇಷಾದ್ರಿ ನಿರ್ದೇಶನದ 'ವಿದಾಯ' ಪ್ರದರ್ಶನ; ಚಿತ್ರವಿಮರ್ಶೆ

೮ ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪಿ ಶೇಷಾದ್ರಿ ನಿರ್ದೇಶನದ 'ವಿದಾಯ' ಚಿತ್ರ ಪ್ರದರ್ಶನಗೊಂಡಿತು. ಸುಚೇಂದ್ರ ಪ್ರಸಾದ್ ನಟಿಸಿರುವ ಈ
ಸಿನಿಮೋತ್ಸವದಲ್ಲಿ ಶೇಷಾದ್ರಿ ನಿರ್ದೇಶನದ 'ವಿದಾಯ' ಪ್ರದರ್ಶನ; ಚಿತ್ರವಿಮರ್ಶೆ
ಸಿನಿಮೋತ್ಸವದಲ್ಲಿ ಶೇಷಾದ್ರಿ ನಿರ್ದೇಶನದ 'ವಿದಾಯ' ಪ್ರದರ್ಶನ; ಚಿತ್ರವಿಮರ್ಶೆ

ಬೆಂಗಳೂರು: ೮ ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪಿ ಶೇಷಾದ್ರಿ ನಿರ್ದೇಶನದ 'ವಿದಾಯ' ಚಿತ್ರ ಪ್ರದರ್ಶನಗೊಂಡಿತು. ಸುಚೇಂದ್ರ ಪ್ರಸಾದ್ ನಟಿಸಿರುವ ಈ ಚಿತ್ರ ದಯಾಮರಣ ವಿಷಯವನ್ನು ಚರ್ಚಿಸುವ ಗಂಭೀರ ಚಿತ್ರವಾಗಿದೆ.

ವಿದಾಯ ಚಿತ್ರವಿಮರ್ಶೆ- ಒಳ್ಳೆಯ ಸಾವಿನ' ಸಿನೆಮಾ ವ್ಯಾಖ್ಯಾನ

ಯಾವುದೇ ಒಂದು ಕಲೆಯ ಪಾತ್ರ ಸಮಾಜದ ಸಮಸ್ಯೆಗಳಿಗೆ ಕನ್ನಡಿ ಹಿಡಿದು, ಚರ್ಚಿಸಿ ಕಲೋಪಾಸಕರಿಗೆ ತಿಳಿ ಹೇಳುವುದೋ ಅಥವಾ ಮುದ ನೀಡುವುದೋ ಎಂಬ ವಾಗ್ವಾದ ಹಿಂದಿನದಾಗಿದ್ದರೂ ಸಮಕಾಲಿನ ಚರ್ಚೆಯಾಗಿಯೂ ಉಳಿದಿದೆ. ಸಹಭಾಗಿತ್ವ ಕಲೆ ಎನ್ನಿಸಿಕೊಳ್ಳುವ ಸಿನೆಮಾ ಕೂಡ ಇದಕ್ಕೆ ಹೊರತಲ್ಲ. ಸಿನೆಮಾ ಮೂಲಕ ಸಮಸ್ಯೆಗಳನ್ನು ಚರ್ಚಿಸುವ, ಜನರಿಗೆ ತಿಳಿ ಹೇಳುವ ಸಿನೆಮಾ ನಿರ್ದೇಶಕರ ಒಂದು ಪರಂಪರೆಯೇ ಭಾರತದಲ್ಲಿ-ಕರ್ನಾಟಕದಲ್ಲಿ ಬೆಳೆದು ಬಂದಿದ್ದರೂ ಇದು ಬೆರಳೆಣಿಕೆಯಷ್ಟೇ ಎನ್ನಬಹುದು. ಸಿನೆಮಾ ಕೂಡ ವಿಚಾರ ಶಕ್ತಿಯ ಮಾಧ್ಯಮ ಎಂಬ ಈ ನಿರ್ದೇಶಕ ವರ್ಗದ ಗ್ರಹಿಕೆ, ಪ್ರಸಕ್ತ ಸಮಸ್ಯೆಗಳ ಮೇಲೆ ಈ ಬೃಹತ್ ಮಾಧ್ಯಮದ ಮೂಲ ಬೆಳಕು ಚೆಲ್ಲುವ ಇವರ ತುಡಿತ-ಇಂಗಿತ ವಾಣಿಜ್ಯ ದೃಷ್ಟಿಯಿಂದಾಗಲೀ ಜನಪ್ರಿಯತೆಯ ದೃಷ್ಟಿಯಿಂದಾಗಲೀ ಅತಿ ಹೆಚ್ಚು ಪರಿಣಾಮಕಾರಿಯಾಗಿಲ್ಲದೆ ಹೋದರು, ಒಂದು ವಿಚಾರಪ್ರಿಯರ ವಲಯದಲ್ಲಿ ಸಂಚಲನ ಮೂಡಿಸುತ್ತಲೇ ಬಂದಿದ್ದಾರೆ. ಅಂತಹ ನಿರ್ದೇಶಕರ ಮೂಂಚೂಣಿಯಲ್ಲಿ ನಿಲ್ಲುವವರಲ್ಲಿ ಒಬ್ಬರು ಪಿ ಶೇಷಾದ್ರಿ. ತಮ್ಮ ಹಿಂದಿನ ಚಿತ್ರಗಳಾದ ಮುನ್ನುಡಿ, ಅತಿಥಿ, ಭಾರತ್ ಸ್ಟೋರ್ಸ್, ಡಿಸೆಂಬರ್-೧ ಮುಂತಾದವುಗಳಲ್ಲಿ ಯಾವುದಾದರೊಂದು ವಿಚಾರದ ಚರ್ಚೆಯಲ್ಲಿ ತೊಡಗಿಸಿಕೊಂಡಿರುವ ಇವರ ಇತ್ತೀಚಿನ ಚಿತ್ರ ವಿದಾಯ. ಈ ನೆಲದಲ್ಲಿ ಈ ಬಗೆಯ ಸಿನೆಮಾಗಳನ್ನು ನಿರ್ಮಿಸಬಹುದು ಎಂಬ ಕಲ್ಪನೆ ಕೂಡ ದೊಡ್ಡ ಸಾಹಸವೇ. ಹಲವಾರು ಪ್ಯಾರಲೆಲ್ ಅಥವಾ ಕಲಾತ್ಮಕ ಸಿನೆಮಾಗಳನ್ನು ನಿರ್ಮಿಸುತ್ತಲೇ ಬಂದಿರುವ ಬಸಂತ್ ಕುಮಾರ್ ಈ ಚಲನಚಿತ್ರದ ನಿರ್ಮಾಪಕರೂ ಕೂಡ.

'ಒಳ್ಳೆಯ ಸಾವು' ಎಂಬರ್ಥ ನೀಡುವ ಈ ಗ್ರೀಕ ಪದ ಯೂಥನೇಶ(Euthanasia) ಇತ್ತೀಚೆಗೆ ಬಹಳ ಚರ್ಚೆಗೆ ಒಳಪಟ್ಟ ಪದ. ಇದಕ್ಕೆ ನಮ್ಮಲ್ಲಿ ದಯಾ ಮರಣ, ಇಚ್ಚಾ ಮರಣ ಎಂಬರ್ಥದಲ್ಲಿ ಬಳಸುವುದುಂಟು. ಇದು ಮರಣ ಎಂದಾದರೂ ಯೂಥನೇಶಕ್ಕೆ ಒಳಗಾಗುವ ವ್ಯಕ್ತಿಯ ಸಾವಿಗೆ ಯಾರಾದರು ಕಾರಣಕರ್ತರು ಬೇಕು. ಅಂದರೆ ಅವರ ಸಾವನ್ನು ಯಾರಾದರು ಮೊದಲುಮಾಡಬೇಕು. ಅರುಣಾ ಶಾನಭಾಗ ಅವರು ಸುಮಾರು ೪೦ ವರ್ಷಗಳ ಹಿಂದೆ ಲೈಂಗಿಕ ಹಿಂಸೆಗೆ ಒಳಗಾಗಿದ್ದರಿಂದ ದೇಹದ ಸ್ವಾಧೀನ ಕಳೆದುಕೊಂಡು ಅಂದಿನಿಂದ ಹಾಸಿಗೆ ಹಿಡಿದು ಚಲನೆಯಿಲ್ಲದೆ ಬದುಕುತ್ತಿದ್ದರಿಂದ ಅವರ ಗೆಳತಿ ಪತ್ರಕರ್ತೆ  ಪಿಂಕಿ ವಿರಾಣಿ, ಅರುಣಾ ಅವರ ದಯಾ ಮರಣಕ್ಕಾಗಿ ಸುಪ್ರೀಮ್ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿ, ಅದು ತಿರಸ್ಕೃತಗೊಂಡು ಈ ಸಮಸ್ಯೆಯ ವ್ಯಾಪಕ ಚರ್ಚೆಗೆ ಕಾರಣಕರ್ತರಾಗಿದ್ದರು.

 'ಸಾವು' ಎಂಬ ಪದವೇ ಅತಿರೇಕ ಭಾವನೆಗಳನ್ನು ಕೆರಳಿಸುವ ವಿಷಯ. ಇನ್ನು ಕೊಲ್ಲುವುದುದಕ್ಕೆ ನಾನಾ ಆಯಾಮಗಳಿವೆ. 'ಆತ್ಮಹತ್ಯೆ' ಕೂಡ ಕಾನೂನು ಬಾಹಿರ. ದಯಾ ಮರಣ ಆತ್ಮಹತ್ಯೆ ಅಲ್ಲವಾದರೂ, ದಯಾ ಮರಣವನ್ನು ಕೇಳುವವರು ಸಂತ್ರಸ್ಥನೇ? ಅಥವಾ ಅವರನ್ನು ಸುಶ್ರೂಷೆ ಮಾಡಲಾಗದೆ ಕುಟುಂಬ ವರ್ಗವೇ? ಕುಟುಂಬ ವರ್ಗ ಇಲ್ಲವಾದಲ್ಲಿ ಅಥವಾ ದೂರವಾದಲ್ಲಿ ಇದರ ನಿರ್ಣಯ ಮಾಡುವವರು ಯಾರು? ಒಬ್ಬ ವ್ಯಕ್ತಿಯ ಸ್ಥಿತಿ ಎಷ್ಟೇ ದಯನೀಯವಾದರೂ ಅವರನ್ನು ಕೊಲ್ಲುವ ನೈತಿಕ ಹಕ್ಕು ವೈದ್ಯರಿಗಾಗಲೀ ಅಥವಾ ಮತ್ತೊಬ್ಬರಿಗಾಗಲೀ ಇದೆಯೇ? ಹೀಗೆ ದಯಾ ಮರಣಕ್ಕೆ ತಾತ್ವಿಕ, ನೈತಿಕ, ಕಾನೂನಾತ್ಮಕ ಮತ್ತು ಭಾವನಾತ್ಮಕ ಆಯಾಮಗಳಿವೆ. ಇವುಗಳಲ್ಲಿ ನಿರ್ದೇಶಕ ಈ ಇಚ್ಚಾ ಮರಣವನ್ನು ಚರ್ಚಿಸಲು ಆಯ್ದುಕೊಂಡಿರುವುದು ಭಾವನಾತ್ಮಕ ಆಯಾಮ. ಇತರ ಆಯಾಮಗಳು ಸಿನೆಮಾದಲ್ಲಿ ಆಗಾಗ ಹಾದುಹೋಗದೆ ಇರುವುದಿಲ್ಲ.

ಒಂದು ಮೇಲು ಮಧ್ಯಮ ವರ್ಗದ ಕುಟುಂಬ. ವಾಸುಕಿ (ಸುಚೇಂದ್ರ ಪ್ರಸಾದ್) ಕಾರು ಅಪಘಾತದಿಂದ ದೇಹದ ಸ್ವಾಧೀನ ಕಳೆದುಕೊಂಡು ಹಾಸಿಗೆ ಹಿಡಿದಿದ್ದಾನೆ. ಮಾತು ಕಳೆದುಕೊಂಡಿದ್ದಾನೆ. ಆದರೆ ಪ್ರಜ್ಞೆ ಜೀವಂತವಾಗಿದೆ. ಪತ್ನಿ (ಲಕ್ಷ್ಮಿ ಗೋಪಾಲಸ್ವಾಮಿ) ಮತ್ತು ಇಬ್ಬರು ಮಕ್ಕಳ ಕುಟುಂಬ. ಹಾಸಿಗೆ ಹಿಡಿದಿರುವ ವಾಸುಕಿ ತನಗೆ ಸಾವು ನೀಡಿ ಎಂದು ಪತ್ನಿ ಅಕ್ಷರಗಳನ್ನು ಹೇಳುವಾಗ ಹೂಂಗುಟ್ಟುವ ಮೂಲಕ ಸಂವಹನ ಮಾಡಿ ಮನವಿ ಮಾಡಿಕೊಳ್ಳುತ್ತಿರುತ್ತಾನೆ. ಆದರೆ ಪತ್ನಿಗೆ ಇದು ಇಷ್ಟವಿಲ್ಲ. ಬಹಳ ಪ್ರೀತಿಸುವ ತನ್ನ ಗಂಡನನ್ನು ಕಳೆದುಕೊಳ್ಳಲು ಕಿಂಚಿತ್ತೂ ಇಷ್ಟವಿಲ್ಲ. ಆದರೆ ತನ್ನ ವಕೀಲೆ ಗೆಳತಿ ಮತ್ತು ವೈದ್ಯರ ಮಾತಿನ ಮೇರೆಗೆ ಇಚ್ಚಾಮರಣ ಕೋರಿ ಕೋರ್ಟ್ ಗೆ ಅರ್ಜಿ ಸಲ್ಲಿಸುತ್ತಾಳೆ. ಅರ್ಜಿ ತಿರಸ್ಕೃತವಾಗುತ್ತದೆ. ಇದು ಮೀರಾಳಿಗೆ ಸಂತಸ ನೀಡುತ್ತದೆ. ಇದು ಕಥೆಯ ಸರಳ ತಿರುಳಾದರು ನಿರ್ದೇಶಕರು ಇದಕ್ಕೆ ಉಪಕಥೆಗಳನ್ನು ಸೇರಿಸುವುದರ ಮೂಲಕ ಸಿನೆಮಾದ ಗಂಭೀರತೆಯನ್ನು, ಸಂಕೀರ್ಣತೆಯನ್ನು ಹೆಚ್ಚಿಸಲು ಪ್ರಯತ್ನಿಸಿದ್ದಾರೆ.

ವಾಸುಕಿಯನ್ನು ಸುಶ್ರೂಷೆ ಮಾಡುವ ಯುವತಿಯೊಬ್ಬಳಿಗೆ ಕೆಲಸದ ಮೇಲೆ ಅಷ್ಟೇನೂ ಶ್ರದ್ಧೆಯಿಲ್ಲದಿರುವುದು ಬದುಕು ಕಟ್ಟಲು ಹೊರಗೆ ದುಡಿಯುವ ಮೀರಾಳಿಗೆ ಕಿರಿಕಿರಿಯನ್ನುಂಟುಮಾಡುತ್ತಿರುತ್ತದೆ. ಆದರೆ ಹೊಸ ನರ್ಸ್ ಗೆ ಹೆಚ್ಚು ದುಡ್ಡು ತೆತ್ತಲು ಹಣದ ಸಮಸ್ಯೆ ಇರುತ್ತದೆ. ವಾಸುಕಿ ಮತ್ತು ಮೀರಾಳದ್ದು ಅನ್ಯಧರ್ಮೀಯ ಮದುವೆ. ಇಚ್ಛಾ ಮರಣದ ಕುರಿತು ಟಿ ವಿ ವಾಹಿನಿಯೊಂದರ ಚರ್ಚೆಯಲ್ಲಿ ಭಾಗಿವಹಿಸುವುದನ್ನು ನೋಡುವ ಇವರ ಅತ್ತೆ (ಲಕ್ಷ್ಮಿ ಚಂದ್ರಶೇಖರ್) ಮನೆಗೆ ಬಂದು ನಮ್ಮ ಜಾತಿಯಲ್ಲಿ ಇವೆಲ್ಲ ಸಲ್ಲದು. ನಾನು ನನ್ನ ಮಗನನ್ನು ನೋಡಿಕೊಳ್ಳುತ್ತೇನೆ ಎಂದು ಸೊಸೆಯನ್ನು ಹಂಗಿಸುತ್ತಾಳೆ. ಈ ಮಧ್ಯೆ ಮೀರಾಳ ಮಗ ಯವ್ವನ ಬಿಕ್ಕಟ್ಟನ್ನು ಎದುರಿಸುತ್ತಿರುತ್ತಾನೆ. ಮೀರಾ ಸಹದ್ಯೋಗಿ ಆಗಾಗ ಭೇಟಿ ಮಾಡಿ ಮೀರಾಳ ಸಹಾಯಕ್ಕಾಗಿ ಹಣ ನೀಡುತ್ತಿರುತ್ತನೆ. ಅಲ್ಲದೆ ಮೀರಾಳಿಗೆ ಅವನು ಕರೆಗಳನ್ನು ಮಾಡುವುದು, ಸಂದೇಶಗಳನ್ನು ಕಳುಹಿಸುವುದು ಮಗನಿಗೆ ಕಿರಿಕಿರಿ ಉಂಟು ಮಾಡುತ್ತಿರುತ್ತದೆ. ಹೀಗೆ ಹಲವು ಸಮಾನಾಂತರ ಕಥೆಗಳಿಂದ ಮುಂದುವರೆಯುವ ಕಥೆ ತನ್ನ ಅತ್ತೆಯ ಮಾತಿನ ಮೇರೆಗೆ ವಾಸುಕಿಯನ್ನು ಒಂದು ಆಯುರ್ವೇದ ಚಿಕಿತ್ಸಾಲಯಕ್ಕೆ ಮೀರಾ ಕರೆದುಕೊಂಡು ಹೋಗಿ ಸುಶ್ರೂಷೆ ಮಾಡುತ್ತಾಳೆ. ಕೊನೆಯಲ್ಲಿ ಮೀರಾ ಮಲಿಗಿದ್ದಾಗ ತನ್ನ ಗಂಡ 'ಮೀರು' ಎಂದು ಕೂಗಿದಂತೆ ಭಾಸವಾಗಿ ಎದ್ದು ನೋಡಿದಾಗ ಹಾಸಿಗೆಯೆಂದ ಧೊಪ್ಪನೆ ಬಿದ್ದಿರುತ್ತಾನೆ. ಹೀಗೆ ಯಾವುದೇ ತೀರ್ಮಾನಕ್ಕೆ ಕಟಿ ಬೀಳದೆ ನಿರ್ದೇಶಕರು ಸಿನೆಮಾಗೆ ಅಂತ್ಯ ನೀಡುತ್ತಾರೆ.

ಲಕ್ಷ್ಮಿ ಗೋಪಾಲ ಸ್ವಾಮಿ ತಮ್ಮ ಚೌಕಟ್ಟಿನಲ್ಲಿ ಒಳ್ಳೆಯ ಅಭಿನಯ ನೀಡಿದ್ದರು ಅದು ಸ್ಕ್ರಿಪ್ಟ್ ನ ಕೊರತೆಯೋ ನಟನೆಯದ್ದೋ, ಸಾಮಾನ್ಯವಾಗಿ ಇಂತಹ ಸಂದರ್ಭಗಳಲ್ಲಿ ಮೂಡಬೇಕಿದ್ದ ಚಿಂತಾಕ್ರಾಂತ ಭಾವತೀವ್ರತೆ ಅಷ್ಟೇನೂ ಪರಿಣಾಮಕಾರಿಯಾಗಿ ಮೂಡಿಲ್ಲವೇನೋ ಎಂಬ ಸಂದೇಹ ಮೂಡುತ್ತದೆ. ಹಾಸಿಗೆ ಹಿಡಿದಿರುವ ಸುಚೇಂದ್ರ ಪ್ರಸಾದ್ ಚೊಕ್ಕವಾದ ನಟನೆ ನೀಡಿದ್ದಾರೆ. ಮನೆಯಲ್ಲಿನ ಪ್ರಮುಖ ವ್ಯಕ್ತಿಯೊಬ್ಬ ಚಲನೆಯಿಲ್ಲದೆ ಮಲಗಿರುವಾಗ, ಮನೆಯಲ್ಲಿ ಮೂಡಬಹುದಾದ ಉದ್ವೇಗ, ಸಮಸ್ಯೆಗಳು ಇನ್ನಷ್ಟು ಪರಿಣಾಮಕಾರಿಯಾಗಿ ಮೂಡಿಬರಬಹುದಿತ್ತು. ಮೇಲು ಮಧ್ಯಮ ವರ್ಗದ ಕುಟುಂಬವಾದರು ಇಂತಹ ಸ್ಥಿತಿಯಲ್ಲಿ ಬದುಕು ಕಟ್ಟಿಕೊಳ್ಳುವುದು ದುಸ್ತರವೇ. ಮಕ್ಕಳಿಬ್ಬರು ಇಂತಹ ಸಂದರ್ಭದಲ್ಲೂ ಯಾವುದೇ ಕ್ಷಣ ವಿಚಲಿತರಾದಂತೆ ಕಂಡುಬರುವುದಿಲ್ಲ. ಆ ಒಂದು ತೀವ್ರತೆ ಕಾಣೆಯಾದಂತೆ ಪ್ರೇಕ್ಷನಿಗೆ ಅನ್ನಿಸದಿರದು.

ಸಮಾನಾಂತರವಾಗಿ ನಡೆಯುವ ಹಲವು ಕಥೆಗಳು ಸಂಕೀರ್ಣತೆಯನ್ನು ಹೆಚ್ಚಿಸಿದರು, ಮೂಲ ಪ್ರಶ್ನೆಯ-ಕಥೆಯ-ಸಮಸ್ಯೆಯ ತೀವ್ರತೆಯನ್ನು ತಿಳಿಗೊಳಿಸುವ ಅಪಾಯ ಎದ್ದು ಕಾಣುತ್ತದೆ. ಅನ್ಯಧರ್ಮದ ಮದುವೆಯಾಗಲಿ, ಮಾಧ್ಯಮದ ಜನ ಸಂತ್ರಸ್ತನ ಮನೆಯ ಮುಂದೆ ನಡೆಸುವ ಗಲಾಟೆಗಳಾಗಳಿ, ನರ್ಸ್ ಸರಿಯಾಗಿ ಕೆಲಸ ಮಾಡದಿರುವುದಾಗಲಿ, ಮಗನ ಯವ್ವನ ಬಿಕ್ಕಟ್ಟಾಗಲಿ ಮೂಲ ಸಮಸ್ಯೆಯಾದ ಮನೆಯ ಪ್ರೀತಿಪಾತ್ರದ ವ್ಯಕ್ತಿಯೊಬ್ಬ ಚಲನಹೀನನಾಗಿ ಮಲಗಿದಾಗ ಸೃಷ್ಟಿಸುವ ಕೌಟುಂಬಿಕ ಬಿಕ್ಕಟ್ಟಿನ ತೀವ್ರತೆಯನ್ನು ಮರೆಮಾಚುವ ಆತಂಕವಿರುತ್ತದೆ. ಸದಾ ನಗುತ್ತಲೇ ಇರುವ ಡಾಕ್ಟರ್ ಪಾತ್ರ, ಮೀರಾಳ ಸಹೋದ್ಯೋಗಿಯ ಪಾತ್ರ ಕೂಡ ಅಷ್ಟು ಮನಮುಟ್ಟುವುದಿಲ್ಲ. ಈ ಸಮಾನಾಂತರ ಸಮಸ್ಯೆಗಳನ್ನು ಸ್ವಲ್ಪ ಕಡೆಗಣಿಸಿ ಮೂಲ ಸಮಸ್ಯೆಯ ಸುತ್ತಲೇ ನಿರ್ದೇಶಕರು ಸುತ್ತಿದ್ದರೆ ಚಿತ್ರ ಇನ್ನಷ್ಟು ಪರಿಣಾಮಕಾರಿಯಾಗಿರುತ್ತಿತ್ತೇನೋ!

ಆಯುರ್ವೇದ ಚಿಕಿತ್ಸಧಾಮದಲ್ಲಿ ಕಾಣಿಸಿಕೊಳ್ಳುವ ನಟ ದತ್ತಾತ್ರೇಯ ಅವರ ಪಾತ್ರ ಚಿಕ್ಕದಾದರೂ ಎಂದಿನಂತೆ ಚೆನ್ನಾಗಿ ಮೂಡಿ ಬಂದಿದೆ. ಛಾಯಾಗ್ರಹಣ ಮತ್ತು ಹಿನ್ನಲೆ ಸಂಗೀತ ಪೂರಕವಾಗಿದ್ದು ಒಟ್ಟಾರೆ ನಿರ್ದೇಶಕರು ಜ್ವಲಂತ ಸಮಸ್ಯೆಯೊಂದರ ಬಗ್ಗೆ ಪ್ರೇಕ್ಷಕರನ್ನು ಚಿಂತನೆಗೆ ಹಚ್ಚುವಲ್ಲಿ ಸಫಲರಾಗಿದ್ದಾರೆ.

ಗುರುಪ್ರಸಾದ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com