ಸಿನಿಮೋತ್ಸವದಲ್ಲಿ ವಿವಿಧ ನಿರ್ದೇಶಕರೊಂದಿಗೆ ಮಾತುಕತೆ

೮ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ 15 ಮಂದಿ ಸ್ವತಂತ್ರ ಸಿನಿಮಾ ನಿರ್ದೇಶಕರ ಜೊತೆಗೆ ಸಂವಾದ ಗೋಷ್ಠಿ ಏರ್ಪಡಿಸಲಾಗಿತ್ತು.
ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ 'ಅದ್ವೈತ್ ಸಂಗೀತ್' ಸಾಕ್ಷ್ಯಚಿತ್ರದ ಸ್ಟಿಲ್
ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ 'ಅದ್ವೈತ್ ಸಂಗೀತ್' ಸಾಕ್ಷ್ಯಚಿತ್ರದ ಸ್ಟಿಲ್

ಬೆಂಗಳೂರು: ೮ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ 15 ಮಂದಿ ಸ್ವತಂತ್ರ ಸಿನಿಮಾ ನಿರ್ದೇಶಕರ ಜೊತೆಗೆ ಸಂವಾದ ಗೋಷ್ಠಿ ಏರ್ಪಡಿಸಲಾಗಿತ್ತು.

ಸಿನಿಮಾ ನಿರ್ದೇಶಿಸುವವರಿಗೆ ಸಿನೆಮಾದ ಬಗ್ಗೆ ಉತ್ಕಟ ಪ್ರೀತಿ ಮುಖ್ಯ ಬಜೆಟ್‍ನ ಪ್ರಶ್ನೆ ನಗಣ್ಯವಾಗಬೇಕು. ಸಿನಿಮಾದ ಬಗ್ಗೆ ಆಳವಾದ ಆಸಕ್ತಿ ಇದ್ದವರು ಸಿನಿಮಾ ನಿರ್ಮಿಸಲು ಮುಂದಾಗಬಹುದು ಎಂಬ ಒಕ್ಕೊರಲಿನ ಧ್ವನಿ ಸಿನಿಮೋತ್ಸವದಲ್ಲಿ ಮಂಗಳವಾರ ಕೇಳಿಬಂತು.

ಕನ್ನಡ ನಿರ್ದೇಶಕ ದಯಾಳ್ ಪದ್ಮನಾಭನ್ ಮಾತನಾಡಿ "ಸಿನಿಮಾ ಮಾಡಲು ಇಚ್ಛಿಸುವವರು ತಮ್ಮ ಬಜೆಟ್ಟನ್ನು ಪೂರ್ವವಾಗಿಯೇ ನಿರ್ಧರಿಸಿಕೊಳ್ಳುವುದು ಒಳ್ಳೆಯದು. ಏಕೆಂದರೆ ಹೆಚ್ಚಿನ ಬಾರಿ ಹಲವಾರು ರಾಜಿಗಳನ್ನು ಮಾಡಿಕೊಂಡು ಸಿನೆಮಾಗಳನ್ನು ಮಾಡಬೇಕಾಗುತ್ತದೆ" ಎಂದರು.

ಈ ನಿಲುವಿಗೆ ಇತರ ನಿರ್ದೇಶಕರು ಕೂಡ ದನಿಗೂಡಿಸಿದರು.

ದಯಾಳ್ ನಿರ್ದೇಶನದ ಎರಡು ಚಿತ್ರಗಳು `ಹಗ್ಗದ ಕೊನೆ' ಮತ್ತು `ಸ್ಟಾರ್' ಈ ಸಿನಿಮೋತ್ಸವದಲ್ಲಿ ಭಾರತೀಯ ವಿಭಾಗದಲ್ಲಿ ಸ್ಪರ್ಧಿಸಿ ಪ್ರದರ್ಶನಗೊಳ್ಳುತ್ತಿರುವುದು ವಿಶೇಷ.

ಸಂವಾದದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ನಿರ್ದೇಶಕ ಅಮತ್ರ್ಯ ಭಟ್ಟಾಚಾರ್ಯ "ಭಾರತೀಯ ಸಿನಿಮಾವನ್ನು ಯಾವುದೋ ಒಂದು ಪ್ರಾಕಾರಕ್ಕೆ ಸೀಮಿತಗೊಳಿಸುವುದು ತಪ್ಪು. ಇಂದಿನ ಘಟ್ಟದಲ್ಲಿ ಸಿನಿಮಾಗಳಲ್ಲಿ ಕಲೆಗೆ ನೀಡುವ ಮಹತ್ವ ಕಡಿಮೆಯಾಗಿ, ಬೇರೆ ಬೇರೆ ಅಂಶಗಳು ಪ್ರಾಮುಖ್ಯತೆ ಪಡೆದಿವೆ. ಆದರೆ ಸ್ವತಂತ್ರ ಚಿತ್ರ ನಿರ್ಮಾಪಕರು-ನಿರ್ದೇಶಕರಿಗೆ ಕಲಾತ್ಮಕತೆಯತ್ತ ಗಮನ ಹರಿಸಿ, ಹೊಸ ಪ್ರೇಕ್ಷಕರನ್ನು ಸೃಷ್ಟಿಸುವ ಹೊಣೆಗಾರಿಕೆ ಇದೆ" ಎಂದರು.

ಪ್ರಖ್ಯಾತ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಗಾಯಕಾರದ ಸಾಜನ್ ಮಿಶ್ರ ಮತ್ತು ರಾಜನ್ ಮಿಶ್ರಾ ಅವರನ್ನು ಕುರಿತು `ಅದ್ವೈತ ಸಂಗೀತ' ಎನ್ನುವ ಸಾಕ್ಷ್ಯಚಿತ್ರದ ನಿರ್ದೇಶಕ  ಮಕರಂದ್ ಬ್ರಹ್ಮ "ಪ್ರಖ್ಯಾತ ಮೇರು ಕಲಾವಿದರ ಆಲೋಚನೆಗಳು ಮತ್ತು ತಾತ್ವಿಕ ಆಯಾಮಗಳು ನನ್ನನ್ನು ಕಾಡಿವೆ. ಈಗ ಉಸ್ತಾದ್ ಅಮ್ಜದ್ ಅಲಿ ಖಾನ್ ಮತ್ತು ಹಿಂದೂಸ್ತಾನಿ ಸಂಗೀತದ ಠುಮ್ರಿಗಳ ಬಗ್ಗೆ ನೂತನ ಸಿನಿಮಾ ಮಾಡಲು ಸಿದ್ಧತೆ  ನಡೆಸುತ್ತಿದ್ದೇನೆ" ಎಂದರು.

ಮತ್ತೊಬ್ಬ ನಿರ್ದೇಶಕ ಅಶೋಕ್ ರಾಣೆ ಮಾತನಾಡಿ "ನಾನು ಮೊದಲಿನಿಂದಲೂ ಹಿಂದಿ ಚಿತ್ರರಂಗದ ಸಂಗೀತ ದಿಗ್ಗಜರನ್ನು ಕುರಿತು ಸಿನಿಮಾ ಮಾಡುತ್ತಲೇ ಬಂದಿದ್ದೇನೆ. ಮುಂದೆಯೂ ಇಂತಹ ಪ್ರಯೋಗಗಳನ್ನು ನಡೆಸುತ್ತೇನೆ" ಎಂದರು.

ಈ ಸಂವಾದ ಗೋಷ್ಠಿಯಲ್ಲಿ ತಮಿಳಿನ ಮಣಿಕಂಠನ್, ಬಂಗಾಳಿಯ ಶೌನಕ್ ಸೇನ್, ಪ್ರಸೇನ್‍ಜಿತ್ ಚೌಧರಿ ಮುಂತಾದವರು ಭಾಗಿಯಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com