'ತಿಥಿ' ನಿರ್ದೇಶಕ ರಾಮ್ ರೆಡ್ಡಿ ಅವರೊಂದಿಗೆ ಸಂದರ್ಶನ; ಭಾಗ-೧

'ತಿಥಿ' ಪದ ಎಂತಹ ಸಂಭ್ರಮ ಸೃಷ್ಟಿಸಿದೆ ಎಂಬುದನ್ನು ತಿಳಿಯಲು ನೀವು ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ಬರಬೇಕು. ಸಿನೆಮಾ ನೋಡಲು ಅವಕಾಶ ಸಿಕ್ಕವರು 'ತಿಥಿ'ಯ
'ತಿಥಿ' ನಿರ್ದೇಶಕ ರಾಮ್ ರೆಡ್ಡಿ
'ತಿಥಿ' ನಿರ್ದೇಶಕ ರಾಮ್ ರೆಡ್ಡಿ
'ತಿಥಿ' ಪದ ಎಂತಹ ಸಂಭ್ರಮ ಸೃಷ್ಟಿಸಿದೆ ಎಂಬುದನ್ನು ತಿಳಿಯಲು ನೀವು ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ಬರಬೇಕು. ಸಿನೆಮಾ ನೋಡಲು ಅವಕಾಶ ಸಿಕ್ಕವರು 'ತಿಥಿ'ಯ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಲೋ, ಅದರ ನಿರ್ದೇಶಕ ರಾಮರೆಡ್ಡಿ ಮತ್ತು ಸಿನೆಮಾಗೆ ಕಥೆ ಬರೆದ ಈರೆಗೌಡ ಅವರಿಗೆ ಅಭಿನಂದಿಸುತ್ತಲೇ, ಅವರ ಜೊತೆಗೆ ಫೋಟೋ ತೆಗೆಸಿಕೊಳ್ಳುತ್ತಲೋ ಸಂತಸದಲ್ಲಿದ್ದರೆ, ಪ್ರದರ್ಶನದಿಂದ ವಂಚಿತರಾದವರು ಆಯೋಜಕರನ್ನು ದೂಷಿಸುತ್ತಲೂ ಮತ್ತೆ ಕೆಲವೊಮ್ಮ 'ತಿಥಿ'ಯ ಹೆಚ್ಚು ಪ್ರದರ್ಶನಗಳನ್ನು ಏರ್ಪಡಿಸಲು ದುಂಬಾಲು ಬೀಳುತ್ತಿದ್ದುದು ಸಿನೆಮೋತ್ಸವದಲ್ಲಿ ಸಾಮಾನ್ಯ ದೃಶ್ಯವಾಗಿತ್ತು. ಹೌದು 'ತಿಥಿ' ಸಿನೆಮಾ ೮ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಅತಿ ಹೆಚ್ಚು ಬೇಡಿಕೆಯಿದ್ದ, ಅತಿ ಹೆಚ್ಚು ಚರ್ಚಿತವಾದ ಸಿನೆಮಾ ಎಂದರೆ ಉತ್ಪ್ರೇಕ್ಷೆಯಲ್ಲ. ಇದರ ನಿರ್ದೇಶಕ ೨೫ ವರ್ಷದ ರಾಮ್ ರೆಡ್ಡಿ ಮತ್ತು ಕಥೆಗಾರ ಈರೆಗೌಡ ಸಿನೆಮೋತ್ಸವದಲ್ಲಿ ಅತ್ತಿತ್ತ ಚುರುಕಾಗಿ ಓಡಾಡಿಕೊಂಡು, ವಿಶ್ವ ಸಿನೆಮಾಗಳನ್ನು ಆಸಕ್ತಿಯಿಂದ ನೋಡಿಕೊಂಡು, ಪ್ರೇಕ್ಷಕರ-ಸಹ ನಿರ್ದೇಶಕರ ಜತೆ ಚರ್ಚಿಸುತ್ತಾ ಲವಲವಿಕೆಯಿಂದ ಓಡಾಡುತ್ತಿದ್ದಾಗ ಮಾತಿಗೆ ಕರೆದಾಗ ತಟ್ಟನೆ ಒಪ್ಪಿಕೊಂಡರು. ಈ ಮಾತುಕತೆಯ ಮೊದಲ ಭಾಗ ಇಲ್ಲಿದೆ. 
* ಹಲವಾರು ಅಂತಾರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಭಾಗವಹಿಸಿ, ತವರಿಗೆ ಬಂದಿದ್ದೀರ. ಈ ಸಿನಿಮೋತ್ಸವದ ವಾತಾವರಣ ಹೇಗಿದೆ? ನಿಮ್ಮ ಅನುಭವ ಹೇಗಿದೆ?
ರಾಮ್ ರೆಡ್ಡಿ: ಇದು ಅತ್ಯುತ್ತಮ ಅನುಭವ. ಮೊದಲಿಗೆ ಸಿನಿಮೋತ್ಸವದ ಆಯೋಜಕರಿಗೆ, ಸಿನೆಮಾಗಳನ್ನು ಆಯ್ಕೆ ಮಾಡಿದ ಸಮಿತಿಗೆ ಮತ್ತು ಉತ್ಸವದ ಕಲಾತ್ಮಕ ನಿರ್ದೇಶಕರಿಗೆ  ನನ್ನ ಹೃತ್ಪೂರ್ವಕ ಅಭಿನಂದನೆಗಳು. ಬಹುತೇಕ ಎಲ್ಲ ಅತ್ಯುತ್ತಮ ವಿಶ್ವ ಸಿನೆಮಾಗಳನ್ನು ಬೆಂಗಳೂರಿಗೆ ತಂದಿದ್ದಾರೆ. ನಾಳೆ ಬುಧವಾರ ನಾನು ನಾಲ್ಕು ಸಿನೆಮಾಗಳನ್ನು ನೋಡುತ್ತಿದ್ದೇನೆ. ಇದು ವೈಯಕ್ತಿಕವಾಗಿ ಸ್ಫೂರ್ತಿದಾಯಕ ಅನುಭವ ಏಕೆಂದರೆ ವಿಶ್ವದ ಅತ್ಯುತ್ತಮ ಸಿನೆಮಾಗಳನ್ನು ಇಲ್ಲಿ ನೋಡಲು ಸಿಕ್ಕಿವೆ. 
* ನೀವು ಭಾಗವಹಿಸಿದ ಇತರ ಉತ್ಸವಗಳಲ್ಲಿ ಕೂಡ 'ತಿಥಿ' ಪ್ರದರ್ಶನಗೊಂಡಿದೆ. ಈಗ ಭಾರತದಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಅದೂ ಕನ್ನಡದ ಪ್ರದೇಶದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಈ ಅನುಭವದ ಬಗ್ಗೆ? ಅದಕ್ಕೆ ಜನರ ಪ್ರತಿಕ್ರಿಯೆಯ ಬಗ್ಗೆ?
ರಾಮ್ ರೆಡ್ಡಿ: ಈ ಸಿನೆಮೋತ್ಸವದ ಅತ್ಯುತ್ತಮ ಅಂಶ ಎಂದರೆ ಎಲ್ಲ ಸಿನೆಮಾಗಳು ಒಂದೇ  ಜಾಗದಲ್ಲಿ ಜರುಗುತ್ತಿರುವುದು. ಒಂದು ಸಿನೆಮೋತ್ಸವನ್ನು ನಡೆಸುವ ಸರಿಯಾದ ಮಾರ್ಗ ಇದು. ಆದುದರಿಂದ ಇಡಿ ವಾತಾವರಣ ಸಂಚಲನ ಮೂಡಿಸುತ್ತದೆ. 
'ತಿಥಿ'ಗೆ ಬಂದ ಪ್ರತಿಕ್ರಿಯೆಗಳ ಬಗ್ಗೆ ಹೇಳುವುದಾದರೆ ಅದು ಪ್ರದರ್ಶನಗೊಂಡ ಕಡೆಗಳಲ್ಲೆಲ್ಲಾ ಅದ್ಭುತ ಪ್ರತಿಕ್ರಿಯೆಯೇ ಬಂದಿದೆ. ಇಲ್ಲಿ ಜನಕ್ಕೆ ಕನ್ನಡ ಗೊತ್ತಿರುವುದರಿಂದ ಸಿನೆಮಾ ಜೊತೆಗೆ ಸುಲಭವಾಗಿ ಕನೆಕ್ಟ್ ಮಾಡಿಕೊಳ್ಳಲು ಸಾಧ್ಯವಾಯಿತು. ಮತ್ತು ಈರೆಗೌಡ ಬರೆದಿರುವ ಎಲ್ಲ ಸಂಭಾಷಣೆಗಳು ಮತ್ತು ಸಿನೆಮಾದಲ್ಲಿನ ಸೂಕ್ಷ್ಮತೆಗಳನ್ನು ಜನಕ್ಕೆ ಸಂಭ್ರಮಿಸಲು ಸಾಧ್ಯವಾಯಿತು. ಇದು ಒಳಗಿನವರೆ ಸಿನೆಮಾ ನೋಡಿದಂತೆ. ಅದರಲ್ಲು ಸಿನೆಮಾ ಮಂಡ್ಯ ಜಿಲ್ಲೆಯ ಹಳ್ಳಿಯೊಂದರ ಕಥೆಯಾಗಿರುವುದರಿಂದ ಆ ಜಿಲ್ಲೆಯ ಜನ ವೀಕ್ಷಿಸಿದಾಗ ಸಿನೆಮಾದಲ್ಲಿನ ಹಾಸ್ಯ, ಜನ ಅಲ್ಲಿ ಮಾತನಾಡುವ ರೀತಿ ಇವೆಲ್ಲದರ ಜೊತೆ ರಿಲೇಟ್ ಮಾಡಿಕೊಳ್ಳಲು ಸಾಧ್ಯವಾಯಿತು. ನಾವು ಹಾಸ್ಯ ಸಿನೆಮಾ ಮಾಡಬೇಕೆಂದು ಮಾಡಿದ್ದಲ್ಲ. ಆದರೆ ಈ ಸಿನೆಮಾ ನೋಡಿ ಜನ ಸಂಭ್ರಮಿಸುತ್ತಿರುವುದು ನಗುತ್ತಿರುವುದು ನಮಗೆ ಬೋನಸ್. ಸಿನೆಮಾದ ಪ್ರಾರಂಭಿಕ ದೃಶ್ಯಕ್ಕೆ ಜನ ನಗುತ್ತಿದ್ದ ರೀತಿ ಇಡೀ ಸಿನೆಮಾಗೆ ಒಂದು ರೀತಿಯ ಮೂಡ್-ಟೋನ್ ಸೃಷ್ಟಿಸುತ್ತಿತ್ತು. ಈಗ ಥಿಯೇಟರ್ ಗಳಲ್ಲಿ ಇದನ್ನು ಬಿಡುಗಡೆ ಮಾಡುವುದಕ್ಕೆ ಎದುರು ನೋಡುತ್ತಿದ್ದೇನೆ. ಇದನ್ನು ಜಾಗತಿಕ ಸಿನೆಮಾವಾಗಿ ಬಿಡುಗಡೆ ಮಾಡಲು ನೋಡುತ್ತಿದ್ದೇವೆ. ಏಕೆಂದರೆ ಇಲ್ಲಿನ ಪಾತ್ರಗಳನ್ನು ಎಲ್ಲರೂ ತಮ್ಮದಾಗಿಸಿಕೊಳ್ಳಬಲ್ಲರು ಮತ್ತು ಅವುಗಳಿಂದ ಸಂತಸಪಡಬಲ್ಲರು. 
* ನೀವು ಹುಟ್ಟಿಬೆಳೆದಿದ್ದೆಲ್ಲಾ ನಗರಪ್ರದೇಶದಲ್ಲಿಯೇ. ನಿಮಗೆ ಮಂಡ್ಯ ಜಿಲ್ಲೆಯ ಹಳ್ಳಿಯೊಂದರ ಕಥೆ ಹೇಳಬೇಕೆನಿಸಿದ್ದು ಏಕೆ? ನಿಮ್ಮ ವೈಯಕ್ತಿಕ ತಾತ್ವಿಕತೆಯಲ್ಲಿ ಆದ ಬದಲಾವಣೆಯೇ ಇದು?
ರಾಮ್ ರೆಡ್ಡಿ: ಇಲ್ಲ. ಇದು ನಡೆದಿದ್ದಕ್ಕೆ ಕೇಂದ್ರ ಕಾರಣ ನನ್ನ ಮತ್ತು ಕಥೆ-ಸ್ಕ್ರಿಪ್ಟ್ ಬರೆದ ನನ್ನ ಗೆಳೆಯ ಈರೇಗೌಡರ ಗೆಳೆತನ. ಈ ಯೋಜನೆ ಸೃಷ್ಟಿಸುವಾಗ ನಮ್ಮ ಯೋಚನಾ ಲಹರಿಯಲ್ಲಿ ಅದ್ಭುತ ಹೊಂದಾಣಿಕೆಯಿತ್ತು. ನಮ್ಮ ಮನಸ್ಸುಗಳನ್ನು ಹೊಂದಾಣಿಕೆ ಮಾಡಿಕೊಂಡು, ಒಮ್ಮತವಾದ ಮನಸ್ಸಿನಿಂದ ಈ ಯೋಜನೆಯನ್ನು ಮುಂದುವರೆಸಲು ಸಾಧ್ಯವಾಗಿತ್ತು. ನಾನು ನಗರ ಪ್ರದೇಶಗಳಿಂದ ಬಂದ ಹೊರಗಿನವ, ಅವರು ಅಲ್ಲಿನ ಪ್ರದೇಶಕ್ಕೆ ಒಳಗಿನವರು. ಅವರಿಗೂ ಕೂಡ ನಗರ ಪ್ರದೇಶದ ಅನುಭವವಿದೆ ನಾನೂ ಅಲ್ಲಿದ್ದು ಹಳ್ಳಿಯ ಜೀವನವನ್ನು ಅನುಭವಿಸಿದ್ದೇನೆ. ಇವೆರಡು ಒಟ್ಟಿಗೆ ಬಂದು ಆ ಒಮ್ಮತ ಮನಸ್ಸು ಈ ಕಥೆಯ ಸೃಷ್ಟಿಗೆ ಕಾರಣವಾಯಿತು. 
ಅಲ್ಲದೆ ಈ ಯೋಜನೆ ನೆರವೇರುವುದಕ್ಕೆ ಮತ್ತೊಂದು ಕಾರಣ ನಮಗಿದ್ದ ಪ್ಯಾಶನ್. ಅದೇನೆಂದರೆ ಈ ಕಥೆಯನ್ನು ವೃತ್ತಿಪರರಲ್ಲದವರ ಜೊತೆಗೂಡಿ ಹೇಳಬೇಕೆಂಬ ಉತ್ಕಟತೆ. ನಾಲ್ಕೈದು ವರ್ಷಗಳ ಹಿಂದೆ ಈ ಕೆಲಸ ಪ್ರರಾಂಭಿಸಿದಾಗ ಹೆಚ್ಚಿನ ಸಿದ್ಧತೆಯನ್ನೇನೂ ಮಾಡಿಕೊಂಡಿರಲಿಲ್ಲ. ನಮ್ಮ ದೇಶದಲ್ಲಿ ಹಲವಾರು ಸಿನೆಮಾ ಕಥೆಗಳಿವೆ ಆದರೆ ಅವುಗಳನ್ನು ವೈಭವೀಕರಿಸಿದ ವಾಣಿಜ್ಯಾತ್ಮಕ ದೃಷ್ಟಿಯಲ್ಲೇ ಹೇಳುವ ಅವಶ್ಯಕತೆ ಇಲ್ಲ. ಅಲ್ಲದೆ ನಮ್ಮ ದೇಶ ಬಹುತೇಕ ಗ್ರಾಮೀಣ ಪ್ರದೇಶಗಳಿಂದ ಕೂಡಿದ್ದು ಅಲ್ಲಿನ ಕಥೆಗಳು ಸಿನೆಮಾಗಳಲ್ಲಿ ಹೆಚ್ಚು ಪ್ರತಿಫಲನವಾಗಿಲ್ಲ. ಆದುದರಿಂದ ಆ ಹಿನ್ನಲೆಯಲ್ಲಿ ಏನಾದರೂ ಅಥೆಂಟಿಕ್ ಆಗಿ ಸೃಷ್ಟಿಸಬೇಕು ಎಂಬ ತುಡಿತವೂ ಇದನ್ನು ಸಾಧ್ಯವಾಯಿತು.  
ದೆಹಲಿಯ ಸೇಂಟ್ ಸ್ಟೀಫನ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ಅಧ್ಯಯನ ಮಾಡುತ್ತಿದ್ದ ರಾಮ್ ರೆಡ್ಡಿ ಒಂದು ವರ್ಷದ ನಂತರ ಅದರ ಬಗ್ಗೆ ಆಸಕ್ತಿ ಕಳೆದುಕೊಂಡರಂತೆ. ಹಾಗಾಗಿ ಅರ್ಥಶಾಸ್ತ್ರ ಅಭಿವೃದ್ಧಿ ಇತ್ಯಾದಿ ಉಪನ್ಯಾಸಗಳ ವೇಳೆಯಲ್ಲಿ ಹಿಂದಿನ ಬೆಂಚುಗಳಲ್ಲಿ ಕೂತು ಕವನ ಮತ್ತು ಕಾದಂಬರಿಗಳನ್ನು ಬರೆಯುತ್ತಿದ್ದರಂತೆ. ಹಾಗೆ ಬರೆದು ಒಂದು ಕಾದಂಬರಿ "ಇಟ್ಸ್ ರೈನಿಂಗ್ ಇನ್ ಮಾಯಾ" ಕೂಡ ಸ್ವ-ಪ್ರಕಟನೆ ಮಾಡಿದ್ದು ಉಂಟು. ಹೀಗೆ ತಮ್ಮ ಸಿನೆಮಾ ಬರವಣಿಗೆಗೆ ಮಟ್ಟಿಲಾದದ್ದು ಈ ಹಿಂದಿನ ಬರವಣಿಗೆಗಳು.
* ನಿಮ್ಮ ಬರವಣಿಗೆ ಬಗ್ಗೆ ಸ್ವಲ್ಪ ತಿಳಿಸಿ.
ರಾಮ್ ರೆಡ್ಡಿ: ಒಂದು ಕಾದಂಬರಿಯಷ್ಟೇ ಬರೆದದ್ದು. ಹಲವಾರು ಕವನಗಳನ್ನು ಬರೆದಿದ್ದೇನೆ. ಕಾದಂಬರಿಯನ್ನು ಸ್ವಂತ ಪ್ರಕಟಣೆ ಮಾಡಿದೆ. ನಂತರ ಸಿನೆಮಾ ಮಾಡುವುದಕ್ಕೆ ಇಳಿದೆ. ಅದು ಬರೆದ ಸಂದರ್ಭ ನಾನು ಜೀವನದಲ್ಲಿ ಅತಿ ಹೆಚ್ಚು ಸೃಜನಶೀಲವಾಗಿದ್ದ ಕ್ರಿಯಾಶೀಲವಾಗಿದ್ದ ಸಮಯ. ಅದು ನನಗೆ ಹೆಚ್ಚು ಸೃಜನಶೀಲತೆ ತಂದುಕೊಟ್ಟಿದ್ದು. ಬಹುಷಃ ಇನ್ನು ಮುಂದೆ ಆ ಕಾಂದಬರಿಯನ್ನು ಜನ ಓದಬಹುದೇನೋ. 
[ಮುಂದಿನ ಭಾಗದಲ್ಲಿ: ಸಿನೆಮಾ ಮತ್ತು ರಾಜಕೀಯ, ಸಿನೆಮಾ ಮತ್ತು ಶಬ್ದದ ಬಗ್ಗೆ ರಾಮ್ ರೆಡ್ಡಿ ಅವರ ಮಾತುಗಳು ಹಾಗೂ ಕಥಾ ಸೃಷ್ಟಿಯ ಬಗ್ಗೆ ಕಥೆಗಾರ ಈರೆಗೌಡ ಅವರ ಮಾತುಗಳು]
ಸಂದರ್ಶನ: ಗುರುಪ್ರಸಾದ್ 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com