ಸಿನೆಮಾಗಳಲ್ಲಿ ಹಿಂಸೆ-ಕ್ರೌರ್ಯಕ್ಕೆ ಕಡಿವಾಣ ಹಾಕಿ; ಸಿನಿಮೋತ್ಸವದಲ್ಲಿ ಸಿಎಂ ಪಾಠ

ಎಂಟನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವನ್ನು ಇಂದು ಬಾಲಿವುಡ್ ನ ಹಿರಿಯ ನಟಿ ಜಯಾ ಬಚ್ಚನ್ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಸಿನೆಮಾರಂಗಕ್ಕೆ ಮುಖ್ಯಮಂತ್ರಿ
ಎಂಟನೇ ಅಂತರಾಷ್ಟ್ರೀಯ ಸಿನಿಮೋತ್ಸವನ್ನು ಉದ್ಘಾಟಿಸಿದ ಬಾಲಿವುಡ್ ನ ಹಿರಿಯ ನಟಿ ಜಯಾ ಬಚ್ಚನ್
ಎಂಟನೇ ಅಂತರಾಷ್ಟ್ರೀಯ ಸಿನಿಮೋತ್ಸವನ್ನು ಉದ್ಘಾಟಿಸಿದ ಬಾಲಿವುಡ್ ನ ಹಿರಿಯ ನಟಿ ಜಯಾ ಬಚ್ಚನ್

ಬೆಂಗಳೂರು: ಎಂಟನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವನ್ನು ಇಂದು ಬಾಲಿವುಡ್ ನ ಹಿರಿಯ ನಟಿ ಜಯಾ ಬಚ್ಚನ್ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಸಿನೆಮಾರಂಗಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡುತ್ತಿರುವ ಸಹಕಾರವನ್ನು ಶ್ಲಾಘಿಸಿದ್ದಲ್ಲದೆ, "ಚಿತ್ರ ನಿರ್ಮಾಪಕ, ನಿರ್ದೇಶಕರಿಗೆ ಮತ್ತು ನಟರಿಗೆ ಮುಕ್ತ ವಾತಾವರಣದಲ್ಲಿ ಕೆಲಸ ಮಾಡಲು ಅವಕಾಶ ನೀಡಬೇಕು. ಅವರ ಕೆಲಸದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು. ಆಗಷ್ಟೇ ಅತ್ಯುತ್ತಮ ಚಿತ್ರಗಳು ಮೂಡಿಬರಲು ಸಾಧ್ಯ" ಎಂದರು.

"ನಮ್ಮ ಕುಟುಂಬ ಬೆಂಗಳೂರಿಗೆ ಬಂದಾಗಲೆಲ್ಲಾ ಒಂದು ಅಪಶಕುನ ಕಾದಿರುತ್ತದೆ. ಹಿಂದೆ 'ವಿಶ್ವಸುಂದರಿ' ಸ್ಪರ್ಧೆ ನಡೆದಾಗಲೂ ವಿವಾದಗಳು ಎದ್ದಿದ್ದವು. ಈಗ ಈ ಅಪಶಕುನವನ್ನು ಕೊನೆಗಾಣಿಸುತ್ತಿದ್ದೇನೆ. ಬೆಂಗಳೂರಿಗೆ ಹೋಗಿ ಸಿನೆಮಾ ಮಾಡುವಂತೆ ನನ್ನ ಪತಿಗೆ (ಅಮಿತಾಬ್ ಬಚ್ಚನ್) ತಿಳಿಸುತ್ತೇನೆ" ಎಂದು ಕೂಡ ಜಯಾ ಬಚ್ಚನ್ ಹೇಳಿದರು.

ಇದಕ್ಕೂ ಮೊದಲು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ರೋಶನ್ ಬೇಗ್ ಮಾತನಾಡಿ ಸಿನಿಮೋತ್ಸವಕ್ಕೆ ಒಂದು ಖಾಯಂ ಪ್ರದೇಶವನ್ನು ಅಭಿವೃದ್ಧಿ ಪಡಿಸುವುದಾಗಿ ಪುನರುಚ್ಛಿಸಿದರು.

ರಾಜ್ಯದಲ್ಲಿ ಚಲನಚಿತ್ರೋತ್ಸವಗಳನ್ನು ನಡೆಸಲು ಪ್ರತ್ಯೇಕ ನಿರ್ದೇಶನಾಲಯ ವ್ಯವಸ್ಥೆ ಮಾಡಿಕೊಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು, ಅದು ಸಾಧ್ಯವಾದಲ್ಲಿ ಬೆಂಗಳೂರು ಸಿನಿಮೋತ್ಸವವನ್ನು 'ಕಾನ್ ಅಂತರಾಷ್ಟ್ರೀಯ ಸಿನಿಮೋತ್ಸವದ' ಖ್ಯಾತಿಗೆ ಕೊಂಡೊಯ್ಯುವ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಮತ್ತು ಭಾರತೀಯ ಮೂಲದ ಹಾಲಿವುಡ್ ನಿರ್ಮಾಪಕ ಅಶೋಕ್ ಅಮೃತ್ ರಾಜ್, ಇಂತಹ ಸಿನಿಮೋತ್ಸವಗಳ ಉಪಯುಕ್ತತೆಯ ಬಗ್ಗೆ ಮಾತನಾಡಿ ಕಿರಿಯರಿಗೆ ಹಿರಿಯರ ಕೆಲಸದ ಬಗ್ಗೆ ಪರಿಚಯ, ಸಿನೆಮಾ ರಂಗದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಅರಿಯಲು ಹಾಗೂ ಹಿರಿಯರಿಗೆ ಕಿರಿಯರು ಇಂದು ನಡೆಸುತ್ತಿರುವ ಪ್ರಯೋಗಗಳನ್ನು ತಿಳಿಯಲು ಸಾಧ್ಯವಾಗುತ್ತದೆ ಎಂಬ ಅಭಿಪ್ರಾಯ ಪಟ್ಟರು.

"ಭಾರತದಲ್ಲಿ ವಿವಿಧ ನಗರಗಳಲ್ಲಿ ಹಲವಾರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳು ನಡೆಯುತಿದ್ದರೂ, ಅಂತರಾಷ್ಟ್ರೀಯ ಖ್ಯಾತಿಗೆ ಕೊಂಡೊಯ್ಯುವ ಉತ್ಸವ ಇನ್ನೂ ಯಾವುದೆಂದು ನಿಗದಿಯಾಗಿಲ್ಲ. ಬೆಂಗಳೂರು ಸಿನಿಮೋತ್ಸವ ಅಂತಹ ಉತ್ತುಂಗಕ್ಕೆ ಏರಲಿ" ಎಂದು ಕೂಡ ಅಶೋಕ್ ಅಮೃತ್ ರಾಜ್ ಹಾರೈಸಿದರು.

ವಸತಿ ಸಚಿವ ಅಂಬರೀಶ್ ಕನ್ನಡ ಚಿತ್ರಗಳಿಗೆ ಚಿತ್ರಮಂದಿರಗಳು ಸಿಗದಿದ್ದರೂ, ಬಜೆಟ್ ನ ಕೊರತೆಯಿದ್ದರೂ ಹೋರಾಟ ನಡೆಸಿಕೊಂಡು ಇನ್ನೂ ಜನರಿಗೆ ಸಂದೇಶ ನೀಡುತ್ತಾ ಸಿನೆಮಾಗಳನ್ನು ನೀಡುತ್ತಾ ಮುಂದುವರೆಸಿಕೊಂಡು ಹೋಗುತ್ತಿರುವುದರ ಬಗ್ಗ್ಗೆ ಹೆಮ್ಮೆ ವ್ಯಕ್ತಪಡಿಸಿ, ಸಂಜಯ್ ಲೀಲಾ ಭನ್ಸಾಲಿ ಅವರ 'ಬ್ಲ್ಯಾಕ್' ಸಿನೆಮಾ ತಮಗೆ ಅತಿ ಹೆಚ್ಚು ಕಾಡಿದ ಸಿನೆಮಾ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದೇ ಮೊದಲ ಬಾರಿಗೆ ವಿಧಾನಸೌಧದ ಆವರಣದಲ್ಲಿ ಸಿನಿಮೋತ್ಸವದ ಉದ್ಘಾಟನಾ ಸಮಾರಂಭ ನಡೆಯುತ್ತಿರುವುದಕ್ಕೂ, ಹಾಗೆಯೇ ಸಮಾನಾಂತರವಾಗಿ ಚಲನಚಿತ್ರೋತ್ಸವ ಮೈಸೂರಿನಲ್ಲಿ ಜರುಗುತ್ತಿರುವುದಕ್ಕೂ ಸಂತಸ ವ್ಯಕ್ತಪಡಿಸಿ, ಚಲನಚಿತ್ರ ರಂಗಕ್ಕೆ ಎಲ್ಲ ಸಹಕಾರ ನೀಡುವ ಭರವಸೆ ನೀಡಿದರು.

"ಹಿಂದಿನ ಸಿನೆಮಾಗಳು ಹೆಚ್ಚೆಚ್ಚು ಸಮಾಜಮುಖಿಯಾಗಿದ್ದವು ಹಾಗೂ ಸಂದೇಶ ನೀಡುವಂತಹವಾಗಿದ್ದವು" ಎಂದ ಮುಖ್ಯಮಂತ್ರಿ ರಾಷ್ಟ್ರೀಯ ಅಪರಾಧ ದಾಖಲೆ ಸಂಸ್ಥೆ ನೀಡಿರುವ ವರದಿಯನ್ನು ಉಲ್ಲೇಖಿಸಿ "ಚಲನಚಿತ್ರದಲ್ಲಿ ಮೂಡಿ ಬರುವ ಹಿಂಸೆ, ಲೈಂಗಿಕ ಅಪರಾಧಗಳನ್ನು ಯುವಜನ ಹೆಚ್ಚೆಚ್ಚು ಅನುಕರಣೆ ಮಾಡುತ್ತಿದ್ದಾರೆ. ಆದುದರಿಂದ ಹಿಂಸೆಯಿಂದ ಮುಕ್ತವಾದ ಸಾಮಾಜಿಕ ಕಳಕಳಿಯುಳ್ಳ ಸಿನೆಮಾಗಳು ಹೆಚ್ಚೆಚ್ಚು ಬರಲಿ, ಅಶ್ಲೀಲತೆ, ಕ್ರೌರ್ಯ ಇವುಗಳಿಗೆ ಕಡಿವಾಣ ಕಾಕಿ" ಎಂದು ಕಿವಿ ಮಾತು ಹೇಳಿದರು.

"ಜಾಗತಿಕ ವಿಷಯಗಳನ್ನು ಚರ್ಚಿಸುವಂತಹ ಅತ್ಯುತ್ತಮ ಗುಣಮಟ್ಟದ ಸಿನೆಮಾಗಳು ಕನ್ನಡದಲ್ಲಿ ಮೂಡಿ ಬರಬೇಕು" ಎಂದು ಕೂಡ ಸಿದ್ದರಾಮಯ್ಯ ಕರೆ ಕೊಟ್ಟರು.

ತೆಲುಗು ನಟ ವೆಂಕಟೇಶ್ ಮತ್ತು ಕನ್ನಡ ನಟ ಡಾ. ಶಿವರಾಜಕುಮಾರ್ ಕೂಡ ಭಾಗವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com