ಅಸಹಿಷ್ಣುತೆ ಚರ್ಚೆಗೆ ದನಿಗೂಡಿಸಿದ ಅಪರ್ಣ ಸೇನ್, ಗೌತಮ್ ಘೋಶ್

೮ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಭಾಗವಹಿಸಿರುವ ಬೆಂಗಾಳಿ ನಿರ್ದೇಶಕರಾದ ಅಪರ್ಣ ಸೇನ್ ಮತ್ತು ಗೌತಮ್ ಘೋಶ್ ಮಾತನಾಡಿ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ೮ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಭಾಗವಹಿಸಿರುವ ಬೆಂಗಾಳಿ ನಿರ್ದೇಶಕರಾದ ಅಪರ್ಣ ಸೇನ್ ಮತ್ತು ಗೌತಮ್ ಘೋಶ್ ಮಾತನಾಡಿ ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣು ವಾತಾವರಣದಲ್ಲಿ ಸಿನೆಮಾಗಳು ಅದನ್ನು ತೊಡೆಯುವ, ಧನಾತ್ಮಕ ಭಾವನೆ ಹೆಚ್ಚಿಸುವ ಕೆಲಸ ಮಾಡಬೇಕು ಎಂದು ಕರೆ ಕೊಟ್ಟಿದ್ದಾರೆ.

ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ 'ಆರ್ಶಿನಗರ್' ಸಿನೆಮಾದ ಬಗ್ಗೆ ಮಾತನಾಡಿದ ಅಪರ್ಣಾ ಸೇನ್ ಇದು ಶೇಕ್ಸ್ಪಿಯರ್ ನ ಜೂಲಿಯಸ್ ಸೀಸರ್ ನಿಂದ ಸ್ಫೂರ್ತಿಗೊಂಡ ಚಿತ್ರ. ಶೇಕ್ಸ್ಪಿಯರ್ ಇದನ್ನು ರಚಿಸುವಾದ ಇಟಲಿ ನಾಗರಿಕ ಯುದ್ಧಗಳಿಂದ ಜರ್ಜರಿತವಾಗಿತ್ತು. ಅಂತಹ ಸಮಯದಲ್ಲಿ ಪ್ರೀತಿಯ ಉಪಯುಕ್ತತೆಯನ್ನು ಸಾರಿದ ನಾಟಕ ಅದು. ಈಗಿನ ಭಾರತ ಸಂದರ್ಭ ಬೇರೆಯಲ್ಲ. ಧಾರ್ಮಿಕ ಅಸಹಿಷ್ಣುತೆ ಬೆಳೆಯುತ್ತಿರುವ ಸಂದರ್ಭದಲ್ಲಿ, ಉಣ್ಣುವ ಊಟ, ತೊಡುವ ಬಟ್ಟೆಯ ಬಗ್ಗೆ ಗಲಭೆಗಳಾಗುತ್ತಿರುವ ಸಂದರ್ಭದಲ್ಲಿ ಈ ಸಿನೆಮಾ ಕಥೆ ಹೆಚ್ಚು ಅರ್ಥಪೂರ್ಣವಾದದ್ದು ಎಂದಿದ್ದಾರೆ. ಇದು ಸಂಗೀತಮಯ ಸಿನೆಮಾ ಎಂದು ಕೂಡ ಅಪರ್ಣಾ ಸೇನ್ ಹೇಳಿದ್ದಾರೆ. ಪ್ರೀತಿಯ ವಿಷಯಕ್ಕೆ ಬಂದಾಗ ಹಾಲಿವುಡ್ ಸಿನೆಮಾ 'ರೋಮನ್ ಹಾಲಿಡೆ' ನನ್ನ ನೆಚ್ಚಿನ ಚಿತ್ರ ಎಂದು ಕೂಡ ಅಪರ್ಣ ತಿಳಿಸಿದ್ದಾರೆ.

ಎಫ್ ಟಿ ಐ ಐ ನಲ್ಲಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯನ್ನು ಸಮರ್ಥಿಸಿಕೊಂಡ ನಿರ್ದೇಶಕ ಗೌತಮ್ ಘೋಷ್, ಒಂದು ಸರ್ಕಾರ ತನಗೆ ಬೇಕಾದವರನ್ನು ಇಂತಹ ಸಂಸ್ಥೆಗಳಲ್ಲಿ ನೇಮಕತಿ ಮಾಡಿ ತನ್ನ ಸಿದ್ಧಾಂತವನ್ನು ಹೇರುತ್ತಿದೆ ಎಂದೆನಿಸಿದಾಗ ವಿದ್ಯಾರ್ಥಿಗಳು ಮಾಡಿದ ಪ್ರತಿಭಟನೆ ಅರ್ಥಪೂರ್ಣ ಅಲ್ಲದೆ ಇಂತಹ ಖ್ಯಾತ ಸಂಸ್ಥೆಗಳನ್ನು ಮುನ್ನಡೆಸುವವರಿಗೆ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಬಲ್ಲ ಶಕ್ತಿ ಇರಬೇಕು ಎಂದು ಕೂಡ ಅವರು ತಿಳಿಸಿದ್ದಾರೆ. ರಿತ್ವಿಕ್ ಘಟಕ್ ಅಂತಹವರು ಮುನ್ನಡೆಸಿದ ಸಂಸ್ಥೆ ಇದು ಎಂದು ಕೂಡ ಅವರು ನೆನಪಿಸಿಕೊಂಡರು.

ಗಿರೀಶ್ ಕಾಸರವಳ್ಳಿಯವರ 'ಘಟಶ್ರಾದ್ಧ' ನನ್ನ ಜೀವನಕ್ಕೆ ತಿರುವು ನೀಡಿದ ಸಿನೆಮಾ ಎಂದು ಅಪರ್ಣಾ ಸೇನ್ ತಿಳಿಸಿದ್ದಲ್ಲದೆ ಇಂದಿನ ಪೀಳಿಗೆಗೆ ಗಿರಿಶ್ ಅವರು ಗೊತ್ತಿಲ್ಲದೆ ಇರುವುದು ಆಶ್ಚರ್ಯವನ್ನುಂಟುಮಾಡಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com