ಸಿನಿಮೋತ್ಸವ ಮಾಸ್ಟರ್ ಕ್ಲಾಸ್; ನಿರ್ದೇಶಕ ಮಣಿರತ್ನಂ ಜತೆಗೆ ಮಾತುಕತೆ

೮ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದ ಭಾಗವಾಗಿ ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಜೊತೆಗೆ ಮಾಸ್ಟರ್ ಕ್ಲಾಸ್ ಹಮ್ಮಿಕೊಳ್ಳಲಾಗಿತ್ತು.
ಸಿನಿಮೋತ್ಸವ ಮಾಸ್ಟರ್ ಕ್ಲಾಸ್; ನಿರ್ದೇಶಕ ಮಣಿರತ್ನಂ ಜತೆಗೆ ಮಾತುಕತೆ
ಸಿನಿಮೋತ್ಸವ ಮಾಸ್ಟರ್ ಕ್ಲಾಸ್; ನಿರ್ದೇಶಕ ಮಣಿರತ್ನಂ ಜತೆಗೆ ಮಾತುಕತೆ

ಬೆಂಗಳೂರು: ೮ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದ ಭಾಗವಾಗಿ ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಜೊತೆಗೆ ಮಾಸ್ಟರ್ ಕ್ಲಾಸ್ ಹಮ್ಮಿಕೊಳ್ಳಲಾಗಿತ್ತು. ಇದಕ್ಕೆ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದು, ಆಸನಗಳ ಕೊರತೆಯಿಂದ ಕೆಲವರಿಗಷ್ಟೇ ಭಾಗಿಯಾಗಲು ಅವಕಾಶ ದೊರಕಿದ್ದು ಉಳಿದವರಿಗೆ ನಿರಾಶೆ ಉಂಟು ಮಾಡಿತು. ಜವಹಾರ್ ನೆಹರೂ ವಿಶ್ವವಿದ್ಯಾಲಯದ 'ಸಿನೆಮಾ ಅಧ್ಯಯನ' ವಿಭಾಗದ ಫ್ರೊಫೆಸರ್ ಇರಾ ಭಾಸ್ಕರ್ ಸಂವಾದ ನಡೆಸಿಕೊಟ್ಟರು. ಸಂವಾದದ ಮುಖ್ಯಾಂಶಗಳು ಇಂತಿವೆ.

- ತಡವಾಗಿ ಬಂದದ್ದಕ್ಕೆ ಕ್ಷಮೆಯಿರಲಿ. ವಿಮಾನ ನಿಲ್ದಾಣದಲ್ಲಿ ಬಂದಿಳಿದೆ, ಕಾರ್ ಚಾಲಕ ತಿಂಡಿ ತಿನ್ನಲು ಅಡ್ಯಾರ್ ಆನಂದ ಭವನದ ಎದುರು ನಿಲ್ಲಿಸಿದರು. ಬೆಂಗಳೂರಿಗೆ ಬಂದು ಆನಂದ ಭವನದಲ್ಲಿ ತಿನ್ನುವುದೇ? ಕೊನೆಗೆ ಜನಾರ್ಧನ ಹೋಟೇಲ್ಲಿಗೆ ಬಂದು ಬೆಣ್ಣೆ ದೋಸೆ ಸವಿದೆ.

- 'ನಾಯಗನ್' ಸಿನೆಮಾದ ಬಗೆಗಿನ ಪ್ರಶ್ನೆಗೆ, ಕೆಲವು ಸಿನೆಮಾಗಳು ಘಟಿಸಿಹೋಗುತ್ತವೆ. ಅಂತಹ ಒಂದು ಸಿನೆಮಾ ನಾಯಗನ್. ಒಳ್ಳೆಯ ತಂಡ ನನ್ನೊಟ್ಟಿಗಿತ್ತು. ಆಗ ಅದು ಸಾಧ್ಯವಾಯಿತು. ಅರ್ಥಪೂರ್ಣವಾದ ಮುಖ್ಯವಾಹಿನಿಯ ಸಿನೆಮಾಗಳನ್ನು ಮಾಡಬೇಕು ಎಂಬುದು ನನಗೆ ಮೊದಲಿನಿಂದಲೂ ತಿಳಿದಿತ್ತು.

- ಮುಖ್ಯವಾಹಿನಿ ಸಿನೆಮಾಗಳನ್ನು ನಿರ್ದೇಶಿಸುವವರಿಗೆ ಶ್ಯಾಮ್ ಬೆನಗಲ್ ಮತ್ತವರ ಚಿತ್ರಗಳು ಸದಾ ಸ್ಫೂರ್ತಿಯಾಗಿದ್ದವು. ನನಗೂ ಕೂಡ. ಅಲ್ಲದೆ ಸತ್ಯಜಿತ್ ರೇ, ಬಾಲಚಂದರ್ ಕೂಡ ಸ್ಫೂರ್ತಿಯಾಗಿದ್ದರು.

- ತಮ್ಮ ಮೊದಲ ಚಿತ್ರ 'ಪಲ್ಲವಿ ಅನುಪಲ್ಲವಿ' ಬಗ್ಗೆ ಮಾತನಾಡಿ ಇದು ನನಗೆ ಮೊದಲ ಚಿತ್ರ ಕನ್ನಡ ಚಿತ್ರ. ಅದರಲ್ಲೇ ಮೊದಲ ಅವಕಾಶ ಒದಗಿದ್ದು. ಆಗ ಕನ್ನಡ ಗೊತ್ತಿರಲಿಲ್ಲ. ಆದರೆ ಈಗ ಬಲ್ಲೆ. ಸಿನೆಮಾ ಸಂಪೂರ್ಣಗೊಳಿಸಲು ಸುಮಾರು ಎರಡೂ ವರೆ ವರ್ಷ ಹಿಡೀಯಿತು. ಇದರಿಂದ ಸಾಕಷ್ಟು ಪಾಠ ಕಲಿತೆ.

- ಸಿನೆಮಾರಂಗಕ್ಕೆ ನೀವು ಬರಲು ಇಚ್ಚಿಸಿದರೆ ನೋವನ್ನು, ಸೋಲನ್ನು ಸಹಿಸಿಕೊಳ್ಳಲು ಕಲಿಯಬೇಕು. ಕಟು ವಿಮರ್ಶೆಗಳಿಂದ ಕಲಿಯುವುದನ್ನು ಹಾಗೂ ಹೊಗಳಿಕೆಯನ್ನು ನಿರಾಕರಿಸುವುದು ಅಗತ್ಯ.

- ಹೆಚ್ಚೆಚ್ಚು ಸಿನೆಮಾ ನೋಡುವುದರಿಂದ ಒಂದು ಸ್ಪಷ್ಟತೆ ಸಿಗುತ್ತದೆ. ನನಗೆ ಇಷ್ಟವಾಗದ ಸಿನೆಮಾದಿಂದಲೂ ನಾನೇನು ಮಾಡಬಾರದು ಎಂಬಹೊಳಹು ಸಿಗುತ್ತದೆ.

- ಸೆನ್ಸಾರ್ ಮಂಡಲಿ ಸ್ವತಂತ್ರವಾಗಿ ಕೆಲಸ ಮಾಡಬೇಕು. ಅದು ರಾಜಕೀಯ ಪಕ್ಷಗಳಿಂದ ದೂರವಿರಬೇಕು. ಸಿನೆಮಾದ ಸೆನ್ಸಾರ್ ಗೆ ನಿರ್ಧಾರ ತಾವೇ ಕೈಗೊಳ್ಳಬೇಕೇ ಹೊರತು ರಾಜಕೀಯ ಪಕ್ಷಗಳ ಮುಖಂಡರಲ್ಲಿಗೆ ಸಿನೆಮಾಗಳ್ನ್ನು ಕಳುಹಿಸುವುದು ಉಚಿತವಲ್ಲ ಎಂದು ಮಣಿರತ್ನಂ ಅಭಿಪ್ರಾಯ ಪಟ್ಟರು.

- ಕನ್ನಡದಲ್ಲಿ ಪ್ರಶ್ನೆಗಳನ್ನು ಕೇಳಲು ಉತ್ತೇಜಿಸಿದ ಮಣಿರತ್ನಂ ಕೆಲವು ಪ್ರಶ್ನೆಗಳಿಗೆ ಕನ್ನಡದಲ್ಲೇ ಉತ್ತರಿಸಿ ಅಭಿಮಾನಿಗಳನ್ನು ರಂಜಿಸಿದರು.

- ಕನ್ನಡದಲ್ಲ್ಲಿ ಮುಂದಿನ ಸಿನೆಮಾ ಯಾವಾಗ ಮಾಡುವಿರಿ ಎಂಬ ಪ್ರಶ್ನೆಗೆ, ಅಲ್ಲೇ ನೆರೆದಿದ್ದ ಕರ್ನಾಟಕ ಚಲನ ಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು ಅವರೇ ಕನ್ನಡ ಸಿನೆಮಾ ನಿರ್ಮಿಸುವುದಾಗಿಯೂ, ಅದನ್ನು ನಿರ್ದೇಶಿಸಲು ಮಣಿರತ್ನಂ ಹೂಗುಟ್ಟಿದ್ದಕ್ಕೆ ನೆರೆದವರು ಚಪ್ಪಾಳೆಯ ಮೂಲಕ ಸ್ವಾಗತಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com