ಸಿನೆಮೋತ್ಸವದಲ್ಲಿ 'ನಾನು ಅವನಲ್ಲ ಅವಳು' ಯಶಸ್ವಿ ಪ್ರದರ್ಶನ; ಚಿತ್ರವಿಮರ್ಶೆ

೮ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಭಾನುವಾರ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸಿನಿರಸಿಕರು ಭಾಗವಹಿಸಿ ಸಿನೆಮಾಗಳನ್ನು ವೀಕ್ಷಿಸಿದರು. ಲಿಂಗದೇವರು ನಿರ್ದೇಶನದ,
'ನಾನು ಅವನಲ್ಲ ಅವಳು' ಸಿನೆಮಾದಲ್ಲಿ ನಟ ಸಂಚಾರಿ ವಿಜಯ್
'ನಾನು ಅವನಲ್ಲ ಅವಳು' ಸಿನೆಮಾದಲ್ಲಿ ನಟ ಸಂಚಾರಿ ವಿಜಯ್

ಬೆಂಗಳೂರು: ೮ನೇ ಬೆಂಗಳೂರು  ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಭಾನುವಾರ ಕೂಡ ಹೆಚ್ಚಿನ ಸಂಖ್ಯೆಯಲ್ಲಿ  ಸಿನಿರಸಿಕರು ಭಾಗವಹಿಸಿ ಸಿನೆಮಾಗಳನ್ನು ವೀಕ್ಷಿಸಿದರು. ಲಿಂಗದೇವರು ನಿರ್ದೇಶನದ, ಅತ್ಯುತ್ತಮ ನಟನೆಗೆ ಸಂಚಾರಿ ವಿಜಯ್ ರಾಷ್ಟ್ರಪ್ರಶಸ್ತಿ ಪಡೆದ 'ನಾನು ಅವನಲ್ಲ ಅವಳು' ಚಿತ್ರಕ್ಕೆ ಭಾರೀ ಬೇಡಿಕೆಯಿತ್ತು. ಸಿನೆಮಾ ಪ್ರದರ್ಶನದ ನಂತರ ಸಂಚಾರಿ ವಿಜಯ್ ಅವರನ್ನು ಅಭಿನಂದಿಸಲು ಜನ ಮುಗಿ ಬಿದ್ದದ್ದು ಅವರ ಜೊತೆ ಸೆಲ್ಫಿಗಳನ್ನು ತೆಗೆದುಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ನಾನು ಅವನಲ್ಲ ಅವಳು ಚಿತ್ರ ವಿಮರ್ಶೆ - ಮುಖವಾಡದ ಜಗದಲ್ಲಿ ಅರಳಿದ ಮಂಗಳಮುಖ

ಜರ್ಮನ್ ಲೇಖಕ ಕಾಫ್ಕಾನ ಮೆಟಮಾರ್ಫಸಿಸ್(ರೂಪಾಂತರ) ಕಥೆಯಲ್ಲಿ, ಸೇಲ್ಸ್ ಮ್ಯಾನ್ ಗ್ರೆಗರಿ ಸಂಸ ಬೆಳಗ್ಗೆ ಎದ್ದಾಗ ಒಂದು ದೈತ್ಯ ಕೀಟವಾಗಿ ಬದಲಾಗಿರುತ್ತಾನೆ. ಮನೆಯಲ್ಲಿರುವ ಇತರರು ಅಪ್ಪ, ಅಮ್ಮ ಮತ್ತು ಸಹೋದರಿ. ಸಂಸಾರದಲ್ಲಿ ದುಡಿವ ಏಕೈಕ ಮಗನ ಸ್ಥಾನದಲ್ಲಿ ಕೀಟವನ್ನು ನೋಡುವ ಪೋಷಕರು, ಅವನೊಟ್ಟಿಗೆ ಹೇಗೆ ವರ್ತಿಸುತ್ತಾರೆ ಎಂಬುದು ಮುಂದಿನ ಕಥಾನಕ. ಕೀಟವಾಗಿ ಮಾರ್ಪಾಡಾಗಿರುವ ಮಗನನ್ನು ಅಪ್ಪ ಅಮಾನವೀಯವಾಗಿ ಕಾಣುತ್ತಾನೆ. ಅಘಾತಗೊಂಡ ಅಮ್ಮ ಮೊದ ಮೊದಲಿಗೆ ಮಮತೆಯಿಂದ ಕಾಣಲು ಪ್ರಯತ್ನಿಸಿದರೂ ನಂತರ ಉದಾಸೀನ ತಾಳುತ್ತಾಳೆ. ಇದ್ದುದರಲ್ಲಿ ತಂಗಿಯೇ ಅವನ ಸುಷ್ರೂಶೆ ಮಾಡುವುದು. ಅವಳ ವರ್ತನೆ ಕೂಡ ಯಾವುದೋ ಅಸಹಜ ಜೀವಿಯನ್ನು ಕಾಣುವ ರೀತಿಯಲ್ಲೇ ಇರುತ್ತದೆ. ಕೆಲವು ವಿಮರ್ಶಕರು ಗುರುತಿಸುವಂತೆ, ಮನೆಯವರ ವರ್ತನೆ ಓದುಗರಿಗೆ ಅಮಾನವೀಯವಾಗಿ ಕಂಡರೂ, ಆ ಬಡತನದ ಕುಟುಂಬದವವರು ಬೇರೆ ರೀತಿಯಲ್ಲಿ ವರ್ತಿಸಲು ಸಾಧ್ಯವಿತ್ತೇ? ಎಂಬುದು ಕಾಡುವ ಪ್ರಶ್ನೆ.

ಮಂಗಳಮುಖಿ 'ಲಿವಿಂಗ್ ಸ್ಮೈಲ್ ವಿದ್ಯಾ' ಅವರ  ಆತ್ಮಕಥಾನಕ ಆಧಾರಿತ ಸಿನೆಮಾ 'ನಾನು ಅವನಲ್ಲ ಅವಳು' ಸಿನೆಮಾದ (ಬಯೋಪಿಕ್) ಕಥೆಯ ಆರಂಭಿಕ ಭಾಗ ಕಾಫ್ಕಾನ ಕಥೆಗೆ ವಿಭಿನ್ನವಾದುದೇನಲ್ಲ. ಹಳ್ಳಿಯೊಂದರ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿರುವ ಮಾದೇಶ, ಶಾಲೆಯಲ್ಲಿ ಹೆಣ್ಣಿಗ ಎಂದು ಅವಮಾನಕ್ಕೆ ಒಳಗಾಗುತ್ತಾನೆ ಇತರೆ ಮಕ್ಕಳ ಹಾಸ್ಯಕ್ಕೆ ಗುರಿಯಾಗುತ್ತಿರುತ್ತಾನೆ. ಮಾದೇಶನಿಗೆ ಗಂಡು ಮಕ್ಕಳ ಜೊತೆ ಆಡಲು ಇಷ್ಟವಿಲ್ಲ, ಬದಲಾಗಿ ಹೆಣ್ಣು ಮಕ್ಕಳಾಡುವ ಆಟಗಳೆಂದರೆ ಸೆಳೆತ. ಹಾವ ಭಾವ ಹೆಣ್ಣು ಮಕ್ಕಳ ಹಾಗೆ. ಮನೆಯಲ್ಲಿ ಕೂಡ ಅಕ್ಕನ ಲಂಗ-ಕುಪ್ಪಸ ಆಭರಣ ಹಾಕಿ ಕನ್ನಡಿಯಲ್ಲಿ ನೋಡಿಕೊಳ್ಳುವುದೆಂದರೆ ಬಹು ಪ್ರೀತಿ. ಇದನ್ನು ಗಮನಿಸುವ ಅಕ್ಕನಿಗೆ ಖುಷಿ, ಅಮ್ಮನಿಗೆ ಆಶ್ಚರ್ಯ, ಖುಷಿ ಮತ್ತು ಆತಂಕ. ಆದರೆ ಸಮಾಜದಲ್ಲಿ ಪ್ರತಿಷ್ಟಿತ ವ್ಯಕ್ತಿಯಾಗಿರುವ ಅಪ್ಪನಿಗೆ ಆ ಹಾವಭಾವಗಳನ್ನು ಕಂಡರೆ ಉರಿ-ಕೋಪ. ಪ್ರತಿ ಬಾರಿಯೂ ಮಗನ ನಡತೆಯನ್ನು ಬದಲಾಯಿಸಿಕೊಳ್ಳುವಂತೆ ಉಪದೇಶ ನೀಡುವುದು ಶಿಕ್ಷಿಸುವುದು ಅಪ್ಪನ ರೀತಿ. ಗಂಡು ಅಂಗಾಂಗಳೊಂದಿಗೆ ಹುಟ್ಟಿದವನು ಹೀಗೆಯೇ ಇರಬೇಕು, ಹೆಣ್ಣು ಅಂಗಾಗಳೊಂದಿಗೆ ಹುಟ್ಟಿದವಳು ಹೀಗೇ ಇರಬೇಕು ಎಂದು ತಿಳಿವ ಪೂರ್ವಾಗ್ರಹಪೀಡಿತ ಸಮಾಜದಲ್ಲಿರುವ ಅಪ್ಪ, ಅಮ್ಮ, ತಂಗಿ ಮತ್ತು ಸುತ್ತಲಿನ ಸಮಾಜದ ವರ್ತನೆಯ ಬಗ್ಗೆ ಸಿನೆಮಾ ಚಿಂತನೆಗೆ ಹಚ್ಚುತ್ತದೆ. ಬಾಲ ಮಾದೇಶನ ಪಾತ್ರದಲ್ಲಿ ಪ್ರಫುಲ್ ವಿಶ್ವಕರ್ಮ ನಟನೆ ಮನಮೋಹಕವಾಗಿದೆ.

ಸಿನೆಮಾದ ಗಟ್ಟಿತನ ಇರುವುದು ಕಥೆಯ ವಿಸ್ತೃತ ಕ್ಯಾನ್ವಾಸ್ ನಲ್ಲಿ. ತನ್ನ ಹಳ್ಳಿಯಲ್ಲಿ ಗೋವಿಂದ ಎಂಬ ಹುಡುಗನನ್ನು ಕಂಡರೆ ಮಾದೇಶನಿಗೆ ಪ್ರೀತಿ. ಅವನನ್ನು ಸೆಳೆಯಲು ಪ್ರಯತ್ನಿಸಿ ವಿಫಲನಾಗುತ್ತಾನೆ. ಅಕ್ಕನ ಮದುವೆಯಿಂದ ವಿಚಲಿತನಾಗುತ್ತಾನೆ. ಕಾಲೇಜು ವ್ಯಾಸಂಗದಲ್ಲಿ ನಪಾಸಾಗಿ ಅಪ್ಪನಿಂದ ಒದೆ ತಿಂದು ಕೊನೆಗೆ ಅಪ್ಪನನ್ನೇ ನೂಕಿ ಕಾದಾಡಿ ಮನೆಯಿಂದ ಹೊರಬಿದ್ದು, ಬೆಂಗಳೂರಿನ ಅಕ್ಕನ ಮನೆ ಸೇರುತ್ತಾನೆ. ಇಲ್ಲಿಗಾಗಲೇ ಸಂಚಾರಿ ವಿಜಯ್ ತಮ್ಮ ಪರಿಪಕ್ವ ನಟನೆಯಿಂದ ಪ್ರೇಕ್ಷಕರ ಮೂಡನ್ನು ಹಿಡಿದಿಡುತ್ತಾರೆ. ಇದು ಹೇಗೆ ಎಂಬ ಸಂದೇಹದಿಂದಲೋ, ಅಥವಾ ಮಾದೇಶ ಮುಂದೇನು ಮಾಡುವನು ಎಂಬ ಕುತೂಹಲಕ್ಕಿರಬಹುದು, ಅಥವಾ ಸೂಕ್ಷ್ಮ ಮನಸ್ಸುಗಳ ಸಂವೇದನೆ ಇರಬಹುದು ಮಾದೇಶನ ಮುಂದಿನ ಜೀವನದ ಬಗ್ಗೆ ಕಾತರದ ನಿರೀಕ್ಷೆಯನ್ನು ಸಿನೆಮಾ ಕಾಯ್ದುಕೊಳ್ಳುತ್ತದೆ.

ಮುಂದಿನ ಭಾಗದಲ್ಲಿ ನಮಗೆ ತಿಳಿಯದಿರುವುದರಿಂದ ಭಯಾನಕ ಎನಿಸುವ ಆದರೆ ಮಂಗಳಮುಖಿಯರ ಸತ್ಯಲೋಕದ ದರ್ಶನವಾಗುತ್ತದೆ. ಬೆಂಗಳೂರಿನಲ್ಲಿ ಮತ್ತದೇ ಅಪಮಾನಗಳನ್ನು ಕೆಲಸ ಮಾಡುವಲ್ಲಿ ಮತ್ತು ತನ್ನ ಭಾವನಿಂದ ಅನುಭವಿಸುವ ಮಾದೇಶ, ಊರಿಗೆ ವಾಪಾಸ್ ಕರೆಯಲು ಬರುವ ಪೋಷಕರನ್ನು ನಿರಾಕರಿಸುತ್ತಾನೆ. ಮತ್ತೊಬ್ಬ ಅಂತರ್ಲಿಂಗಿ ಸೆಂಥಿಲ್ ಪರಿಚಯದಿಂದ ಮಾದೇಶನಿಗೆ ಹೊಸ ಲೋಕದ ಪರಿಚಯವಾಗುತ್ತದೆ. ಈ ಹೊಸ ಲೋಕದಲ್ಲಿ ತನ್ನ ರೀತಿಯ ವರ್ತನೆಯ, ಪ್ರೀತಿಯ, ಕಾಳಜಿಯ ಜನರ ಪರಿಚಯವಾಗಿ ಇಷ್ಟು ದಿನ ಅವಮಾನ ಎದುರಿಸಬೇಕಿದ್ದ ಲಿಂಗವನ್ನು ಬದಲಾಯಿಸಿಕೊಳ್ಳುವ ನಿರ್ಧಾರ ಮಾಡುತ್ತಾನೆ. ಅದು ಅವನನ್ನು ಪುಣೆಯ 'ನಾನಿ'ಯಲ್ಲಿಗೆ ಕರೆದೊಯ್ಯುತ್ತದೆ. ಅಲ್ಲಿ ಅವನಿಗೆ 'ವಿದ್ಯಾ' ಎಂದು ಮರುನಾಮಕರಣವಾಗುತ್ತದೆ. ಆ ಲೋಕ ಕೂಡ ಸ್ಥಾಪಿತ ಶ್ರೇಣಿ ವ್ಯವಸ್ಥೆಯೇ. ಅದೇನು ರಮ್ಯಲೋಕವಲ್ಲ. ಅಲ್ಲಿಯೂ ಕ್ರೂರತನವಿದೆ. ಅದು ಬೇರೆ ಬಗೆಯದ್ದು. ಇಲ್ಲಿ ಅಪಹಾಸ್ಯವಿಲ್ಲ, ಅವಮಾನವಿಲ್ಲ. ಮೈ ದಣಿಸಿ ದುಡಿಯುವ ಅಗತ್ಯವಿದ್ದರೂ ಪ್ರೀತಿಗೆ ಬರವಿಲ್ಲ. ಲಿಂಗ ಬದಲಾಯಿಸಿಕೊಳ್ಳಲು 'ನಿರ್ವಾಣ' ಎಂಬ ಸಂಪ್ರದಾಯದ ಅಗತ್ಯ ಇದೆ. ಅದಕ್ಕಾಗಿ ಭಿಕ್ಷೆಯಿಂದ ದುಡಿದು ಸಂಪಾದನೆ ಮಾಡಬೇಕು. ನಿರ್ವಾಣ ಆದಮೇಲೆ ವೇಶ್ಯಾವೃತ್ತಿಯಲ್ಲಿ ತೊಡಗಬಹುದು. ಹೇಗೋ 'ನಾನಿ'ಯ ಕರುಣೆಗೆ ಒಳಗಾಗಿ ನಿರ್ವಾಣ ಪಡೆಯುವ ವಿದ್ಯಾ, ವಿದ್ಯಾವಂತೆಯಾಗಿರುವುದರಿಂದ ವೇಶ್ಯಾವೃತ್ತಿಗೆ ತೊಡಗಿಸಿಕೊಳ್ಳಲು ಮನಸ್ಸು ಒಪ್ಪುವುದಿಲ್ಲ. ಮತ್ತೆ ಭಿಕ್ಷೆಗೆ ಆಯ್ಕೆ ಮಾಡಿಕೊಂಡರೂ ಅಲ್ಲಿಯ ಅವಮಾನವನ್ನು ಸಹಿಸಿಕೊಳ್ಳಲಾಗುವುದಿಲ್ಲ. ಇಂತಹ ಸಂದಿಗ್ಧ ಸಮಯದಲ್ಲಿ ಊರಿಗೆ ಹಿಂತಿರುಗಿ ಕೆಲಸಕ್ಕೆ ತೊಡಗಿ ಹಣ ಹಿಂದಿರುಗಿಸುವುದಾಗಿ ನಾನಿಯನ್ನು ಒಪ್ಪಿಸಿ ಬೆಂಗಳೂರಿಗೆ ಹಿಂದಿರುಗುತ್ತಾಳೆ. ಈ ಭಾಗದಲ್ಲಿ ಮಂಗಳಮುಖಿಯರ ನಿಗೂಢ ಲೋಕವನ್ನು ಕಟ್ಟಿಕೊಡುವುದರಲ್ಲಿ ನಿರ್ದೇಶಕ(ಲಿಂಗದೇವರು) ಮತ್ತು ಛಾಯಾಗ್ರಾಹಕ(ಅಶೋಕ್ ವಿ ರಾಮನ್) ದಕ್ಷತೆ ಎದ್ದು ಕಾಣುತ್ತದೆ. ಪುಣೆ ನಗರದಲ್ಲಿ ಚಿತ್ರೀಕರಿಸಿರುವ ದೃಶ್ಯಗಳಲ್ಲಿ ಎಲ್ಲಿಯೂ ಅಸಹಜತೆ ಕಾಣದೆ ಕೆಲವೊಮ್ಮೆ ಸಾಕ್ಷ್ಯಚಿತ್ರವೇನೋ ಎಂಬಂತೆ ನೈಜ್ಯವಾಗಿ ಮೂಡಿ ಬಂದಿರುವ ಈ ಭಾಗ, ಯಾವುದೇ ವಿಪರೀತಗಳನ್ನು ತುರುಕದೆ ಇರುವುದು ಸಿನೆಮಾ ತಂಡದ ಕಾರ್ಯದಕ್ಷತೆಗೆ ಕನ್ನಡಿ ಹಿಡಿದಂತಿದೆ.  ಹಿನ್ನಲೆಯಲ್ಲಿ ಮೂಡಿಬರುವ ಅನೂಪ್ ಸೀಳಿನ್ ಸಂಗೀತ ಅದಕ್ಕೆ ಪೂರಕವಾದ ಅರಸು ಅಂತಾರೆ ಅವರ ಸಾಹಿತ್ಯದ ಹಾಡುಗಳು ಕೂಡ ಸಂಪೂರ್ಣವಾಗಿ ಮಿಳಿತಗೊಂಡಿದೆ.

ಊರಿಗೆ ಹಿಂತಿರುಗುವ ವಿದ್ಯಾಳನ್ನು ಮಾದೇಶ ಎಂದೇ ಗುರುತಿಸುವ ಅಕ್ಕ, ಮುಖ ನೋಡಲು ಹಿಂಜರಿಯುವ ಅಪ್ಪ, ಭಾವ, ಆಕಾಶ ಕಳಚಿ ಬಿದ್ದಂತೆ ಅಳುವ ಅಮ್ಮ ಹೀಗೆ ಕೊನೆಗೂ ಸ್ವೀಕೃತ ಭಾವನೆ ಮೂಡುವುದಿಲ್ಲ. ಕೆಲಸಕ್ಕೆ ಅರ್ಜಿ ಹಾಕುವಾಗಲೂ ಎಲ್ಲರಿಂದ ತಿರಸ್ಕೃತಗೊಳ್ಳುತ್ತಾಳೆ. ಅಲ್ಲಿಗೆ ಸಿನೆಮಾ ಕೊನೆಯಾಗಿ, ನಿಜ ಜೀವನದ ಲಿವಿಂಗ್ ಸ್ಮೈಲ್ ವಿದ್ಯಾಳ ಸಾಧನೆಗಳನ್ನು ಪಟ್ಟಿ ಮಾಡುವ ಮೂಲಕ ಸಿನೆಮಾ ಕೊನೆಗೊಳ್ಳುತ್ತದೆ. ತನ್ನ ಹಠದಿಂದ, ಹುಟ್ಟಿದ ಸಮಾಜವನ್ನು, ತಾನೇ ಇಷ್ಟ ಪಟ್ಟು ಒಳ ಹೋಗುವ ಮಂಗಳಮುಖಿಯರ ಸಾಮ್ರಾಜ್ಯವನ್ನು ವಿವಿಧ ಕಾರಣಗಳಿಗೆ ಧಿಕ್ಕರಿಸಿ ಸಾಧನೆಯ ಮೆಟ್ಟಿಲನ್ನು ಏರುವ ವಿದ್ಯಾಳನ್ನು ಸಮಾಜ ಒಪ್ಪಿಕೊಂಡಿತೇ? ಬಹುಶಃ ವಿದ್ಯಾರ ಆತ್ಮಕತೆಯ ಮುಂದಿನ ಭಾಗ ಉತ್ತರಿಸಬೇಕು ಮತ್ತು ಸಿನೆಮಾ ತಂಡ ಎರಡನೇ ಭಾಗಕ್ಕೆ ಆಣಿಯಾಗಬೇಕು!

ಮಂಗಳಮುಖಿಯರನ್ನು ಕಂಡರೆ ಮುಖ ತಿರುಗಿಸಿಕೊಳ್ಳುವ, ಅವರಿಗೆ ದುಡಿದು ತಿನ್ನಲೇನು ದಾಡಿಯೇ ಎಂದು ಕಿರುಚಿ ಅಬ್ಬರಿಸುವ ಆದರೆ ಅವರನ್ನು ಕೆಲಸ ಮಾಡಲು ಬಿಡಗೊಡದ, ಕೆಲಸ ನೀಡದ, ಸಮಾನತೆ ತೋರದ ಪೂರ್ವಾಗ್ರಪೀಡಿತ-ಆಷಾಢಭೂತಿ ಸಮಾಜದ ಟೀಕೆಯಷ್ಟೇ ಆಗದೆ, ಮಂಗಳಮುಖಿಯರ ಲೋಕದ ಆಗುಹೋಗುಗಳನ್ನು ಅವರ ಸಂಪ್ರದಾಯ ರೀತು ರಿವಾಜುಗಳನ್ನು ಕಟ್ಟಿಕೊಡುವ ಈ ಸಿನೆಮಾ ಭಾರತೀಯ ಚಿತ್ರರಂಗದಲ್ಲಿ ಹೊಸತು ಮತ್ತು ಈ ಘಟ್ಟದಲ್ಲಿ ಬಹು ಮುಖ್ಯ. ಮಂಗಳಮುಖಿಯರ ಜೊತೆಗೆ  ನಮ್ಮ ವರ್ತನೆಯ ಬಗ್ಗೆ ಪ್ರಶ್ನೆಗಳನ್ನು ಎತ್ತುವ ಅವರು ಕೂಡ ಸಮಾಜದ ಭಾಗ ಎಂದು ಒಪ್ಪಿಕೊಳ್ಳುವಂತೆ ತುಸುವಾದರೂ ಪ್ರೇರೇಪಿಸುವ ಸಿನೆಮಾದ ನಿರ್ಮಾಪಕ ರವಿ ಗರಣಿ ಕೂಡ ಅಭಿನಂದಾರ್ಹರು. ವಿದ್ಯಾ ಪಾತ್ರದಲ್ಲಿ ಶ್ರೇಷ್ಠ ನಟನೆ ನೀಡಿರುವ ಸಂಚಾರಿ ವಿಜಯ್, ನಾನಿ ಪಾತ್ರದಲ್ಲಿ ಮನಸ್ಸಿನಲ್ಲುಳಿವ ಮಂಗಳಮುಖಿ ಸುಮಿತ್ರ ಮತ್ತು ಉಳಿದ ಪಾತ್ರ ವರ್ಗ, ತಾಂತ್ರಿಕ ವರ್ಗದ (ಕಲೆ: ಹೊಸ್ಮನೆ ಮೂರ್ತಿ, ನಾಗರಾಜ್ ಹೊಸೂರು, ಪ್ರಸಾದನ: ನಾಗರಾಜ, ರಾಜು, ಸಂಕಲನ: ನಾಗೇಂದ್ರ ಕೆ ಉಜ್ಜನಿ)  ಪರಿಶ್ರಮದಿಂದ ಮೂಡಿಬಂದಿರುವ 'ಲಿವಿಂಗ್ ಸ್ಮೈಲ್ ವಿದ್ಯಾ' ಅವರ ಕುರಿತ ಅದ್ಭುತ ಬಯೋಪಿಕ್ ಕೂಡ.

ಮನೆಮಂದಿ ಮಕ್ಕಳೊಂದಿಗೆ ಕೂಡಿ ಒಮ್ಮೆ ನೋಡಲೇಬೇಕಾದ ಚಿತ್ರ ಇದು. ಸೆಪ್ಟಂಬರ್ ೨೫ರಂದು ಬಿಡುಗಡೆಯಾಗಲಿರುವ ಈ ಸಿನೆಮಾ ನೋಡಿ ಬನ್ನಿ.

-ಗುರುಪ್ರಸಾದ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com