ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಮೊದಲ ಬಾರಿಗೆ ಕನ್ನಡ ಜನಪ್ರಿಯ ಚಿತ್ರಗಳ ಸ್ಪರ್ಧೆ

ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ದಿನಗಣನೆ ಪ್ರಾರಂಭವಾಗಿದ್ದು, ಫೆಬ್ರವರಿ ೨ ರಂದು ವಿಧಾನಸೌಧದ ಮುಂಭಾಗದಲ್ಲಿ ಉದ್ಘಾಟನೆ ನಡೆಯಲಿದೆ. ಬೆಂಗಳೂರು ಮತ್ತು ಮೈಸೂರಿನಲ್ಲಿ ಏಕಕಾಲಕ್ಕೆ
ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು
ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು
ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ದಿನಗಣನೆ ಪ್ರಾರಂಭವಾಗಿದ್ದು, ಫೆಬ್ರವರಿ ೨ ರಂದು ವಿಧಾನಸೌಧದ ಮುಂಭಾಗದಲ್ಲಿ ಉದ್ಘಾಟನೆ ನಡೆಯಲಿದೆ. ಬೆಂಗಳೂರು ಮತ್ತು ಮೈಸೂರಿನಲ್ಲಿ ಏಕಕಾಲಕ್ಕೆ ನಡೆಯಲಿರುವ ಈ ಉತ್ಸವವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಉದ್ಘಾಟಿಸಲಿದ್ದು, ವಿಶೇಷ ಅತಿಥಿಗಳಾಗಿ ಬಂಗಾಳಿ ಖ್ಯಾತ ಚಲನಚಿತ್ರ ನಿರ್ದೇಶಕ ಬುದ್ಧದೇವದಾಸ್ ಗುಪ್ತ, ಈಜಿಪ್ಟಿಯನ್ ಚಿತ್ರ ನಿರ್ದೇಶಕಿ ಹಲಾ ಖಲೀಲ್ ಮತ್ತು ನಟ ಪುನೀತ್ ರಾಜಕುಮಾರ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮವನ್ನು ನಟ ರಮೇಶ್ ಅರವಿಂದ್ ಮತ್ತು ಸುಹಾಸಿನಿ ಮಣಿರತ್ನಂ ನಿರ್ವಹಿಸಲಿದ್ದಾರೆ. 
ಈ ಸಿನಿಮೋತ್ಸವದ ಮತ್ತೊಂದು ವಿಶೇಷವೆಂದರೆ ಕನ್ನಡ ಜನಪ್ರಿಯ ಮನರಂಜನಾ ಚಿತ್ರಗಳ ಸ್ಪರ್ಧೆಯನ್ನು ಏರ್ಪಡಿಸಿರುವುದು. ಈ ವಿಭಾಗದಲ್ಲಿ ಐದು ಜನಪ್ರಿಯ ಕನ್ನಡ ಸಿನೆಮಾಗಳು ಸೆಣಸಲಿವೆ. ಸುದೀಪ್ ನಟನೆಯ ಕೋಟಿಗೊಬ್ಬ-೨, ದರ್ಶನ್ ಅವರ ಜಗ್ಗುದಾದ, ಗಣೇಶ್ ಅಭಿನಯದ ಮುಂಗಾರುಮಳೆ-೨, ಪುನೀತ್ ರಾಜಕುಮಾರ್ ಅವರ ದೊಡ್ಮನೆ ಹುಡುಗ ಮತ್ತು ಶಿವರಾಜ್ ಕುಮಾರ್ ಅವರ ಶಿವಲಿಂಗ ಈ ವಿಭಾಗದಲ್ಲಿ ಪ್ರದರ್ಶನಗೊಂಡು, ಪ್ರಶಸ್ತಿಗಾಗಿ ಸೆಣಸಲಿವೆ. 
ಒಟ್ಟಾರೆ ಸಿನಿಮೋತ್ಸವದಲ್ಲಿ ೬೦ ದೇಶಗಳಿಂದ ೨೪೦ ಸಿನೆಮಾಗಳು ಪ್ರದರ್ಶನಗೊಳ್ಳಲಿದ್ದು, ಅವುಗಳಲ್ಲಿ ಸುಮಾರು ೩೦ ಸಿನೆಮಾಗಳು ಆಸ್ಕರ್ ಪ್ರಶಸ್ತಿಗೆ ನಾಮಾಂಕಿತಗೊಂಡ ಚಿತ್ರಗಳು ಎಂದು ಈ ಸಿನಿಮೋತ್ಸವದ ಕಲಾ ನಿರ್ದೇಶಕ ವಿದ್ಯಾಶಂಕರ್ ಹೇಳಿದ್ದಾರೆ. 
"ಮಹಿಳಾ ನಿರ್ದೇಶಕಿಯರ ಚಿತ್ರಗಳಿಗೆ ಒತ್ತು ನೀಡಲಾಗಿದ್ದು, ಪ್ರದರ್ಶನಗೊಳ್ಳಲಿರುವ ಸುಮಾರು ೨೫ ಚಿತ್ರಗಳು ಸಿನೆಮಾಗಳು ಮಹಿಳೆಯರು ನಿರ್ದೇಶಿಸಿರುವವೇ ಆಗಿವೆ" ಎನ್ನುತ್ತಾರೆ ವಿದ್ಯಾಶಂಕರ್. 
ಸಿನಿಮೋತ್ಸವದಲ್ಲಿ ಪಾಲ್ಗೊಳ್ಳಲು ಪ್ರತಿನಿಧಿಗಳಿಗೆ ಪಾಸ್ ಗಳನ್ನು ವಿತರಿಸಲಾಗುತ್ತಿದ್ದು, ಇದಕ್ಕಾಗಿ ೬೦೦ ರು ಶುಲ್ಕವನ್ನು ನಿಗದಿಪಡಿಸಲಾಗಿದೆ,. ವಿದ್ಯಾರ್ಥಿಗಳು, ಚಿತ್ರಸಮಾಜದ ಸದಸ್ಯರು, ಹಿರಿಯ ನಾಗರಿಕರು ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರಿಗೆ ೫೦% ರಿಯಾಯಿತಿ ನೀಡಲಾಗುತ್ತಿದೆ. 
ಸಿನಿಮೋತ್ಸವ ಬೆಂಗಳೂರಿನ ಓರಾಯಾನ್ ಮಾಲ್ ನ ಪಿ ವಿ ಆರ್ ಸಿನೆಮಾಸ್ ನಲ್ಲಿ ಹಾಗು ಮೈಸೂರಿನ ಮಾಲ್ ಆಫ್ಫ್ ಮೈಸೂರ್ ನ ಐನಾಕ್ಸ್ ನಲ್ಲಿ ಜರುಗಲಿದೆ. ಫೆಬ್ರವರಿ ೯ ಅಂದು ಸಿನಿಮೋತ್ಸವಕ್ಕೆ ತೆರೆಬೀಳಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com