'ಉಪ್ಪಿನ ಕಾಗದ' ನನ್ನ ಅಂತರಂಗದ ಪಯಣ: ಬಿ ಸುರೇಶ

೯ ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಹಲವು ಕನ್ನಡ ಸಿನೆಮಾಗಳು, ನಿರ್ವಹಿಸರುವ ವಸ್ತು, ವಿಷಯಕ್ಕೆ ಪ್ರೇಕ್ಷಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುತ್ತಿರುವುದು ವಿಶೇಷ. ಅದರಲ್ಲಿ ಬಿ ಸುರೇಶ ನಿರ್ದೇಶನದ 'ಉಪ್ಪಿನ ಕಾಗದ'
ಸಿನಿಮೋತ್ಸವದಲ್ಲಿ ಖ್ಯಾತ ಸಿನಿಮಾಟೋಗ್ರಾಫರ್ ಭಾಸ್ಕರ್ ಅವರನ್ನು ಎತ್ತಿ ಹಿಡಿದ ಸುರೇಶ (ಚಿತ್ರಕೃಪೆ: ಸುರೇಶ ಅವರ ಫೇಸ್ಬುಕ್ ಪುಟ)
ಸಿನಿಮೋತ್ಸವದಲ್ಲಿ ಖ್ಯಾತ ಸಿನಿಮಾಟೋಗ್ರಾಫರ್ ಭಾಸ್ಕರ್ ಅವರನ್ನು ಎತ್ತಿ ಹಿಡಿದ ಸುರೇಶ (ಚಿತ್ರಕೃಪೆ: ಸುರೇಶ ಅವರ ಫೇಸ್ಬುಕ್ ಪುಟ)
ಬೆಂಗಳೂರು: ೯ ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಹಲವು ಕನ್ನಡ ಸಿನೆಮಾಗಳು, ನಿರ್ವಹಿಸರುವ ವಸ್ತು, ವಿಷಯಕ್ಕೆ  ಪ್ರೇಕ್ಷಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುತ್ತಿರುವುದು ವಿಶೇಷ. ಅದರಲ್ಲಿ ಬಿ ಸುರೇಶ ನಿರ್ದೇಶನದ 'ಉಪ್ಪಿನ ಕಾಗದ' ಸಿನೆಮಾ ಪ್ರಮುಖವಾದದ್ದು. ನಾಗಾಭರಣ ಮುಖ್ಯ ಪಾತ್ರದಲ್ಲಿರುವ ಈ ಸಿನೆಮಾ ಕನ್ನಡ ಸಿನೆಮಾಗಳ ಸ್ಪರ್ಧೆಯಲ್ಲಿರುವುದು ಕೂಡ ವಿಶೇಷ. 
'ಉಪ್ಪಿನ ಕಾಗದ' ಸಿನೆಮಾದ ನಿರ್ದೇಶಕ ಬಿ ಸುರೇಶ ಕನ್ನಡಪ್ರಭ[ಡಾಟ್]ಕಾಮ್ ಜೊತೆಗೆ ತಮ್ಮ ನೂತನ ಸಿನೆಮಾದ ಬಗ್ಗೆ ಮತ್ತು ಚಲನಚಿತ್ರೋತ್ಸವದ ಬಗ್ಗೆ ಅನುಭವಗಳನ್ನು ಹಂಚಿಕೊಂಡದ್ದು ಹೀಗೆ. 
* ನಿಮ್ಮ ನಿರ್ದೇಶನದ ಇತ್ತೀಚಿನ ಚಿತ್ರ 'ಉಪ್ಪಿನ ಕಾಗದ' ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿಯೇ ತೆರೆ ಕಂಡಿದೆ. ನಿಮ್ಮ ನಿರೀಕ್ಷೆಯಂತೆಯೇ ಪ್ರತಿಕ್ರಿಯೆಗಳಿದ್ದವೇ?
(ನಗುತ್ತ) ನನ್ನ ಸಿನೆಮಾ ನೋಡಿ ಇನ್ನು ಯಾರು ಬೈದಿಲ್ಲ. ಇಲ್ಲಿಯವರೆಗೂ ಮೆಚ್ಚುಗೆಯ ಪ್ರತಿಕ್ರಿಯೆಗಳೇ ಬಂದಿವೆ. ಸಿನೆಮಾ ನೋಡುಗನಿಗೆ ಒಂದು ರೀತಿಯ ಪಯಣವಾದರೆ ಅದರ ಜನಕನಿಗೆ ಮತ್ತೊಂದು ರೀತಿಯ ಪಯಣವಾಗಿರುತ್ತದೆ. ನನ್ನ ವಿಷಯದಲ್ಲಿ ಸದರಿ ಸಿನೆಮಾ ಅಂತರಂಗದ ಪಯಣವಾಗಿತ್ತು. ಒಟ್ಟಾರೆಯಾಗಿ ಸದ್ಯಕ್ಕೆ 'ಉಪ್ಪಿನ ಕಾಗದ ಸಿನೆಮಾಗೆ ಬಂದ ಪ್ರತಿಕ್ರಿಯೆಗಳಿಂದ ಸಂತಸವಾಗಿದೆ. ನಾನು ವಿರುದ್ಧವಾದ ಪ್ರತಿಕ್ರಿಯೆಗಳನ್ನು ಕೂಡ ಅಷ್ಟೇ ಮುಕ್ತವಾಗಿ-ಪ್ರೀತಿಯಿಂದ ಸ್ವೀಕರಿಸುತ್ತೇನೆ. ನನ್ನ ಸಿನೆಮಾ ಪ್ರಯಾಣಕ್ಕೆ ಎಲ್ಲ ಬಗೆಯ ಅನಿಸಿಕೆಗಳು ಅತಿ ಮುಖ್ಯ. 
* ಈ ಸಿನೆಮಾದ ನಿರೂಪಣೆಯಲ್ಲಿ ಮೌನಕ್ಕೆ ಮೊರೆ ಹೋಗಿರುವುದಾಗಿ ಹೇಳಿದ್ದೀರಾ. ಏಕೆ? 
ನಮ್ಮ ಸುತ್ತಮುತ್ತಲಿನ ಸಮಾಜ ಹೆಚ್ಚು ವಾಚಾಳಿಯಾಗಿ ಬೆಳೆದಿದೆ ಎಂದು ನನಗೆ ಮಾನವರಿಕೆಯಾಗ್ತಾ ಬಂದಿದೆ. ನಮ್ಮ ದೇಶದ ರಾಜಕೀಯ ಆಗಲಿ ಅಥವಾ ಸರಳ ಸಂಗತಿಗಳಾದ ಸಾಮಾಜಿಕ ಜಾಲತಾಣಗಳಗಾಲಿ ಮಾತೆ ಹೆಚ್ಚು. ಎಲ್ಲರು ತುರ್ತು ತಜ್ಞರಾಗಿಬಿಡುತ್ತಾರೆ. ಆದುದರಿಂದ ಇದಕ್ಕೆ ಮೌನದ ಮೂಲಕ ಉತ್ತ್ತರಿಸಬೇಕು ಎಂದು ನನಗೆ ಅನ್ನಿಸಿದೆ. ಆದುದರಿಂದ ಕಲಾವಿದನಾಗಿ ಸಮಾಜ ಕಟ್ಟುವ ಪ್ರಕ್ರಿಯೆಯಲ್ಲಿ ನನ್ನ ಕೊಡುಗೆ ಸಿನೆಮಾ ಆಗಿದ್ದು ಈ ಸಿನೆಮಾದಲ್ಲಿ ಮೌನಕ್ಕೆ ಹೆಚ್ಚು ಮೊರೆ ಹೋಗಿದ್ದೇನೆ. ನನ್ನ ಹಿಂದಿನ ಸಿನೆಮಾಗಳು ಹಾಗಿರಲಿಲ್ಲ. ಅವುಗಳು ಹೆಚ್ಚು ಕರಪತ್ರದ ಮಾದರಿಯವಾಗಿದ್ದವು.
* ಈ ಸಿನೆಮಾದಲ್ಲಿ ನೀವು ಹೇಳಬೇಕಾದ್ದದ್ದನ್ನು ಪರಿಣಾಮಕಾರಿಯಾಗಿ ದಾಟಿಸಲು ಸಾಧ್ಯವಾದದ್ದು ಹೇಗೆ?
ನಾನು ಮೊದಲೇ ಹೇಳಿದಂತೆ ಇದು ಅಂತರಂಗದ ಪಯಣವಾಗಿತ್ತು. ಈ ಪ್ರಕ್ರಿಯೆ ನನ್ನ ಹಿಂದಿನ ಸಿನೆಮಾಗಳಿಗೆ ಹೋಲಿಸಿದರೆ ವಿಭಿನ್ನ. ಯಾವುದೇ ಸಮಯಮಿತಿ ಹಾಕದ ಕಲಾವಿದರು ಜೊತೆಗಿದ್ದದ್ದು ಇನ್ನಷ್ಟು ಬಲ ನೀಡಿತು. ಒಳ್ಳೆಯ ಕ್ಯಾಮರಾ ನನಗೆ ದಕ್ಕಿತ್ತು. ಅತ್ಯುತ್ತಮ ತಂತ್ರಜ್ಞರಿದ್ದರು. ಪ್ರಕೃತಿ ಕೆಲವೊಮ್ಮೆ ನಮಗೆ ಅಡೆ ತಡೆ ಒಡ್ಡಿದ್ದರು, ಅದನ್ನು ಮೀರಿ ಬೇರೆ ಯಾವುದೇ ರೀತಿಯಲ್ಲಿ ಕಾಂಪ್ರಮೈಸ್ ಆಗದೆ ಸಿನೆಮಾ ಮಾಡಿ ಮುಗಿಸಿರುವುದು ಬಹುಷಃ ಪರಿಣಾಮಕಾರಿಯಾಗಿ ಮೂಡಲು ಸಹಕರಿಸಿದೆ. ನಾನು ಮೊದಲಿಗೆ ೧೪೨ ನಿಮಿಷಗಳ ಸಿನೆಮಾ ಕಟ್ ಮಾಡಿದ್ದರು, ನಂತರ ವಿವಿಧ ಒತ್ತಡಗಳಿಗೆ ಮಣಿದು ಅದನ್ನು ೧೨೦ ನಿಮಿಷಗಳಿಗೂ ಕಡಿಮೆ ಮಾಡಿದ್ದೇನೆ. ಇಲ್ಲಿ ಸ್ವಲ್ಪ ಅವಸರ ಆಯಿತೇನೋ ಎಂದೆನಿಸಿ ನನಗೆ ತುಸು ಅಸಮಾಧಾನ ತಂದಿದ್ದರು, ನಿರ್ಮಾಪಕರು ಮತ್ತು ಪ್ರೇಕ್ಷಕರಿಗೆ ಇದು ಖುಷಿ ನೀಡಿದೆ. 
* ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನಗೊಳ್ಳುವ ಸಿನೆಮಾಗಳು ಇಲ್ಲಿಗೆ ಹೇಗೆ ರಿಲವೆಂಟ್ ಆಗುತ್ತವೆ ಎಂದೆನಿಸುತ್ತದೆ ನಿಮಗೆ?
ನೋಡಿ ಇದು ಎರಡು ಬಗೆ. ಕೆಲವರು ವಿವಿಧ ದೇಶಗಳಿಂದ ಬರುವ ಸಿನೆಮಾಗಳು ನಮ್ಮ ದೇಶಕ್ಕೆ, ನಮ್ಮ ಕಾಲಕ್ಕೆ ಹೇಗೆ ಅನ್ವಯ ಆಗುತ್ತವೆ ಎಂದು ಆಯ್ದು ವಿಶ್ಲೇಷಿಸುತ್ತಾರೆ. ಈ ಸಮಕಾಲೀನತೆ ಎಂಬುದು ಕೂಡ ಸಾಪೇಕ್ಷ. ಆದುದರಿಂದ ನಾನು ಅನ್ಯ ದೇಶಗಳ ಸಿನೆಮಾಗಳನ್ನು ನೋಡುವ ಬಗೆಯೇ ಬೇರೆ. ಲೆಬನಾನ್ ದೇಶದ್ದೋ ಈಜಿಪ್ಟ್ ದೇಶದ್ದೋ ಸಿನೆಮಾ ನೋಡಿದಾಗ ನನಗೆ ಆ ದೇಶದ, ಆ ಕಾಲದ, ಆ ಜನದ ಸಂಕಷ್ಟವೊ, ಸುಖವೊ ನನಗೆ ದಕ್ಕುತ್ತದೆ. ನನಗೆ ಅದೇ ಮುಖ್ಯ. ಈ ದೇಶದ ಸಿನೆಮಾಗಳಲ್ಲಿ ಇಲ್ಲಿನ ಸಮಸ್ಯೆಗಳು ಪ್ರಮುಖ ಸ್ಥಾನ ಪಡೆಯುತ್ತದೆ. ಉದಾಹರಣೆಗೆ ರೈತರಿಕ ನೀರು ಸಿಕ್ಕದೆ ಇರುವುದು ಇಲ್ಲಿನ ಸಿನೆಮಾಗಳ ಪ್ರಮುಖ ವಸ್ತುವಾಗಬಹುದು. 
* ಸಿನಿಮೋತ್ಸವದಲ್ಲಿ ಕನ್ನಡ ಸಿನೆಮಾಗಳ ಪ್ರತಿನಿಧಿತ್ವದ ಬಗ್ಗೆ ನಿಮಗೆ ಏನನ್ನಿಸುತ್ತದೆ?
ಈ ಉತ್ಸವ ಅಂದರೆ ನನಗೆ ಜಾತ್ರೆ ಇದ್ದಂತೆ. ಜಾತ್ರೆಯಲ್ಲಿ ಎಲ್ಲ ಬಗೆಯ ವಸ್ತುಗಳು ಲಭ್ಯ ಇರುತ್ತವೆ. ಆದುದರಿಂದ ಕನ್ನಡ ಚಿತ್ರರಂಗವನ್ನು ಪ್ರತಿನಿಧಿಸುವ, ಕನ್ನಡ ನಾಡಿನ ಸಂಸ್ಕೃತಿಯನ್ನು ಪ್ರತಿನಿಧಿಸುವ ಎಲ್ಲ ಚಿತ್ರಗಳು ಮುಖ್ಯ. ಉದಾಹರಣೆಗೆ ದ್ವಂದ್ವಾರ್ಥದ 'ನೀರ್ ದೋಸೆ' ಕೂಡ ಇಲ್ಲಿ ಪ್ರದರ್ಶನ ಕಾಣಬೇಕು. ಅದು ಕೂಡ 'ಜಗ್ಗು ದಾದಾ' ನಷ್ಟೇ ಪ್ರಮುಖ ಸಿನೆಮಾ. ಹಾಗೆಯೇ ಆಫ್ ಶೂಟ್ ಸಿನೆಮಾ ಆದ ತಿಥಿ ಕೂಡ ಮುಖ್ಯ (ಕಳೆದ ಸಿನಿಮೋತ್ಸವದಲ್ಲಿ ಪ್ರದರ್ಶನ ಕಂಡಿತ್ತು). ಜಾತ್ರೆ ಎಲ್ಲವನ್ನು ಒಳಗೊಳ್ಳುತ್ತೆ. 
* ಈ ಸಿನಿಮೋತ್ಸವದಲ್ಲಿ ನಿಮಗೆ ಅತಿ ಹೆಚ್ಚು ಮೆಚ್ಚುಗೆಯಾದ ಸಿನೆಮಾಗಳು ಯಾವುವು?
ನನಗೆ ಬಹಳಷ್ಟು ಸಿನೆಮಾಗಳು ವಿವಿಧ ಕಾರಣಗಳಿಗೆ ಇಷ್ಟವಾದವು. 'ಫೋರ್ ಚೈನೀಸ್ ಪೊಯೆಮ್ಸ್' ಎಂಬ ಸಿನೆಮಾ ಅದರ ನರೇಟಿವ್ ಶೈಲಿಗೆ ಇಷ್ಟ ಆಯಿತು. 'ಗ್ರೀಟಿಂಗ್ಸ್ ಫ್ರಮ್ ಫುಕುಶಿಮಾ' ಎಂಬ ಜರ್ಮನಿ ಸಿನೆಮಾ ಅತಿ ಹೆಚ್ಚು ಡಿಸ್ಟರ್ಬ್ ಮಾಡಿದ ಸಿನೆಮಾ. ಫರ್ಹಾದಿ ಅವರ ಇರಾನ್ ಸಿನೆಮಾ 'ಸೇಲ್ಸ್ ಮ್ಯಾನ್ ನೋಡಬೇಕು ಅಂತ ಭಾರಿ ಮನಸ್ಸಿತ್ತು ಆದರೆ ಜಾಗ ಸಿಗಲಿಲ್ಲ. 
ಈ ಸಿನಿಮೋತ್ಸವದಲ್ಲಿ ನಾನು ನೋಡಿರುವುದರಲ್ಲಿ ಈವರೆಗೆ ಅತಿ ಹೆಚ್ಚು ಕಾಡಿದ್ದು ಶ್ರೀಲಂಕಾದ 'ರೆಡ್ ಬಟ್ಟರ್ ಫ್ಲೈ ಡ್ರೀಮ್ಸ್' ಎನ್ನುವ ಸಿನೆಮಾ. ಪ್ರಿಯಂಥ ಕಾಲುಚಾರಚ್ಚಿ ಅವರು ಅಲ್ಲಿನ ಸೆನ್ಸಾರ್ ಮಂಡಳಿಗೆ ಚಳ್ಳೆ ಹಣ್ಣು ತಿನ್ನಿಸಿ ಇಂತಹ ರಾಜಕೀಯ ಸಿನೆಮಾ ನಿರ್ದೇಶಿಸಿದ್ದಾರೆ ಎಂಬುದು ಅಚ್ಚರಿಯ ವಿಷಯ. ಜಾಫ್ನಾವನ್ನು ಹೆಣ್ಣಿಗೆ ಹೋಲಿಸಿ, ಶ್ರೀಲಂಕಾ ಹೇಗೆ ತಲೆಕಡಿಯುತ್ತಿದೆ ಎಂದು ಸೂಕ್ಷ್ಮವಾಗಿ, ಮಾರ್ಮಿಕವಾಗಿ ಹೇಳಿದ್ದಾರೆ ನಿರ್ದೇಶಕ. ಇವುಗಳನ್ನು ನೋಡಿಕೊಂಡು ಎರಡು ಕಡೆಗೆ ಸೇರದವರು ಎಂಬ ವರ್ಗವನ್ನು ಕೂಡ ಖಾರವಾಗಿ ಟೀಕಿಸುತ್ತಾರೆ. ಅತಿ ಪ್ರಿಯವಾದ ಸಿನೆಮಾವಾಗಿ ಇದು ನನಗೆ ಉಳಿದುಕೊಳ್ಳುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com