
ಬೆಂಗಳೂರು: 'ನಾಟಕದ ಹುಚ್ಚು ಹಿಡಿಸಿಕೊಂಡು ಊರೂರು ತಿರುಗುವಾಗ ಒಂದ್ ಸಿನಿಮಾ ಮಾಡೋ ಕನಸಿತ್ತು. ಯಾರ್ಯಾರೋ ಕೈಯಲ್ಲಿ ಹಣ ಹಾಕಿಸಿ, ಸಿನ್ಮಾ ಮಾಡಿಯೂ ಆಯ್ತು. ಈಗ ಸಿನಿಮಾ ರಿಲೀಸ್ ಮಾಡೋದೇ ತುಂಬಾ ಕಷ್ಟ ಆಗೈತಿ. ಹೀಗಾಗಿ ನಾವೇ ಬಾಕ್ಸ್ ಹೊತ್ತುಕೊಂಡು ಊರೂರಿಗೆ ಹೋಗ್ತೀವಿ...'
'ಅಗಸಿ ಪಾರ್ಲರ್' ಚಿತ್ರದ ನಿರ್ದೇಶಕ ಮಹಾಂತೇಶ್ ರಾಮದುರ್ಗಾ ತಮ್ಮ ಸಿನಿಮಾ ಬಿಡುಗಡೆ ಜತೆಗೆ, ಆ ಸಿನಿಮಾಕ್ಕೆ ಹಾಕಿದ ಬಂಡವಾಳ ಹಿಂಪಡೆಯಲು ನಡೆಸುತ್ತಿರುವ ಯಾತನೆಯ ಕಥೆಯಿದು. ಇದು ಕೇವಲ 'ಅಗಸಿ ಪಾರ್ಲರ್' ಕಥೆ ಮಾತ್ರವಲ್ಲ. ಕಲಾತ್ಮಕ ಚಿತ್ರಗಳೆಂಬ ಹಣೆಪಟ್ಟಿ ಹೊತ್ತ ಹತ್ತು ಹಲವು ಸಿನಿಮಾಗಳ ಪರಿಸ್ಥಿತಿಯೂ ಹೌದು.
'ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ'ದಲ್ಲಿ ಬುಧವಾರ 'ಅಗಸಿ ಪಾರ್ಲರ್' ಪ್ರದರ್ಶನವಾಗುತ್ತಿದೆ. ಈ ಹಿನ್ನಲೆಯಲ್ಲಿಯೇ ಮಂಗಳವಾರ ವಾರ್ತಾ ಇಲಾಖೆ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಯುವ ನಿರ್ದೇಶಕ ಮಂಹಾತೇಶ್, ತಮ್ಮ ಮೊದಲ ನಿರ್ದೇಶನದ ಸಿನಿಮಾದ ವಿಶೇಷತೆಗಳನ್ನು ವಿವರಿಸುವ ಬದಲಿಗೆ, ಅದರ ಬಿಡುಗಡೆಯ ಯಾತನೆ ಮತ್ತು ಮುಂದೆ ಚಿತ್ರ ಪ್ರದರ್ಶನಕ್ಕೆ ಹಾಕಿಕೊಂಡಿರುವ ಯೋಜನೆಗಳನ್ನು ಮುಂದಿಟ್ಟರು.
'ಕಷ್ಟಪಟ್ಟು ಸಿನ್ಮಾ ಮಾಡಿದ್ದೇವೆ. ತುಂಬಾ ಒಳ್ಳೆಯ ಕಥೆ. ಆದ್ರೆ ಬಿಡುಗಡೆಗೆ ಈಗ ತೊಂದರೆ ಆಗಿದೆ. ರಿಲೀಸ್‌ಗೆ ಟಾಕಿಸ್ ಮಾಲೀಕರು 20 ಲಕ್ಷ ರೆಂಟ್ ಕೇಳುತ್ತಿದ್ದಾರೆ. ಅಷ್ಟೋಂದು ಹಣ ನಮ್ಮ ಬಳಿ ಇಲ್ಲ. ಹಿಂಗಾಗಿ ದಿಕ್ಕೇ ತೋಚದಂತಾಗಿದೆ. ಹೇಗೋ ನಾವು ನಾಟಕದ ಮಂದಿ. ತಿರುಗಾಟದ ಅನುಭವವಿದೆ. ಸಿನಿಮಾ ಬಾಕ್ಸ್ ಹೊತ್ಕೊಂಡು ಊರೂರಿಗೆ ಹೋಗ್ತೀವಿ. ಅಲ್ಲಿ ಆಯೋಜಕರ ಮೂಲಕ ಸಿನಿಮಾ ಪ್ರದರ್ಶನ ನಡೆಸಿ, ಸಿಕ್ಕಷ್ಟು ದುಡ್ಡು ಸಂಪಾದಿಸಿಕೊಳ್ತೇವೆ ಎಂದು ಮಹಾಂತೇಶ್ ಅಳಲು ತೋಡಿಕೊಂಡರು'.
'ಚಿತ್ರ ತಂಡದ ಯೋಜನೆಯಂತೆ ಅಗಸಿ ಪಾರ್ಲರ್ ಜನವರಿ ಕೊನೆ ವಾರ ಅಥವಾ ಫೆಬ್ರವರಿಯಲ್ಲಿ ಬಿಡುಗಡೆ ಆಗ್ತಿದೆ. ಆದರೆ ಅದಕ್ಕೂ ಮೊದಲೇ ರಾಜ್ಯಾದ್ಯಂತ ಅದರ ತಿರುಗಾಟ ಶುರುವಾಗುತ್ತಿದೆ. ನಾಟಕಗಳ ಹಾಗೆ ಊರೂರಿಗೆ ಹೋಗಿ, ಅಲ್ಲಿ ಜನರಿಗೆ ಸಿನಿಮಾ ಪ್ರದರ್ಶಿಸಿ, ಹಣ ಸಂಪಾದಿಸಿಕೊಳ್ಳಲಾಗುತ್ತದೆ. ಲಾಭವಲ್ಲದಿದ್ದರೂ, ಕೊನೆ ಪಕ್ಷ ಹಾಕಿದ ಬಂಡವಾಳವಾದರೂ ಸಿಗಲಿ. ಜೊತೆಗೆ ಜನರಿಗೂ ತಮ್ಮ ಸಿನಿಮಾ ತಲುಪಲಿ ಎಂಬುದು ತಮ್ಮ ಉದ್ದೇಶ'ವೆಂದು ಅವರು ವಿವರಿಸಿದರು.
ಕಮರ್ಷಿಯಲ್ ಚಿತ್ರಗಳ ನಿರ್ದೇಶನದ ನಡುವೆಯೇ 'ಹಗ್ಗದ ಕೊನೆ'ಯಂಥ ಬ್ರಿಡ್ಜ್ ಮಾದರಿಯ ಸಿನಿಮಾ ನಿರ್ದೇಶಿಸಿರುವ ನಿರ್ದೇಶಕ ದಯಾಳ್ ಪದ್ಮನಾಭನ್ ಮಾತನಾಡಿ, ಕಮರ್ಷಿಯಲ್ ಚಿತ್ರಗಳ ಮಾದರಿಯಲ್ಲಿಯೇ ಈ ಚಿತ್ರಕ್ಕೂ ಪ್ರಚಾರದ ತಂತ್ರಗಾರಿಕೆ ಬಳಸಿಕೊಳ್ಳಲಾಗಿದೆ. ಹೀಗಾಗಿ ಬಂಡವಾಳದ ವಿಚಾರದಲ್ಲಿ ತಮಗೆ ಭಯವಿಲ್ಲ ಎಂದರು.
ನಟ ನಿರ್ದೇಶಕ ಎಸ್.ಮೋಹನ್ ತಮ್ಮ ನಿರ್ದೇಶನದ 'ಸಚಿನ್ ತೆಂಡೂಲ್ಕರ್ ಅಲ್ಲ' ಚಿತ್ರದ ಬಗ್ಗೆಯೂ ಹೇಳಿಕೊಂಡರು. ಆಟಿಸಂ ಖಾಯಿಲೆಗೆ ಒಳಗಾದ ತನ್ನ ಸೋದರ ಸಂಬಂಧಿಯ ಮಗನ ಕಥೆಯನ್ನೇ ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇನೆ. ಕಮರ್ಷಿಯಲ್ ಮತ್ತು ಪ್ರಚಾರದ ದೃಷ್ಟಿಯಿಂದ ಕಥೆಗೆ ಕ್ರಿಕೆಟ್ ತಳುಕು ಹಾಕಿಕೊಂಡಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಇದೇ ತಿಂಗಳು ಚೆನ್ನೈನಲ್ಲಿ ನಡೆಯುವ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲೂ ಈ ಚಿತ್ರ ಪ್ರದರ್ಶನ ಕಾಣುತ್ತಿದೆ ಎಂದು ಹೆಮ್ಮೆ ಪಟ್ಟರು.
ಕನ್ನಡ ಸಿನಿಮಾಗಳಿಗೆ ಹೊರ ರಾಜ್ಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆ ಕಲ್ಪಿಸಬೇಕೆಂಬ ಯೋಜನೆಯ ಮೊದಲ ಹಂತವಾಗಿ, ಸಿನಿಮೋತ್ಸವದಲ್ಲಿ ಪ್ರದರ್ಶನಗೊಂಡ ಎಲ್ಲ ಕನ್ನಡ ಸಿನಿಮಾಗಳಿಗೆ ಮಾರುಕಟ್ಟೆ ಸೃಷ್ಟಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಮಾರುಕಟ್ಟೆ ಘಟಕ ಸ್ಥಾಪಿಸಲು ಸಿನಿಮೋತ್ಸವ ಮುಗಿದ ತಕ್ಷಣ ಚಾಲನೆ ನೀಡಲಾಗುವುದು.
-ಎಸ್.ವಿ.ರಾಜೇಂದ್ರ ಸಿಂಗ್ ಬಾಬು
ಚಲನಚಿತ್ರ ಅಕಾಡೆಮಿ ಅಧ್ಯಕ್ಷ
ನಾಳೆ ಸಮಾರೋಪ
ಡಿ.11ರಂದು ಸಂಜೆ 6 ಗಂಟೆಗೆ ಸಿನಿಮೋತ್ಸವದ ಸಮಾರೋಪ ಸಮಾರಂಭ ನಗರದ ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ. ರಾಜ್ಯಪಾಲ ವಿ.ಆರ್. ವಾಲಾ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು, ಸಚಿವ ರೋಷನ್ ಬೇಗ್ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಮೊದಲ ಬಾರಿಗೆ ಕನ್ನಡದ ವಿಭಾಗದಲ್ಲಿ ನಾಲ್ಕು ಸಿನಿಮಾಗಳಿಗೆ ಅತ್ಯುತ್ತಮ ಸಿನಿಮಾ ಪ್ರಶಸ್ತಿ ನೀಡಲಾಗುತ್ತಿದೆ. ಭಾರತೀಯ ಸಿನಿಮಾ ವಿಭಾಗದಲ್ಲಿ ಮೂರು ಮತ್ತು ಅಂತಾರಾಷ್ಟ್ರೀಯ ಜ್ಯೂರಿಯಿಂದ ಏಷಿಯಾ ವಿಭಾಗದಲ್ಲಿ ಒಂದು ಅತ್ಯುತ್ತಮ ಚಿತ್ರಕ್ಕೆ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಕಲಾತ್ಮಕ ನಿರ್ದೇಶಕ ವಿದ್ಯಾಶಂಕರ್ ತಿಳಿಸಿದರು.
Advertisement