ರೈಲ್ವೇ ಬಜೆಟ್: ಗಣ್ಯರ ಪ್ರತಿಕ್ರಿಯೆ

ದೆಹಲಿಯ ಸಂಸತ್ ಭವನದಲ್ಲಿ ಗುರುವಾರ ಕೇಂದ್ರ ರೇಲ್ವೇ ಸಚಿವ ಸುರೇಶ್ ಪ್ರಭು ಅವರು ಮಂಡಿಸಿದ ಚೊಚ್ಚಲ ರೇಲ್ವೇ ಬಜೆಟ್ ಕುರಿತಂತೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು...
ರೇಲ್ವೇ ಬಜೆಟ್
ರೇಲ್ವೇ ಬಜೆಟ್

ನವದೆಹಲಿ: ದೆಹಲಿಯ ಸಂಸತ್ ಭವನದಲ್ಲಿ ಗುರುವಾರ ಕೇಂದ್ರ ರೇಲ್ವೇ ಸಚಿವ ಸುರೇಶ್ ಪ್ರಭು ಅವರು ಮಂಡಿಸಿದ ಚೊಚ್ಚಲ ರೇಲ್ವೇ ಬಜೆಟ್ ಕುರಿತಂತೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಬಿಜೆಪಿ ಮುಖಂಡರ ಬಜೆಟ್ ಅನ್ನು ಸಮರ್ಥಿಸಿಕೊಂಡಿದ್ದಾರೆ.

ಅಭಿವೃದ್ಧಿ ಹೆಚ್ಚಿನ ಒತ್ತು
ಸುರೇಶ್ ಪ್ರಭು ಅವರು ಮಂಡಿಸಿದ ರೈಲ್ವೆ ಬಜೆಟ್ ಇಲಾಖೆಯನ್ನು ಅಭಿವೃದ್ಧಿಗೊಳಿಸುವ ಸ್ಪಷ್ಟವಾದ ಗುರಿಯನ್ನು ಹೊಂದಿದೆ. ಆದಾಯ ಸಂಗ್ರಹಣೆ ಮಾಡುವ ಮೂಲಕ ಅಭಿವೃದ್ಧಿ ಮಾಡಿ ದೇಶದ ಆರ್ಥಿಕತೆಗೆ ಕೊಡುಗೆ ನೀಡುವಂತಿದೆ. ಉತ್ತಮವಾದ ಬಜೆಟ್ ನೀಡಿದ ಸುರೇಶ್ ಪ್ರಭು ಅವರನ್ನು ಅಭಿನಂಧಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕನಸಿನ ಬಜೆಟ್, ಜಾರಿ ಅಸಾಧ್ಯ
ಇದು ಕನಸಿನ ಬಜೆಟ್, ಇದನ್ನು ಜಾರಿಗೊಳಿಸುವುದು ಪ್ರಾಯೋಗಿಕವಾಗಿ ಸಾಧ್ಯವೇ ಇಲ್ಲ. ಖಾಸಗಿ ಸಹಭಾಗಿತ್ವದ ಮೂಲಕ ಹಲವು ಯೋಜನೆ ಜಾರಿಗೆ ತರುತ್ತೇವೆ ಎಂದು ಹೇಳಿದ್ದಾರೆ. ಆದರೆ, ಯಾವ ಮಾರ್ಗದಲ್ಲಿ, ಎಷ್ಟು ಕಿ.ಮೀ. ಮುಂತಾದ ಮಾಹಿತಿಗಳಿಲ್ಲ. ಆದ್ದರಿಂದ ಇದು ಕೇವಲ ಘೋಷಣೆಯ ಬಜೆಟ್ ಆಗಿದೆ ಎಂದು ಎಂದು ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.

ನಿರಾಶಾದಾಯಕ ಬಜೆಟ್
ಇದು ನಿರಾಶಾದಾಯಕ ಬಜೆಟ್ ಆಗಿದ್ದು, ಹಳೆಯ ಯೋಜನೆಗಳನ್ನು ಮುಂದುವರೆಸಲು ನಿರ್ಧರಿಸಲಾಗಿದೆ. ರೈಲ್ವೆ ಪ್ರಯಾಣದರ ಕಡಿಮೆಯಾಗಬಹುದು ಎಂಬ ನಿರೀಕ್ಷೆ ಇತ್ತು ಆದರೆ ಪ್ರಸಕ್ತ ಬಜೆಟ್ ನಿರೀಕ್ಷೆಯನ್ನು ಹುಸಿಗೊಳಿಸಿದೆ ಎಂದು ಮಾಜಿ ರೈಲ್ವೆ ಸಚಿವ ಪವನ್ ಕುಮಾರ್ ಬನ್ಸಾಲ್ ಹೇಳಿದ್ದಾರೆ.

ಹೊಸ ರೈಲಿಲ್ಲ, ಹೊಸ ಮಾರ್ಗವಿಲ್ಲ
ಈ ಬಾರಿಯ ರೈಲ್ವೆ ಬಜೆಟ್‌ನಲ್ಲಿ ಒಂದೇ ಒಂದು ಹೊಸ ರೈಲನ್ನೂ ಕೂಡ ಘೋಷಣೆ ಮಾಡಿಲ್ಲ, ಕನಿಷ್ಠ ಪ್ರಯಾಣ ದರವನ್ನಾದರೂ ಕಡಿಮೆ ಮಾಡಬಹುದು ಎಂಬ ನಿರೀಕ್ಷೆ ಇತ್ತು ಅದು ಕೂಡ ಹುಸಿಯಾಗಿದೆ ಎಂದು ಕಾಂಗ್ರೆಸ್ ನಾಯಕ ರಾಜೀವ್ ಶುಕ್ಲಾ ಪ್ರತಿಕ್ರಿಯೆ ನೀಡಿದ್ದಾರೆ.

ಇಲಾಖೆಯ ಅಭಿವೃದ್ಧಿಯಾಗಿಲ್ಲ
ಕಳೆದ 9 ತಿಂಗಳಿನಲ್ಲಿ ರೈಲ್ವೆ ಇಲಾಖೆಯಲ್ಲಿ ಯಾವುದೇ ರೀತಿಯ ಅಭಿವೃದ್ಧಿಯಾಗಿಲ್ಲ. ಕೇವಲ ಕೆಲವು ಹೊಸ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಆದರೆ, ಸರ್ಕಾರ ಹಿಂದಿನ ಬಜೆಟ್‌ನ ಎಷ್ಟು ಯೋಜನೆಗಳನ್ನು ಅನುಷ್ಟಾನ ಮಾಡಿದೆ... ಈ ಬಗ್ಗೆ  ಕೇಂದ್ರ ಸರ್ಕಾರ ಮಾಹಿತಿ ನೀಡಲಿ ಎಂದು ಬಿಎಸ್‌ಪಿ ನಾಯಕಿ ಮಾಯಾವತಿ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಜನರಿಗೆ ನಿರಾಸೆ ಮಾಡಿದ್ದಾರೆ
ರೈಲ್ವೆ ಬಜೆಟ್‌ ಮೇಲೆ ಜನರ ನಿರೀಕ್ಷೆ ಹೆಚ್ಚಾಗಿರುತ್ತದೆ. ಬಜೆಟ್‌ನಲ್ಲಿ ಪ್ರಯಾಣದರವನ್ನು ಕಡಿಮೆ ಮಾಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಸರ್ಕಾರ ಜನರಿಗೆ ನಿರಾಸೆ ಮಾಡಿದೆ ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ರೈಲ್ವೆ ಬಜೆಟ್‌ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಯಾಣಿಕರಿಗೆ ಆದ್ಯತೆ
ಈ ಬಾರಿಯ ರೈಲ್ವೇ ಬಜೆಟ್‌ನಲ್ಲಿ ಪ್ರಯಾಣಿಕರ ಸುರಕ್ಷತೆ, ಮೂಲ ಸೌಕರ್ಯ ಒದಗಿಸಲು ಆದ್ಯತೆ ನೀಡಲಾಗಿದೆ. ಉತ್ತಮ ಬಜೆಟ್ ನೀಡಿದ ಪ್ರಧಾನಿ ಮತ್ತು ರೈಲ್ವೆ ಸಚಿವರಿಗೆ  ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪ್ರತಿಕ್ರಿಯೆ ಹೇಳಿದ್ದಾರೆ.
 
ಜನರಿಗಿಲ್ಲ ಇಲಾಖೆಯ ಲಾಭ
ಕೇಂದ್ರ ರೈಲ್ವೆ ಬಜೆಟ್‌ನಿಂದ ಕರ್ನಾಟಕಕ್ಕೆ ಯಾವುದೇ ಲಾಭವಾಗಿಲ್ಲ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಗಣನೀಯವಾಗಿ ಇಳಿಕೆಯಾಗಿದೆ. ಇದರಿಂದ ರೈಲ್ವೆ ಇಲಾಖೆಗೆ ಸುಮಾರು 16 ಸಾವಿರ ಕೋಟಿ ರೂ.ಗಳಿಂತಲೂ ಹೆಚ್ಚಿನ ಉಳಿತಾಯವಾಗಿದೆ. ಈ ಲಾಭವನ್ನು ದರ ಕಡಿಮೆ ಮಾಡುವ ಮೂಲಕ ಜನರಿಗೆ ತಲುಪಿಸಬೇಕಿತ್ತು. ಆದರೆ, ಅದನ್ನು ಕೇಂದ್ರ ಸರ್ಕಾರ ಮಾಡಿಲ್ಲ ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಜನ ಸ್ನೇಹಿ ಬಜೆಟ್
ಸುರೇಶ್ ಪ್ರಭು ಅವರು ಮಂಡಿಸಿದ ರೇಲ್ವೆ ಬಜೆಟ್ ಪ್ರಯಾಣಿಕ ಸ್ನೇಹಿಯಾಗಿದ್ದು, ಪ್ರಯಾಣಿಕರಿಗೆ ಹೊರೆಯಾಗದ ರೀತಿಯಲ್ಲಿ ಸ್ವಚ್ಛತೆ ಮತ್ತು ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಆನ್‌ಲೈನ್ ಬುಕ್ಕಿಂಗ್, ಎಸ್‌ಎಂಎಸ್ ಸಂದೇಶ ರವಾನೆ, 4 ತಿಂಗಳ ಮುಂಗಡ ಬುಕ್ಕಿಂಗ್ ವ್ಯವಸ್ಥೆ ಮುಂತಾದ ಉತ್ತಮವಾದ ಯೋಜನೆಗಳನ್ನು ಜಾರಿಗೆ ತರುವ ಘೋಷಣೆ ಮಾಡಲಾಗಿದೆ ಎಂದು ಪ್ರತಿಪಕ್ಷ ನಾಯಕ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com