ಸೇವಾ ತೆರಿಗೆ ಏರಿಕೆ; ಅಗತ್ಯ ವಸ್ತುಗಳ ಬೆಲೆ ಏರಿಕೆ ಸಾಧ್ಯತೆ
ನವದೆಹಲಿ: ಸಂಸತ್ ಭವನದಲ್ಲಿ ಶನಿವಾರ 2015ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡಿಸಿದ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಸೇವಾ ತೆರಿಗೆ ಪ್ರಮಾಣವನ್ನು ಏರಿಕೆ ಮಾಡಿದ್ದಾರೆ.
ಈ ಹಿಂದೆ 12.36ರಷ್ಟಿದ್ದ ಸೇವಾ ತೆರಿಗೆಯನ್ನು ಶೇ.14ಕ್ಕೆ ಏರಿಕೆ ಮಾಡಲಾಗಿದೆ. ಈ ವರ್ಷದ ತೆರಿಗೆ ಸಂಗ್ರಹದ ಗುರಿಯನ್ನು 14,49,490ಕ್ಕೆ ಏರಿಸಲಾಗಿದ್ದು, ಇದೇ ಕಾರಣಕ್ಕಾಗಿ ಸೇವಾ ತೆರಿಗೆಯನ್ನು ಏರಿಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಕಾರ್ಪೋರೆಟ್ ತೆರಿಗೆಯನ್ನು ಶೇ.30ರಿಂದ ಶೇ.25ಕ್ಕೆ ಇಳಿಕೆ ಮಾಡಲಾಗಿದ್ದು, ಮುಂದಿನ ನಾಲ್ಕು ವರ್ಷಗಳಲ್ಲಿ ಕಾರ್ಪೋರೆಟ್ ತೆರಿಗೆಯನ್ನು ಹಂತ-ಹಂತವಾಗಿ ಇಳಿಕೆ ಮಾಡಲಾಗುತ್ತದೆ. ಇನ್ನು ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಇನ್ನು ಕಪ್ಪು ಹಣದ ಕುರಿತಂತೆ ಮಾಹಿತಿ ನೀಡಿದ ಅರುಣ್ ಜೇಟ್ಲಿ ಅವರು, ಕಪ್ಟು ಹಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ. ಕೇಂದ್ರ ಸರ್ಕಾರ ಆದಾಯ ಉತ್ತೇಜಿಸುವ ಗುರಿ ಹೊಂದಿದ್ದು, ಕಪ್ಪು ಹಣ ನಿಯಂತ್ರಣಕ್ಕೆ ಹೊಸ ಮಸೂದೆ ಮಂಡಿಸುತ್ತೇವೆ ಎಂದು ಹೇಳಿದರು.
2.5 ಲಕ್ಷ ರು.ಗಳವರೆಗೆ ಟ್ಯಾಕ್ಸ್ ಇಲ್ಲ. 2.5ರಿಂದ 5 ಲಕ್ಷದವರೆಗೆ ಶೇ.10ರಷ್ಟು, 5ರಿಂದ 10ಲಕ್ಷದವರೆಗೆ ಶೇ.20ರಷ್ಟು, 10 ಲಕ್ಷಕ್ಕೆ ಮೇಲ್ಪಟ್ಟು ಶೇ.30ರಷ್ಟು ತೆರಿಗೆ ವಿಧಿಸಲಾಗಿದೆ. ವಾರ್ಷಿಕ 1ಕೋಟಿಗಿಂತ ಅಧಿಕ ಆದಾಯ ಹೊಂದಿರುವವರಿಗೆ ಶೇ.2ರಷ್ಟು ಸರ್‌ಛಾರ್ಜ್ ವಿಧಿಸಲಾಗುತ್ತದೆ. ಆಸ್ತಿ ತೆರಿಗೆಯನ್ನು ತೆಗೆದು ಹಾಕಲಾಗುವುದು. ಯಾತ್ರಾ ಭತ್ಯೆಯನ್ನು 800 ರೂ.ಗಳಿಂದ 1,600ಕ್ಕೆ ಹೆಚ್ಚಳ ಮಾಡಲಾಗುತ್ತದೆ ಎಂದು ಜೇಟ್ಲಿ ಹೇಳಿದರು.
ಸೇವಾ ತೆರಿಗೆ ಏರಿಕೆಯಾಗದಿರುವುದರಿಂದ ಸಾಮಾನ್ಯವಾಗಿಯೇ ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಲಿದ್ದು, ಬೆಲೆ ಏರಿಕೆಗೆ ದೇಶದ ಜನ ಸಿದ್ಧರಾಗಬೇಕಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ