ಕಪ್ಪು ಹಣ, ಬೇನಾಮಿ ಆಸ್ತಿ ವಿರುದ್ಧ ಸಮರ

ದೇಶದ ಅರ್ಥವ್ಯವಸ್ಥೆ ಪಾಲಿಗೆ ತಲೆನೋವಾಗಿ ಪರಿಣಮಿಸಿರುವ ಕಪ್ಪುಹಣ ಹಾಗೂ ಬೇನಾಮಿ ಆಸ್ತಿ ವಿರುದ್ಧ ಸಮರ ಸಾರಿರುವ ಅರುಣ್ ಜೇಟ್ಲಿ, ಇದರ ನಿಯಂತ್ರಣಕ್ಕಾಗಿ...
ಕೇಂದ್ರ ಬಜೆಟ್ 2015
ಕೇಂದ್ರ ಬಜೆಟ್ 2015

ದೇಶದ ಅರ್ಥವ್ಯವಸ್ಥೆ ಪಾಲಿಗೆ ತಲೆನೋವಾಗಿ ಪರಿಣಮಿಸಿರುವ ಕಪ್ಪುಹಣ ಹಾಗೂ ಬೇನಾಮಿ ಆಸ್ತಿ ವಿರುದ್ಧ ಸಮರ ಸಾರಿರುವ ಅರುಣ್ ಜೇಟ್ಲಿ, ಇದರ ನಿಯಂತ್ರಣಕ್ಕಾಗಿ ಅನೇಕ ಕಠಿಣ ಕ್ರಮಗಳನ್ನು ಪ್ರಕಟಿಸಿದ್ದಾರೆ.

ವಿದೇಶದಲ್ಲಿ ಕಪ್ಪು ಹಣ ಇಟ್ಟವರಿಗೆ 10 ವರ್ಷ ಜೈಲು ಶಿಕ್ಷೆ, ಡೆಬಿಟ್ ಮತ್ತು ಕ್ರೆಡಿಟ್ ವ್ಯವಹಾರಕ್ಕೆ ಉತ್ತೇಜನ, ರಿಯಲ್ ಎಸ್ಟೇಟ್ ವ್ಯವಹಾರಗಳ ಮೇಲೆ ಹೆಚ್ಚಿನ ನಿಗಾ ಇಡುವಂಥ ಹಲವು ನಿರ್ಧಾರಗಳನ್ನು ಘೋಷಿಸಿದ್ದಾರೆ. ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ಕಪ್ಪುಹಣಕ್ಕೆ ಕಡಿವಾಣ ಹಾಕುವುದಾಗಿ ನರೇಂದ್ರ ಮೋದಿ ಘೋಷಿಸಿದ್ದರು. ಅದರಂತೆ ಈಗಾಗಲೇ ಸರ್ಕಾರ ಕಪ್ಪುಹಣದ ತನಿಖೆಗೆ ಎಸ್ಐಟಿಯನ್ನು ನೇಮಿಸಿದೆ. ಸ್ವಿಜರ್ ಲೆಂಡ್ ಸೇರಿದಂತೆ `ಕಪ್ಪುಹಣದ ಸ್ವರ್ಗ' ಎಂದು ಕರೆಸಿಕೊಳ್ಳುವ ರಾಷ್ಟ್ರಗಳ ಜತೆಗೆ ಒಪ್ಪಂದಗಳನ್ನೂ ಮಾಡಿಕೊಳ್ಳುತ್ತಿದೆ.

ಇಷ್ಟಾದರೂ ದೇಶದ ತೆರಿಗೆ ಕಾನೂನು ಬಲಪಡಿಸದೆ ಕಪ್ಪುಹಣದ ಮೇಲೆ ಸಂಪೂರ್ಣ ನಿಯಂತ್ರಣ ಹೇರುವುದು ಅಸಾಧ್ಯಎಂಬುದು ಜೇಟ್ಲಿಗೂ ಅರಿವಾಗಿದೆ. ಈ ಸಂಬಂಧ ಪ್ರತ್ಯೇಕ ವಿಧೇಯಕವೊಂದನ್ನು ಮಂಡಿಸಲು ಅವರು ನಿರ್ಧರಿಸಿದ್ದಾರೆ. ಈ ವಿಧೇಯಕ ಈ ಅಧಿವೇಶನದಲ್ಲೇ ಮಂಡನೆಯಾಗಲಿರುವುದು ವಿಶೇಷ. ಈ ಪ್ರಸ್ತಾಪಿತ ವಿಧೇಯಕ ವಿದೇಶದಲ್ಲಿರುವ ಆಸ್ತಿ ಮರೆ ಮಾಚುವುದು, ತೆರಿಗೆ ತಪ್ಪಿಸಿ ವಿದೇಶಿ ಬ್ಯಾಂಕ್ ಗಳಲ್ಲಿ ಹಣ ಇಡುವುದನ್ನು ಗಂಭೀರ ಅಪರಾಧವಾಗಿ ಪರಿಗಣಿಸುತ್ತದೆ. ಜತೆಗೆ ಅಂಥ ಅಪರಾಧ ಮಾಡಿದವರಿಗೆ ಕಠಿಣ ಶಿಕ್ಷೆ ವಿಧಿಸುವ ಅವಕಾಶ ಮಾಡಿಕೊಡಲಿದೆ.

ಇನ್ನು ದೇಶದೊಳಗೆ ಕಪ್ಪುಹಣಕ್ಕೆ ಕಡಿವಾಣ ಹಾಕಲು ಹೊಸ ಮತ್ತು ಹೆಚ್ಚು ಸಮಗ್ರ ಬೇನಾಮಿ ಹಣ ವರ್ಗಾವಣೆ (ನಿಯಂತ್ರಣ) ವಿಧೇಯಕವನ್ನು ಬಜೆಟ್ ಅಧಿವೇಶನದಲ್ಲೇ  ಮಂಡಿಸಲು ನಿರ್ಧರಿಸಲಾಗಿದೆ. ಬೇನಾಮಿ ಆಸ್ತಿಗಳನ್ನು ಮುಟ್ಟುಗೋಲು ಹಾಕಲು ಹಾಗೂ ಆ ರೀತಿಯ ಆಸ್ತಿ ಹೊಂದಿದವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಈ ಹೊಸ ಕಾನೂನು ಅವಕಾಶ ಮಾಡಿಕೊಡುತ್ತದೆ. ಇದಲ್ಲದೆ, ಆದಾಯ ತೆರಿಗೆ ಇಲಾಖೆ ಕಾಯ್ದೆಯೂ ತಿದ್ದುಪಡಿಗೆ ಒಳಗಾಗಲಿದೆ. ಈ ಮೂಲಕ ಯಾವುದೇ ಸ್ಥಿರ ಆಸ್ತಿ ಖರೀದಿ ವೇಳೆ ರು.20 ಸಾವಿರ ಅಥವಾ ಅದಕ್ಕಿಂತ ಹೆಚ್ಚು ಮುಂಗಡವಾಗಿ ನೀಡುವುದು ಅಥವಾ ಸ್ವೀಕರಿಸುವುದಕ್ಕೆ ನಿರ್ಬಂಧ ಹೇರಲಿದೆ. ಇದಲ್ಲದೆ, ರು.1 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಆಸ್ತಿ ಖರೀದಿ ಹಾಗೂ ಮಾರಾಟ ವೇಳೆ ಪ್ಯಾನ್ ನಂಬರ್ ನೀಡುವುದು ಕಡ್ಡಾಯವಾಗಲಿದೆ.

ಎಲೆಕ್ಟ್ರಾನಿಕ್ ವಿಧಾನದ ವ್ಯವಹಾರ
ವಿದೇಶದಲ್ಲಿ ಇಟ್ಟಿರುವ ಕಪ್ಪುಹಣ ವಾಪಸ್ ತಂದರೆ ಸಾಲದು, ದೇಶದಲ್ಲಿ ಬಡತನ, ಅಸಮಾನತೆ ನಿವಾರಣೆಯಾಗ ಬೇಕಾದರೆ ದೇಶದೊಳಗಿನ ಕಪ್ಪುಹಣದ ಹರಿವಿಗೂ ಕಡಿವಾಣ ಬೀಳಬೇಕು. ಇದಾಗಬೇಕಿದ್ದರೆ ನಗದು ವ್ಯವಹಾರಗಳು ಕಡಿಮೆಯಾಗಬೇಕು. ಅಂದರೆ ಬಹುತೇಕ ವ್ಯವಹಾರ ಎಲೆಕ್ಟ್ರಾನಿಕ್ ವಿಧಾನದಲ್ಲೇ ನಡೆಯಬೇಕು ಎನ್ನುವುದು ಹಣಕಾಸು ಸಚಿವರ ಭಾವನೆ. ಸದ್ಯ ಜನಧನ ಯೋಜನೆಯಿಂದಾಗಿ ದೇಶದ ಬಹುತೇಕರು ರುಪೇ ಕಾರ್ಡ್ ಹೊಂದುವಂತಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ವ್ಯವಹಾರಕ್ಕೆ ಹೆಚ್ಚಿನ ಉತ್ತೇಜನ ನೀಡಲು ಅನೇಕ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಆ ನಿಯಮಗಳು ಏನೇನು ಎನ್ನುವ ಕುರಿತ ಮಾಹಿತಿ ಹಣಕಾಸು ಸಚಿವಾಲಯ ಇನ್ನಷ್ಟೇ ನೀಡಬೇಕಿದೆ.

ನಿಯಂತ್ರಣಕ್ಕೆ ಕ್ರಮಗಳೇನು?
ವಿದೇಶದಲ್ಲಿ ತೆರಿಗೆ ತಪ್ಪಿಸಿ ಮಾಡಿದ ಆಸ್ತಿ, ವಿದೇಶಿ ಬ್ಯಾಂಕ್ ಗಳಲ್ಲಿ ಹಣ ಇಟ್ಟರೆ ಗರಿಷ್ಠ 10 ವರ್ಷ ಜೈಲು ವಿಧಿಸುವುದು.ಈ ರೀತಿಯ ಪ್ರಕರಣಗಳನ್ನು ರಾಜಿ ಮೂಲಕ ಪರಿಹಾರಕ್ಕೆ ಅವಕಾಶ ನಿರಾಕರಿಸುವುದು. ವ್ಯಾಜ್ಯ ಇತ್ಯರ್ಥ ಆಯೋಗಕ್ಕೆ ಮನವಿ ಸಲ್ಲಿಸುವ ಹಕ್ಕನ್ನೂ ಆರೋಪಿಯಿಂದ ಕಿತ್ತುಕೊಳ್ಳುವುದು. ಈ ರೀತಿಯ ಪ್ರಕರಣಗಳಲ್ಲಿ ಶೇ.300ರ ವರೆಗೆ ದಂಡ ವಿಧಿಸುವುದು. ವಿದೇಶಿ ಆಸ್ತಿಯಿಂದ ಬರುವ ಆದಾಯವನ್ನು ಬಹಿರಂಗಪಡಿಸದಿದ್ದರೆ ಏಳು ವರ್ಷದ ವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶ ನೀಡುವುದು.

ವಿದೇಶಿ ಆಸ್ತಿಯಿಂದ ತೆರಿಗೆ ವ್ಯಾಪ್ತಿಗೆ ಬರುವಷ್ಟು ಆದಾಯ ಬರಲಿ, ಬಿಡಲಿ ರಿಟರ್ನ್ ಸಲ್ಲಿಸುವುದು ಕಡ್ಡಾಯ ಮಾಡುವುದು. ವಿದೇಶಿ ಬ್ಯಾಂಕ್ ನಲ್ಲಿ ಖಾತೆ ತೆರೆದ ದಿನಾಂಕವನ್ನು ಆದಾಯ ತೆರಿಗೆ ರಿಟರ್ನ್ಸ್ ಲ್ಲಿ ಕಡ್ಡಾಯವಾಗಿ ದಾಖಲಾಗುವಂತೆ ನೋಡಿಕೊಳ್ಳುವುದು. ಕಪ್ಪುಹಣದ ಮೇಲೆ ನಿಯಂತ್ರಣ ಹೇರಲು ಜಾರಿಗೆ ತರಲಾಗುತ್ತಿರುವ ಹೊಸ ವಿಧೇಯಕಕ್ಕೆ ಅನುಗುಣವಾಗಿ ವಿಮಾ ಕಾಯ್ದೆಗೆ ತಿದ್ದುಪಡಿ ತರುವುದು. ಭಾರತೀಯರು ವಿದೇಶದಲ್ಲಿ ಮಾಡಿಕೊಂಡಿರುವ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಅಷ್ಟೇ ಪ್ರಮಾಣದಲ್ಲಿ ಅವರು ದೇಶದಲ್ಲಿ ಮಾಡಿಕೊಂಡಿರುವ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ತನಿಖಾ ಸಂಸ್ಥೆಗಳಿಗೆ ಅವಕಾಶ ಮಾಡಿಕೊಡುವುದು.

ದೇಶಿ ಕಪ್ಪುಹಣ
ಬೇನಾಮಿ ಆಸ್ತಿ ಮಾಡಿಕೊಳ್ಳಲು ಅವಕಾಶ ಮಾಡಿಕೊಡುವ ಅದರಲ್ಲೂ ಮುಖ್ಯವಾಗಿ ರಿಯಲ್ ಎಸ್ಟೇಟ್ ಉದ್ಯಮದ ಮೇಲೆ ಹೆಚ್ಚಿನ ನಿಗಾ ಮತ್ತು ನಿಯಂತ್ರಣ. ರು.1 ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಆಸ್ತಿ ಖರೀದಿ ಅಥವಾ ವರ್ಗಾವಣೆ ವೇಳೆ ಪ್ಯಾನ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸುವುದು. ಈ ರೀತಿ ತೆರಿಗೆ ತಪ್ಪಿಸುವುದನ್ನು ನಿಯಂತ್ರಿಸುವ ಸಂಸ್ಥೆಗಳಾದ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಮತ್ತು ಕೇಂದ್ರೀಯ ಅಬಕಾರಿ ಮತ್ತು ಸುಂಕ ಮಂಡಳಿ (ಸಿಬಿಇಸಿ)ಗೆ ತಂತ್ರಜ್ಞಾನ ಬಳಕೆಗೆ, ಎರಡೂ ಸಂಸ್ಥೆಗಳು ಪರಸ್ಪರ ಮಾಹಿತಿ ಹಂಚಿಕೊಳ್ಳಲು ಅವಕಾಶ ಮಾಡಿಕೊಡುವುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com