ಎಲ್ಲರಿಗೂ ಪಾಲುಂಟು, ಸರ್ವರಿಗೂ ಹಿತವುಂಟು

ಹಿಂದೆಂದೂ ಹೀಗಾಗಿರಲಿಲ್ಲ. ಯಾವ ಸರ್ಕಾರವೂ ತನ್ನ ಗುರಿ ಸಾಧನೆಗೆ ತಾನೇ ಗಡುವು ನಿಗದಿಪಡಿಸಿಕೊಂಡಿರಲಿಲ್ಲ...
ಅರುಣ್ ಜೇಟ್ಲಿ
ಅರುಣ್ ಜೇಟ್ಲಿ

ಹಿಂದೆಂದೂ ಹೀಗಾಗಿರಲಿಲ್ಲ. ಯಾವ ಸರ್ಕಾರವೂ ತನ್ನ ಗುರಿ ಸಾಧನೆಗೆ ತಾನೇ ಗಡುವು ನಿಗದಿಪಡಿಸಿಕೊಂಡಿರಲಿಲ್ಲ. ಮೋದಿ ಸರ್ಕಾರ ಕಳೆದ ವರ್ಷದ ಬಜೆಟ್‍ನಲ್ಲಿ ಸ್ವಚ್ಛ ಭಾರತದ ಕನಸು ಸಾಕಾರಕ್ಕೆ ಗಾಂಧೀಜಿ ಜನ್ಮಶತಮಾನೋತ್ಸವ ವರ್ಷವಾದ 2019ನ್ನು ನಿಗದಿಪಡಿಸಿಕೊಂಡಿತು, ಈ ಸಲ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ವರ್ಷವಾದ 2022ರ ಹೊತ್ತಿಗೆ ಮೂಲಸೌಲಭ್ಯ, ಗ್ರಾಮೀಣಾಭಿವೃದ್ಧಿ, ಯುವಕರಿಗೆ ಉದ್ಯೋಗ ಒದಗಿಸುವ ಗುರಿ ಹಾಕಿಕೊಂಡಿದೆ.

ಈ ಸಲದ ಬಜೆಟ್‍ನ ಇನ್ನೊಂದು ವಿಶೇಷ ಎಂದರೆ ಯಾವ ಧರ್ಮಕ್ಕೂ ನಿರ್ದಿಷ್ಟವಾಗಿ ಅನುದಾನ ಹಂಚಿಕೆ ಇಲ್ಲ. ಎಲ್ಲಾ ಧರ್ಮಗಳನ್ನೂ ಒಳಗೊಂಡ ಸರ್ವತೋಮುಖ ಅಭಿವೃದ್ಧಿಯೇ ಗುರಿ ಎನ್ನುವುದನ್ನು ನಿರೂಪಿಸಿದೆ. ಆ ಮೂಲಕ ಬಿಜೆಪಿ ಹಿಂದೂಗಳ ಮೇಲಷ್ಟೇ ಗಮನ ಕೇಂದ್ರೀಕರಿಸುತ್ತದೆ ಎಂಬ ಆರೋಪಕ್ಕೆ ಉತ್ತರ ನೀಡಿದೆ. ಬಜೆಟ್‍ನ ಉದ್ದೇಶ ಸ್ಪಷ್ಟ. ಪ್ರತಿಯೊಬ್ಬರೂ ದುಡಿಯಬೇಕು ಮತ್ತು ಆ ಮೂಲಕವೇ ಅಶನ (ಅನ್ನ), ವಸನ (ಬಟ್ಟೆ), ವಸತಿಗಳಿಸಿಕೊಳ್ಳಬೇಕು. ಹಿಂದಿನ ಬಜೆಟ್‍ಗಳು ಬಡವರ ಅಭಿವೃದ್ಧಿಗೆ ಹೆಚ್ಚು ಅನುದಾನ ನೀಡುತ್ತ, ಅವರನ್ನು ಸೋಮಾರಿಗಳಾಗಿಸಿ, ಬಡವರಾಗಿಯೇ ಉಳಿಯುವಂತೆ ಮಾಡುತ್ತಿದ್ದವು. ಯುವಶಕ್ತಿಗೆ ಆದ್ಯತೆ ನೀಡದ ಕಾರಣ ದೇಶದ ಯುವಶಕ್ತಿ ಸುಮ್ಮನೆ ವ್ಯರ್ಥವಾಗುತ್ತಿತ್ತು. ಮೂಲಸೌಲಭ್ಯ ಮತ್ತು ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಭದ್ರ ಭಾರತಕ್ಕೆ ಬುನಾದಿ ಹಾಕಲಾಗಿದೆ.

ನಿವ್ವಳ ಆಂತರಿಕ ಉತ್ಪನ್ನ ಹೆಚ್ಚಿಸಲು ಹಲವು ಕ್ರಮಗಳನ್ನು ಘೋಷಿಸಲಾಗಿದೆ. ಮೇಕ್ ಇನ್ ಇಂಡಿಯಾ ಸಾಕಾರವಾದರೆ ನಾವು ಯಾವುದಕ್ಕೂ ಹೊರಗಿನವರನ್ನು ಅವಲಂಬಿಸುವ ಪ್ರಮೇಯವೇ ಇಲ್ಲ. ಗ್ರಾಮೀಣ ಯುವಕರಿಗೆ ಸುಲಭ ಸಾಲ ನೀಡುವ ಮುದ್ರಾ ಬ್ಯಾಂಕ್, ಗ್ರಾಮೀಣ ಮೂಲಸೌಲಭ್ಯಕ್ಕಾಗಿ ಒಂದು ಲಕ್ಷ ಕೋಟಿ ನಿಧಿ, ಒಂದು ಲಕ್ಷ ಕಿ.ಮೀ ರಸ್ತೆ  ನಿರ್ಮಾಣ ಹಾಗೂ 2020ರ ಒಳಗೆ 20,000 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ, ಐಟಿ ಯುವಕರಿಗಾಗಿ ಸಾವಿರ ಕೋಟಿಯ ನಿಧಿ, 2022ರ ಹೊತ್ತಿಗೆ ಗ್ರಾಮಾತರದಲ್ಲಿ 2 ಲಕ್ಷ, ನಗರ ಪ್ರದೇಶದಲ್ಲಿ 4 ಕೋಟಿ ಮನೆಗಳ ನಿರ್ಮಾಣ ಇವೆಲ್ಲ ಜಿಡಿಪಿ ಹೆಚ್ಚಿಸುವ ಕ್ರಮಗಳೇ ಆಗಿವೆ. ಜತೆಗೆ ಹಳ್ಳಿ-ನಗರಗಳ ನಡುವಿನ ಅಸಮಾನತೆ ತೊಡೆದು ಹಾಕುವ ಪ್ರಯತ್ನವೂ ಇದೆ.

ತೆರಿಗೆಯಲ್ಲಿ ರಾಜ್ಯಗಳ ಪಾಲನ್ನು ಶೇ.10ರಷ್ಟು ಹೆಚ್ಚಿಸಿ ಶೇ 42ಕ್ಕೆ ನಿಗದಿಪಡಿಸಿರುವುದು ಹಾಗೂ ಕೇಂದ್ರ ಪ್ರಾಯೋಜಿತ ಯೋಜನೆಗಳ ಅನುದಾನ ಕಡಿತವು ರಾಜ್ಯಗಳು ಸ್ವಯಂ ಅಭಿವೃದ್ಧಿ ಸಾಧಿಸಲು ಉತ್ತೇಜಿಸುತ್ತದೆ. ಉಳಿದ ಶೇ 62ರಷ್ಟು ಮೊತ್ತದಲ್ಲಿಯೂ ರಾಜ್ಯಗಳಿಗೆ ನೆರವು ನೀಡಿ, ದೇಶದ ಅಭಿವೃದ್ಧಿ ಸಾಧಿಸಬೇಕಿದೆ. ಕಲ್ಲೊಂದು, ಹಕ್ಕಿ ಎರಡು: `ಜನ ಧನ' ಖಾತೆದಾರರು ವರ್ಷಕ್ಕೆ ಕೇವಲ ರು.12 ವಂತಿಗೆ ನೀಡಿ ಅಪಘಾತ ವಿಮೆ ಪಡೆಯುವ ಕಲ್ಪನೆ ಅದ್ಭುತ. ಇಲ್ಲಿ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಪ್ರಯತ್ನವನ್ನು ಜೇಟ್ಲಿ ಮಾಡಿದ್ದಾರೆ. ವಿಮೆ ಆಸೆಗಾದರೂ ಖಾತೆ ತೆರೆಯುತ್ತಾರೆ. ಆ ಮೂಲಕ ಹಣದ ಚಲಾವಣೆ ಆಗುತ್ತದೆ. ಇನ್ನು ರೈಲ್ವೆ, ರಸ್ತೆ ಅಭಿವೃದ್ಧಿ ಮತ್ತು ನೀರಾವರಿಗಾಗಿ ಮೂಲಸೌಲಭ್ಯ ಅಭಿವೃದ್ಧಿ ಬಾಂಡ್ ಘೋಷಿಸಲಾಗಿದೆ.

ಕೃಷಿಗಾಗಿ ಸಾರ್ವಜನಿಕರಿಂದ ಸಂಪನ್ಮೂಲ ಸಂಗ್ರಹಿಸಲು ನೀರಾವರಿ ಬಾಂಡ್ ಪರಿಚಯಿಸಿರುವುದು ಇದೇ ಮೊದಲು. ಹೊಸ ಖಾಸಗಿ ಯೋಜನೆಗಳಿಗೆ ಪರವಾನಗಿ ನೀಡುವ ಪ್ರಕ್ರಿಯೆಗಳನ್ನು ಸರಳಗೊಳಿಸಿರುವುದು, ವಿದೇಶಗಳಿಂದ ಸಾಲ ರೂಪದಲ್ಲಿ ಹೆಚ್ಚಿನ ನೆರವು (ವಿದೇಶಿ ವಾಣಿಜ್ಯ ಸಾಲ) ಪಡೆಯಲು ಪ್ರತ್ಯೇಕ ಸಮಿತಿ, ಕರೆನ್ಸಿ ಮತ್ತು ಪದಾರ್ಥಗಳ ದರ ಏರಿಳಿತ ತಡೆಯಲು ಫಾರ್ವಡ್ ಕಾಂಟ್ರಾಕ್ಟ್ ಕಮಿಷನ್ ಸ್ಥಾಪನೆ ಇವೆಲ್ಲ ಸ್ವಾಗತಾರ್ಹ ಸಂಗತಿಗಳೇ. ಚಿನ್ನದ ಆಮದು ತಡೆಗೂ ಜಾಣತನದ ಕ್ರಮ ಕೈಗೊಂಡಿದ್ದಾರೆ ಹಣಕಾಸು ಸಚಿವರು.

ಕಪ್ಪು ಹಣದ ಹಾವಳಿಗೆ ಕಡಿವಾಣ ಹಾಕಲು ಹಲವು ಕ್ರಮಗಳನ್ನು ಘೋಷಿಸಲಾಗಿದೆ. ಶಿಕ್ಷೆ ಇತ್ಯಾದಿಗಳ ಹೊರತಾಗಿ ಇನ್ನೊಂದು ಉತ್ತಮ ಸಂಗತಿ ಎಂದರೆ ವಿದೇಶಿ ಆಸ್ತಿ  ಹೊಂದಿರುವ ನೇರ ಮಾಲೀಕ ಮಾತ್ರವಲ್ಲದೆ, ಅದರ ಫಲಾನುಭವಿ ಸಹ ಆದಾಯ ತೆರಿಗೆ ರಿಟನ್ರ್ಸ್ ನಲ್ಲಿ ನಮೂದಿಸಬೇಕು ಎನ್ನುವುದು. ಉದಾಹರಣೆಗೆ, ದೇಶದ ಹೊರಗಿರುವ ತಂದೆಯ ಮನೆಯಿಂದ ಮಗ ಬಾಡಿಗೆ ಮೂಲಕ ಆದಾಯ ಪಡೆಯುತ್ತಿದ್ದರೆ, ಆಗ ಮಗ ತನ್ನ ತಂದೆಯ ಆಸ್ತಿಯನ್ನು ಘೋಷಿಸಬೇಕು. ಸಹಜವಾಗಿ ತಂದೆಯ ವಿದೇಶದಲ್ಲಿರುವ ಆಸ್ತಿ ಮಾಹಿತಿ ಸರ್ಕಾರಕ್ಕೆ ಸಿಗುತ್ತದೆ!

ರಸಗೊಬ್ಬರದಲ್ಲಿ ಬಳಸುವ ಸಲ್ಫೂರಿಕ್ ಆ್ಯಸಿಡ್, ಆ್ಯಂಬುಲೆನ್ಸ್‍ಗಳ ಚಾಸಿಸ್, ಎಂಡೋಸ್ಕೊಪಿ ಯಂತ್ರ ಮೊದಲಾದ ಅಗತ್ಯ ವಸ್ತುಗಳ ಆಮದು ಶುಲ್ಕ ಕಡಿತ ಮಾಡಲಾಗಿದೆ. ಸಿಗರೇಟ್, ಪಾನ್ ಮಸಾಲಾ ಮುಂತಾದವುಗಳ ತೆರಿಗೆ ಹೆಚ್ಚಿಸಿ ವ್ಯಸನಮುಕ್ತ ಭಾರತಕ್ಕೆ ಒತ್ತು ನೀಡಲಾಗಿದೆ. ಒಟ್ಟಾರೆ ಎಲ್ಲಾ ಕ್ಷೇತ್ರಗಳ, ಎಲ್ಲಾ ವರ್ಗಗಳ ಅಭಿವೃದ್ಧಿಗೂ ಉತ್ತೇಜನ ನೀಡುವ ಬಜೆಟ್.

-ಮೋಹನಕುಮಾರ್ ಬಿ.ಎನ್
(ಲೆಕ್ಕ ಪರಿಶೋಧಕ, 96200 79130)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com