
ನವದೆಹಲಿ: ದೇಶದ ಆರ್ಥಿಕತೆಯ ಭದ್ರ ಬುನಾದಿ ಎಂದೇ ಕರೆಯಲಾಗುವ ಗ್ರಾಮೀಣ ಕ್ಷೇತ್ರಕ್ಕಾಗಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದು, ಪ್ರಮುಖವಾಗಿ ಮನ್ರೇಗಾ ಯೋಜನೆಗಾಗಿ 38,500 ಕೋಟಿ ರು.ಗಳನ್ನು ಮೀಸಲಿಡಲಾಗಿದೆ.
ಪ್ರಮುಖವಾಗಿ ಗ್ರಾಮಪಂಚಾಯಿತಿಗಳಲ್ಲಿ ಮನ್ರೇಗಾ ಯೋಜನೆಯನ್ನು ಪ್ರಬಲವಾಗಿ ಜಾರಿಗೊಳಿಸಲು ಅರುಣ್ ಜೇಟ್ಲಿ ಕ್ರಮ ಕೈಗೊಂಡಿದ್ದಾರೆ. ಯೋಜನೆಯಲ್ಲಿ ಗುತ್ತಿಗೆದಾರರ ಪಾಲ್ಗೊಳ್ಳುವಿಕೆಯನ್ನು ನಿಷೇಧಿಸಲಾಗಿದ್ದು, ಯೋಜನೆಯಲ್ಲಿ ನೀರು ಕೊಯ್ಲು, ಬರ ನಿರ್ವಹಣೆ, ಪ್ರವಾಹ ನಿಯಂತ್ರಣಕ್ಕೆ ಆದ್ಯತೆ ನೀಡಲಾಗಿದೆ. ಇನ್ನು ಕಾರ್ಮಿಕರ ಆರ್ಥಿಕ ಭದ್ರತೆ ಮತ್ತು ಗ್ರಾಮೀಣ ಆಸ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಮನ್ರೇಗಾ ಯೊಜನೆಯಲ್ಲಿ ಕ್ರಮ ಕೊಗೊಳ್ಳುವುದರಿಂದ ರೈತರಿಗೆ ಸಹಕಾರಿಯಾಗಲಿದೆ ಎಂದು ಜೇಟ್ಲಿ ಹೇಳಿದರು.
ಮನ್ರೇಗಾ ಯೋಜನೆಯಿಂದ ಪರಿಸರ ಸಂರಕ್ಷಣೆ, ಗ್ರಾಮೀಣ ಮಹಿಳೆಯರ ಸಬಲೀಕರಣ, ಗ್ರಾಮೀಣ ಪ್ರದೇಶದಿಂದ ನಗರ ವಲಸೆಯಂತಹ ಸಮಸ್ಯೆಗಳನ್ನು ನಿವಾರಿಸಲು ಸಹಕಾರಿಯಾಗಲಿದೆ. ಅಂತೆಯೇ ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಖಾತ್ರಿ ಯೋಜನೆಯಿಂದಾಗಿ ಕೃಷಿಕ ಆದಾಯದ ಹೊರತಾಗಿಯೂ ಇತರೆ ಔದ್ಯೋಗಿಕ ಆದಾಯಕ್ಕೆ ಅನುವು ಮಾಡಿಕೊಟ್ಟಂತಾಗುತ್ತದೆ. ಇನ್ನು ಗ್ರಾಮೀಣ ಪ್ರದೇಶಗಳ ಮೂಲ ಸೌಕರ್ಯಕ್ಕೂ ಬಜೆಟ್ ನಲ್ಲಿ ಕ್ರಮ ಕೈಗೊಳ್ಳಲಾಗಿದ್ದು, ಸ್ವಚ್ಛ ಭಾರತ್ ಅಭಿಯಾನ, ಗಂಗಾ ಶುದ್ಧೀಕರಣ ಯೋಜನೆಗಳಿಗೂ ಸಾಕಷ್ಟು ಹಣವನ್ನು ಮೀಸಲಿಡಲಾಗಿದೆ.
Advertisement