ಪಾಟ್ನಾ: ಕೇಂದ್ರ ಸಚಿವ ಅರುಣ್ ಜೇಟ್ಲಿ ಮಂಡಿಸಿದ ಬಜೆಟ್ ನಿರಾಶಾದಾಯಕ ಬಜೆಟ್ ಎಂದಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಬಜೆಟ್ ಪರೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅನುತ್ತೀರ್ಣಗೊಂಡಿದ್ದಾರೆ ಎಂದು ಹೇಳಿದ್ದಾರೆ.
ಭರವಸೆಗಳನ್ನು ಈಡೇರಿಸದ ಬಜೆಟ್ ಮಂಡನೆ ಮಾಡಲಾಗಿದೆ. ಕಪ್ಪು ಹಣ ಹೊಂದಿರುವವರಿಗೆ ಮಾತ್ರ ಒಳ್ಳೆಯ ದಿನ(ಅಚ್ಚೇ ದಿನ್) ಬಂದಿದೆ ಎಂದು ಅವರು ವಿಷಾಧಿಸಿದ್ದಾರೆ.
ರೈತರು ಅಥವಾ ಸಮಾಜಕ್ಕೆ ಅನುಕೂಲವಾಗುವ ಬಜೆಟ್ ಇದಲ್ಲ. ಬಿಜೆಪಿ ಸರ್ಕಾರದ ಮಂಡಿಸುವ ಬಜೆಟ್ ಬಗ್ಗೆ ಜನತೆ ನಿರಾಶೆಯನ್ನು ಹೊಂದಿದ್ದಾರೆ. ಕಳೆದ ಬಾರಿಯು ಇದೇ ರೀತಿ ಬಜೆಟ್ ಮಂಡನೆ ಮಾಡಲಾಗಿತ್ತು. ಈ ಬಾರಿಯು ಅದೇ ರೀತಿ ಬಜೆಟ್ ಮಂಡನೆ ಮಾಡಿ, ಜನತೆ ಇಟ್ಟಿರುವ ನಂಬಿಕೆಯನ್ನು ಹುಸಿಗೊಳಿಸಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.
ನಿನ್ನೆ ಮೋದಿ ಹೇಳಿದ್ದರು, ಇಂದು ಪರೀಕ್ಷೆ ಇದೆ ಎಂದು. ಆದರೆ, ಇಂದು ನಡೆದ ಪರೀಕ್ಷೆಯಲ್ಲಿ ಅವರು ಫೇಲ್ ಆಗಿದ್ದಾರೆ. ಈ ಬಜೆಟ್ ಕೇವಲ ಕಪ್ಪು ಹಣ ಹೊಂದಿರುವವರಿಗೆ ಮಾತ್ರ ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ.