
ನವದೆಹಲಿ: ಭಾರತದ ಆರ್ಥಿಕತೆ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುವ ದೇಶದ ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಒಟ್ಟು 3,96,135 ಕೋಟಿ ಹಣ ಮೀಸಲಿಟ್ಟಿದ್ದಾರೆ.
ಒಟ್ಟು 21.47 ಲಕ್ಷ ಕೋಟಿ ಗಾತ್ರದ 2017ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಮೂಲಭೂತ ಸೌಕರ್ಯಕ್ಕಾಗಿಯೇ 3,96,135 ಕೋಟಿ ಹಣ ಮೀಸಲಿಡಲಾಗಿದ್ದು, ಗ್ರಾಮೀಣ, ಕೃಷಿಕ ಮತ್ತು ಇತರೆ ಕ್ಷೇತ್ರಗಳಿಗೆ ಒಟ್ಟು 1,87,223 ಕೋಟಿ ಹಣವನ್ನು ಮೀಸಲಿಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಪ್ರಮಾಣ ಶೇ.24ರಷ್ಟು ಏರಿಕೆಯಾಗಿದೆ.
ರೈಲ್ವೇ ಇಲಾಖೆ ಅಭಿವೃದ್ಧಿ ವೆಚ್ಚ 1.31ಲಕ್ಷ ಕೋಟಿಗೇರಿದ್ದು, ಈ ಪೈಕಿ 55 ಸಾವಿರ ಕೋಟಿಯನ್ನು ಸರ್ಕಾರವೇ ಭರಿಸಲಿದೆ. ಇನ್ನು ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗಾಗಿ 64 ಸಾವಿರ ಕೋಟಿ ರುಗಳನ್ನು ಮಿಸಲಿಡಲಾಗಿದ್ದು, ಡೈರಿಗಳ ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿ ಸರ್ಕಾರ ಮೀಸಲಿಟ್ಟಿರುವ ಹಣದಿಂದಾಗಿ ವಾರ್ಷಿಕ 50 ಸಾವಿರ ಕೋಟಿ ರು. ಆದಾಯ ಸೃಷ್ಟಿಸುವ ಗುರಿ ಹೊಂದಲಾಗಿದೆ. ಮನೆ ಇಲ್ಲದವರಿಗಾಗಿ ವಿವಿಧ ಹೌಸಿಂಗ್ ಯೋಜನೆಗಳಲ್ಲಿ 2019ರ ಹೊತ್ತಿಗೆ ಸುಮಾರು 1 ಕೋಟಿ ಮನೆ ನಿರ್ಮಾಣ ಮಾಡಲು ಹಣ ಮೀಸಲಿಡಲಾಗಿದೆ. ಪ್ರಧಾನಮಂತ್ರಿ ಅವಾಜ್ ಯೋಜನೆಗೆ 28 ಸಾವಿರ ಕೋಟಿ ರುಪಾಯಿ ಮತ್ತು ಗ್ರಾಮಗಳ ಅಭಿವೃದ್ಧಿಗೆ 3 ಲಕ್ಷ ಕೋಟಿ ರುಪಾಯಿ ಮೀಸಲಿಡಲಾಗಿದೆ.
2018ರ ವೇಳೆಗೆ ಹಳ್ಳಿ, ಹಳ್ಳಿಗೂ ವಿದ್ಯುತ್ ಯೋಜನೆ ಗುರಿ. ವಿದ್ಯುತ್ ಯೋಜನೆಗೆ 4500 ಕೋಟಿ ರು. ರೈಲ್ವೆ ಸುರಕ್ಷತೆಗೆ 1 ಲಕ್ಷ ಕೋಟಿ, ಸಣ್ಣ ನಗರಗಳಲ್ಲೂ ವಿಮಾನ ನಿಲ್ದಾಣಗಳ ನಿರ್ಮಾಣ, ಕರಾವಳಿ ಹೈವೇಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.
ಸಾರಿಗೆ ಇಲಾಖೆಯ ಅಭಿವೃದ್ಧಿಗಾಗಿ 2.41 ಲಕ್ಷ ಕೋಟಿ ಮೀಸಲಿಡಲಾಗಿದ್ದು, ಭಾರತ್ ನೆಟ್ ಪ್ರಾಜೆಕ್ಟ್ (ಗ್ರಾಮೀಣ ಭಾಗದಲ್ಲಿ ಅಂತಾರ್ಜಾಲ ಸೇವೆ)ಗಾಗಿ 10 ಸಾವಿರ ಕೋಟಿ ರು.ಗಳನ್ನು ಮೀಸಲಿಡಲಾಗಿದೆ. ಅಂತೆಯೇ 3500 ಕಿ.ಮೀ ಹೊಸ ರೈಲ್ವೇ ಮಾರ್ಗ ನಿರ್ಮಾಣ ಮತ್ತು ಹೊಸ ಮೆಟ್ರೋ ರೈಲು ಯೋಜನೆ ನೀತಿ ಜಾರಿ ಮಾಡುವುದಾಗಿ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ. ಅಂತೆಯೇ ಟ್ರೇಡ್ ಇನ್ಫ್ರಾಸ್ಟ್ರಕ್ಚರ್ ಎಕ್ಸ್ ಪೋರ್ಟ್ ಸ್ಕೀಮ್ ಜಾರಿಗೆ ತರಲು ನಿರ್ಧರಿಸಲಾಗಿದೆ.
Advertisement