
ನವದೆಹಲಿ: ಕೇಂದ್ರ ಸರ್ಕಾರ ಬಜೆಟ್ ಮಂಡನೆಯನ್ನು ಒಂದು ದಿನ ಮುಂದೂಡಬೇಕು ಎಂದು ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.
ಮಾಜಿ ಕೇಂದ್ರ ಸಚಿವ ಹಾಗೂ ಹಾಲಿ ಕೇರಳ ಸಂಸದ ಇ ಅಹಮದ್ ಅವರು ಸಾವನ್ನಪ್ಪಿರುವ ಹಿನ್ನಲೆಯಲ್ಲಿ 2017ನೇ ಸಾಲಿನ ಬಜೆಟ್ ಅನ್ನು ನಾಳೆಗೆ ಮುಂದೂಡಬೇಕು ಎಂದು ಕೇಳಿಬರುತ್ತಿರುವ ಕೇರಳ ಸಂಸದರ ಆಗ್ರಹಕ್ಕೆ ಇದೀಗ ಕಾಂಗ್ರೆಸ್, ಶಿವಸೇನೆ ಸೇರಿದಂತೆ ವಿವಿಧ ಪಕ್ಷಗಳು ಬೆಂಬಲ ನೀಡಿವೆ.
ಈ ಬಗ್ಗೆ ದೆಹಲಿಯಲ್ಲಿ ಮಾತನಾಡಿರುವ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ತಮ್ಮ ಅಭಿಪ್ರಾಯದಂತೆ ಕಲಾಪವನ್ನು ಹಾಗೂ ಬಜೆಟ್ ಮಂಡನೆಯನ್ನು ನಾಳೆ ಮುಂದೂಡಬೇಕು. ಈ ಬಗ್ಗೆ ನಾನು ಸೇರಿದಂತೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹಾಗೂ ಜೆಡಿಯು ಮುಖಂಡರು ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದಾರೆ. ಅಂತೆಯೇ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಅವರು, ಸರ್ಕಾರಕ್ಕೆ ಅಹ್ಮದ್ ಅವರು ಸಾವನ್ನಪ್ಪಿರುವ ಕುರಿತು ಮೊದಲೇ ತಿಳಿದಿದೆ. ಆದರೂ ಈ ವಿಚಾರವನ್ನು ತಡವಾಗಿ ಹೊರ ಹಾಕಿದ್ದಾರೆ. ಇದೇನು ಮಾರ್ಚ್ 31 ಅಲ್ಲ. ಆದರೂ ಕೇಂದ್ರ ಸರ್ಕಾರ ಬಜೆಟ್ ಮಂಡನೆಗೆ ಆತುರ ಪಡುತ್ತಿದೆ. ಬಜೆಟ್ ಮುಂದೂಡುವುದರಿಂದ ವ್ಯತಿರಿಕ್ತ ಪರಿಣಾಮವೇನೂ ಆಗುವುದಿಲ್ಲ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರದ ನಡೆ ನಿಜಕ್ಕೂ ಅಮಾನವೀಯಯವಾಗಿದ್ದು, ಅಹ್ಮದ್ ಸಾವಿನ ವಿಚಾರ ಬಹಿರಂಗ ಪಡಿಸಲು ತಡ ಮಾಡಬಾರದಿತ್ತು ಎಂದು ಅವರು ಕಿಡಿಕಾರಿದ್ದಾರೆ.
Advertisement