
ನವದೆಹಲಿ: ದೇಶದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಏಕಕಾಲಕ್ಕೆ ರೈಲ್ವೆ ಬಜೆಟ್ ಒಳಗೊಂಡ ಸಾಮಾನ್ಯ ಬಜೆಟ್ ನ್ನು ಮಂಡಿಸಲಾಗಿದ್ದು, ರೈಲ್ವೆ ವಲಯಕ್ಕೆ ರೂ.55 ಸಾವಿರ ಕೋಟಿ ಹಣವನ್ನು ಮೀಸಲಿಡಲಾಗಿದೆ.
2017-18ನೇ ಸಾಲಿನಲ್ಲಿ ರೈಲ್ವೆ ಅಭಿವೃದ್ಧಿಗೆ ಒಟ್ಟು ರೂ.1.31 ಲಕ್ಷ ಕೋಟಿ ಖರ್ಚನ್ನು ಅಂದಾಜಿಸಲಾಗಿದೆ. ಕೇಂದ್ರ ಸರ್ಕಾರದಿಂದ ರೂ.51 ಸಾವಿರ ಕೋಟಿ ಹಣವನ್ನು ಮೀಸಲಿಡಲಾಗಿದೆ.
ಈ ಬಾರಿಯ ಬಜೆಟ್ ನಲ್ಲಿ ವಿತ್ತ ಸಚಿವ ರೈಲ್ವೆ ವಲಯಕ್ಕೆ ಘೋಷಿಸಿದ ಕೆಲ ಪ್ರಮುಖ ಯೋಜನೆಗಳು ಹಾಗೂ ನಿರ್ಧಾರಗಳು ಈ ಕೆಳಗಿನಂತಿವೆ...
ರೈಲ್ವೆ ಮಾರ್ಗ ಅಭಿವೃದ್ಧಿಗೆ ರೂ.1.31 ಲಕ್ಷ ಕೋಟಿ ರೂಪಾಯಿ ಅನುದಾನ. 2019ರ ವೇಳೆಗೆ ಭಾರತೀಯ ರೈಲ್ವೆಯ ಎಲ್ಲಾ ಕೋಚ್ ಗಳಲ್ಲಿಯೂ ಬಯೋ ಟಾಯ್ಲೆಟ್ ವ್ಯವಸ್ಥೆ. ರೈಲ್ವೆ ಬೋಗಿಗಳ ಶುಚಿತ್ವ ಕಾಪಾಡಲು ಎಸ್ಎಂಎಸ್ ಮೂಲಕ ದೂರು ನೀಡಿದರೆ, ಕೂಡಲೇ ಅಧಿಕಾರಿಗಳು ಸ್ವಚ್ಛತೆ ಕುರಿತಂತೆ ಕ್ರಮ ಕೈಗೊಳ್ಳಲಿದ್ದಾರೆ.
ತೀರ್ಥ ಯಾತ್ರೆಗೆ ವಿಶೇಷ ರೈಲುಗಳ ಆಯೋಜನೆ. 2020ರೊಳಗೆ ಸಂಪೂರ್ಣ ಮಾನವ ರಹಿತ ರೈಲ್ವೆ ಕ್ರಾಸಿಂಗ್, ರೈಲ್ವೆ ವೆಬ್ ಸೈಟ್ ನಲ್ಲಿ ಐಆರ್ ಸಿಟಿಸಿ ಮೂಲಕ ಟಿಕೆಟ್ ಬುಕ್ ಮಾಡಿದರೆ, ಸೇವಾ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ. ದೇಶದ 500 ರೈಲ್ವೆ ನಿಲ್ದಾಣಗಳು ಅಂಗವಿಕಲ ಸ್ನೇಹಿಯಾಗಿ ರೂಪುಗೊಳ್ಳಲಿವೆ. ಅಂಗವಿಕಲ ಸಂಚಾರಕ್ಕೆ ಅನುಕೂಲವಾಗಲು ಲಿಫ್ಟಿ ಮತ್ತು ಎಸ್ಕಲೇಟರ್ ನಿರ್ಮಾಣ ಕಾರ್ಯ ನಡೆಸಲಾಗುತ್ತದೆ.
ರೈಲು ಪ್ರಯಾಣಿಕರ ಸುರಕ್ಷತೆಗಾಗಿ 5 ವರ್ಷಗಳ ಅವಧಿಗೆ ರೂ.1 ಲಕ್ಷ ಕೋಟಿ ಸುರಕ್ಷಾ ನಿಧಿ ಸ್ಥಾಪಿಸಿಲಾಗಿದೆ. ಪ್ರಸಕ್ತ ಸಾಲಿನಲ್ಲಿ 3,500 ಕಿ.ಮೀ. ರೈಲ್ವೇ ಮಾರ್ಗ ಕಾರ್ಯಾರಂಭವಾಗಲಿದೆ. ಕಳೆದ ವರ್ಷ 2,800 ಕಿ.ಮೀ. ರೈಲ್ವೆ ಮಾರ್ಗ ನಿರ್ಮಾಣದ ಗುರಿಯಿತ್ತು.
2017-18ನೇ ಸಾಲಿನಲ್ಲಿ 25 ಹೊಸ ರೈಲ್ವೆ ನಿಲ್ದಾಣಗಳ ಅಭಿವೃದ್ಧಿಯಾಗಲಿವೆ ಹಾಗೂ ದೇಶದಲ್ಲಿನ 70 ರೈಲ್ವೆ ಯೋಜನೆಗಳಿಗೆ ಸಮ್ಮತಿ ದೊರೆತಿದಿದ್ದು, ಸರ್ಕಾರಿ ಸ್ವಾಮ್ಯದ ಐಆರ್'ಸಿಟಿಸಿ ಮತ್ತು ಐಆರ್ ಸಿಒಎನ್ ಸಂಸ್ಥೆಗಳು ಷೇರು ಮಾರುಕಟ್ಟೆ ಪ್ರವೇಶಿಸಿವೆ. ಸರಕು ಸಾಗಣೆ ವಲಯದಲ್ಲಿ ಖಾಸಗೀಕರಣ. ಇದಲ್ಲದೆ, ಹೊಸ ಮೆಟ್ರೋ ರೈಲು ನೀತಿ ಜಾರಿಗೊಳಿಸಲು ಸರ್ಕಾರ ಮುಂದಾಗಿದ್ದು, ಇದರಿಂದ ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸಲಿದೆ. ಖಾಸಗಿ ಸಂಸ್ಥೆಗಳೊಂದಿಗೆ ಸಹಭಾಗಿತ್ವದ ಯೋಜನೆ.
Advertisement