
ನವದೆಹಲಿ: ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಬುಧವಾರ ಮಂಡಿಸಿದ 2017ನೇ ಸಾಲಿನ ಬಜೆಟ್ ನಲ್ಲಿ ರಕ್ಷಣಾ ಇಲಾಖೆಗೆ 2.74 ಲಕ್ಷ ಕೋಟಿ ಹಣವನ್ನು ಮೀಸಲಿಡಲಾಗಿದೆ.
ಯೋಧರ ವೇತನ, ನಿವೃತ್ತ ಯೋಧರ ಪಿಂಚಣಿ, ಯೋಧರ ತರಬೇತಿ, ಸೇನಾ ಪರಿಕರಗಳ ನಿರ್ವಹಣೆ ಮತ್ತು ಮೂಲಭೂತ ಸೌಕರ್ಯಗಳಿಗೆ 86 ಸಾವಿರ ಕೋಟಿ ಹಣವನ್ನು ಬಜೆಟ್ ನಲ್ಲಿ ಮೀಸಲಿಡಲಾಗಿದ್ದು, ರಕ್ಷಣಾ ಸಂಶೋಧನೆ ಹಾಗೂ ರಕ್ಷಣಾ ಅಭಿವೃದ್ಧಿಗಾಗಿಯೂ ವಿತ್ತ ಇಲಾಖೆ ಹಣ ಮೀಸಲಿಟ್ಟಿದೆ. ಅಂತೆಯೇ ನಿವೃತ್ತ ಯೋಧರ ಪಿಂಚಣಿ ವಿತರಣಾ ವ್ಯವಸ್ಥೆಯಲ್ಲಿ ಬದಲಾವಣೆಗೆ ಚಿಂತಿಸಲಾಗಿದ್ದು, ವೆಬ್ ಬೇಸ್ಡ್ ಇಂಟರ್ಯಾಕ್ಟಿವ್ ಪೆಂನ್ಷನ್ ಡಿಸ್ಟ್ರಿಬ್ಯೂಷನ್ ಸಿಸ್ಟಮ್ ಜಾರಿಗೆ ತರಲು ನಿರ್ಧರಿಸಲಾಗಿದೆ.
ಅಂತೆಯೇ ಯೋಧರಿಗಾಗಿ ಮತ್ತು ರಕ್ಷಣಾ ಇಲಾಖೆಯ ಅಧಿಕಾರಿಗಳ ಪ್ರಯಾಣಕ್ಕಾಗಿ ಸೆಂಟ್ರಲೈಸ್ಡ್ ಡಿಫೆನ್ಸ್ ಟ್ರಾವೆಲ್ ಸಿಸ್ಟಮ್ (ಕೇಂದ್ರೀಯ ರಕ್ಷಣಾ ಪ್ರಯಾಣಿಕ ವ್ಯವಸ್ಥೆ) ಜಾರಿಗೆ ತರುವ ಕುರಿತು ನಿರ್ಧರಿಸಲಾಗಿದೆ.
ಕಾಳಧನಿಕರಿಗೆ ಶಾಕ್, ಬ್ಯಾಂಕುಗಳ ಸುಸ್ಥಿದಾರರ ಆಸ್ತಿ ವಶಪಡಿಸಿಕೊಳ್ಳಲು ಹೊಸ ಕಾನೂನು
ಇನ್ನು ಇದೇ ವೇಳೆ ತೆರಿಗೆ ಪಾವತಿ ಮಾಡದೇ ಕಳ್ಳದಾರಿ ಹಿಡಿಯುವ ಕಾಳಧನಿಕರಿಗೆ ವಿತ್ತ ಸಚಿವ ಅರುಣ್ ಜೇಟ್ಲಿ ಶಾಕ್ ನೀಡಿದ್ದು, ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಗೆ ಗುರುತಿನ ಚೀಟಿ ಕಡ್ಡಾಯಗೊಳಿಸಿದ್ದಾರೆ. 2 ಸಾವಿರಕ್ಕೂ ಮೇಲ್ಪಟ್ಟ ದೇಣಿಗೆ ಕಡ್ಡಾಯವಾಗಿ ನಗದು ರಹಿತವಾಗಿರಬೇಕು. 2 ಸಾವಿರಕ್ಕಿಂತ ಹೆಚ್ಚು ದೇಣಿಗೆಯನ್ನು ಚೆಕ್ ಅಥವಾ ಡಿಜಿಟಲ್ ಮಾದರಿಯಲ್ಲಿಯೇ ಪಾವತಿ ಮಾಡಬೇಕು ಎಂದು ಹೇಳಿದ್ದಾರೆ. ಅಂತೆಯೇ ಬ್ಯಾಂಕ್ ಗಳಿಂದ ಸಾಲ ಪಡೆದು ಅದನ್ನು ತೀರಿಸದೇ ದೇಶ ತೊರೆದಿರುವ ವಿಜಯ್ ಮಲ್ಯಾರಂತಹ ಉದ್ಯಮಿಗಳಿಂದ ಸಾಲ ವಾಪಸ್ ಪಡೆಯಲು ಹೊಸ ಕಾನೂನು ರಚಿಸಲಾಗುವುದು ಮತ್ತು ಉದ್ಯಮಿಗಳ ಆಸ್ತಿ ಜಪ್ತಿಗೂ ಅನುವು ಮಾಡಿಕೊಡಲಾಗುವುದು ಎಂದು ಹೇಳಿದ್ದಾರೆ.
Advertisement