ಕೇಂದ್ರ ಬಜೆಟ್ 2018: ಎಲೆಕ್ಟ್ರಿಕ್ ವಾಹನಗಳಿಗೆ ತೆರಿಗೆ ವಿನಾಯ್ತಿ ಸಾಧ್ಯತೆ

ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಬಾರಿಯ ಕೇಂದ್ರದ 2018-19ನೇ ಸಾಲಿನ ಬಜೆಟ್ ನಲ್ಲಿ ಬ್ಯಾಟರಿ ಚಾಲಿತ ವಾಹನಗಳಿಗೆ ಭಾರೀ ತೆರಿಗೆ ವಿನಾಯಿತಿ ನೀಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಬಾರಿಯ ಕೇಂದ್ರದ 2018-19ನೇ ಸಾಲಿನ ಬಜೆಟ್ ನಲ್ಲಿ ಬ್ಯಾಟರಿ ಚಾಲಿತ ವಾಹನಗಳಿಗೆ ಭಾರೀ ತೆರಿಗೆ ವಿನಾಯಿತಿ ನೀಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. 
2030ರ ಹೊತ್ತಿಗೆ ಶೇ.100ರಷ್ಟು ಸಾರ್ವಜನಿಕ ಸಾರಿಗೆಯ ಎಲ್ಲಾ ವಾಹನಗಳು ಹಾಗೂ ಶೇ.40 ರಷ್ಟು ಖಾಸಗಿ ಬಳಕೆಯ ವಾಹನಗಳು ಬ್ಯಾಟರಿ ಚಾಲಿತವೇ ಆಗಿರಬೇಕೆಂಬ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದ್ದು, ಈ ಗುರಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಉತ್ತೇಜನ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. 
ಈ ಬಾರಿಯ ಬಜೆಟ್ ನಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಜಿಎಸ್'ಟಿ ದರ ಕಡಿತ ಮತ್ತು ತೆರಿಗೆ ವಿನಾಯಿತಿಗಳು ಸೇರ್ಪಡೆಯಾಗುವ ಸಾಧ್ಯತೆಗಳಿವೆ. ವಿತ್ತ ಸಚಿವ ಅರುಣ್ ಜೇಟ್ಲಿಯವರು ಈ ಕುರಿತ ಈಗಾಗಲೇ ಸಾಕಷ್ಟು ಚರ್ಚೆಗಳನ್ನು ನಡೆಸಿದ್ದಾರೆ. 
ಪ್ರಸ್ತುತ ಬ್ಯಾಟರಿ ಚಾಲಿತ ವಾಹನಗಳ ಮೇಲೆ ಶೇ.12ರಷ್ಟು ಜಿಎಸ್'ಟಿ ಇದ್ದು, ಇದನ್ನು ಶೇ.5ಕ್ಕೆ ಇಳಿಕೆ ಮಾಡುವ ಸಾಧ್ಯತೆಗಳಿವೆ. ಅಲ್ಲದೆ, ಇಂತಹ ವಾಹನಗಳನ್ನು ಖರೀದಿ ಮಾಡುವವರಿಗೆ ಆದಾಯ ತೆರಿಗೆ ವಿನಾಯಿತಿಯಂತಹ ಆಕರ್ಷಕ ಕೊಡುಗೆಗಳನ್ನು ನೀಡುವ ಬಗ್ಗೆಯೂ ಸರ್ಕಾರ ಚಿಂದನೆ ನಡೆಸಿದೆ ಎಂದು ಉದ್ಯಮದ ಮೂಲಗಳು ಮಾಹಿತಿ ನೀಡಿವೆ.
ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ತೆರಿಗೆ ವಿನಾಯಿತಿ ನೀಡುವ ನಿರ್ಧಾರವನ್ನು ಜಿಎಸ್'ಟಿ ಮಂಡಳಿಯೇ ತೆಗೆದುಕೊಳ್ಳಬೇಕಿದೆ. 
ಭಾರತದಲ್ಲಿ ವಿದ್ಯುತ್ ಚಾಲಿತ ವಾಹನಗಳ ಮಾರಾಟ ಪ್ರಮಾಣ ಒಟ್ಟು ವಾಹನ ಮಾರಾಟದ ಶೇ.1 ರಷ್ಟು ಇಲ್ಲ. ಹೀಗಾಗಿ ಇಂತಹ ನಿರ್ಧಾರ ಸರ್ಕಾರದ ಆದಾಯವನ್ನು ಕಡಿಮೆ ಮಾಡುವುದಿಲ್ಲ. ಕಳೆದ ವರ್ಷ 17.58 ಮಿಲಿಯನ್ ರಷ್ಟು ದ್ವಿಚಕ್ರ ವಾಹನಗಳು ಮಾರಾಟಗೊಂಡಿವೆ. 3.04 ಮಿಲಿಯನ್ ರಷ್ಟು ಸಾರ್ವಜನಿಕ ವಾಹನಗಳು ಮಾರಾಟಗೊಂಡಿವೆ ಎಂದು ವರದಿಗಳು ತಿಳಿಸಿವೆ. 
ಈ ಹಿಂದೆ ಹೇಳಿಕೆ ನೀಡಿದ್ದ ನವೀಕರಿಸಬಹುದಾದ ಇಂಧನ ಖಾತೆ ಸಚಿವ ಆರ್.ಕೆ. ಸಿಂಗ್ ಅವರು, ವಿದ್ಯುತ್ ಚಾಲಿತ ವಾಹನಗಳ ಖರೀದಿಗೆ ಉತ್ತೇಜಕ ಕ್ರಮಗಳನ್ನು ಪ್ರಕಟಿಸಬೇಕು. ಸರ್ಕಾರದ ಇಲಾಖೆಗಳು ಮತ್ತು ಸಚಿವಾಲಯಗಳ ಬಳಕೆಗೆ ವಿದ್ಯುತ್ ಚಾಲಿತ ಕಾರುಗಳ ಖರೀದಿ ಮಾಡುವ ಪ್ರಸ್ತಾವ ಕೂಡ ಇದೆ ಎಂದು ಹೇಳಿದ್ದರು. 
ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಬಳಕೆಗಾಗಿ ಕೇಂದ್ರ ಸರ್ಕಾರದ ಎನರ್ಜಿ ಎಫೀಶಿಯೆನ್ಸಿ ಸರ್ವಿಸಸ್ ಲಿಮಿಟೆಡ್ (ಇಇಎಸ್ಎಲ್) ಸಂಸ್ಥೆಯು 10,000 ವಿದ್ಯುತ್ ಚಾಲಿತ ಕಾರುಗಳನ್ನು ಖರೀದಿ ಮಾಡುವ ಯೋಜನೆಯನ್ನು ಹೊಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com