ಕರ್ನಾಟಕ ಬಜೆಟ್ 2019: ಮಾತೃಶ್ರೀ ಯೋಜನೆಯ ಸಹಾಯಧನ ದುಪ್ಪಟ್ಟು

ಮುಖ್ಯಮಂತ್ರಿಗಳ ಮಾತೃಶ್ರೀ ಯೋಜನೆಯ ಸಹಾಯಧನ ಮಾಸಿಕ 1 ಸಾವಿರ ರೂ. ಗಳಿಂದ 2 ಸಾವಿರ ರೂ. ಗಳಿಗೆ ಹೆಚ್ಚಳ ಮಾಡಲಾಗಿದೆ

Published: 08th February 2019 12:00 PM  |   Last Updated: 08th February 2019 05:42 AM   |  A+A-


CMHDkumaraswamy

ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ

Posted By : ABN ABN
Source : UNI
ಬೆಂಗಳೂರು: ಮುಖ್ಯಮಂತ್ರಿಗಳ ಮಾತೃಶ್ರೀ ಯೋಜನೆಯ ಸಹಾಯಧನಮಾಸಿಕ 1 ಸಾವಿರ ರೂ. ಗಳಿಂದ 2 ಸಾವಿರ ರೂ. ಗಳಿಗೆ ಹೆಚ್ಚಳ ಮಾಡಲಾಗಿದೆ. 2019 ಸಾಲಿನ  ನವೆಂಬರ್ 1 ರಿಂದ ಜಾರಿಗೆ ಬರಲಿರುವ  ಈ ಯೋಜನೆಗೆ  ಈ ಸಾಲಿನ ಮುಂಗಡ ಪತ್ರದಲ್ಲಿ 470  ಕೋಟಿ ರೂ. ಅನುದಾನ ಒದಗಿಸಲಾಗಿದೆ  ಎಂದು ಮುಖ್ಯಮಂತ್ರಿಯವರು ಪ್ರಕಟಿಸಿದ್ದಾರೆ.    

ಅಂಗನವಾಡಿ ಕಾರ್ಯಕರ್ತೆಯರಿಗೆ 500 ರೂ. ಹಾಗೂ ಸಹಾಯಕಿಯರಿಗೆ 250 ರೂ. ಗೌರವಧನ 2019 ರ ನವೆಂಬರ್ 1 ರಿಂದ  ಜಾರಿಗೆ  ಬರುವಂತೆ ಹೆಚ್ಚಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಎಲ್ಲ ಮಟ್ಟದ ಕರ್ಮಚಾರಿಗಳಿಗೆ ತರಬೇತಿ ನೀಡಲು ಬಳ್ಳಾರಿಯಲ್ಲಿ ರಾಜ್ಯಮಟ್ಟದ ತರಬೇತಿ ಕೇಂದ್ರ ಹಾಗೂ ಚಿತ್ರದುರ್ಗ, ಮೈಸೂರು, ಬೆಳಗಾವಿ ಮತ್ತು ಕಲಬುರಗಿಯಲ್ಲಿ ವಿಭಾಗ ಮಟ್ಟದ ತರಬೇತಿ ಕೇಂದ್ರ ಪ್ರಾರಂಭಿಸಲು 5 ಕೋಟಿ ರೂ. ಅನುದಾನ ಒದಗಿಸಲಾಗಿದೆ.

ನಗರ ಪ್ರದೇಶಗಳಲ್ಲಿ  100 ಹೊಸ ಅಂಗನವಾಡಿ ಕೇಂದ್ರ ಪ್ರಾರಂಭಿಸಲು ಕ್ರಮ,  1000 ಅಂಗನವಾಡಿ ಕಟ್ಟಡಗಳ ದುರಸ್ತಿ ಕಾಮಗಾರಿಗೆ 10 ಕೋಟಿರೂ. ಅನುದಾನ,  ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೊಸ ಬಾಲಕಿಯರ ಬಾಲಮಂದಿರ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ.

ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣಇಲಾಖೆ ವತಿಯಿಂದ ಪ್ರಾಸ್ಥೆಟಿಕ್ಸ್ ಮತ್ತು ಆರ್ಥೊಟಿಕ್ಸ್ಸರ್ಟಿಫಿಕೇಟ್  ಕೋರ್ಸ್‌ಗಳನ್ನು ಪ್ರಾರಂಭಿಸಲು ಕ್ರಮ.ಖಾಸಗಿ ಸಹಭಾಗಿತ್ವದೊಂದಿಗೆ  ನಡೆಸುತ್ತಿರುವ ತರಬೇತಿ ಕೇಂದ್ರಗಳಲ್ಲಿ ಶ್ರವಣ ದೋಷ  ಮಕ್ಕಳ   ಶಿಕ್ಷಕರ ತರಬೇತಿ ಹಾಗೂ ಬುದ್ಧಿಮಾಂದ್ಯ ಮಕ್ಕಳ ಶಿಕ್ಷಕರ ತರಬೇತಿಕಾರ್ಯಕ್ರಮವನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದರು.

ರಾಜ್ಯದಲ್ಲಿ ಬೆನ್ನುಹುರಿ ಅಪಘಾತಕ್ಕೆ ಒಳಗಾದವರ, ಹೆಮಿಪ್ಲೆಜಿಯಾ, ಮಲ್ಟಿಪಲ್ ಸ್ಲೆರೋಸಿಸ್, ಹಾಗೂ ಅಮಿಯೋಟ್ರೋಪಿಕ್ ಲ್ಯಾಟರಲ್ ಸ್ಲೆರೋಸಿಸ್ ಖಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ಪುನರ್ವಸತಿ ಕೇಂದ್ರ ಪ್ರಾರಂಭಿಸಲು 2 ಕೋಟಿ ರೂ. ಅನುದಾನ.  2000 ದೈಹಿಕ ವಿಕಲಚೇತನರಿಗೆ ಸ್ವಯಂಚಾಲಿತ ವಾಹನ (ರೆಟ್ರೋಫಿಟೆಡ್) ಉಚಿತವಾಗಿ ನೀಡಲು 15 ಕೋಟಿ ರೂ.ಅನುದಾನ ನೀಡಲಾಗುವುದು ಎಂದರು.

 1000 ದಮನಿತ ಮಹಿಳೆಯರಿಗೆ ಉದ್ಯಮಶೀಲತೆ ಮತ್ತು ಕೌಶಲ್ಯ ತರಬೇತಿ ಹಾಗೂ ಉತ್ಪಾದನಾ ಘಟಕಗಳ ಸ್ಥಾಪನೆಗೆ  ನೆರವು ನೀಡಲು 11.5  ಕೋಟಿ ರೂ. ಅನುದಾನ; ರಾಜ್ಯ ಸರ್ಕಾರದ ವಸತಿ ಯೋಜನೆಗಳಲ್ಲಿ   ದಮನಿತ ಮಹಿಳೆಯರಿಗೆ ಆದ್ಯತೆ  ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ತಿಳಿಸಿದರು.
Stay up to date on all the latest ಕರ್ನಾಟಕ ಬಜೆಟ್ news with The Kannadaprabha App. Download now
facebook twitter whatsapp