ಎಲ್ಐಸಿ ಷೇರು ಮಾರಾಟ ದೇಶದ ಆರ್ಥಿಕ ದುಃಸ್ಥಿತಿಯ ಪ್ರತೀಕ, ಇದು ನಿರಾಶಾದಾಯಕ ಬಜೆಟ್: ಸಿದ್ದರಾಮಯ್ಯ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಆಯವ್ಯಯ ನಿರಾಶದಾಯಕ ಹಾಗೂ ಹುಸಿ ಬಜೆಟ್ ಆಗಿದ್ದು, ಕೇಂದ್ರ ಸರ್ಕಾರ ಎಲ್ಐಸಿ ಷೇರುಗಳ ಮಾರಾಟಕ್ಕೆ ಮುಂದಾಗಿರುವುದು ದೇಶದ ಆರ್ಥಿಕ ದುಃಸ್ಥಿತಿಯ ಪ್ರತೀಕ...
ಸಿದ್ದರಾಮಯ್ಯ
ಸಿದ್ದರಾಮಯ್ಯ

ಮೈಸೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಆಯವ್ಯಯ ನಿರಾಶದಾಯಕ ಹಾಗೂ ಹುಸಿ ಬಜೆಟ್ ಆಗಿದ್ದು, ಕೇಂದ್ರ ಸರ್ಕಾರ ಎಲ್ಐಸಿ ಷೇರುಗಳ ಮಾರಾಟಕ್ಕೆ ಮುಂದಾಗಿರುವುದು ದೇಶದ ಆರ್ಥಿಕ ದುಃಸ್ಥಿತಿಯ ಪ್ರತೀಕ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಶನಿವಾರ ಟೀಕಿಸಿದ್ದಾರೆ.

ಇಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಜನಾ ವೆಚ್ಚ 2 ಲಕ್ಷ ಕೋಟಿ ಕಡಿಮೆಯಾಗಿದೆ‌. ನೇರ ತೆರಿಗೆ ಸಂಗ್ರಹದಲ್ಲಿ ರಾಜ್ಯಗಳ ಪಾಲು ಶೇ. 42ರಷ್ಟು ಸಮರ್ಪಕವಾಗಿ ಹಂಚಿಕೆಯಾಗಿಲ್ಲ. ಎಲ್ಲಾ ರಾಜ್ಯಗಳಿಗೂ ಖೋತಾ ಆಗಿದೆ ಎಂದು ಟೀಕಿಸಿದ್ದಾರೆ.

ಕಳೆದ ಐದು ವರ್ಷಗಳಲ್ಲಿ ಐದು ಟ್ರಿಲಿಯನ್ ಡಾಲರ್ಸ್ ಗೆ ಕೊಂಡೊಯ್ಯುತ್ತೇವೆ ಎಂದು ಭರವಸೆ ಕೊಟ್ಟಿದ್ದರು. ಜಿಡಿಪಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕಾಲದಲ್ಲಿ ಶೇ. 9ಕ್ಕೇರಿತ್ತು. ಆದರೆ ಈಗ ಶೇ 4.5ಕ್ಕೆ ಇಳಿದಿದೆ. ಇದನ್ನು ಸರಿದೂಗಿಸಲು ಹೆಚ್ಚು ಸಾಲ ಮಾಡಬೇಕಾಗಿದೆ. ಈಗ ಜಿಡಿಪಿ ಶೇಕಡಾ 6ಕ್ಕೆ ಒಯ್ಯುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ. ಇದು ಮುಂದೆ ಏನಾಗುತ್ತದೆಯೋ ಎನ್ನುವುದನ್ನು ನೋಡಬೇಕು ಎಂದು ವ್ಯಂಗ್ಯವಾಡಿದರು.

ರೈತರು, ಯುವಕರ ಪಾಲಿಗೆ ಆಶಾದಾಯಕ ಬಜೆಟ್ ಅಲ್ಲ. ಹಿಂದೆ 10 ಲಕ್ಷ ಕೋಟಿ ಉದ್ಯೋಗ ಸೃಷ್ಟಿ ಮಾಡುವ ಭರವಸೆ ನೀಡಿದ್ದರು. ಆದರೆ ಇರುವ ಉದ್ಯೋಗವೇ ಕಡಿಮೆಯಾಗಿದೆ. ಯೋಜನೆಗಳಿಗೆ ಒಳ್ಳೆಯ ಹೆಸರು ಇಟ್ಟಿದ್ದಾರೆ ಅಷ್ಟೆ. ಕೃಷಿ ಉಡಾನ್ ನಿಂದ ಕಾರ್ಪೊರೇಟ್ ಸಂಸ್ಥೆಗಳಿಗೆ ಮಾತ್ರ ಅನುಕೂಲವಾಗಲಿದೆ. ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ಹೇಳಿ ನಿರಾಸೆ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಕೃಷಿ ಬೆಳವಣಿಗೆ ದರ ಶೇ. 2.5 ಮಾತ್ರ ಆಗಿದೆ. ಶೇ 10ಕ್ಕಿಂತ ಜಾಸ್ತಿ ಆದರೆ ಮಾತ್ರ ಆದಾಯ ದುಪ್ಪಟ್ಟಾಗಲಿದೆ. ಆದರೆ ಕೇಂದ್ರ ಸರ್ಕಾರ ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಹೇಳಿರುವುದು ಹಾಸ್ಯಾಸ್ಪದ. ಇವರ ಬಜೆಟ್ ರೈತರ ಮೂಗಿಗೆ ತುಪ್ಪ‌ ಸವರುವ ಕೆಲಸ. ಕೃಷಿ ಬೆಳವಣಿಗೆಗೆ ಪೂರಕವಾದ ಯಾವ ಕಾರ್ಯಕ್ರಮವನ್ನೂ ಮಾಡಿಲ್ಲ ಎಂದು ಹೇಳಿದರು.

ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಗೆ 10 ಸಾವಿರ ಕೋಟಿ ಕಡಿಮೆ ನೀಡಿದ್ದಾರೆ. ಬಜೆಟ್‌ನ 16 ಅಂಶಗಳ ಪೈಕಿ 9 ಕಾರ್ಪೊರೇಟ್ ಪರವಾಗಿವೆ. ಹಲವಾರು ಕ್ಷೇತ್ರಗಳಲ್ಲಿ ಖಾಸಗೀಕರಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಎಪಿಎಂಸಿ ಕಾಯಿದೆ, ಮಾರ್ಕೆಟಿಂಗ್ ಕಾಯಿದೆ ಪ್ರಸ್ತಾಪ ಮಾಡಿದ್ದಾರೆ. ಕಡಿಮೆ ಪ್ರಮಾಣದ ಜಮೀನು ಇದ್ದವರಿಗೆ ಈ‌ ಕಾಯಿದೆಗಳಿಂದ ಅನುಕೂಲವಿಲ್ಲ. ಎಐಪಿಪಿ ಕೃಷಿ ನೀರಾವರಿ ಯೋಜನೆ ಮುಂದುವರಿಸಿಲ್ಲ. ಹೀಗೆ ಮಾಡಿದರೆ ಕೃಷಿ ಆದಾಯ ಹೇಗೆ ಹೆಚ್ಚಳ ಆಗುತ್ತದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ರೈತರು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಪಡೆದ ಸಾಲ ಮನ್ನಾ ಬಗ್ಗೆ ನಮ್ಮ ಒತ್ತಾಯವಿದೆ. ಈ ಬಜೆಟ್ ನಲ್ಲೂ ಅದರ ಬಗ್ಗೆ ಕೇಂದ್ರ ಪ್ರಸ್ತಾಪಿಸಿಲ್ಲ. ಹಲವಾರು ರಾಜ್ಯಗಳಲ್ಲಿ ಸಹಕಾರ ಸಂಘಗಳ ಸಾಲ ಮನ್ನಾ ಮಾಡಿದೆ. ಬಜೆಟ್ ಗೆ ಟಿಂಕ್ ರಿಂಗ್ ಮಾಡಿದ್ದಾರೆ ಅಷ್ಟೆ. ಕಳೆದ ಬಾರಿ ಕೃಷಿ ಕ್ಷೇತ್ರಕ್ಕೆ ಶೇ 1.46 ಹೆಚ್ಚು ಮಾಡಿದ್ದರು.ಈ ಬಾರಿ ಶೇ 1.50 ಮಾತ್ರ ಹೆಚ್ಚು ಮಾಡಿ 0.4ರಷ್ಟು ಮಾತ್ರ ಹೆಚ್ಚು ಅನುದಾನ ನೀಡಿದ್ದಾರೆ.ಇದರಿಂದ ಕೃಷಿ ಬೆಳವಣಿಗೆಗೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಬೆಂಗಳೂರು ಸಬರ್ಬನ್ ರೈಲು ಕಳೆದ ವರ್ಷವೇ ಘೋಷಣೆ ಆಗಿತ್ತು. ಆದರೆ ಇದುವರೆಗೂ ಒಂದು ಕಿ.ಮೀ. ಕೆಲಸ ಕೂಡ ಆಗಿಲ್ಲ. ಈ ಬಾರಿಯೂ ಹಳೆಯದನ್ನೇ ಘೋಷಣೆ ಮಾಡಿ ನಗೆಪಾಟಿಲಿಗೀಡಾಗಿದ್ದಾರೆ ಎಂದು ವ್ಯಂಗ್ಯವಾಡಿದರು.

ಬಂಡವಾಳ ಹೂಡಿಕೆ ಆಗದಿದ್ದಲ್ಲಿ ಆರ್ಥಿಕ ಕ್ಷೇತ್ರ ಚೇತರಿಕೆ ಕಾಣುವುದಿಲ್ಲ. ಸಾಮಾನ್ಯ ಜನರಿಗೆ ಖರೀದಿ ಮಾಡುವ ಶಕ್ತಿ ಬಾರದಿದ್ದರೆ ಯಾವ ಕ್ಷೇತ್ರದಲ್ಲಿಯೂ ಪ್ರಗತಿ ಸಾಧ್ಯವಿಲ್ಲ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗೆ ದೇಶದ ಆರ್ಥಿಕ ಬದಲಾವಣೆ ತರುವ ಬಗ್ಗೆ ಯಾವುದೇ ಮುನ್ನೋಟವಿಲ್ಲ. ಇದೊಂದು ಹುಸಿ‌ ಬಜೆಟ್ ಎಂದು ಕಟುವಾಗಿ ಟೀಕಿಸಿದರು.

ಮಹಿಳೆಯರಿಗೂ ಬಜೆಟ್ ಅಶಾದಾಯಕವಾಗಿಲ್ಲ‌. ಇದೊಂದು ನಿರಾಶಾದಾಯಕ ಬಜೆಟ್. ಎಲ್.ಐ.ಸಿ ಷೇರುಗಳನ್ನು ಮಾರಾಟ ಮಾಡುವುದು ದೇಶದ ಆರ್ಥಿಕ ದುಃಸ್ಥಿತಿಯ ಪ್ರತೀಕ. ಆರನೇ ವರ್ಷಕ್ಕೆ ಪ್ರಧಾನಿ ಮೋದಿ ದೇಶವನ್ನು ಅಧೋಗತಿಗೆ ಇಳಿಸಿದ್ದಾರೆ. ಈ ಬಾರಿ ಬಜೆಟ್ ಮೇಲೆ ಭಾರೀ ನಿರೀಕ್ಷೆ ಇತ್ತು. ಶೇಕಡಾ 3.3ರಷ್ಟು ವಿತ್ತೀಯ ಕೊರತೆ ಇತ್ತು. ಅದು ಈಗ ಶೇ.3.6ಗೆ ಏರಿದೆ. ಅವರೆ ಇದನ್ನು ಶೇ. 3.5ಕ್ಕೆ ನಿಗದಿ ಮಾಡಿಕೊಂಡು ಬಂದಿದ್ದಾರೆ ಎಂದು ಸಿದ್ದರಾಮಯ್ಯ ಬಜೆಟ್ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com