ಕರ್ನಾಟಕ ಬಜೆಟ್: 2.43 ಲಕ್ಷ ಕೋಟಿ ರೂ. ಗಾತ್ರದ ಮುಂಗಡಪತ್ರ, 71 ಸಾವಿರ ಕೋಟಿ ರೂ ಸಾಲ, ವಿವಿಧ ವಲಯಗಳಿಗೆ ಆದ್ಯತೆ

ಕೊರೋನಾ ಸಂಕಷ್ಟದ ನಡುವೆ ಕೃಷಿ, ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಆರೋಗ್ಯ, ಮಹಿಳೆಯರು ಸೇರಿದಂತೆ ಹಲವು ವಲಯಗಳಿಗೆ ಆದ್ಯತೆ ನೀಡುವ 2,43,734 ಕೋಟಿ ರೂಪಾಯಿ ಮೊತ್ತದ 2021-22ನೇ ಸಾಲಿನ ಬಜೆಟ್ ಅನ್ನು ಇಲಾಖೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಧಾನಸಭೆಯಲ್ಲಿಂದು ಮಂಡಿಸಿದರು.
ಸಿಎಂ ಯಡಿಯೂರಪ್ಪ
ಸಿಎಂ ಯಡಿಯೂರಪ್ಪ

ಬೆಂಗಳೂರು: ಕೊರೋನಾ ಸಂಕಷ್ಟದ ನಡುವೆ ಕೃಷಿ, ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಆರೋಗ್ಯ, ಮಹಿಳೆಯರು ಸೇರಿದಂತೆ ಹಲವು ವಲಯಗಳಿಗೆ ಆದ್ಯತೆ ನೀಡುವ 2,43,734 ಕೋಟಿ ರೂಪಾಯಿ ಮೊತ್ತದ 2021-22ನೇ ಸಾಲಿನ ಬಜೆಟ್ ಅನ್ನು ಹಣಕಾಸು ಇಲಾಖೆ ಜವಾಬ್ದಾರಿ ಹೊತ್ತಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಧಾನಸಭೆಯಲ್ಲಿಂದು ಮಂಡಿಸಿದರು.

ಯಡಿಯೂರಪ್ಪ ಅವರು ಮಂಡಿಸಿದ 8ನೇ ಬಜೆಟ್ ಇದಾಗಿದೆ. ಇದರಲ್ಲಿ 1 ಲಕ್ಷ 22 ಸಾವಿರದ 271 ಕೋಟಿ ರೂಪಾಯಿ ರಾಜಸ್ವ ಜಮೆ ಹಾಗೂ 71 ಸಾವಿರದ 332 ಕೋಟಿ ರೂಪಾಯಿ ಸಾಲ ಒಳಗೊಂಡಂತೆ 71 ಸಾವಿರದ 463 ಕೋಟಿ ರೂಪಾಯಿಗಳ ಬಂಡವಾಳ ಜಮೆ ಇದರಲ್ಲಿ ಸೇರಿದೆ.

ಕಳೆದ ವರ್ಷ ಕೊರೋನಾ ಸಂದಿಗ್ಧತೆ, ನೆರೆ ಸಂಕಷ್ಟದ ನಡುವೆಯೂ ರಾಜ್ಯ ಸರ್ಕಾರ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ಎಲ್ಲ ವರ್ಗಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಿದೆ ಎಂದು ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ಕೇಂದ್ರ ಸರ್ಕಾರ ಆತ್ಮನಿರ್ಭರ ಭಾರತ ಅಭಿಯಾನದಡಿ ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡಿದ್ದು, ಈವರೆಗೆ 5 ಸಾವಿರದ 372 ಕೋಟಿ ರೂಪಾಯಿ ವೆಚ್ಚ ಮಾಡಿ, 63.59 ಲಕ್ಷ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಲಾಗಿದೆ.

ಅಂತಾರಾಷ್ಟ್ರೀಯ ಮಹಿಳಾ ದಿನದ ಹಿನ್ನೆಲೆಯಲ್ಲಿ ಮಹಿಳೆಯರ ಸಮಾನತೆ, ಸಬಲೀಕರಣಕ್ಕೆ ಸರ್ಕಾರ ಆದ್ಯತೆ ನೀಡಿದೆ. ಉದ್ಯೋಗಸ್ಥ ಮಹಿಳೆಯರ ಮಕ್ಕಳ ಆರೋಗ್ಯಕ್ಕಾಗಿ ಅಂಗನವಾಡಿಗಳನ್ನು ಹಂತ ಹಂತವಾಗಿ ಶಿಶುಪಾಲನಾ ಕೇಂದ್ರಗಳನ್ನಾಗಿ ಉನ್ನತೀಕರಿಸಲು ಕ್ರಮ. ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಮಹಿಳಾ ಅಭಿವೃದ್ಧಿ ನಿಗಮ, ರಾಜ್ಯ ಹಣಕಾಸು ಸಂಸ್ಥೆ ಮೂಲಕ ಶೇಕಡ 4ರ ರಿಯಾಯಿತಿ ದರದಲ್ಲಿ ಸಾಲ ಸೌಲಭ್ಯ ಒದಗಿಸಲಾಗುವುದು ಎಂದರು.

ಬಿಎಂಟಿಸಿ ಬಸ್ ಗಳಲ್ಲಿ ಮಹಿಳೆಯರಿಗೆ ರಿಯಾಯಿತಿ ಬಸ್ ಪಾಸ್, ಎಪಿಎಂಸಿಗಳಲ್ಲಿ ಮಹಿಳೆಯರಿಗೆ ಶೇ. 10ರಷ್ಟು ಮೀಸಲಾತಿ, ಕೋಟಿ ರೂ.ವರೆಗೆ ಮಹಿಳಾ ಉದ್ಯಮಿಗಳಿಗೆ ಸಾಲ ಸೌಲಭ್ಯ, ರಾಜ್ಯಾದ್ಯಂತ 60 ಸಾವಿರ ಮಹಿಳೆಯರಿಗೆ ಉದ್ಯೋಗ, ಹಪ್ಪಳ, ಉಪ್ಪಿನಕಾಯಿ ತಯಾರಕರಿಗೆ ಆನ್ ಲೈನ್ ಮಾರುಕಟ್ಟೆ, ನಿರ್ಭಯಾ ಯೋಜನೆಯಡಿ 7 ಸಾವಿರದ 500 ಸಿಸಿ ಕ್ಯಾಮರಾ ಅಳವಡಿಕೆ, ಮಹಿಳಾ ಉದ್ಯೋಗಿಗಳಿಗೆ 6 ತಿಂಗಳು ಪ್ರಸೂತಿ ರಜೆ ಸೌಲಭ್ಯ ಕಲ್ಪಿಸುವುದಾಗಿ ಹೇಳಿದ್ದಾರೆ. 

ಕೃಷಿ ಕ್ಷೇತ್ರದ ಬಲವರ್ಧನೆ
ಕೇಂದ್ರದ ಆಶಯದಂತೆ 2023ರ ವೇಳೆಗೆ ಕೃಷಿಕರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೈಜೋಡಿಸಿದ್ದು, ಕೃಷಿ ಚಟುವಟಿಕೆಯ ಎಲ್ಲ ಹಂತಗಳಲ್ಲೂ ರೈತರಿಗೆ ಅಗತ್ಯ ಮೂಲಸೌಲಭ್ಯ ಕಲ್ಪಿಸಿ ಬೆಂಬಲ ನೀಡಲು ಸರ್ಕಾರ ಬದ್ಧ, ಉತ್ಪಾದಕತೆ ಲಾಭದಾಯಕ ಮತ್ತು ಜನಪ್ರಿಯತೆ ಹೆಚ್ಚಿಸಲು ಹೊಸ ಹೈಬ್ರೀಡ್ ಬೀಜನೀತಿ ಜಾರಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲಿ ಅಡಿಕೆ ಬೆಳೆಯ ಹಳದಿ ರೋಗ ನಿಯಂತ್ರಣಕ್ಕಾಗಿ ಸಂಶೋಧನೆ ತೀವ್ರಗೊಳಿಸಲು, ಪರ್ಯಾಯ ಬೆಳೆ ಪ್ರೋತ್ಸಾಹಿಸಲು 25 ಕೋಟಿ ರೂಪಾಯಿ ವೆಚ್ಚದ ವಿಶೇಷ ಕಾರ್ಯಕ್ರಮ. ದ್ರಾಕ್ಷಿ ಬೆಳೆಗಾರರ ದೃಷ್ಟಿಯಿಂದ ಕರ್ನಾಟಕ ದ್ರಾಕ್ಷರಸ ಮಂಡಳಿಯನ್ನು, ಕರ್ನಾಟಕ ದ್ರಾಕ್ಷಿ ಹಾಗೂ ದ್ರಾಕ್ಷ ರಸವಾಗಿ ಪುನರ್ ರಚನೆ, ಕೃಷಿ ಸಿಂಚಾಯ್ ಯೋಜನೆಗೆ 831 ಕೋಟಿ ರೂಪಾಯಿ, ಕೃಷಿ ಉತ್ಪನ್ನ ಸಂಗ್ರಹ ಮತ್ತು ಸಂಸ್ಕರಣೆಗೆ ಆದ್ಯತೆ, ಕೃಷಿ ಮಾರುಕಟ್ಟೆ ಶುಲ್ಕ ಶೇ 1.5ರಿಂದ ಶೇ. 0.60ಗೆ ಇಳಿಕೆ, ಆತ್ಮನಿರ್ಭರ ಭಾರತ ಅಭಿಯಾನದಡಿ ವಿಜಯಪುರದ ಇಟ್ಟಂಗಿಹಾಳ ಗ್ರಾಮದಲ್ಲಿ ಆಹಾರ ಪಾರ್ಕ್ ಸ್ಥಾಪನೆ, ಕೃಷಿ ವಿವಿಗಳಲ್ಲಿ ರೈತರ ಮಕ್ಕಳಿಗೆ ನೀಡುತ್ತಿರುವ ಮೀಸಲಾತಿ ಪ್ರಮಾಣ ಶೇಕಡ 40ರಿಂದ 50ಕ್ಕೆ ಹೆಚ್ಚಳ, ಸಣ್ಣ ಟ್ರಾಕ್ಟ ರ್ ಗಳಿಗೆ ನೀಡುತ್ತಿರುವ ಸಹಾಯಧನ 25-45 ಪಿಟಿ ಓ ಎಚ್ ಪಿ ಟ್ರಾಕ್ಟರ್ ಗಳಿಗೂ ವಿಸ್ತರಣೆ, ಸಿರಿಧಾನ್ಯಗಳಿಗೆ ಗರಿಷ್ಠ ಬೆಲೆ ದೊರೆಕಿಸಲು ರಾಷ್ಟ್ರೀಯ ಇ- ಮಾರುಕಟ್ಟೆ ಪ್ರೈವೇಟ್ ಲಿಮಿಟೆಡ್ ಮೂಲಕ ಅವಕಾಶ, ಕಿರು ಆಹಾರ ಸಂಸ್ಕರಣೆ ಉದ್ಯಮಗಳಿಗೆ ನೀಡುತ್ತಿದ್ದ ಸಹಾಯ ಧನ ಶೇಕಡ 35 ರಿಂದ ಶೇಕಡ 50ಕ್ಕೆ ಹೆಚ್ಚಳ, 50 ಕೋಟಿ ರೂಪಾಯಿ ನಿಗದಿ, ಕೊಪ್ಪಳ ಜಿಲ್ಲೆಯ ಶಿರಿವಾರದಲ್ಲಿ ತೋಟಗಾರಿಕಾ ತಂತ್ರಜ್ಞಾನ ಪಾರ್ಕ್ ಅಭಿವೃದ್ಧಿ, ಸಣ್ಣ, ಅತಿಸಣ್ಣ ಹಿಡುವಳಿದಾರರಿಗೆ ಕೃಷಿ ತೋಟಗಾರಿಕೆ ಉಪಕಸಬುಗಳಿಗೆ ಅನುಕೂಲ ಕಲ್ಪಿಸಲು ಸಮಗ್ರ ಕೃಷಿ ಪದ್ಧತಿ ಕಾರ್ಯಕ್ರಮ, ಪ್ರತಿ ಜಿಲ್ಲೆಯಲ್ಲಿ ಗೋ ಶಾಲೆ, ಗೋವುಗಳ ತಳಿ ಅಭಿವೃದ್ಧಿಪಡಿಸಲು ಸಮಗ್ರ ಗೋ ಸಂಕುಲ ಅಭಿವೃದ್ಧಿ ಯೋಜನೆ, ಮೀನು ಮಾರಾಟ ಉತ್ತೇಜನಕ್ಕಾಗಿ ಮೀನುಗಾರಿಕೆ ಅಭಿವೃದ್ಧಿ ನಿಗಮದಿಂದ 30 ಕೋಟಿ ರೂಪಾಯಿ ವೆಚ್ಚದಲ್ಲಿ ಮೀನು ಮಾರಾಟ ಘಟಕಗಳು ಮತ್ತು ಮತ್ಸ್ಯ ದರ್ಶಿನಿಗಳ ಸ್ಥಾಪನೆ.

ಮಹದಾಯಿ ನ್ಯಾಯಾಧೀಕರಣದ ತೀರ್ಪಿನ ಅನ್ವಯ ಕಳಸ ಮತ್ತು ಬಂಡೂರಿ ನಾಲಾ ತಿರುವು ಯೋಜನೆಗಳ ನೀರಿನ ಬಳಕೆಗೆ 1 ಸಾವಿರದ 677 ಕೋಟಿ ರೂಪಾಯಿ ನಿಗದಿ, ಆದ್ಯತೆ ಮೇರೆಗೆ ಕಾಮಗಾರಿ, 21 ಸಾವಿರದ 474 ಕೋಟಿ ರೂಪಾಯಿ ವೆಚ್ಚದ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಘೋಷಿಸುವ ಪ್ರಸ್ತಾವನೆ ಕೇಂದ್ರ ಸರ್ಕಾರದ ಅಂತಿಮ ಹಂತದ ಪರಿಶೀಲನೆಯಲ್ಲಿ, ಕೇಂದ್ರದ ನೆರವಿನೊಂದಿಗೆ ಯೋಜನೆ ಜಾರಿ, ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆ ಜಾರಿಗೆ ಸಂಕಲ್ಪ , ಕೃಷ್ಣಾ ಜಲಭಾಗ್ಯ ನಿಗಮಕ್ಕೆ 5 ಸಾವಿರದ 600 ಕೋಟಿ ರೂಪಾಯಿ ಅನುದಾನ, ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಪ್ರಥಮ ಹಂತದ ಏತನೀರಾವರಿ ಕಾಮಗಾರಿ ಅಡೆತಡೆ ನಿವಾರಣೆಗೆ ಕ್ರಮ, ತುಂಗಭದ್ರಾ ಜಲಾಶಯದಲ್ಲಿ ಹೂಳಿನ ಸಮಸ್ಯೆಯಿಂದ ಉಂಟಾಗಿರುವ ನೀರಿನ ಕೊರತೆಯನ್ನು ನಿವಾರಿಸಲು ಕೊಪ್ಪಳ ಜಿಲ್ಲೆಯ ನವಲಿ ಬಳಿ ಶೀಘ್ರ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಕ್ರಮ, ಕೃಷಿ ಮತ್ತು ಪೂರಕ ಚಟುವಟಿಕೆಗಳ ವಲಯಕ್ಕೆ 31 ಸಾವಿರದ 28 ಕೋಟಿ ರೂಪಾಯಿ ಅನುದಾನ ಒದಗಿಸಿದ್ದಾರೆ.

ರಾಜ್ಯದಲ್ಲಿ ಕೋವಿಡ್ ಸೋಂಕಿನ 2ನೇ ಅಲೆ ವ್ಯಾಪಿಸದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಹಲವು ಕಾರ್ಯಕ್ರಮಗಳನ್ನು ರೂಪಿಸಿರುವುದಾಗಿ ಸಿಎಂ ತಿಳಿಸಿದ್ದಾರೆ.

ರಾಜ್ಯದಲ್ಲಿ 250 ಆರೋಗ್ಯ ಕೇಂದ್ರಗಳನ್ನು ಮಾದರಿ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲು ಕ್ರಮ, 100 ತಾಲೂಕುಗಳಲ್ಲಿ 6 ಹಾಸಿಗೆಗಳ ತೀವ್ರ ನಿಗಾ ಘಟಕ ನಿರ್ಮಾಣ, ಸುಸ್ಥಿರ ಅಭಿವೃದ್ಧಿ ಗುರಿ 2030ರ ಅನ್ವಯ ತಾಯಿ ಮತ್ತು ಶಿಶು ಮರಣ ಪ್ರಮಾಣ ಕ್ರಮವಾಗಿ ಶೇಕಡ 30 ಹಾಗೂ ಶೇಕಡ 10ಕ್ಕೆ ಇಳಿಸಲು ಕಾರ್ಯ ಯೋಜನೆ, ತಾಯಿ ಹಾಲು ಕೊರತೆ ನೀಗಿಸಲು ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ತಾಯಂದಿರ ಎದೆ ಹಾಲಿನ ಬ್ಯಾಂಕ್ ಸ್ಥಾಪನೆ, ಶಿವಮೊಗ್ಗದ ಆಯುರ್ವೇದ ಕಾಲೇಜು ಆಯುಷ್ ವಿಶ್ವವಿದ್ಯಾಲಯವಾಗಿ ಮೇಲ್ದರ್ಜೆಗೆ, ಶಿವಮೊಗ್ಗ, ಮೈಸೂರಿನಲ್ಲಿ ಕಿದ್ವಾಯಿ ಸಂಸ್ಥೆ ಮಾದರಿಯಲ್ಲಿ ಪ್ರಾದೇಶಿಕ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳ ಸ್ಥಾಪನೆ, ದಾವಣಗೆರೆಯಲ್ಲಿ 50 ಹಾಸಿಗೆ ಸಾಮರ್ಥ್ಯದ ಜಯದೇವ ಹೃದ್ರೋಗ ಸಂಸ್ಥೆಯ ಉಪಕೇಂದ್ರ ನಿರ್ಮಾಣ, ಸಾರ್ವಜನಿಕ , ಖಾಸಗಿ ಸಹಭಾಗಿತ್ವದಡಿ ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆ, ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಅಭಿವೃದ್ಧಿಗೆ ಪ್ರಸಕ್ತ ಸಾಲಿನಲ್ಲಿ 100 ಸ್ನಾತಕೋತ್ತರ ಸೀಟುಗಳನ್ನು ಹೆಚ್ಚಿಸುವ ಕ್ರಮ, ಬುದ್ಧಿಮಾಂದ್ಯರ ಮಾಸಾಶನ ಹೆಚ್ಚಳ, ವಿಶೇಷ ಶಾಲೆಗಳಲ್ಲಿ ಓದುತ್ತಿರುವ ದೃಷ್ಟಿ ದೋಷ ವಿದ್ಯಾರ್ಥಿಗಳಿಗೆ ಬ್ರೈಲ್ ಮುದ್ರಣಾಲಯದಲ್ಲಿ ಡಿಜಿಟಲ್ ಪುಸ್ತಕಗಳ ಬ್ಯಾಂಕ್ ಸ್ಥಾಪನೆ.

ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವು ಕೊಡುಗೆಗಳನ್ನು ಪ್ರಕಟಿಸಿದ್ದು, 50 ಕರ್ನಾಟಕ ಪಬ್ಲಿಕ್ ಶಾಲೆಗಳ ಅಭಿವೃದ್ಧಿಗೆ 100 ಕೋಟಿ ರೂಪಾಯಿ ನಿಗದಿ, ರಾಜ್ಯದ ಎಲ್ಲ ಸರ್ಕಾರಿ ಪ್ರೌಢಶಾಲೆಗಳಿಗೂ ಲ್ಯಾಪ್ ಟಾಪ್ ಮತ್ತು ಪ್ರೊಜೆಕ್ಟರ್ ಗಳನ್ನು ಒಳಗೊಂಡ ಕಂಪ್ಯೂಟರ್ ಲ್ಯಾಬ್ ಸ್ಥಾಪನೆ, ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಗುರುಚೇತನ ಮತ್ತು ಓದು ಕರ್ನಾಟಕ ಕಾರ್ಯಕ್ರಮದಡಿ ಶಿಕ್ಷಕರಿಗೆ ತರಬೇತಿ ನೀಡಲು 5 ಕೋಟಿ ರೂಪಾಯಿ, 8 ಜ್ಞಾನಪೀಠ ಪುರಸ್ಕೃತರು ಓದಿರುವ ಶಾಲೆಗಳ ಅಭಿವೃದ್ಧಿಗೆ ಕಾರ್ಯಕ್ರಮ, ಕೇಂದ್ರ ಸರ್ಕಾರದ ನೇಮಕಾತಿಗಳಲ್ಲಿ ಕನ್ನಡಿಗರ ಸಂಖ್ಯೆ ಹೆಚ್ಚಿಸಲು ಸಾಮರ್ಥ್ಯ - ಸಾರಥ್ಯ ಕಾರ್ಯಕ್ರಮದಡಿ 5 ಲಕ್ಷ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ, ರಾಷ್ಟ್ರೀಯ ನೂತನ ಶಿಕ್ಷಣ ನೀತಿ ಜಾರಿಗೊಳಿಸಲು ಶಿಕ್ಷಣ ಇಲಾಖೆಗೆ ಸಿಬ್ಬಂದಿಗೆ ತರಬೇತಿ, ಬೆಂಗಳೂರು ನಗರದ ಅಭಿವೃದ್ಧಿಗೆ 795 ಕೋಟಿ ರೂಪಾಯಿಗಳನ್ನು ಅನುದಾನ, ಬೆಂಗಳೂರು ನಗರವನ್ನು ಜಿಯೋ ಸ್ಪೇಷಿಯಲ್ ಆಗಿ ರೂಪಿಸಲು ಕ್ರಮ ಕೈಗೊಳ್ಳುವುದಾಗಿ ಯಡಿಯೂರಪ್ಪ ಹೇಳಿದ್ದಾರೆ.

ಪರಿಶಿಷ್ಟ ಜಾತಿ, ಪಂಗಡಕ್ಕೂ ವಿವಿಧ ಕಾರ್ಯಕ್ರಮ ಹಾಗೂ ಯೋಜನೆಗಳನ್ನು ಘೋಷಿಸಿದ್ದು, ಅನುಸೂಚಿತ ಜಾತಿಗಳ ಮತ್ತು ಬುಡಕಟ್ಟು ಉಪಯೋಜನೆಗೆ 26,005 ಕೋಟಿ ರೂಪಾಯಿ ಹಂಚಿಕೆ, ನಾಲ್ಕು ಕಂದಾಯ ವಿಭಾಗಗಳಲ್ಲಿ ಮೊರಾರ್ಜಿ ವಸತಿ ಶಾಲೆಗಳನ್ನು ಅದ್ವಿತೀಯ ಕ್ರೀಡಾ ಶಾಲೆಯಾಗಿ ಮೇಲ್ದರ್ಜೆಗೇರಿಸಲು ಕ್ರಮ, ವಿವಿಧ ಸಮುದಾಯಗಳ ಅಭಿವೃದ್ಧಿ ನಿಗಮಗಳಿಗೆ 500 ಕೋಟಿ ರೂಪಾಯಿ ಅನುದಾನ ನಿಗದಿ. 

ಒಕ್ಕಲಿಗರ ಸಮುದಾಯ ಅಭಿವೃದ್ಧಿಗಾಗಿ ಹೊಸ ನಿಗಮ ಸ್ಥಾಪನೆ, 500 ಕೋಟಿ ರೂಪಾಯಿ ಅನುದಾನ, ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ 50 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಜತೆಗೆ ಅಲ್ಪಸಂಖ್ಯಾತ ಅಭಿವೃದ್ದಿಗೆ 500 ಕೋಟಿ ರೂಪಾಯಿ ನಿಗದಿಗೊಳಿಸಿದ್ದಾರೆ. ಕ್ರಿಶ್ಚಿಯನ್ ಸಮುದಾಯದ ಶ್ರೇಯೋಭಿವೃದ್ಧಿಗೆ 200 ಕೋಟಿ ರೂಪಾಯಿ, 400 ಸರ್ಕಾರಿ ಉರ್ದು ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭ, ಶ್ರವಣಬೆಳಗೊಳದ ಮೂಲಸೌಕರ್ಯಾಭಿವೃದ್ಧಿಗೆ 50 ಕೋಟಿ ರೂಪಾಯಿ ನೀಡುವುದಾಗಿ ಪ್ರಕಟಿಸಿದ್ದಾರೆ. 

ಕಟ್ಟಡ ಕಾರ್ಮಿಕರ ಮಕ್ಕಳ ಸಂರಕ್ಷಣೆಗಾಗಿ 100 ಕಿತ್ತೂರು ರಾಣಿ ಚೆನ್ನಮ್ಮ ಶಿಶುಪಾಲನಾ ಕೇಂದ್ರಗಳ ಸ್ಥಾಪನೆ, ಮಾನವ ಸಂಪನ್ಮೂಲ ಅಭಿವೃದ್ಧಿ ಉದ್ದೇಶದಿಂದ ಐಟಿಐಗಳಲ್ಲಿ 23 ಅಲ್ಪಾವಧಿ ಹಾಗೂ 11 ದೀರ್ಘಾವಧಿ ವೃತ್ತಿಪರ ಕೋರ್ಸ್ ಗಳ ಸ್ಥಾಪನೆ, ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ ವಲಯಕ್ಕೆ 62 ಸಾವಿರದ 150 ಕೋಟಿ ರೂಪಾಯಿ ನಿಗದಿ ಮಾಡಿದ್ದಾರೆ.

ಗ್ರಾಮೀಣಾಭಿವೃದ್ಧಿ ಯೋಜನೆಯಡಿ ಮನೆ-ಮನೆಗೆ ಗಂಗೆ ಯೋಜನೆಯಡಿ 22 ಲಕ್ಷ ಗ್ರಾಮೀಣ ಕುಟುಂಬಗಳಿಗೆ 4 ಸಾವಿರದ 316 ಕೋಟಿ ರೂಪಾಯಿ ವೆಚ್ಚದಲ್ಲಿ ನಲ್ಲಿ ಮೂಲಕ ನೀರು ಪೂರೈಕೆ, ಗ್ರಾಮಪಂಚಾಯತ್ ಆಡಳಿತ ವ್ಯವಸ್ಥೆ ಸುಧಾರಣೆಗೆ ಸಂಯೋಜಿತ ಪಂಚತಂತ್ರ 2.0 ತಂತ್ರಾಂಶ ಅಳವಡಿಕೆ, ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗಾಗಿ 3 ಸಾವಿರ ಕೋಟಿ ರೂಪಾಯಿ ನಿಗದಿ, ಸೂಕ್ತ ರಸ್ತೆ ಸಂಪರ್ಕವಿಲ್ಲದ ಮಲೆನಾಡು, ಕರಾವಳಿ ಭಾಗದಲ್ಲಿ ಸಂಪರ್ಕ ಸುಧಾರಣೆಗೆ 100 ಕೋಟಿ ರೂಪಾಯಿ ವೆಚ್ಚದಲ್ಲಿ ಗ್ರಾಮ ಬಂಧ ಸೇತುವೆ ಯೋಜನೆ ಜಾರಿ, 
ಬೆಂಗಳೂರು- ಮುಂಬೈ, ಬೆಂಗಳೂರು - ಚೆನ್ನೈ ಕೈಗಾರಿಕಾ ಕಾರಿಡಾರ್ ವ್ಯಾಪ್ತಿಯಲ್ಲಿ ತಲಾ 500 ಎಕರೆ ಜಾಗದಲ್ಲಿ ಮುಖ್ಯಮಂತ್ರಿಗಳ ಮೆಗಾ ಸಂಯೋಜಿತ ಕೈಗಾರಿಕಾ ಟೌನ್ ಶಿಪ್ ನಿರ್ಮಾಣ, ರಾಜ್ಯದಲ್ಲಿ ಕೈಗಾರಿಕಾ ವಲಯದ ಪ್ರೋತ್ಸಾಹಕ್ಕೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೈಗಾರಿಕೆಗಳಿಗೆ ಪ್ರತ್ಯೇಕ ಆಸ್ತಿ ತೆರಿಗೆ ಸ್ಲ್ಯಾಬ್ ಜಾರಿ, ಸಂಕಷ್ಟದಲ್ಲಿರುವ ಕೈಮಗ್ಗ ನೇಕಾರರಿಗೆ ಆರ್ಥಿಕ ನೆರವು ಮುಂದುವರಿಕೆ, ರಾಜ್ಯ ಖನಿಜ ನೀತಿ ರೂಪಿಸಲು ಕ್ರಮ, ವಿದ್ಯುತ್ ವಾಹನಗಳ ಬಳಕೆ ಉತ್ತೇಜನ, ವಾಯು ಮಾಲಿನ್ಯ ನಿಯಂತ್ರಿಸಲು ಒಂದು ಸಾವಿರದ ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆ, ಸೈಬರ್ ಭದ್ರತಾ ಕಾರ್ಯನೀತಿ ಜಾರಿ, ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಸಂಬಂಧಿತ ತಂತ್ರಜ್ಞಾನಗಳ ಸಂಶೋಧನೆ ಉತ್ತೇಜಿಸಲು 10 ಕೋಟಿ ರೂಪಾಯಿ ವೆಚ್ಚದಲ್ಲಿ ಸಂಶೋಧನಾ ಪಾರ್ಕ್ ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ. 
 
ಬಿಎಸ್ ವೈ ಬಜೆಟ್ ಮುಖ್ಯಾಂಶಗಳು
 * ಬೆಂಗಳೂರು ಸಮಗ್ರ ಅಭಿವೃದ್ಧಿಗೆ ಹಲವು ಯೋಜನೆ
 * ಬೆಂಗಳೂರು ಮಿಷನ್ 2022 - ಬೆಂಗಳೂರಿಗೆ ನವಚೈತನ್ಯ ಕಾರ್ಯಕ್ರಮ
 * ಮೈಸೂರು ಲ್ಯಾಂಪ್ಸ್ ಕಾರ್ಖಾನೆ ಪ್ರದೇಶದಲ್ಲಿ ರಾಜ್ಯ ಸಂಸ್ಕೃತಿ ಬಿಂಬಿಸುವ ಕೇಂದ್ರ ಸ್ಥಾಪನೆ
 * ಎನ್ ಜಿಇಎಫ್ ನ 105 ಎಕರೆ ಜಮೀನಿನಲ್ಲಿ ವೃಕ್ಷೋದ್ಯಾನ
 * ಬೆಂಗಳೂರು ನಗರ ಸುತ್ತಲೂ 65 ಕಿ.ಮೀ. ಉದ್ದದ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ
 * 15 ಸಾವಿರದ 767 ಕೋಟಿ ರೂ. ವೆಚ್ಚದ ಉಪನಗರ ರೈಲು ಯೋಜನೆಗೆ ಈ ವರ್ಷ 850 ಕೋಟಿ ರೂ.
 * ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ರನ್ ವೇ ಕಾಮಗಾರಿಗೆ ಪ್ರಸಕ್ತ ವರ್ಷ 4,751 ಕೋಟಿ ರೂ.
 * ಕೋರಮಂಗಲ ಕಣಿವೆ ರಾಜಕಾಲುವೆ ಅಭಿವೃದ್ಧಿ, ನಿರ್ವಹಣೆಗೆ 169 ಕೋಟಿ ರೂ.
 * ಬೆಂಗಳೂರು ನಗರದಲ್ಲಿ 3 ವೃಕ್ಷೋದ್ಯಾನ.
 * ಕೆ.ಸಿ. ವ್ಯಾಲಿಯ ಎಸ್ ಟಿಪಿ ಪುನರುಜ್ಜೀವನ ಯೋಜನೆಗೆ 450 ಕೋಟಿ ರೂ.
 * ಮೇಕೆದಾಟು ಜಲಾಶಯಕ್ಕೆ 9 ಸಾವಿರ ಕೋಟಿ ರೂ. ಅಂದಾಜು ಮೊತ್ತದ ಯೋಜನಾ ವರದಿ
 * ಈ ವರ್ಷದ ಜೂನ್ ನಿಂದ ಮುಂದಿನ ವರ್ಷದ ಅಂತ್ಯದ ವೇಳೆಗೆ 41 ಕಿ.ಮೀ. ಉದ್ದದ ಮೆಟ್ರೋ ರೈಲು ಸೇವೆ ಹಂತ ಹಂತವಾಗಿ ಕಾರ್ಯಗತ.
 * ಬಿಎಂಟಿಸಿಯಲ್ಲಿ ಸ್ವಯಂ ಚಾಲಿತ ಪ್ರಯಾಣ ದರ ಸಂಗ್ರಹ ವ್ಯವಸ್ಥೆ ಅನುಷ್ಠಾನ
 * ಬೆಂಗಳೂರಿನಲ್ಲಿ ಘನತ್ಯಾಜ್ಯ ಸಂಗ್ರಹಣೆ, ಸಾಗಾಣಿಕೆ ಮತ್ತು ಸಂಸ್ಕರಣೆ ನಿರ್ವಹಣೆಗೆ ಪ್ರತ್ಯೇಕ ಸಂಸ್ಥೆ ಸ್ಥಾಪನೆ
 * ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ 50 ಹಾಸಿಗೆ ಸಾಮರ್ಥ್ಯದ ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯ ಉಪ ಕೇಂದ್ರ ಸ್ಥಾಪನೆ
 * ಬಿಬಿಎಂಪಿ ವ್ಯಾಪ್ತಿಯ 57 ವಾರ್ಡ್ ಗಳಲ್ಲಿ ಜನಾರೋಗ್ಯ ಕೇಂದ್ರಗಳ ಸ್ಥಾಪನೆ.
 * ಬಿಬಿಎಂಪಿ ಶಾಲೆಗಳ ನವೀಕರಣ ಮತ್ತು ಪನರ್ ನಿರ್ಮಾಣಕ್ಕೆ 33 ಕೋಟಿ ರೂ.
 * ಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ಪ್ರತಿ ವಾರಾಂತ್ಯ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮ, ಚಿತ್ರಸಂತೆ, ಶಿಲ್ಪಕಲಾಕೃತಿ ಪ್ರದರ್ಶನ , ಜಾನಪದ ಕಾರ್ಯಕ್ರಮಗಳ ಆಯೋಜನೆ
 * ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ 2021-22ರಲ್ಲಿ ಒಟ್ಟಾರೆ 7,795 ಕೋಟಿ ರೂ. ಅನುದಾನ
 * ಜಕ್ಕೂರಿನ ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಸೌಲಭ್ಯಗಳ ಅಭಿವೃದ್ಧಿಗೆ 2 ಕೋಟಿ ರೂ.
 * ಜಗಜ್ಯೋತಿ ಬಸವೇಶ್ವರರ ಜನ್ಮಸ್ಥಳ ಇಂಗಳೇಶ್ವರ ಅಭಿವೃದ್ಧಿಗೆ 5 ಕೋಟಿ ರೂ.
 * ಕಿತ್ತೂರು ಕೋಟೆ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 50 ಕೋಟಿ ರೂ. ಅನುದಾನ
 * ಆದಿಚುಂಚನಗಿರಿ ಕ್ಷೇತ್ರದಲ್ಲಿ ಆದಿಚುಂಚನಗಿರಿ ನಾಥ ಪಾರಂಪರಿಕ ಕೇಂದ್ರ ಸ್ಥಾಪನೆಗೆ 10 ಕೋಟಿ ರೂ.
 * ಅಯೋಧ್ಯೆಯಲ್ಲಿ ಕರ್ನಾಟಕ ಯಾತ್ರಿ ನಿವಾಸ ಸ್ಥಾಪನೆಗೆ 10 ಕೋಟಿ ರೂ.
 * ತುಮಕೂರಿನಲ್ಲಿ ಶ್ರೀ ಶಿವಕುಮಾರಸ್ವಾಮೀಜಿಗಳ ಮತ್ತು ಉಡುಪಿಯಲ್ಲಿ ಪೇಜಾವರ ಶ್ರೀ ವಿಶ್ವೇಶ ತೀರ್ಥ ಸ್ಮಾಮೀಜಿ ಅವರ ಗೌರವಾರ್ಥ ತಲಾ 2 ಕೋಟಿ ರೂ. ವೆಚ್ಚದಲ್ಲಿ ಸ್ಮೃತಿವನ ನಿರ್ಮಾಣ 
 * ಡಾ. ಎಸ್.ಎಲ್. ಭೈರಪ್ಪ ನವರ ಪರ್ವ ನಾಟಕ ರಂಗಾಯಣಗಳ ಮೂಲಕ ರಾಜ್ಯಾದ್ಯಂತ ಪ್ರದರ್ಶನ ; ಒಂದು ಕೋಟಿ ರೂ. ಅನುದಾನ
 * ಹಾವೇರಿಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಎಲ್ಲ ರೀತಿಯ ಸಹಾಯ ಸಹಕಾರ .
 * ಕ್ರೀಡಾ ವಿಜ್ಞಾನ ಕೇಂದ್ರ ಸ್ಥಾಪನೆಗೆ 2 ಕೋಟಿ ರೂ.
 * 10 ಕೋಟಿ ರೂ. ವೆಚ್ಚದಲ್ಲಿ ಮಂಡ್ಯದಲ್ಲಿ ಕ್ರೀಡಾಂಗಣ ಮೇಲ್ದರ್ಜೆಗೆ
 * 2022ರಲ್ಲಿ ಬೆಂಗಳೂರಿನಲ್ಲಿ ರಾಷ್ಟ್ರಮಟ್ಟದ ವಿಶ್ವವಿದ್ಯಾಲಯ ಕ್ರೀಡಾಕೂಟ ಆಯೋಜನೆ
 * ಪ್ರವಾಸೋದ್ಯಮ ಇಲಾಖೆ ವತಿಯಿಂದ 500 ಕೋಟಿ ರೂ. ಯೋಜನೆ ಕಾರ್ಯಾನುಷ್ಠಾನ
 * ಕಬಿನಿ ಅಣೆಕಟ್ಟಿನ ಕೆಳಭಾಗದಲ್ಲಿ 50 ಕೋಟಿ ರೂ. ವೆಚ್ಚದಲ್ಲಿ ಉದ್ಯಾನವನ ನಿರ್ಮಾಣ 
 * ಉಡುಪಿ ಜಿಲ್ಲೆ ತ್ರಾಸಿ, ಮರವಂತೆ , ಒತ್ತಿನೆಣೆ ಹಾಗೂ ಇನ್ನಿತರ ಕಡಲತೀರಗಳ ಅಭಿವೃದ್ಧಿಗೆ 10 ಕೋಟಿ ರೂ.
 * ಬೈಂದೂರು ತಾಲೂಕಿನ ಸೋಮೇಶ್ವರ ಕಡಲತೀರ ಅಭಿವೃದ್ದಿಗೆ 10 ಕೋಟಿ ರೂ.
 * ತದಡಿಯಲ್ಲಿ ಒಂದು ಸಾವಿರ ಎಕರೆ ಪ್ರದೇಶದಲ್ಲಿ ಪರಿಸರ ಪ್ರವಾಸೋದ್ಯಮ ಉದ್ಯಾನವನ ಅಭಿವೃದ್ಧಿ 
 * ಕಾಡು ಪ್ರಾಣಿಗಳಿಂದ ಉಂಟಾಗುವ ಹಾನಿಗೆ ತಕ್ಷಣ ಪರಿಹಾರ ಒದಗಿಸಲು ಅರಣ್ಯ ಇ-ಪರಿಹಾರ ಯೋಜನೆ ಜಾರಿ
 * ನಗರಗಳಲ್ಲಿ ವೃಕ್ಷ ಸಂಪತ್ತು ಹೆಚ್ಚಿಸಲು ಸ್ಮೃತಿ ವನಗಳ ನಿರ್ಮಾಣ 
 * ಚಾಮರಾಜನಗರ ಜಿಲ್ಲೆ ಗೋಪಿನಾಥಂ ಅರಣ್ಯ ಪ್ರದೇಶದಲ್ಲಿ ವನ್ಯಜೀವಿ ಸಫಾರಿ
 * ಚಾಮರಾಜನಗರ ಜಿಲ್ಲೆ ಬೂದಿಪಗಡದಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ಆನೆ ಶಿಬಿರ
 * ಮುಂದಿನ ಎರಡು ವರ್ಷದಲ್ಲಿ ಆಡಳಿತದಲ್ಲಿ ಗಮನಾರ್ಹ ಬದಲಾವಣೆ ತರಲು ಕ್ರಮ
 * ನಿಖರ ಮತ್ತು ತ್ವರಿತವಾಗಿ ಭೂ ದಾಖಲೆಗಳನ್ನು ಒದಗಿಸಲು ಗಣೀಕೃತ ಆಕಾರಬಂದ್ ಮಾಹಿತಿ ಮತ್ತು ಪಹಣಿ ಮಾಹಿತಿ ಸಂಯೋಜನೆ
 * 25 ಕೋಟಿ ರೂ. ವೆಚ್ಚದಲ್ಲಿ ಹಕ್ಕುದಾಖಲೆಗಳನ್ನು ವಿತರಿಸುವ ಸ್ವಾಮಿತ್ವ ಯೋಜನೆ ಜಾರಿ
 * ನಗರ ಮತ್ತು ಪಟ್ಟಣಗಳ ನಗರಮಾಪನ ದಾಖಲೆಗಳ ಸ್ಕ್ಯಾನಿಂಗ್, ಸಂರಕ್ಷಣೆ
 * ಎಲ್ಲ ಇಲಾಖೆಗಳು ತಮ್ಮ ವ್ಯವಸ್ಥೆಯಲ್ಲಿನ ಕೌಟುಂಬಿಕ ಗುರುತು ದಾಖಲಿಸಿಕೊಳ್ಳುವ ಯೋಜನೆಗೆ 15 ಕೋಟಿ ರೂ.
 * ಬ್ಲಾಕ್ ಚೈನ್ ತಂತ್ರಜ್ಞಾನ ಬಳಸಿ ಆಸ್ತಿ ನೋಂದಣಿ ಮಾಡುವ ಯೋಜನೆಗೆ ಒಂದು ಕೋಟಿ ರೂ.
 * ದತ್ತಾಂಶ ಕೇಂದ್ರದ ಸೈಬರ್ ಸುರಕ್ಷತೆ ಬಲಪಡಿಸಲು 2 ಕೋಟಿ ರೂ.
 * 2 ಕೋಟಿ ರೂ. ವೆಚ್ಚದಲ್ಲಿ ಕನ್ನಡ ಭಾಷೆಗೆ ತಾಂತ್ರಿಕ ಪರಿಕರಗಳ ಸೂಟ್ ಅಭಿವೃದ್ಧಿ 
 * ಸ್ವಂತ ಕಟ್ಟಡಗಳಿಲ್ಲದ 100 ಪೊಲೀಸ್ ಠಾಣೆಗಳ ನಿರ್ಮಾಣಕ್ಕೆ ಈ ವರ್ಷ 25 ಕೋಟಿ ರೂ.
 * ಶಿಗ್ಗಾಂವ್ ನ ಕೆಎಸ್ಆರ್ ಪಿ 10ನೇ ಬೆಟಾಲಿಯನ್ ಗೆ 8 ಕೋಟಿ ರೂ.
 * ಕೊಡಗು ಮತ್ತು ಹಾವೇರಿಯಲ್ಲಿ ನೂತನ ಪೊಲೀಸ್ ಸಂಕೀರ್ಣ ನಿರ್ಮಾಣಕ್ಕೆ ತಲಾ 8 ಕೋಟಿ ರೂ.
 * 8 ಕಾರಾಗೃಹಗಳ ಸಾಮರ್ಥ್ಯ ಹೆಚ್ಚಿಸಲು ಪ್ರಸಕ್ತ ಸಾಲಿನಲ್ಲಿ 10 ಕೋಟಿ ರೂ.
 * ಹುಬ್ಬಳ್ಳಿ ಮತ್ತು ಬಳ್ಳಾರಿಯಲ್ಲಿ ವಿಧಿವಿಜ್ಞಾನ ಪ್ರಯೋಗಾಲಯದ ಪ್ರಾದೇಶಿಕ ಕೇಂದ್ರ ಸ್ಥಾಪನೆ 
 * ಪ್ರಸಕ್ತ ವರ್ಷ 52 ಬಸ್ ನಿಲ್ದಾಣಗಳು , 16 ಬಸ್ ಡಿಪೋಗಳ ನಿರ್ಮಾಣ
 * ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವಾ ವಲಯಕ್ಕೆ 2021-22ನೇ ಸಾಲಿನಲ್ಲಿ ಒಟ್ಟಾರೆ 52 ಸಾವಿರದ 519 ಕೋಟಿ ರೂ ಅನುದಾನ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com