ಅನೈತಿಕ ಬಿಜೆಪಿ ಸರ್ಕಾರದ ಬಜೆಟ್ ಕೂಡ ಅನೈತಿಕ: ಸಿದ್ದರಾಮಯ್ಯ

ಅನೈತಿಕ ಬಿಜೆಪಿ ಸರ್ಕಾರದ ಬಜೆಟ್ ಕೂಡ ಅನೈತಿಕ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಅನೈತಿಕ ಬಿಜೆಪಿ ಸರ್ಕಾರದ ಬಜೆಟ್ ಕೂಡ ಅನೈತಿಕ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅನೈತಿಕ ಸರ್ಕಾರದ ಬಜೆಟ್ ಅನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲದ ಕಾರಣ ಬಜೆಟ್ ಅನ್ನು ವಿರೋಧಿಸಿ ಕಾಂಗ್ರೆಸ್ ಸಭಾತ್ಯಾಗ ಮಾಡಿದೆ. ಯಡಿಯೂರಪ್ಪ ಬಜೆಟ್ ಪುಸ್ತಕ ಓದುವಾಗ ನಾವು ಇರಲಿಲ್ಲ. ಬಳಿಕ ಬಜೆಟ್ ಪುಸ್ತಕ ನೋಡಿದಾಗ ಅದು ಅಭಿವೃದ್ಧಿಗೆ ಪೂರಕವಲ್ಲದ ಗೊತ್ತುಗುರಿಯಿಲ್ಲದ ಟೊಳ್ಳು ಮುಂಗಡಪತ್ರ ಎಂದರು.

ಕಾಂಗ್ರೆಸ್ ಸರ್ಕಾರದ ಬಜೆಟ್ ನಲ್ಲಿ ಹಿಂದೆ ಪಾರದರ್ಶಕವಾಗಿ ಕಳೆದ ವರ್ಷ ಇಲಾಖೆಗೆ ಇಷ್ಟು ಮೀಸಲಿಡಲಾಗಿದೆ ಎಂದು ಸ್ಪಷ್ಟವಾಗಿ ಇಲಾಖೆಯ ಹೆಸರನ್ನು ಉಲ್ಲೇಖಿಸಲಾಗುತ್ತಿತ್ತು. ಆದರೆ ಯಡಿಯೂರಪ್ಪ ಬಜೆಟ್ ಅನ್ನು ಆರು ವಲಯಗಳಾಗಿ ವಿಭಾಗಿಸಿಸಿ ಯಾವ ಇಲಾಖೆಗೆ ಎಷ್ಟು ಕೊಟ್ಟಿದ್ದಾರೆ ಎಂಬ ಅಂಕಿ ಅಂಶಗಳನ್ನೂ ತಿಳಿಸದೆಯೇ ಬಜೆಟ್ ಅನ್ನು ಬಿಚ್ಚಿಡುವುದಕ್ಕಿಂತ ಗೌಪ್ಯವಾಗಿ ಮಾಹಿತಿಯನ್ನು ಮುಚ್ಚಿಡುವುದನ್ನೇ ಮಾಡಿದ್ದಾರೆ. ಈ ಬಜೆಟ್ ಟೋಟಲಿ ಕಾನ್ಸಪರೆನ್ಸಿ (ಒಟ್ಟಾರೆ ಪಿತೂರಿಯ ಬಜೆಟ್) ಆಗಿದೆ. ಮೀಸಲಿಟ್ಟ ಹಣವನ್ನು ಯಾವುದಕ್ಕೆ ಹೇಗೆ ಖರ್ಚು ಮಾಡುತ್ತೇವೆ ಎಂದು ವಿಧಾನಸಭೆಯ ಮುಂದೆ ಇಡಬೇಕು. ಪ್ರತಿಯೊಂದಕ್ಕೂ ಸರ್ಕಾರವೇ ಜವಾಬ್ದಾರಿಯಾಗಿದ್ದು, ಎಲ್ಲದಕ್ಕೂ ಲೆಕ್ಕ ಕೊಡಬೇಕು. ಆದರೆ ಯಡಿಯೂರಪ್ಪ ಮಂಡಿಸಿದ್ದು ಆದಾಯ ಕೊರತೆಯ ಬಜೆಟ್ ಎಂದು ಸಿದ್ದರಾಮಯ್ಯ ಒತ್ತಿ ಹೇಳಿದರು.

ನಾನು ಹಿಂದೆ 5 ವರ್ಷ ಹಣಕಾಸು ಸಚಿವನಾಗಿದ್ದಾಗ ಒಂದು ವರ್ಷವೂ ಕೂಡ ಬಜೆಟ್ ಗೆ ಆದಾಯದ ಕೊರತೆಯಾಗಿರಲಿಲ್ಲ. ಆದಾಯ ಹೆಚ್ಚುವರಿಯಾಗಿತ್ತು. 19485 ಕೋಟಿ ಏನು ಕಡಿಮೆ ಹಣವಲ್ಲ. ಆದರೀ ಪುಣ್ಯಾತ್ಮರು ಬಂದು ಸಾಲ ಮಾಡಿ ಆದಾಯ ಕೊರತೆಯನ್ನು ಮಾಡುತ್ತಿದ್ದಾರೆ. ಅಭಿವೃದ್ಧಿಗೆ ಇವರ ಬಳಿ ಹಣವಿಲ್ಲ. ಇವರ ಆದಾಯ ಠೇವಣಿ ಉಲ್ಟಾ ಆಗಿದೆ. ಒಂದು ವರ್ಷಕ್ಕೆ 71,323 ಕೋಟಿ ರೂ. ಸಾಲ ಪಡೆಯುತ್ತಿದ್ದು, ಮುಂದಿನ ವರ್ಷ ಇನ್ನೂ ಹೆಚ್ಚು ಸಾಲ ಮಾಡುವುದಾಗಿ ಸಿಎಂ ಯಡಿಯೂರಪ್ಪ ಹೇಳುತ್ತಿದ್ದಾರೆ. ಯಡಿಯೂರಪ್ಪ ಒಟ್ಟು ಸಾಲ 2021-22 ಕ್ಕೆ 457889 ಕೋಟಿ ರೂ. ಆಗಲಿದೆ. ನಮ್ಮ ಸರ್ಕಾರ ಬಜೆಟ್ ಮಂಡನೆ ಮಾಡುವಾಗ 136000 ಕೋಟಿ ರೂ ಸಾಲವಿತ್ತು. ಆಗ ಸಿದ್ದರಾಮಯ್ಯ ಸಾಲ ಮಾಡಿ ಬಿಟ್ಟರು ಎಂದು ಟೀಕಿಸಿದ್ದ ಬಿಜೆಪಿ ನಾಯಕರೇ ಇಂದು 14,2,000 ಕೋಟಿ ರೂ. ಸಾಲ ಮಾಡಿದ್ದಾರೆ. 26.09% ಸಾಲ ಹೆಚ್ಚುವರಿಯಾಗಿದೆ. ಮುಂದಿನ ವರ್ಷ 18 ಲಕ್ಷ ಕೋಟಿ ಸಾಲ ಆಗಲಿದೆ. ಕೇಂದ್ರ ಸರ್ಕಾರ ಸಾಲ ಮಾಡಲು ಅನುಮತಿ ನೀಡಿದೆ ಎಂದ ಮಾತ್ರಕ್ಕೆ ಮನಸಿಗೆ ಬಂದಂತೆ ಸಾಲ ಮಾಡುವುದಲ್ಲ. ಸಾಲ ತೀರಿಸುವ ಸಾಮರ್ಥ್ಯದ ಮೇಲೆ ಸಾಲ ತೆಗೆದುಕೊಳ್ಳಬೇಕು. ಯಡಿಯೂರಪ್ಪನವರ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎನ್ನುವುದಕ್ಕೆ ಇದೇ ಸಾಕ್ಷಿ ಎಂದು ಸಿದ್ದರಾಮಯ್ಯ ಹೇಳಿದರು.

ನಾನು ಕಳೆದ ಬಾರಿ ಬಜೆಟ್ ಮಂಡನೆ ಮಾಡಿದಾಗ ವೇಸ್ಟ್, ಕಮಿಟೆಡ್ ಎಕ್ಸೆಪೆಂಡಿಚರ್ ಕಡಿಮೆ ಮಾಡಿ ಎಂದು ಸಲಹೆ ನೀಡಿದ್ದೆ. ಅಭಿವೃದ್ಧಿ ಮಾಡದೆಯೇ ಸರ್ವೋದಯ ಹೆಸರು ಮಾತ್ರ ಚೆನ್ನಾಗಿ ಕೊಡುತ್ತಾರೆ. 9943 ಕೋಟಿ ಸೆಕ್ಟರ್ 2 ನಲ್ಲಿ ಕಡಿಮೆಯಾಗಿದೆ. 1231 ಕೋಟಿ ರೂ. ಕಡಿಮೆಯಾಗಿದೆ.

ಬೆಂಗಳೂರು ಸಮಗ್ರ ಅಭಿವೃದ್ಧಿಗೆ 21-22 ಕ್ಕೆ 1000 ಕೋಟಿ ಕಡಿಮೆ ಮಾಡಿದ್ದಾರೆ. ಪ್ರವಾಸೋದ್ಯಮಕ್ಕೆ 1907 ಕೋಟಿ ಕಡಿಮೆ ಮಾಡಿದ್ದಾರೆ.ಇದು ಪಾರದರ್ಶಕವಾಗಿಲ್ಲದ ಬಜೆಟ್ ಎಂದರು.

ಪರಿಶಿಷ್ಟ ಜಾತಿ, ಪಂಗಡದ ಬಗ್ಗೆ ಬಿಜೆಪಿ ನಾಯಕರು ಬರೀ ಮಾತನಾಡುತ್ತಾರೆ ಅಷ್ಟೇ. ಆದರೇನೂ ಮಾಡುವುದಿಲ್ಲ. ಕಾಂಗ್ರೆಸ್ ಸರ್ಕಾರದಲ್ಲಿ ಜನಸಂಖ್ಯೆಯಾಧಾರದ ಮೇಲೆ ಅನುದಾನ ಖರ್ಚು ಮಾಡಬೇಕೆಂದು ಎಸ್ಇಪಿಟಿ ಎಸ್ಪಿ ಕಾಯಿದೆ ಜಾರಿಗೊಳಿಸಲಾಗಿದ್ದು, ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುತ್ತಾರೆ .ಬಜೆಟ್ ಹೆಚ್ಚಾದ ಹಾಗೆ ಅದರ ಖರ್ಚು ಕೂಡ ಹೆಚ್ಚಾಗಬೇಕು. ಎಸ್ ಇ ಪಿ , ಟಿಎಸ್ ಪಿಗೆ, ಪರಿಶಿಷ್ಟರಿಗೆ ಎಲ್ಲಿ ಅನುದಾನವಿಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ತಳ ಸಮುದಾಯ ಜನ ಬಡತನದ ಬೇಗೆಯಲ್ಲಿ ಅನುಭವಿಸುತ್ತಿರುವ ಜನರ ಅಭಿವೃದ್ಧಿಗಾಗಿ ಕರ್ನಾಟಕದಲ್ಲಿ ಅಂಬೇಡ್ಕರ್, ಕಾಡು ಗೊಲ್ಲ, ಉಪ್ಪಾರ, ವಾಲ್ಮೀಕಿ, ಭೋವಿ, ಸಫಾಯಿ ಕರ್ಮಚಾರಿ, ವಿಶ್ವಕರ್ಮ, ಕಾಡು ಗೊಲ್ಲ ಅಭಿವೃದ್ಧಿ ನಿಗಮ ಸೇರಿದಂತೆ 16 ನಿಗಮಗಳನ್ನು ಸ್ಥಾಪಿಸಲಾಗಿದೆ. ಆದರೆ ಇವರಿಗೆ ಕೇವಲ 500 ಕೋಟಿ ಮಾತ್ರ ಮೀಸಲಿಟ್ಟಿದ್ದು, ತಳಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ. ಬಿಜೆಪಿಗರು ಸಾಮಾಜಿಕ ನ್ಯಾಯದ ವಿರೋಧಿಗಳು. ಒಕ್ಕಲಿಗ, ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಹಣ ಕೊಟ್ಟಿರುವುದಕ್ಕೆ ನನ್ನ ವಿರೋಧ ಇಲ್ಲವಾದರೂ ಉಳಿದ ತಳ ಸಮುದಾಯಕ್ಕೆ ಅನ್ಯಾಯ ಮಾಡಿದ್ದು ಸರಿಯಲ್ಲ. ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದರೆ ದೇಶದಲ್ಲಿ ಸುವರ್ಣ ಯುಗ ಬರುತ್ತದೆ ಎಂದಿದ್ದರು. ಆದರೆ ಎಲ್ಲಿದೆ ಸುವರ್ಣ ಯುಗ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ರಾಜ್ಯದಿಂದ ಸಂಸತ್ತಿಗೆ ಆರಿಸಿಹೋಗಿದ್ದ ಬಿಜೆಪಿ ಸಂಸದರು ಯಾರೊಬ್ಬರು ಬೆಲೆ ಹೆಚ್ಚಳ, ಅಭಿವೃದ್ಧಿ ಕುಂಠಿತ ರಾಜ್ಯಕ್ಕಾದ ಅನ್ಯಾಯದ ಬಗ್ಗೆ ಕೇಂದ್ರದಲ್ಲಿ ಧ್ವನಿಯೆತ್ತುತ್ತಿಲ್ಲ. ಪೆಟ್ರೋಲ್, ಡಿಸೇಲ್ ಬೆಲೆ ಹೆಚ್ಚಾಗಿದೆ. ಬಜೆಟ್ ನಲ್ಲಿ ಟ್ಯಾಕ್ಸ್ ಕಡಿಮೆ ಮಾಡಬೇಕಿತ್ತು. ಎಲ್ಲಾ ಬೆಲೆ ಹೆಚ್ಚಾಗಿರುವುದರಿಂದ ಮಧ್ಯಮ ವರ್ಗ ಬದುಕಲು ಆಗುತ್ತಿಲ್ಲ. ಯಡಿಯೂರಪ್ಪ ಮಂಡಿಸಿದ್ದು ಜನ ವಿರೋಧಿ, ಅಭಿವೃದ್ಧಿ ವಿರೋಧಿ, ರಾಜ್ಯ ದಿವಾಳಿ ಮಾಡುವ, ಗೊತ್ತು ಗುರಿ ಇಲ್ಲದ ಒಂದು ಆಯವ್ಯಯ ಎಂದು ಸಿದ್ದರಾಮಯ್ಯ ಕಟುವಾಗಿ ಟೀಕಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com