ಕೇಂದ್ರ ಬಜೆಟ್ 2022: ಕಾವೇರಿ, ಪೆನ್ನಾರ್ ಸೇರಿದಂತೆ 5 ನದಿಗಳ ಜೋಡಣೆಗೆ ಕೇಂದ್ರ ಸಮ್ಮತಿ
ನವದೆಹಲಿ: ಕೇಂದ್ರ ಬಜೆಟ್ 2022ರ ಮಂಡನೆ ವೇಳೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಹತ್ವದ ಘೋಷಣೆ ಮಾಡಿದ್ದು, ಕಾವೇರಿ, ಪೆನ್ನಾರ್ ಸೇರಿದಂತೆ 5 ನದಿಗಳ ಜೋಡಣೆಗೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದೆ ಎಂದು ಹೇಳಿದ್ದಾರೆ.
ಕಾವೇರಿ, ಪೆನ್ನಾರ್ ಸೇರಿದಂತೆ ದೇಶದ ಪ್ರಮುಖ 5 ನದಿಗಳ ಜೋಡಣೆಗೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದ್ದು, ಕೃಷ್ಣಾ-ಪೆನ್ನಾರ್ ನದಿ, ನರ್ಮದಾ-ಗೋದಾವರಿ, ಗೋದಾವರಿ-ಕೃಷ್ಣ ಜೋಡಣೆಗೂ ಅನುಮೋದನೆ ನೀಡಲಾಗಿದೆ. ಈ 5 ನದಿಗಳ ಜೋಡಣೆಗೆ ಕೇಂದ್ರ ಬಜೆಟ್ ನಲ್ಲಿ 44,605 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗುತ್ತದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ನೀರಾವರಿ ವಿಚಾರವಾಗಿ ಸಾಕಷ್ಟು ರಾಜ್ಯಗಳು ಪಕ್ಕದ ರಾಜ್ಯಗಳೊಂದಿಗೆ ವಿವಾದದಲ್ಲಿ ತೊಡಗಿದ್ದು, ಕೇಂದ್ರ ಸರ್ಕಾರದ ನದಿ ಜೋಡಣೆ ಯೋಜನೆ ಈ ವಿವಾದಗಳಿಗೆ ತೆರೆ ಎಳೆಯುವ ಭರವಸೆ ವ್ಯಕ್ತಪಡಿಸಲಾಗುತ್ತಿದೆ.
ಅಡ್ಡಿಯಾದ ಬ್ರಿಟೀಷ್ ಕಾಯ್ದೆ
ಆಂಧ್ರ, ತಮಿಳುನಾಡು ಹಾಗೂ ಕರ್ನಾಟಕದ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಜಲಾನಯನ ಪ್ರದೇಶ ಹೊಂದಿರುವ ಪಾಲಾರ್ ಮತ್ತು ಪೆನ್ನಾರ್ ನದಿಯ ನೀರನ್ನು ಕರ್ನಾಟಕ ಬಳಸಿಕೊಳ್ಳಲು ಬ್ರಿಟಿಷರ ಕಾಲದ ‘1892ರ ಕಾಯ್ದೆ’ ಅಡ್ಡಿಯಾಗಿದೆ. ಈ ಕಾಯ್ದೆ ರದ್ದತಿ ಕುರಿತು ಮೂರೂ ರಾಜ್ಯಗಳು ಸರ್ಕಾರದ ಮೇಲೆ ಮೊದಲಿನಿಂದಲೂ ಒತ್ತಡ ಹೇರುತ್ತಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ