ರೈತರ ಬಡ್ಡಿ ರಹಿತ ಸಾಲ 3 ರಿಂದ 5 ಲಕ್ಷಕ್ಕೆ ಹೆಚ್ಚಳ; ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಸಿಎಂ ಬೊಮ್ಮಾಯಿ ಬಂಪರ್ ಕೊಡುಗೆ

ರಾಜ್ಯ ಸರ್ಕಾರವು ರೈತರ ಬಡ್ಡಿ ರಹಿತ ಸಾಲವನ್ನು ರೂ.3 ಲಕ್ಷದಿಂದ ರೂ.5 ಲಕ್ಷಕ್ಕೆ ಹೆಚ್ಚಳ ಮಾಡಿದೆ. ಈ ಯೋಜನೆ ಮೂಲಕ 30 ಲಕ್ಷಕ್ಕಿಂತ ಹೆಚ್ಚಿನ ರೈತರಿಗೆ ಸಾಲ ನೀಡಲಾಗುತ್ತದೆ. ಒಟ್ಟು 25 ಸಾವಿರ ಕೋಟಿ ರೂ. ಸಾಲ ವಿತರಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಘೋಷಣೆ ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯ ಸರ್ಕಾರವು ರೈತರ ಬಡ್ಡಿ ರಹಿತ ಸಾಲವನ್ನು ರೂ.3 ಲಕ್ಷದಿಂದ ರೂ.5 ಲಕ್ಷಕ್ಕೆ ಹೆಚ್ಚಳ ಮಾಡಿದೆ. ಈ ಯೋಜನೆ ಮೂಲಕ 30 ಲಕ್ಷಕ್ಕಿಂತ ಹೆಚ್ಚಿನ ರೈತರಿಗೆ ಸಾಲ ನೀಡಲಾಗುತ್ತದೆ. ಒಟ್ಟು 25 ಸಾವಿರ ಕೋಟಿ ರೂ. ಸಾಲ ವಿತರಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಘೋಷಣೆ ಮಾಡಿದ್ದಾರೆ.

ವಿಧಾನಸಭೆಯಲ್ಲಿ ರಾಜ್ಯದ ಪ್ರಸಕ್ತ ಸಾಲಿನ ಆಯವ್ಯಯ ಮಂಡನೆ ಮಾಡುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಕೃಷಿ ಕ್ಷೇತ್ರಕ್ಕೆ ರೂ.39, 031 ಅನುದಾನವನ್ನು ಮೀಸಲಿಟ್ಟಿದ್ದು, ಬಂಪರ್ ಕೊಡುಗೆಗಳನ್ನು ಘೋಷಣೆ ಮಾಡಿದ್ದಾರೆ.

ರೈತರ ಆದಾಯ ದ್ವಿಗುಣಗೊಳಿಸುವ ಗುರಿಯೊಂದಿಗೆ ಕೃಷಿಗೆ ಬೆಂಬಲ ನೀಡಲಾಗಿದೆ. ತೊಗರಿ ಬೇಳೆ, ಅಡಿಕೆ ಬೆಳೆಗೆ ರೋಗ ಸಂಭವಿಸಿದಾಗ ಸರ್ಕಾರ ರೈತರ ನೆರವಿಗೆ ಧಾವಿಸಿದೆ. ಉದ್ಯೋಗಾವಕಾಶ, ಅದಕ್ಕೆ ತಕ್ಕಂತೆ ಕೌಶಲಾಭಿವೃದ್ಧಿ ತರಬೇತಿ ನೀಡಿದ್ದೇವೆ. ಪಾಲಿಟೆಕ್ನಿಕ್, ಎಂಜಿನಿಯರಿಂಗ್ ಕಾಲೇಜುಗಳ ಉನ್ನತೀಕರಣಕ್ಕೆ ಕ್ರಮ ಕೈಗೊಂಡಿದ್ದೇವೆ. ನಮ್ಮ ಕ್ಲಿನಿಕ್​ಗಳ ಮೂಲಕ ಆರೋಗ್ಯ ಕ್ಷೇತ್ರದ ಸುಧಾರಣೆಗೂ ಒತ್ತು ನೀಡಿದ್ದೇವೆಂದು ಹೇಳಿದರು.

ಪಿಎಂ ಕಿಸಾನ್ ಯೋಜನೆಯಡಿ ಕೇಂದ್ರ 10,930 ಕೋಟಿ ರೂ. ನೀಡಿದೆ. ಬಿತ್ತನೆಬೀಜ, ರಸಗೊಬ್ಬರ ಇತ್ಯಾದಿಗಳಿಗಾಗಿ 962 ಕೋಟಿ ರೂ. ವ್ಯಯಿಸಲಾಗಿದೆ. ರಾಜ್ಯದ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಬೆಳೆ ಹಾನಿ ಪರಿಹಾರ ಹೆಚ್ಚಿಸಿ ದಾಖಲೆ ಅವಧಿಯಲ್ಲಿ ರೈತರ ಖಾತೆಗಳಿಗೆ ನೇರವಾಗಿ ಪರಿಹಾರ ಜಮೆ ಮಾಡಲಾಗಿದೆ. 14 ಲಕ್ಷಕ್ಕೂ ಹೆಚ್ಚು ರೈತರ ಖಾತೆಗಳಿಗೆ ಪರಿಹಾರದ ಹಣ ವರ್ಗಾಯಿಸಲಾಗಿದೆ.ಈ ಬಾರಿ ರೈತರ ಬಡ್ಡಿ ರಹಿತ ಸಾಲವನ್ನು ರೂ.3 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ ಎಂದು ತಿಳಿಸಿದರು.

ಕಿಸಾನ್‌ ಕಾರ್ಡ್‌ ಹೊಂದಿರುವ ರೈತರಿಗೆ ಭೂಸಿರಿ ಎಂಬ ನೂತನ ಯೋಜನೆಯನ್ನೂ ರೂಪಿಸಲಾಗಿದೆ. ಈ ಮೂಲಕ ಸಹಾಯಧನ ನೀಡಲು ಉದ್ದೇಶಿಸಲಾಗಿದೆ. ರೈತ ಸಿರಿ ಯೋಜನೆಯಡಿಯಲ್ಲಿ ಕಿರುಧಾನ್ಯ ಬೆಳೆಗಾರರಿಗೆ ಪ್ರತಿ ಹೆಕ್ಟರ್​​ಗೆ 10 ಸಾವಿರ ರೂಪಾಯಿ ಪ್ರೋತ್ಸಾಹಧನ ನೀಡಲಾಗುತ್ತದೆ.

ಸಹ್ಯಾದ್ರಿ ಯೋಜನೆಯಡಿಯಲ್ಲಿ ಕರಾವಳಿ ಮಲೆನಾಡು ಹಾಗೂ ಅರೆಮಲೆನಾಡು ಪ್ರದೇಶಗಳಲ್ಲಿ ಬೇಸಿಗೆಯಲ್ಲಿ ನೀರು ಸಂರಕ್ಷಣೆಗಾಗಿ ಬಾವಿ, ಕಿಂಡಿ ನಾಳ ಅಭಿವೃದ್ಧಿ ಕಾಮಗಾರಿಗೆ 75 ಕೋಟಿ ರೂ. ಅನುದಾನ ಮೀಸಲಿಡಲಾಗುವುದು.

ಅಡಿಕೆ ಬೆಳೆಯ ರೋಗ ನಿರ್ವಹಣೆಗೆ ನೂತನ ತಂತ್ರಜ್ಞಾನ ಅಭಿವೃದ್ಧಿಗೆ 10 ಲಕ್ಷ ಕೋಟಿ ರೂ. ಅನುದಾನ ನೀಡಲಾಗುತ್ತದೆ. ದ್ರಾಕ್ಷಿ ಬೆಳೆಗಾರರಿಗೆ 100 ಕೋಟಿ ರೂ. ನೆರವು ಯೋಜನೆ ಆರಂಭಿಸಲಾಗುವುದು. ಜೊತೆಗೆ, ರೇಷ್ಮೆ ಬೆಳೆ 10 ಸಾವಿರ ಹೆಕ್ಟೇರ್​​ಗೆ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗುವುದು.

ಗೋ ಸಂಪತ್ತಿನ ರಕ್ಷಣೆಗಾಗಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿ, ಗೋಶಾಲೆಗಳ ಸ್ಥಾಪನೆ, ಪುಣ್ಯಕೋಟಿ ದತ್ತು ಯೋಜನೆಯ ಅನುಷ್ಠಾನ ಹಾಗೂ 290 ಸಂಚಾರಿ ಪಶುಚಿಕಿತ್ಸಾಲಯಗಳ ಪ್ರಾರಂಭ ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಚರ್ಮಗಂಟು ರೋಗವನ್ನು ತಡೆಗಟ್ಟಲು 1 ಕೋಟಿಗೂ ಹೆಚ್ಚು ಜಾನುವಾರುಗಳಿಗೆ ಲಸಿಕೆ ನೀಡಲಾಗಿದೆ. ಈ ಸೋಂಕಿನಿಂದ ಮರಣ ಹೊಂದಿದ ರಾಸುಗಳ ಮಾಲೀಕರಿಗೆ ಪರಿಹಾರ ನೀಡಲು 55 ಕೋಟಿ ರೂ. ಮಂಜೂರು ಮಾಡಲಾಗಿದೆ.

ಹಾವೇರಿಯಲ್ಲಿ 1 ಲಕ್ಷ ಲೀಟರ್ ಸಾಮರ್ಥ್ಯದ ಮೆಗಾ ಡೈರಿ ಸ್ಥಾಪನೆಗೆ ಸರ್ಕಾರದಿಂದ 90 ಕೋಟಿ ರೂ. ಅನುದಾನ ನೀಡಲಾಗಿದೆ. ಪ್ರಸಕ್ತ ವರ್ಷದಲ್ಲಿ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಉತ್ಪಾದನೆಯನ್ನು ಹೆಚ್ಚಿಸಲು, ಬಳ್ಳಾರಿ ಜಿಲ್ಲೆಯಲ್ಲಿ ದಿನಂಪ್ರತಿ 2 ಲಕ್ಷ ಲೀಟರ್ ಹಾಲು ಸಂಸ್ಕರಣಾ ಸಾಮರ್ಥ್ಯದ ಮೆಗಾಡೈರಿಯನ್ನು 100 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾಗುವುದು. ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಯಡಿ 20,000 ಫಲಾನುಭವಿಗಳಿಗೆ 355 ಕೋಟಿ ರೂ. ವೆಚ್ಚದಲ್ಲಿ ಕುರಿ ಮತ್ತು ಮೇಕೆ ಘಟಕಗಳನ್ನು ಸ್ಥಾಪಿಸುವ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com