ಕೇಂದ್ರ ಬಜೆಟ್ 2023: ಮಹಿಳೆಯರಿಗೆ ಹೊಸ ಉಳಿತಾಯ ಯೋಜನೆ 'ಮಹಿಳಾ ಸಮ್ಮಾನ್' ಘೋಷಣೆ

ಕೇಂದ್ರ ಬಜೆಟ್ 2023ರಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಹಿಳಾ ಮಣಿಯರಿಗೆ ವಿಶೇಷ ಉಳಿತಾಯ ಯೋಜನೆ ಘೋಷಣೆ ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕೇಂದ್ರ ಬಜೆಟ್ 2023ರಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಹಿಳಾ ಮಣಿಯರಿಗೆ ವಿಶೇಷ ಉಳಿತಾಯ ಯೋಜನೆ ಘೋಷಣೆ ಮಾಡಿದ್ದಾರೆ.

ಮಹಿಳಾ ಸಮ್ಮಾನ್' ಉಳಿತಾಯ ಸರ್ಟಿಫಿಕೇಟ್ ಯೋಜನೆಯನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಣೆ ಮಾಡಿದ್ದು, ಎರಡು ವರ್ಷಗಳ ಕಾಲ ಶೇ 7.5ರಷ್ಟು ಸ್ಥಿರಬಡ್ಡಿಯೊಂದಿಗೆ ಮಹಿಳೆಯರಿಗಾಗಿ ‘ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ’ ಎನ್ನುವ ಹೊಸ ಉಳಿತಾಯ ಯೋಜನೆಯನ್ನು ಸಚಿವರು ಬಜೆಟ್‌ನಲ್ಲಿ ಘೋಷಿಸಿದ್ದಾರೆ.

ಈ ಯೋಜನೆಯಲ್ಲಿ ಮಹಿಳೆ ಅಥವಾ ಹೆಣ್ಣು ಮಗುವಿನ ಹೆಸರಿನಲ್ಲಿ ಈ ಯೋಜನೆಯಲ್ಲಿ ಗರಿಷ್ಠ ವಾರ್ಷಿಕ  2 ಲಕ್ಷ  ರೂ ಮೊತ್ತದ ಹಣವನ್ನು ಠೇವಣಿಯಾಗಿ ಇರಿಸಬಹುದು. ಅಂತೆಯೇ ಭಾಗಶಃ ಹಣ ಹಿಂಪಡೆಯುವ ಸೌಲಭ್ಯವೂ ಯೋಜನೆಯಲ್ಲಿದೆ.  ಈ ಯೋಜನೆಯ ಫಲಾನುಭವಿಗಳು ತಮ್ಮ ಉಳಿತಾಯದ ಹಣಕ್ಕೆ ವಾರ್ಷಿಕ ಶೇ.7.5ರಷ್ಟು ಬಡ್ಡಿ ಪಡೆಯಲಿದ್ದಾರೆ.

ಈ ಬಗ್ಗೆ ಬಜೆಟ್ ಮಂಡನೆ ವೇಳೆ ಮಾತನಾಡಿದ ಸಚಿವೆ ನಿರ್ಮಲಾ ಸೀತಾರಾಮನ್, ‘ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ದೀನ್‌ದಯಾಳ್ ಅಂತ್ಯೋದಯ ಯೋಜನೆ, ರಾಷ್ಟ್ರೀಯ ಜೀವನೋಪಾಯ ಮಿಷನ್ ಅಡಿಯಲ್ಲಿ 81 ಲಕ್ಷ ಸ್ವ-ಸಹಾಯ ಮಹಿಳಾ ಗುಂಪುಗಳನ್ನು ರಚಿಸಲಾಗಿದೆ. ಹಲವು ಸಾವಿರ ಸದಸ್ಯರನ್ನು ಹೊಂದಿರುವ ದೊಡ್ಡ ಉತ್ಪಾದಕ ಉದ್ಯಮಗಳು ಅಥವಾ ಸಮೂಹಗಳ ರಚನೆಯ ಮೂಲಕ ಈ ಗುಂಪುಗಳನ್ನು ಆರ್ಥಿಕ ಸಬಲೀಕರಣದ ಮುಂದಿನ ಹಂತವನ್ನು ತಲುಪಲು ಸಕ್ರಿಯಗೊಳಿಸಲಾಗುವುದು’ ಎಂದು ಹೇಳಿದ್ದಾರೆ.

ಅಂತೆಯೇ ‘ಪಿಎಂ-ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ಸಣ್ಣ ರೈತರಿಗೆ  2.25 ಲಕ್ಷ ಕೋಟಿ ರೂ ಗೂ ಹೆಚ್ಚು ಆರ್ಥಿಕ ನೆರವು ನೀಡಲಾಗಿದೆ. ಈ ಯೋಜನೆಯಡಿ ಸುಮಾರು 3 ಕೋಟಿ ಮಹಿಳಾ ರೈತರಿಗೆ  54 ಸಾವಿರ ಕೋಟಿ ರೂ ಒದಗಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಇದೇ ವೇಳೆ ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಮಿತಿಯನ್ನು 15 ಲಕ್ಷದಿಂದ 30ಲಕ್ಷ ರೂಗೆ ಹೆಚ್ಚಿಸಲಾಗಿದೆ. ಮಾಸಿಕ ಆದಾಯ ಯೋಜನೆಯ ಗರಿಷ್ಠ ಠೇವಣಿ ಮಿತಿಯನ್ನು 4.5 ಲಕ್ಷದಿಂದ 9 ಲಕ್ಷ ರೂಗೆ ಹೆಚ್ಚಿಸಲಾಗಿದೆ. ಜಂಟಿ ಖಾತೆಯ ಮಿತಿ 9 ಲಕ್ಷದಿಂದ 15 ಲಕ್ಷ ರೂಗೆ ಹೆಚ್ಚಿಸಲಾಗಿದೆ ಎಂದು ಹೇಳಿದರು.

ಅಂಚೆ ಮಾಸಿಕ ಆದಾಯ ಯೋಜನೆಯು ಮಿತಿಯನ್ನು ಹೆಚ್ಚಿಸಲಾಗಿದ್ದು, ಈಗ 4.5 ಲಕ್ಷ ದಿಂದ 9 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ. ಇದು ಮಿತಿಗಳ ವರ್ಧನೆಯು ಹೆಚ್ಚಿನ ಹಣದುಬ್ಬರದ ಸಮಯದಲ್ಲಿ ನಿಯಮಿತ ಆದಾಯವನ್ನು ಹುಡುಕುತ್ತಿರುವ ಹೂಡಿಕೆದಾರರಿಗೆ ಸಾಂತ್ವನವಾಗಿದೆ. ಯೋಜನೆಗಳು ಸರ್ಕಾರದಿಂದ ಬೆಂಬಲಿತವಾಗಿದೆ ಮತ್ತು ಆದ್ದರಿಂದ ಇದು ಕ್ರೆಡಿಟ್ ಅಪಾಯವನ್ನು ಹೊಂದಿರುವುದಿಲ್ಲ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com