ಕೇಂದ್ರ ಬಜೆಟ್ 2023: ರಕ್ಷಣಾ ವಲಯಕ್ಕೆ 5.39 ಲಕ್ಷ ಕೋಟಿ ರೂ. ಅನುದಾನ
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ ನ್ನು ಮಂಡನೆ ಮಾಡಿದ್ದು, ರಕ್ಷಣಾ ವಲಯಕ್ಕೆ ರೂ.5.39 ಲಕ್ಷ ಕೋಟಿ ಮೀಸಲಿಟ್ಟಿದ್ದಾರೆ.
Published: 01st February 2023 02:15 PM | Last Updated: 01st February 2023 07:52 PM | A+A A-

ಸಂಗ್ರಹ ಚಿತ್ರ
ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ ನ್ನು ಮಂಡನೆ ಮಾಡಿದ್ದು, ರಕ್ಷಣಾ ವಲಯಕ್ಕೆ ರೂ.5.39 ಲಕ್ಷ ಕೋಟಿ ಮೀಸಲಿಟ್ಟಿದ್ದಾರೆ.
ಪ್ರತೀ ಬಾರಿ ಬಜೆಟ್ ಮಂಡನೆ ವೇಳೆ ಕೇಂದ್ರ ಸರ್ಕಾರವು ರಕ್ಷಣ ವಲಯದ ಮೇಲೆ ವಿಶೇಷ ಗಮನವನ್ನು ಇಟ್ಟಿರುತ್ತದೆ. ಈ ಬಾರಿಯ ಬಜೆಟ್ ನಲ್ಲಿಯೂ ಕೇಂದ್ರ ಸರ್ಕಾರ ರಕ್ಷಣಾ ವಲಯಕ್ಕೆ ಹೆಚ್ಚಿನ ಒತ್ತು ನೀಡಿದೆ.
2022-23ನೇ ಸಾಲಿನಲ್ಲಿ ರಕ್ಷಣಾ ಕ್ಷೇತ್ರಕ್ಕೆ ಒಟ್ಟು 5.25 ಲಕ್ಷ ಕೋಟಿ ರೂ.ಗಳನ್ನು ಮೀಸಲಿಡಲಾಗಿತ್ತು, ಇದು ಒಟ್ಟು ಬಜೆಟ್‌ನ ಶೇ.13.31ರಷ್ಟಿತ್ತು. ಈ ಬಾರಿಯ ಬಜೆಟ್ ನಲ್ಲಿ ರೂ.5.39 ಲಕ್ಷ ಕೋಟಿ ಮೀಸಲಡಲಾಗಿತ್ತು. ಇದು ಹಿಂದಿನ ವರ್ಷಕ್ಕಿಂತ ಶೇ.13ರಷ್ಟು ಹೆಚ್ಚಿಸಿದಂತಾಗಿದೆ.
ರಕ್ಷಣಾ ಉಪಕರಣಗಳ ಖರೀದಿಗೆ ಸರ್ಕಾರ 1.52 ಲಕ್ಷ ಕೋಟಿ ರೂ ನೀಡಿದ್ದು, ಇದು ಶಾಸ್ತ್ರಾಸ್ತ್ರ, ವಿಮಾನಗಳು, ಯುದ್ಧನೌಕೆಗಳು ಹಾಗೂ ಇತರೆ ಮಿಲಿಟರಿ ಉಪಕರಣಗಳನ್ನು ಖರೀದಿಗಳನ್ನು ಒಳಗೊಂಡಿದೆ. ಇದರಲ್ಲಿ ಭಾರತೀಯ ಸೇನೆಗೆ 32,015 ಕೋಟಿ ರೂ. ನೀಡಲಾಗಿದೆ. ಭಾರತೀಯ ನೌಕಾಪಡೆಗೆ 47,590 ಕೋಟಿ ರೂ ಮತ್ತು ಭಾರತೀಯ ವಾಯುಪಡೆಗೆ 55,586 ಕೋಟಿ ರೂ. ಮೀಸಲಿಡಲಾಗಿದೆ.