ವಾರ್ ಇನ್ ಆನ್

ವಾರ್ ಇನ್ ಆನ್

ಇದು ಇ ಕಾಮರ್ಸ್ ಕ್ಷೇತ್ರದ ಯುದ್ಧ. ಅದೂ ಹೇಗೆ ಗೊತ್ತೇ? ಸ್ವದೇಶಿ ಮತ್ತು ವಿದೇಶಿ ಕಂಪನಿ ನಡುವೆ! ಬಹುಶಃ ನಿಮಗೆ ವಿಚಾರ ಗೊತ್ತಾಗಲಿಲ್ಲ ಎಂದನಿಸುತ್ತದೆ. ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಫ್ಲಿಪ್‌ಕಾರ್ಟ್ ಮತ್ತು ಅಮೆರಿಕದ 'ಆನ್‌' ವಹಿವಾಟು ದಿಗ್ಗಜ ಅಮೆಜಾನ್ ನಡುವೆ ಹೋರಾಟ.
ಫ್ಲಿಪ್‌ಕಾರ್ಟ್ ಆನ್‌ಲೈನ್ ವ್ಯಾಪಾರ- ವಹಿವಾಟು ವಿಸ್ತರಣೆಗಾಗಿ 6 ಸಾವಿರ ಕೋಟಿ ರು. ಬಂಡವಾಳ ಹೂಡಿಕೆ ಮಾಡಿತ್ತು. ಅದಕ್ಕೆ ಪ್ರತಿಸ್ಪರ್ಧಿಯಾಗಿ ಅಮೆರಿಕದ ಆನ್‌ಲೈನ್ ದಿಗ್ಗಜ ಅಮೆಜಾನ್.ಕಾಮ್‌ನ ಭಾರತೀಯ ಅಂಗ ಸಂಸ್ಥೆ ಅಮೆಜಾನ್. ಇನ್ ಮತ್ತೂ ಮುಂದೆ ಹೋಗಿದೆ. ಅದು ಬರೋಬ್ಬರಿ 12 ಸಾವಿರ ಕೋಟಿ ರು. ಹೂಡಿಕೆ ಮಾಡುವುದಾಗಿ ಘೋಷಿಸಿದೆ. ಜತೆಗೆ ಬೆಂಗಳೂರಿನಲ್ಲೇ ಎರಡು ಫೆಸಿಲಿಟೇಷನ್ ಕೇಂದ್ರ (ಸೌಲಭ್ಯ ವಿಸ್ತರಣಾ ಕೇಂದ್ರ)ಗಳನ್ನು ಆರಂಭಿಸಿದೆ. ಇಷ್ಟೆಲ್ಲ ಆದರೂ ಒಟ್ಟಾರೆ ಮೌಲ್ಯದ ಲೆಕ್ಕಾಚಾರದಲ್ಲಿ ಅಮೆಜಾನ್.ಇನ್ ಮುಂದಿದೆ. ಆದರೆ ಶುದ್ಧ ದೇಶಿಯ ಎಂಬ ಕಲ್ಪನೆಯಡಿ ಯೋಚಿಸಿದರೆ, ಹೆಗ್ಗಳಿಕೆ ಫ್ಲಿಪ್‌ಕಾರ್ಟ್‌ನದ್ದು.
ಹೀಗಾಗಿ ಆನ್‌ಲೈನ್‌ನಲ್ಲಿ ವಿವಿಧ ವಸ್ತುಗಳನ್ನು ಖರೀದಿಸುವವರಿಗೆ ಭರಪೂರ ಡಿಸ್ಕೌಂಟುಗಳ ಜತೆಗೆ ಉತ್ತಮ ಗುಣಮಟ್ಟದ ಸೇವೆ ಸಿಗುತ್ತದೆ ಎಂಬುದು ಖಾತ್ರಿಯಾಗತೊಡಗಿದೆ. ಹೀಗೆ ವ್ಯಾಖ್ಯಾನಿಸಲು ಕಾರಣವಿದೆ. ಇ-ಕಾಮರ್ಸ್ ಎಂಬ ವಿಚಾರ ಕೇವಲ ಬೆಂಗಳೂರು, ದೆಹಲಿ, ಚೆನ್ನೈ, ಇಂದೋರ್ ಸೇರಿದಂತೆ ಆಯ್ದ ನಗರಗಳಿಗಷ್ಟೇ ಸೀಮಿತವಾಗಿದೆ. ಎರಡನೇ ಹಂತದ ನಗರಗಳಿಗೆ ಅದು ವಿಸ್ತರಿಸಿದ್ದರೂ ಅದು ವೇಗ ಪಡೆದುಕೊಂಡಿಲ್ಲ ಎನ್ನುವುದಂತೂ ಸತ್ಯ.
ಫ್ಲಿಪ್‌ಕಾರ್ಟ್ ಹೂಡಿಕೆ ಬಳಕೆ ಹೇಗೆ?
    ಮೊಬೈಲ್ ತಂತ್ರಜ್ಞಾನದಲ್ಲಿ ಹೂಡಿಕೆ ಮಾಡಿ, ಶಾಪಿಂಗ್ ಸರಳಗೊಳಿಸುವುದಕ್ಕೆ ವಿನಿಯೋಗ.
    ಸಂಶೋಧನೆ, ಗ್ರಾಹಕ ಅಭಿವೃದ್ಧಿ ಮತ್ತು ಸೇವೆಗೆ ಬಳಕೆ.
    ಮುಂದಿನ ದಿನಗಳಲ್ಲಿ ಮತ್ತಷ್ಟು ಕಂಪನಿಗಳ ಖರೀದಿಗೆ ಒತ್ತು.
ಹೆಚ್ಚಿತು ಆಸ್ತಿ ವೃದ್ಧಿ
ಒಂದೇ ಸಂದರ್ಭದಲ್ಲಿ 6 ಸಾವಿರ ಕೋಟಿ ರು. ಹೂಡಿಕೆ ಮಾಡಿದ್ದರಿಂದಾಗಿ ಫ್ಲಿಪ್‌ಕಾರ್ಟ್ ಕಂಪನಿಯ ಆಸ್ತಿ 42 ಸಾವಿರ ಕೋಟಿ ರು. ಮೌಲ್ಯಕ್ಕೆ ಏರಿಕೆಯಾಗಿದೆ. ಹೀಗಾಗಿ ಇಂಥ ಒಂದು ಹೆಗ್ಗಳಿಕೆಗೆ ಪಾತ್ರವಾದ ಏಕೈಕ ಭಾರತೀಯ ಇ ಕಾಮರ್ಸ್ ಕಂಪನಿ ಇದು. ಮಾತ್ರವಲ್ಲ 100 ಬಿಲಿಯನ್ ಡಾಲರ್ ಕ್ಲಬ್‌ಗೆ ಸೇರಿದ ಏಕೈಕ ಕಂಪನಿಯೆಂಬ ಹೆಗ್ಗಳಿಕೆಯೂ ಫ್ಲಿಪ್‌ಕಾರ್ಟ್ ಪಾಲಿಗಾಗಿದೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಐಪಿಓ ಮಾರುಕಟ್ಟೆಗೆ ಪ್ರವೇಶಿಸುವ ಇರಾದೆಯನ್ನು ಫ್ಲಿಪ್‌ಕಾರ್ಟ್ ಕೈಬಿಟ್ಟಿದೆ.
ಹೂಡಿಕೆದಾರರು ಯಾರು?
    ಟೈಗರ್ ಗ್ಲೋಬಲ್ ಮ್ಯಾನೇಜ್‌ಮೆಂಟ್ ಆ್ಯಂಡ್ ನ್ಯಾಸ್ಪೆರ್ಸ್
    ಸವರಿನ್ ವೆಲ್ತ್ ಫಂಡ್, ಸಿಂಗಾಪುರ
    ಜಿಐಸಿ ಆಕ್ಸೆಲ್ ಪಾಟ್ನರ್ಸ್
    ಡಿಎಸ್‌ಟಿ ಗ್ಲೋಬಲ್ ಐಎಸಿಓಎನ್ ಐಕ್ಯು ಕ್ಯಾಪಿಟಲ್
    ಮಾರ್ಗನ್ ಸ್ಟ್ಯಾನ್ಲಿ ಇನ್ವೆಸ್ಟ್‌ಮೆಂಟ್ ಮ್ಯಾನೇಜ್‌ಮೆಂಟ್ ಕ್ಯಾಪಿಟಲ್
ಅಮೆಜಾನ್.ಇನ್
ಕೆಲ ತಿಂಗಳ ಹಿಂದೆ ಫ್ಲಿಪ್‌ಕಾರ್ಟ್ ಮಿಂಟ್ರಾ.ಕಾಮ್ ಅನ್ನು ಖರೀದಿಸಿದಾಗಲೇ ಅಮೆಜಾನ್.ಇನ್ ಮತ್ತು ಸ್ನ್ಯಾಪ್ ಡೀಲ್.ಕಾಮ್‌ಗಳಲ್ಲಿ ಸಣ್ಣಗೆ ನಡುಕ ಹುಟ್ಟಿಸಿತ್ತು. ಜತೆಗೆ ಅಮೆಜಾನ್.ಕಾಮ್ ಬೆಂಗಳೂರನ್ನು ಕೇಂದ್ರೀಕರಿಸಿ ಹೂಡಿಕೆ ಮಾಡಲಿದೆ ಎಂಬ ಗುಮಾನಿ ಶುರುವಾಗಿತ್ತು. 12 ಸಾವಿರ ಕೋಟಿ ರು. ಹೂಡಿಕೆ ಮಾಡುವ ಅಧಿಕೃತ ಘೋಷಣೆಯಿಂದ ಅದು ನಿಜವಾಗಿದೆ. ಜತಗೆ ಇ- ಕಾಮರ್ಸ್ ಕ್ಷೇತ್ರದಲ್ಲಿ ಪ್ರಬಲ ಸ್ಪರ್ಧೆ ನೀಡುವುದಕ್ಕೆ ಅಣಿಯಾಗಿದೆ.
ವಹಿವಾಟು ಕುಸಿದಿತ್ತು...
ವಿಚಿತ್ರ ಎಂದರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಅಮೆಜಾನ್‌ಗೆ 126 ಮಿಲಿಯನ್ ಡಾಲರ್ ನಷ್ಟ ಆಗಿದೆ. ಅದರ ಹೊರತಾಗಿಯೂ ಭಾರತೀಯ ಮಾರುಕಟ್ಟೆಯಲ್ಲಿ 12 ಸಾವಿರ ಕೋಟಿ ರು. ಹೂಡಲು ಒಪ್ಪಿಕೊಂಡಿದೆ ಎಂದರೆ ನಿಜಕ್ಕೂ ಅಚ್ಚರಿಯ ವಿಚಾರ. ಭಾರತದಲ್ಲಿ ಹೂಡಿಕೆ ಮಾಡಿದರೆ ಅದಕ್ಕೆ ನಷ್ಟವಿಲ್ಲ ಎಂಬಂಥ ಇರಾದೆ ಜೆಫ್ ಬೆಜೋಸ್ ಅವರದ್ದು. ಅವರು ಅಮೆಜಾನ್.ಇನ್ ಸಂಸ್ಥಾಪಕ.
ಅಮೆಜಾನ್ ಬೆಳವಣಿಗೆ
    2013 ಜೂ.5- ಭಾರತಕ್ಕೆ ಅಮೆಜಾನ್.ಇನ್ ಪ್ರವೇಶ.
    2013 ಜುಲೈ- ಅಮೆಜಾನ್ ಸಹವರ್ತಿ ಯೋಜನೆಗಳ ಜಾರಿ.
    2013 ನವೆಂಬರ್- ವಸ್ತುಗಳ ಖರೀದಿಸಿದ ಒಂದೇ ದಿನದಲ್ಲಿ ವಿತರಿಸುವ ವ್ಯವಸ್ಥೆ ಜಾರಿ.
    2014 ಜನವರಿ- ಬೆಂಗಳೂರಿನಲ್ಲಿ ಸೌಲಭ್ಯ ಕೇಂದ್ರ ಸ್ಥಾಪನೆ.
    2014 ಮಾರ್ಚ್- ಬಿಪಿಸಿಎಲ್ ಜತೆ ಒಪ್ಪಂದ.
17 ದಶಲಕ್ಷ ವಸ್ತುಗಳು
ಅಮೆಜಾನ್.ಇನ್ ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ವಾಣಿಜ್ಯ ಕ್ಷೇತ್ರದಲ್ಲಿ ಶೀಘ್ರವಾಗಿ ಮುನ್ನುಗ್ಗುತ್ತಿದೆ. 28 ವಿಭಾಗಗಳಲ್ಲಿ 17 ದಶಲಕ್ಷ ವಸ್ತುಗಳನ್ನು ಅದು ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದೆ.

ಯಾರದೆಷ್ಟು ಸೌಲಭ್ಯ ಕೇಂದ್ರಗಳು?
ಫ್ಲಿಪ್‌ಕಾರ್ಟ್    6
ಅಮೆಜಾನ್    7
ಸ್ನ್ಯಾಪ್ ಡೀಲ್    40
ಮೊಬೈಲ್ ವಹಿವಾಟು
    ಫ್ಲಿಪ್‌ಕಾರ್ಟ್- ವೆಬ್‌ಸೈಟ್‌ನಲ್ಲಿ ಕಳೆವ ಸಮಯ 8.
    ಅಮೆಜಾನ್- ವೆಬ್‌ಸೈಟ್‌ನಲ್ಲಿ ಕಳೆವ ಸಮಯ 7.
    ಸ್ನ್ಯಾಪ್ ಡೀಲ್- ವೆಬ್‌ಸೈಟ್‌ನಲ್ಲಿ ಕಳೆವ ಸಮಯ- 7


= ಸದಾಶಿವ ಕೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com