ಸರ್ಕಾರಿ ಕಂಪನಿಗಳ ಷೇರು- ಇದೊಂದು ಎಚ್ಚರಿಕೆ

ಸರ್ಕಾರಿ ಕಂಪನಿಗಳ ಷೇರು- ಇದೊಂದು ಎಚ್ಚರಿಕೆ

ಕೇಂದ್ರ ಸರ್ಕಾರದ ಸಾಮ್ಯದ ಹಲವು ಕಂಪನಿಗಳ ಷೇರುಗಳು ಈಗ ಪೇಟೆಗೆ ಬರುವ ಕಾಲ. ಸ್ಟೀಲ್ ಅಥಾರಿಟಿ, ಮಹಾನಗರ ಟೆಲಿಫೋನ್ ನಿಗಮ್, ನ್ಯಾಷನಲ್ ಅಲ್ಯೂಮಿನಿಯಂ ಕಂಪನಿಗಳು ಪೇಟೆಯ ದೃಷ್ಟಿಯಿಂದ ಈಗ ರಾಜಾ ಕಂಪನಿಗಳೇ.
ಹಿಂದೆ ಅನೇಕ ಸರ್ಕಾರಿ ಉದ್ಯಮಗಳನ್ನು 'ರೋಗ ಪೀಡಿತ' ಎಂದು ಕರೆಯಲಾಗಿತ್ತು. ಈಗ ಅಂಥ ಸಂಸ್ಥೆಗಳೂ ಚಿಗುರಿಕೊಂಡಿವೆ. ಇದಕ್ಕೆ ಆ ಸಂಸ್ಥೆಗಳ ಸಾಧನೆಗಿಂತ ಹೆಚ್ಚು ಪರಿಣಾಮಕಾರಿಯಾದ ಕಾರಣ ಎಂದರೆ ಪೇಟೆಯಲ್ಲಿನ ತೇಜಿಯ ಸ್ಥಿತಿ. ಅದರ ಹಿನ್ನೆಲೆಯಲ್ಲಿರುವುದು ನರೇಂದ್ರ ಮೋದಿ ಅವರು ಏನೋ ಮಾಡ್ತಾರೆ ಎನ್ನುವ ನಿರೀಕ್ಷೆ, ಆಸೆ.  ಈಗಾಗಲೇ ಸಿಕ್ಕಿರುವ ಸೂಚನೆಯಂತೆ, ದೀಪಾವಳಿಯ ವೇಳೆಗೆ ಸ್ಟೀಲ್ ಅಥಾರಿಟಿ ಹಾಗೂ ಕೋಲ್ ಇಂಡಿಯಾದ ಷೇರುಗಳು ಪೇಟೆಗೆ ಬರಬಹುದು.
ಈ ಕಂಪನಿಗಳ ಷೇರುಗಳನ್ನು ಕೊಳ್ಳುವ ಮುನ್ನ ಗ್ರಾಹಕರು ಅವುಗಳ ಹಿಂದಿನ ಚರಿತ್ರೆ- ಜಾತಕವನ್ನೂ ಪರಿಶೀಲಿಸಬೇಕು. ಕೇಂದ್ರದ ಭರವಸೆ, ಕಂಪನಿಗಳ ದೊಡ್ಡ ಹೆಸರಿಗೆ ಹೆಚ್ಚು ಗಮನ ನೀಡಿ, ಅದರ ನಿಜವಾದ ಅಂತಃಸತ್ವದ ಅಂಕಿ -ಅಂಶಗಳನ್ನು ಕಡೆಗಾಣಿಸಬಾರದು.
ಸರ್ಕಾರಕ್ಕೆ ಈ ಷೇರುಗಳ ಮಾರಾಟದಿಂದ 40 ಸಾವಿರ ಕೋಟಿ ರುಪಾಯಿಗಳಿಗೂ ಅಧಿಕ ಹಣ ಸಿಗಬಹುದೆನ್ನುವ ಆಸೆ ಇದೆ. ಅದೇನೂ ದುರಾಸೆ ಅಲ್ಲ. ಪೇಟೆಯ ಪರಿಸ್ಥಿತಿ ಏರುಮುಖದಲ್ಲೇ ಇದ್ದರೆ, ಸರ್ಕಾರ ಅಕ್ಟೋಬರ್- ನವೆಂಬರ್‌ವರೆಗೂ ಕಾಯಬಹುದು. ಆಸಕ್ತ ಗ್ರಾಹಕರು ಆ ಸಮಯದಲ್ಲಿ ಕೈ ಖಾಲಿ ಮಾಡಿಕೊಂಡಿರಬಾರದು.
ಔಷಧ ಪೇಟೆಯ ತಲ್ಲಣ
ಕಳೆದ ಕೆಲವು ತಿಂಗಳಿಂದಲೂ ಔಷಧಗಳ ಬೆಲೆ, ಅದರಲ್ಲೂ ಹೃದಯಸಂಬಂಧಿ, ಸಕ್ಕರೆ ಕಾಯಿಲೆ ಔಷಧಿಗಳ ಬೆಲೆ ವಿಪರೀತವಾಗಿ ಏರುತ್ತಿದೆ. ಕಳೆದ ವಾರ ಇದ್ದ ಬೆಲೆ ಈ ವಾರ ಇಲ್ಲ ಎನ್ನುವ ಸ್ಥಿತಿ. ಕೆಮ್ಮು- ನೆಗಡಿ, ಜ್ವರ- ತಲೆನೋವಿನಂಥ ಸಾಧಾರಣ ಅನಾರೋಗ್ಯದ ಸ್ಥಿತಿಯಿಂದ ಹೊರಬರಲು ಬಡವರಿಗೆ ಉಚಿತ ಔಷಧ ನೀಡುವ ವ್ಯವಸ್ಥೆಯೂ ಸರ್ಕಾರದ ಗಮನದಲ್ಲಿದೆ. ಈ ಸುದ್ದಿ ಬಹುಲಾಭಾಂಶವೇ ಮುಖ್ಯ ಲಕ್ಷಣವಾಗಿರುವ ಫಾರ್ಮಾ ಕಂಪನಿಗಳ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ. ಇದರಿಂದ ಫಾರ್ಮಾ ಕಂಪನಿಗಳ ಷೇರುಗಳ ಬೆಲೆಯ ಮೇಲೆ ಅಡ್ಡ ಪರಿಣಾಮವಾದರೂ ಆಗಬಹುದು.
ಮ್ಯೂಚುವಲ್ ಫಂಡ್: ಕಮಿಷನ್ ಆರಂಭ?
ಮ್ಯೂಚುವಲ್ ಫಂಡ್‌ಗಳನ್ನು ಮಾರುವ ಏಜೆಂಟರಿಗೆ ಈಗ ಕಮಿಷನ್ ಇಲ್ಲ. ಕಮಿಷನ್ ವ್ಯವಹಾರದಲ್ಲಿ ಹಿಂದೆ ನಡೆಯುತ್ತಿದ್ದ ಅಕ್ರಮಗಳ ಫಲ ಇದು. ಈಗ ಮ್ಯೂಚುವಲ್ ಫಂಡ್‌ಗಳನ್ನು ಪ್ರಚಾರ ಮಾಡುವವರೂ ಇಲ್ಲ. ಈಗ ಸೆಕ್ಯೂರಿಟೀಸ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ, ಮ್ಯೂಚುವಲ್ ಫಂಡ್ ಪಾಲಿಸಿಗಳನ್ನು (ಹೂಡಿಕೆ) ಮಾರುವ ಏಜೆಂಟರಿಗೆ ಒಂದಲ್ಲ ಒಂದು ರೀತಿಯ ಕಮಿಷನ್ ಕೊಡುವ ವ್ಯವಸ್ಥೆ ಕುರಿತ ಚಿಂತನೆ ನಡೆಸಿದೆ.
ಈಗ ದೇಶದಲ್ಲಿ 60370 ಮ್ಯೂಚುವಲ್ ಫಂಡ್ ಏಜೆಂಟರಿದ್ದಾರೆ. ಸೆಬಿ ಅವರ ಕಮಿಷನ್ ಹೆಚ್ಚಿಸುವುದಾದರೆ, ಅದರ ಪೂರ್ಣ ಹೊಣೆ ಹೂಡಿಕೆದಾರರದ್ದೇ ಎಂದಾಗಬಾರದು. ಫಂಡ್ ಕಂಪನಿಯೂ ಅದರ ಪಾಲನ್ನು ಹಾಕಬೇಕು.


-ಸತ್ಯ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com