ಸುಸ್ತಿ ಪಂದ್ಯ

ಸುಸ್ತಿ ಪಂದ್ಯ
Updated on

ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಅಧ್ಯಕ್ಷೆ ಅರ್ಚನಾ ಭಾರ್ಗವ ಅಧಿಕಾರಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ. ಅನಾರೋಗ್ಯದ ನಿಮಿತ್ತ ಈ ನಿರ್ಧಾರ ಪ್ರಕಟಿಸಿದ್ದಾರೆ ಎಂಬುದು ಮೇಲ್ನೋಟದ ವಿಶ್ಲೇಷಣೆ. ಮಿತಿ ಮೀರಿ ಏರಿದ ಸುಸ್ತಿ ಸಾಲಕ್ಕೆ ಬಿದ್ದ ಮೊದಲ ವಿಕೆಟ್ ಭಾರ್ಗವ ಅವರು ಎಂಬುದು ಬ್ಯಾಂಕಿಂಗ್ ವಲಯದ ಗುಸುಗುಸು.
ಬ್ಯಾಂಕಿನಲ್ಲಿ ಸಾಲ ಮಂಜೂರಿ ಕೇವಲ ಒಬ್ಬರ ಕೈಯಲ್ಲಿರದೆ ಹಲವು ಸ್ತರಗಳನ್ನು ದಾಟಿ ಬರುತ್ತದೆ. ಸಾಲದ ಪ್ರಮಾಣ ತುಂಬಾ ದೊಡ್ಡದಿದ್ದರೆ ಮಾತ್ರ ಅಧ್ಯಕ್ಷರ ಹತ್ತಿರ ಬರುತ್ತದೆ. ಕ್ಯಾಬಿನೆಟ್ ನಿರ್ಣಯದಂತೆ ಸಾಲ ಮಂಜೂರಾತಿಯೂ ಸಾಮೂಹಿಕ ನಿರ್ಣಯ. ಇವರು ಅಧಿಕಾರ ವಹಿಸಿಕೊಂಡಾಗಲೇ ಸಾಕಷ್ಟು ಸುಸ್ತಿ ಸಾಲದ ಬಳುವಳಿಯನ್ನು ಪಡೆದಿದ್ದರು. ಸುಸ್ತಿ ಸಾಲದ ಪ್ರಮಾಣ ಕಳೆದ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಬಹುತೇಕ ಬ್ಯಾಂಕುಗಳ ಲಾಭಾಂಶದಲ್ಲಿ ಗಮನಾರ್ಹ ಇಳಿಕೆ ಕಂಡುಬರುತ್ತಿದೆ.
ಕಾರಣವೇನು?
    ಎಲ್ಲ ಬ್ಯಾಂಕ್‌ಗಳು ಸುಸ್ತಿ ಸಾಲಕ್ಕೆ ಹೆಚ್ಚಿನ ಲಾಭಾಂಶ ವರ್ಗಾಯಿಸಿದ್ದೇ ಲಾಭದ ಪ್ರಮಾಣದ ಕುಸಿತಕ್ಕೆ ಕಾರಣ ಎಂಬ ಅಭಿಪ್ರಾಯ ಮುಂದಿಟ್ಟಿವೆ.
    25 ವರ್ಷಗಳಲ್ಲಿ ರು. 1,40, 266 ಕೋಟಿ ಲಾಭಾಂಶವನ್ನು ಸುಸ್ತಿ ಸಾಲಕ್ಕೆ ವರ್ಗಾಯಿಸಲಾಗಿತ್ತು. ಮಾತ್ರವಲ್ಲದೆ ಇದೇ ಅವಧಿಯಲ್ಲಿ ಸುಮಾರು ರು. 14,12,294 ಕೋಟಿ ಸಾಲವನ್ನು ಮನ್ನಾ ಮಾಡಲಾಗಿತ್ತು.
    ಕಳೆದ ವರ್ಷ ಸೆಪ್ಟೆಂಬರ್ 2003ರವರೆಗೆ 40 ಲಿಸ್ಟೆಡ್ ಬ್ಯಾಂಕ್‌ಗಳ ಸುಸ್ತಿ ಸಾಲದಲ್ಲಿ ಶೇ.37 ಹೆಚ್ಚಿಗೆ ಕಂಡು ಬಂದಿದೆ. ಅದರ ಪ್ರಮಾಣ ರು. 2,29,000 ಲಕ್ಷಕ್ಕೆ ಮುಟ್ಟಿದೆ. ಸಾಲ ಮರುಪಾವತಿ ಮುಂದೂಡಿದ ಸಾಲ ಸುಮಾರು 4 ಲಕ್ಷ ಕೋಟಿ ಬೇರೆಯೇ ಇದೆ. ಒಂದು ಹೆಜ್ಜೆ ಮುಂದೆ ಎರಡು ಹೆಜ್ಜೆ ಹಿಂದೆ ಎನ್ನುವಂತೆ ಒಂದು ಕೋಟಿ ವಸೂಲಿ ಮಾಡಿದರೆ ಅಷ್ಟರಲ್ಲಿ 2 ಕೋಟಿ ಸುಸ್ತಿ ಸಾಲಕ್ಕೆ ಸೇರುತ್ತದೆ ಎನ್ನುವ ಬ್ಯಾಂಕ್ ಅಧಿಕಾರಿಗಳ ಅಭಿಪ್ರಾಯದಲ್ಲಿ ಹುರುಳಿಲ್ಲದಿಲ್ಲ.
    ಸಾಲ ಪಡೆದವರು ಮರು ಪಾವತಿಸದಿದ್ದರೆ ಈ ಬಗ್ಗೆ ಬೆನ್ನು ಹತ್ತಿ ಪಡೆದುಕೊಳ್ಳದಿದ್ದರೆ ಅದು ಬ್ಯಾಂಕ್ ಅಧಿಕಾರಿಗಳಿಗೇ ತಿರುಗು ಬಾಣವಾಗುತ್ತದೆ. ಈ ಸತ್ಯದ ಅರಿವು ಅವರಿಗೆ ಚೆನ್ನಾಗಿ ಗೊತ್ತಿರುತ್ತದೆ. ಬ್ಯಾಂಕ್ ಸಾಲ ಮತ್ತು ಅದರ ವಸೂಲಾತಿಯನ್ನು ಅಭಿಮನ್ಯು ಮತ್ತು ಚಕ್ರವ್ಯೂಹಕ್ಕೆ ಹೋಲಿಸಬಲ್ಲದು. ಅಭಿಮನ್ಯು ಸಲೀಸಾಗಿ ಚಕ್ರವ್ಯೂಹ ಭೇದಿಸಿದ. ಆದರೆ ಹೊರ ಬರುವ ಕಲೆ ಆತನಿಗೆ ಗೊತ್ತಿರಲಿಲ್ಲ. ಹಾಗೆಯೇ ಬ್ಯಾಂಕಿನವರು ಸಲೀಸಲಾಗಿ ಸಾಲ ಕೊಡುತ್ತಾರೆ. ಆದರೆ ವಸೂಲಿಯಲ್ಲಿ ಸೋಲುತ್ತಾರೆ.
ಸಾಲಗಳು ಏಕೆ ಸುಸ್ತಿಯಾಗುತ್ತವೆ?
    ಶೇ.30 ಸಾಲಗಳು ಸಾಲಗಾರನ ಹತೋಟಿ ತಪ್ಪಿ ಸುಸ್ತಿಯಾಗುತ್ತವೆ. ಅದಕ್ಕೆ ಕೆಲವು ನಿವಾರಿಸಲಾಗದ ಕಾರಣಗಳಿರುತ್ತವೆ. ಇನ್ನು ಕೆಲವು ಸಂದರ್ಭದ ಒತ್ತಡದಿಂದ ಮತ್ತು ಕೆಲವನ್ನು ಸಾಲಗಾರರು ಉದ್ದೇಶಪೂರ್ವಕವಾಗಿ ಸುಸ್ತಿ ಮಾಡುತ್ತಾರೆ.
    ಅದರ ಮೂಲವನ್ನು 80ರ ದಶಕದ ರೇಷನ್ ಕಾರ್ಡ್ ಸಾಲದಲ್ಲಿ ಕಾಣಬಹುದು. ಅಲ್ಲಿಂದ ಆರಂಭವಾದ ಈ ವಿಷಬಳ್ಳಿ ಹತ್ತು ಸಾವಿರದ ಸಾಲಮನ್ನಾ ಬಡ್ಡಿ ಮನ್ನಾ, ಸಾಲಮನ್ನಾ One time Settlement (deep discounted)ಸಾಲ ಅದಾಲತ್ ಮೂಲಕ ಬೃಹತ್ ಪ್ರಮಾಣದಲ್ಲಿ ಬೆಳೆದು ಈ ಎತ್ತರಕ್ಕೆ ನಿಂತಿದೆ.
    ಸಾಲ ಮನ್ನಾವನ್ನು ಅವಶ್ಯ ಮತ್ತು ಅನಿವಾರ್ಯತೆಗೆ ಗಂಟು ಹಾಕದೇ ಮತ ಬ್ಯಾಂಕ್ ಮತ್ತು ರಾಜಕೀಯ ಹಿತಾಸಕ್ತಿಗೆ ಬೆಳೆಸಿಕೊಂಡಿದ್ದು ಹಾಲಿ ಈ ಸ್ಥಿತಿಗೆ ಕಾರಣ.
ಪರಿಣಾಮಗಳೇನು?
    ಲಾಭ ಗಳಿಸದ ಶಾಖೆಗಳ ಮುಚ್ಚುವಿಕೆ.
    ಬ್ಯಾಂಕುಗಳ ವಿಲೀನ.
    ಬ್ಯಾಂಕ್ ಸಿಬ್ಬಂದಿ ವೇತನ ಪರಿಷ್ಕರಣೆಯಲ್ಲಿ Indian Banks Associationನ ಬಿಗಿಮುಷ್ಟಿ.
    ಹೊಸ ಶಾಖೆಗಳ ಆರಂಭದಲ್ಲಿ ಕಡಿತ.
    ಸಾಲ ವಿಲೇವಾರಿಯಲ್ಲಿ ಇನ್ನೂ ಬಿಗಿ ನೀತಿ.
ಹಣಕಾಸು ಪಂಡಿತರ ಅಂಬೋಣ
    ಸಾಲ ತೀರಿಸದಿರುವುದನ್ನು ಕ್ರಿಮಿನಲ್ ಅಪರಾಧವೆಂದು ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳಬೇಕು.
    ಸಾಲ ಮನ್ನಾ, ಬಡ್ಡಿ ಮನ್ನಾಗಳನ್ನು ಬ್ಯಾಂಕಿಂಗ್ ವ್ಯವಸ್ಥೆಯಿಂದ ತೆಗೆಯಬೇಕು.
    ಸುಸ್ತಿ ಸಾಲಗಾರರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಕೊಡಬಾರದು. ಅವರಿಗೆ ಯಾವುದೇ ಸವಲತ್ತು ಸಿಗಬಾರದು.
    ಬ್ಯಾಂಕ್‌ಗಳಲ್ಲಿನ ಸಾಲ ವಿಭಾಗ ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸಬೇಕು. ಅದಕ್ಕೆ ಬೇರೆ ಯಾವುದೇ ವಿಭಾಗವನ್ನು ಜೋಡಿಸಬಾರದು.
    ಸಾಲ ವಸೂಲು ಮಾಡುವುದಕ್ಕೆ ಸಂಬಂಧಿಸಿದ ಹಳೆಯ ಕಾನೂನುಗಳಿಗೆ ತಿದ್ದುಪಡಿ ಮಾಡಬೇಕು. ಈ ಮೂಲಕ ವಸೂಲು ಪ್ರಕ್ರಿಯೆ ಶೀಘ್ರವಾಗಿ ನಡೆಯುವಂತಾಗಬೇಕು.

ಬ್ಯಾಂಕ್    ಲಾಭಾಂಶ ಇಳಿಕೆ ಪ್ರಮಾಣ (ಶೇ.)
ಆಂಧ್ರ ಬ್ಯಾಂಕ್    82
ಒರಿಯಂಟಲ್ ಬ್ಯಾಂಕ್    31
ಕೆನರಾ ಬ್ಯಾಂಕ್    42
ಸಿಂಡಿಕೇಟ್        25
ಬ್ಯಾಂಕ್ ಆಫ್ ಇಂಡಿಯಾ        27
ಇಂಡಿಯನ್ ಒವರ್‌ಸೀಸ್ ಬ್ಯಾಂಕ್        35
ವಿಜಯಾ ಬ್ಯಾಂಕ್        91
ಕಾರ್ಪೋರೇಷನ್ ಬ್ಯಾಂಕ್        58
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ    66

= ರಮಾನಂದ ಶರ್ಮಾ


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com