ತೆರಿಗೆ ನೋವು

ಪ್ರತಿ ವರ್ಷದ ಮಾರ್ಚ್ ಮತ್ತು ಜುಲೈ ತಿಂಗಳು ತೆರಿಗೆದಾರರಿಗೆ ಅತ್ಯಂತ ಮಹತ್ವದ ದಿನಗಳು...
ತೆರಿಗೆ ನೋವು

ಪ್ರತಿ ವರ್ಷದ ಮಾರ್ಚ್ ಮತ್ತು ಜುಲೈ ತಿಂಗಳು ತೆರಿಗೆದಾರರಿಗೆ ಅತ್ಯಂತ ಮಹತ್ವದ ದಿನಗಳು. ಉದ್ಯೋಗದಾತ ಮತ್ತು ಉದ್ಯೋಗಿಯ ಆ ವರ್ಷದ ಆದಾಯವನ್ನು ಲೆಕ್ಕ ಹಾಕಿ ಸಲ್ಲಿಸುವ ದಾಖಲೆಗಳು, ಕಾಗದ ಪತ್ರಗಳು ಮತ್ತು ಹೇಳಿಕೆಯ ಆಧಾರದ ಮೇಲೆ ಕೊಡಬೇಕಾಗಿರುವ ಆದಾಯ ತೆರಿಗೆಯನ್ನು ವರ್ಷದ ಆರಂಭದಲ್ಲಿಯೇ ಅಂದಾಜಿಸಲಾಗುತ್ತದೆ. ಅದರಂತೆ ಪ್ರತಿ ತಿಂಗಳೂ ಅನುಪಾತವಾಗಿ ತೆರಿಗೆಯನ್ನು ಇಲಾಖೆಗೆ ಕಳುಹಿಸಲಾಗುತ್ತದೆ.
ತೀರಾ ಇತ್ತೀಚಿನ ವರೆಗೆ ವರ್ಷಕ್ಕೊಮ್ಮೆ ಸಂಬಳದಲ್ಲಿ ಕಡಿತ ಮಾಡಿ ತೆರಿಗೆ ಕಳುಹಿಸಲಾಗುತ್ತಿತ್ತು. ಆದರೆ ಈಗ ಕಾಯ್ದೆ ಮತ್ತು ನೀತಿ ನಿಯಮಗಳಲ್ಲಿ ಬದಲಾವಣೆಯಾಗಿದೆ. ಪ್ರತಿ ತಿಂಗಳ ಸಂಬಳದ ಸಂಗಡವೇ ತೆರಿಗೆಯನ್ನು ಕಳುಹಿಸಬೇಕಾಗಿದೆ. ವರ್ಷದ ಕೊನೆಯ ತಿಂಗಳು ಅಂದರೆ ಮಾರ್ಚ್‌ನಲ್ಲಿ ಉದ್ಯೋಗಿಯು ಕೊಡುವ ನಿಖರ ದಾಖಲೆಗಳ ಆಧಾರದ ಮೇಲೆ ತೆರಿಗೆಯನ್ನು ಸರಿಯಾಗಿ ಲೆಕ್ಕಹಾಕಿ ಸಂಬಂಧಪಟ್ಟ ಇಲಾಖೆಗೆ ಸಲ್ಲಿಸಬೇಕು. ಜತೆಗೆ ಉದ್ಯೋಗಿಗೂ ಒಂದು ಪ್ರತಿ ನೀಡಬೇಕು. ಸಾಮಾನ್ಯವಾಗಿ ತೆರಿಗೆಯನ್ನು ಸರಿಯಾಗಿ ಲೆಕ್ಕ ಹಾಕಿ ಕಳುಹಿಸಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಲೆಕ್ಕಾಚಾರಕ್ಕೆ ಸಾಫ್ಟ್‌ವೇರ್ ಬಳಸಲಾಗುತ್ತದೆ. ಆದರೂ ತೆರಿಗೆ ಲೆಕ್ಕಾಚಾರವನ್ನು ಸ್ವತಃ ಉದ್ಯೋಗಿಗಳೇ ಹಾಕಿ ಖಚಿತಪಡಿಸಿಕೊಳ್ಳುವುದು ಉತ್ತಮ. ಕಡಿತಗೊಂಡ ತೆರಿಗೆ ಇಲಾಖೆಗೆ ಜಮಾ ಆದ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ ಹೆಚ್ಚಿಗೆ ತೆರಿಗೆ ಕಡಿತಗೊಳಿಸಿದ್ದರೆ ರಿಟರ್ನ್ಸ್ ಸಲ್ಲಿಕೆ ಮಾಡುವ ರಿಫಂಡ್ ಕ್ಲೇಮು ಮಾಡಬಹುದು.
ಯಾವ ದಾಖಲೆಗಳನ್ನು ಕೊಡಬೇಕು?
ಮನೆ ಬಾಡಿಗೆ ಒಪ್ಪಂದ ಮತ್ತು ಬಾಡಿಗೆ ರಸೀದಿ.
-     ವಿಮೆ ಕಂತು ಕೊಟ್ಟ ರಸೀದಿ.
-     ಮನೆ ಸಾಲದ ಕಂತು ಮತ್ತು ಬಡ್ಡಿ ಪಾವತಿ ಮಾಡಿದ ದಾಖಲೆಗಳು.
-     ಮೆಡಿಕಲ್ ಬಿಲ್‌ಗಳು.
-     ವೈದ್ಯಕೀಯ ವಿಮೆ ಮಾಡಿಸಿದ ಬಗ್ಗೆ ದಾಖಲೆ.
-     ಮಕ್ಕಳ ಶಿಕ್ಷಣ ಶುಲ್ಕ ಪಾವತಿಸಿದ ಬಗ್ಗೆ ರಸೀದಿ.
-     ಮನೆ ತೆರಿಗೆ ಪಾವತಿ ಮಾಡಿದ ರಸೀದಿ.
ದಾಖಲೆಗಳನ್ನು ಯಾಕೆ ಸಲ್ಲಿಸಬೇಕು?
-     ತೆರಿಗೆದಾರನು ತಾನು ಕೊಡಬೇಕಾದ ತೆರಿಗೆಯಲ್ಲಿ ಹೆಚ್ಚಿಗೆ ವಿನಾಯಿತಿ ಪಡೆಯಲು ಇಚ್ಛಿಸಿದರೆ ಅದರ ಬಗ್ಗೆ ಇಲಾಖೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಬಯಸುತ್ತದೆ.
-     ಈ ಸಂದರ್ಭ ಆತ ಸಲ್ಲಿಸಿದ ದಾಖಲೆಗಳ ಆಧಾರದ ಮೇಲೆಯೇ ವಿನಾಯಿತಿ ನೀಡಲಾಗುತ್ತದೆ.
-     ತೆರಿಗೆ ಪಾವತಿ ಮಾಡಿದ ಬಳಿಕ, ರಿಟರ್ನ್ಸ್ ಸಲ್ಲಿಕೆ ಬಳಿಕ ಅದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಜತನದಿಂದ ಕಾಪಿಡಬೇಕು. ಅಂದರೆ ಕನಿಷ್ಠ ಆರು ವರ್ಷಗಳ ವರೆಗೆ ಕಾಯ್ದುಕೊಳ್ಳಬೇಕು.
- ದಾಖಲೆಗಳು ಕಳೆದುಹೋಗಿವೆ, ನಾಪತ್ತೆಯಾಗಿವೆ ಎಂಬ ತೆರಿಗೆದಾರನ ವಾದವನ್ನು ಇಲಾಖೆ ಒಪ್ಪದು. ದಾಖಲೆಗಳು ಕಳೆದು ಹೋಗಿದ್ದಲ್ಲಿ ಅದು ತೆರಿಗೆದಾರನ ಬೇಜವಾಬ್ದಾರಿಯೇ ಆಗುತ್ತದೆ. ಅದಕ್ಕಾಗಿ ಆತನಿಗೆ ದಂಡ ವಿಧಿಸಬಹುದು.
-  ನಮ್ಮ ಆದಾಯದ ಬಗ್ಗೆ ಇಲಾಖೆ ಮತ್ತೊಮ್ಮೆ ದಾಖಲೆಗಳನ್ನು ಕೇಳಿದರೆ ನಮ್ಮ ಬಳಿ ಇರುವ ರಿಟರ್ನ್ಸ್ ಮಾತ್ರ ಇರುತ್ತದೆ. ಅದುವೇ ಅಧಿಕೃತ ಪುರಾವೆ.
-  ಬ್ಯಾಂಕ್‌ಗಳಲ್ಲಿ ಸಾಲ ಪಡೆಯಲು ಮತ್ತು ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಕೆ ವೇಳೆ ರಿಟರ್ನ್ಸ್ ಸಲ್ಲಿಕೆ ದಾಖಲೆಗಳನ್ನು ಕೇಳುತ್ತಾರೆ.
-  ವಿದೇಶಗಳಿಗೆ ತೆರಳುವ ಸಂದರ್ಭ ವೀಸಾಕ್ಕೆ ಅರ್ಜಿ ಸಲ್ಲಿಕೆ ವೇಳೆ, ಮೂರು ವರ್ಷದ ಹಿಂದಿನ ರಿಟರ್ನ್ಸ್ ಸಲ್ಲಿಕೆ, ಟಿಡಿಎಸ್ ಪ್ರಮಾಣ ಪತ್ರ, ಬ್ಯಾಂಕ್ ಸ್ಟೇಟ್‌ಮೆಂಟ್ ಕೇಳುತ್ತಾರೆ.
-     ಉದ್ಯೋಗದಲ್ಲಿ ಬದಲಾವಣೆ ಮಾಡಿದಾಗ ತೆರಿಗೆದಾರ ಹೊಸ ಲೆಕ್ಕಾಚಾರ ನೀಡಬೇಕಾಗುತ್ತದೆ.
ನೆನಪಿಡಿ
-     ಪ್ರತಿಯೊಬ್ಬ ತೆರಿಗೆದಾರನ ಬದುಕಲ್ಲಿ ಮಾರ್ಚ್ ಮತ್ತು ಜುಲೈ ಪ್ರಮುಖ ತಿಂಗಳು. ಈ ಸಂದರ್ಭದಲ್ಲಿ ಸ್ವಲ್ಪ ಎಡವಿದರೂ ಅಪಾಯ. ತೆರಿಗೆ ಪಾವತಿ ಮಾಡದಿದ್ದರೆ ನೋಟಿಸ್ ಬರುತ್ತದೆ.
-     ತೆರಿಗೆ ಪಾವತಿ ಮಾಡಿದ ಬಳಿಕ ರಿಟರ್ನ್ಸ್ ಸಲ್ಲಿಕೆ ಮಾಡದೇ ಇರುವುದು ಶಿಕ್ಷಾರ್ಹ ಅಪರಾಧ.
-     ಆದಾಯ ತೆರಿಗೆ ಇಲಾಖೆ ಹಿಂದಿನಂತಿಲ್ಲ. ಸಂಪೂರ್ಣ ಗಣಕೀಕೃತವಾಗಿದೆ. ಹೀಗಾಗಿ ಅದನ್ನು ಯಾಮಾರಿಸಲು ಹೋಗುವುದು ಸರಿಯಲ್ಲ. ಕಾನೂನು ಬದ್ಧವಾಗಿ ಯಾರು ತೆರಿಗೆ ಪಾವತಿ ಮಾಡಿದರೆ ನಮಗೂ ಹಿತ ದೇಶಕ್ಕೂ ಹಿತ. ಏನಂತೀರಿ?

- -ರಮಾನಂದ ಶರ್ಮಾ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com