ಬೆಂಗಳೂರು: ಮಾರುಕಟ್ಟೆಯಲ್ಲಿ ಬಾಳೆ ಬೆಲೆ ಕುಸಿತದಿಂದಾಗಿ ರೈತರು ಕಂಗಾಲಾಗಿದ್ದಾರೆ. ರೈತರು ಹಾಗೂ ವ್ಯಾಪಾರಸ್ಥರು ಬಾಳೆಗೊನೆಗಳನ್ನು ಬೀದಿಗಳಲ್ಲಿ ಮಾರಾಟ ಮಾಡುತ್ತಿದ್ದಾರೆ.
ಆದರೂ ಬೆಲೆ ಕುಸಿತದ ಲಾಭ ಮಾತ್ರ ಗ್ರಾಹಕರಿಗೆ ತಲುಪುತ್ತಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪ್ರೋತ್ಸಾಹದಿಂದ ರೈತರು ಈ ವರ್ಷ ಹೆಚ್ಚಿನ ಬೆಳೆ ಬೆಳೆದಿದ್ದಾರೆ.
ಪ್ರತಿ ತಾಲೂಕಿನಲ್ಲಿ 150ಕ್ಕೂ ಅಧಿಕ ರೈತರು ಸುಮಾರು 700ರಿಂದ 800 ಹೆಕ್ಟೇರ್ ನಷ್ಟು ಪ್ರದೇಶದಲ್ಲಿ ಬಾಳೆ ಬೆಳೆದಿದ್ದಾರೆ. ಗಣೇಶ ಚತುರ್ಥಿ, ದಸರಾ, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕೆಜಿ ಬಾಳೆಹಣ್ಣಿಗೆ 35ರಿಂದ 50ರು. ಇತ್ತು. ಈಗ ಆವಕ ಹೆಚ್ಚಾಗಿರುವುದರಿಂದ ಕೆಜಿ ದರ ರು.2ರಿಂದ 12ರು.ಗೆ ಇಳಿದಿದೆ.
ಕೊಳ್ಳುವವರೇ ಇಲ್ಲ: ಮತ್ತೊಂದು ಕಡೆ ಚಳಿಗಾಲದಿಂದಾಗಿ ಗ್ರಾಹಕರು ಹೆಚ್ಚಾಗಿ ಬಾಳೆ ಖರೀದಿಸುತ್ತಿಲ್ಲ. ಇದರಿಂದ ವ್ಯಾಪಾರಸ್ಥರು ಬಾಳೆಹಣ್ಣಿನ ವ್ಯಾಪಾರವನ್ನೇ ಬಿಡುವಂತಾಗಿದೆ.
ಇದರಿಂದ ರೈತರು ಅನ್ಯಮಾರ್ಗವಿಲ್ಲದೆ ಆಟೋ, ಟಾಟಾಏಸ್, ಟ್ರ್ಯಾಕ್ಟರುಗಳಲ್ಲಿ ತಂದು ಮಾರಾಟ ಮಾಡುತ್ತಿದ್ದಾರೆ. ಮಾಡಿದ ಖರ್ಚೂ ಗಿಟ್ಟುತ್ತಿಲ್ಲ. ರೈತರು ಉತ್ತಮ ಲಾಭದ ನಿರೀಕ್ಷೆಯಿಂದ ನೀರಾವರಿ ಮಾಡಿಕೊಂಡು ಬಾಳೆ ಬೆಳೆದಿದ್ದರು.
ಫಸಲು ಕೂಡ ಉತ್ತಮವಾಗಿದೆ. ತಮಿಳುನಾಡು, ಕೇರಳದಲ್ಲಿ ಬಾಳೆ ಬೆಳೆ ನಾಶವಾದ ಕಾರಣ ಹೆಚ್ಚಿನ ಬೆಲೆ ಸಿಗಲಿದೆ ಎಂಬ ರೈತರ ನಂಬಿಕೆ ಸುಳ್ಳಾಗಿದೆ. ಆದರೆ ಬೆಂಗಳೂರು ನಗರದಲ್ಲಿ ಹಣ್ಣಿನ ಬೆಲೆ ಕಡಿಮೆಯಾಗಿರುವುದು ಕೆಜಿಗೆ ರು.7 ಮಾತ್ರ.
ಮಧ್ಯವರ್ತಿಗಳ ಹಾವಳಿಯಿಂದಾಗಿ ರೈತರಿಗೆ ಒಳ್ಳೆಯ ಬೆಲೆ ಸಿಗುತ್ತಿಲ್ಲ. ಚಳಿ ಹೆಚ್ಚಾಗಿರುವುದೂ ಸಂಕಷ್ಟ ತಂದಿದೆ. ಸಂಪೂರ್ಣ ಬಿಸಿಲು ಬಂದ ನಂತರ ಉತ್ತಮ ಬೆಲೆ ಸಿಗುವ ನಿರೀಕ್ಷೆಯಲ್ಲಿ ರೈತರಿದ್ದಾರೆ.