ಷೇರುಪೇಟೆ ಐತಿಹಾಸಿಕ ದಾಖಲೆ: 30 ಸಾವಿರದ ಸನಿಹಕ್ಕೆ ಸೆನ್ಸೆಕ್ಸ್

30 ಸಾವಿರದ ಸನಿಹಕ್ಕೆ ಸೆನ್ಸೆಕ್ಸ್ ನಾಗಾಲೋಟ... ಷೇರುಪೇಟೆ ಇತಿಹಾಸದಲ್ಲೇ ಮೊದಲ ಬಾರಿಗೆ 29 ಸಾವಿರದ ಗಡಿ ದಾಟಿದ ದಾಖಲೆ...
ಸೆನ್ಸೆಕ್ಸ್
ಸೆನ್ಸೆಕ್ಸ್

ಮುಂಬೈ/ನವದೆಹಲಿ: 30 ಸಾವಿರದ ಸನಿಹಕ್ಕೆ ಸೆನ್ಸೆಕ್ಸ್ ನಾಗಾಲೋಟ... ಷೇರುಪೇಟೆ ಇತಿಹಾಸದಲ್ಲೇ ಮೊದಲ ಬಾರಿಗೆ 29 ಸಾವಿರದ ಗಡಿ ದಾಟಿದ ದಾಖಲೆ.
ಸತತ 3ನೇ ದಿನವೂ ಷೇರುಪೇಟೆಯ ದಾಖಲೆ ಓಟ ಮುಂದುವರಿಯಿತು. ಗುರುವಾರ ಮುಂಬೈ ಷೇರುಪೇಟೆಯಲ್ಲಿ ಹೂಡಿಕೆದಾರರ ಅತಿಯಾದ ಚಟುವಟಿಕೆಯು ಇಡೀ ಮಾರು ಕಟ್ಟೆಯಲ್ಲೇ ಸಂಚಲನಕ್ಕೆ ಕಾರಣವಾಯಿತು. ಫೆ. 28ರಂದು ನರೇಂದ್ರ ಮೋದಿ ಸರ್ಕಾರದ ಮೊದಲ ಪೂರ್ಣ ಬಜೆಟ್ ಮಂಡನೆಯಾಗಲಿದ್ದು, ಆಯವ್ಯಯದ ಬಗೆಗಿನ ಅತೀವ
ನಿರೀಕ್ಷೆಯು ಹೂಡಿಕೆದಾರರನ್ನು ನಿಂತಲ್ಲಿ ನಿಲ್ಲಲು ಬಿಡಲಿಲ್ಲ. ಎಲ್ಲರೂ ಷೇರುಗಳ ಭಾರಿ ಖರೀದಿಯಲ್ಲಿ ತೊಡಗಿದ ಕಾರಣ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 117 ಅಂಕ
ಏರಿಕೆಯಾಗಿ , 29,006ರಲ್ಲಿ ಕೊನೆಗೊಂಡಿತು. ನಿಫ್ಟಿ  31 ಅಂಕಗಳ ಏರಿಕೆ ದಾಖಲಿಸಿ, ದಿನಾಂತ್ಯಕ್ಕೆ 8,774ರಲ್ಲಿ ಅಂತ್ಯವಾಯಿತು. ಇದೇ ವೇಳೆ, ಬಿಕ್ಕಟ್ಟಿನಲ್ಲಿರುವ ಐರೋಪ್ಯ ಆರ್ಥಿಕತೆಯನ್ನು ಮೇಲೆತ್ತಲು ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ದೊಡ್ಡ ಉತ್ತೇಜನಾ ಪ್ಯಾಕೇಜ್ ಘೋಷಣೆ ಮಾಡಲಿದೆ ಎಂಬ ಆಶಾಭಾವದಿಂದ ಇಡೀ ಜಗತ್ತಿನ ಮಾರುಕಟ್ಟೆಗಳು ಕಾಯುತ್ತಿವೆ.
ಈ ನಿರೀಕ್ಷೆ ಕೂಡ ಷೇರುಪೇಟೆ ಏರಿಕೆಗೆ ಕಾರಣವಾಯಿತು. ಸೆನ್ಸೆಕ್ಸ್ ಭಾರಿ ಏರಿಕೆ ದಾಖಲಿಸಿದರೂ, ಡಾಲರ್ ಎದುರು ರುಪಾಯಿ ಮೌಲ್ಯ ಮಾತ್ರ 7 ಪೈಸೆ ಕಡಿಮೆಯಾಯಿತು.

ಚಿನ್ನದ ದರ ಇಳಿಕೆ
ಸತತ 5 ದಿನಗಳ ಕಾಲ ಏರಿಕೆಯ ಹಾದಿಯಲ್ಲಿ ಸಾಗಿದ್ದ ಹಳದಿ ಲೋಹ ಗುರುವಾರ ಇಳಿಕೆ ಕಂಡಿದೆ. ದೆಹಲಿ ಚಿನಿವಾರ ಪೇಟೆಯಲ್ಲಿ ಚಿನ್ನದ ದರ 10 ಗ್ರಾಂಗೆ ರು. 150ಕಡಿಮೆಯಾಗಿ ರು. 28,350 ಆಯಿತು. ಇದೇ ವೇಳೆ,ಮುಂಬೈನಲ್ಲಿ ಸ್ಟ್ಯಾಂಡರ್ಡ್ ಚಿನ್ನದ ದರ 10 ಗ್ರಾಂಗೆರು. 27,970 ಆಗಿದ್ದು, ಶುದ್ಧ ಚಿನ್ನದ ದರ ರು. 28,120 ಆಗಿದೆ. ಕೆಜಿ ಬೆಳ್ಳಿ ಬೆಲೆ ರು. 40,265 ತಲುಪಿದೆ. ಏತನ್ಮಧ್ಯೆ,ಬೆಂಗಳೂರು ಚಿನಿವಾರ ಪೇಟೆಯಲ್ಲಿ ಆಭರಣ ಚಿನ್ನ ಗ್ರಾಂಗೆರು. 2,677, ಸ್ಟ್ಯಾಂ. ಚಿನ್ನದ ದರ 10 ಗ್ರಾಂಗೆ ರು. 26,640 ಆಗಿದೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com